ADVERTISEMENT

ಮಲೆನಾಡ ಸಾಂಬಾರ ಬೆಳೆಗೆ ಶುಕ್ರದೆಸೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST
ಮಲೆನಾಡ ಸಾಂಬಾರ ಬೆಳೆಗೆ ಶುಕ್ರದೆಸೆ
ಮಲೆನಾಡ ಸಾಂಬಾರ ಬೆಳೆಗೆ ಶುಕ್ರದೆಸೆ   

ಬಾಳೆಹೊನ್ನೂರು:  ಮಲೆನಾಡಿನ ಕಾಫಿ, ಅಡಿಕೆ ತೋಟಗಳ ನಡುವೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿರುವ ಸಾಂಬಾರ ಬೆಳೆಗಳಿಗೆ ಈ ಬಾರಿ ದಾಖಲೆ ಬೆಲೆ ದೊರಕುತ್ತಿದ್ದು ಬೆಳೆಗಾರರಿಗೆ ಶುಕ್ರದೆಸೆ ತಿರುಗಿದೆ. ಮಲೆನಾಡಿನ ಪ್ರಮುಖ ಉಪಬೆಳೆಗಳಾದ ಏಲಕ್ಕಿ, ಕಾಳುಮೆಣಸು, ಜಾಯಿಕಾಯಿ, ಜಾಪತ್ರೆ, ಲವಂಗ ವೆನಿಲ್ಲಾ ಬೆಳೆಗಳಿಗೆ ಈ ಬಾರಿ ಶುಕ್ರದೆಸೆ ತಿರುಗಿದ್ದು ನಿರೀಕ್ಷೆಗೂ ಮೀರಿದ ಬೆಲೆ ಬಂದಿದೆ.

ಕಾಫಿ  ತೋಟದ ನಡುವೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿರುವ ಕಾಳು ಮೆಣಸಿನ ದರ ಕಿಲೋಗೆ ರೂ.220 ಮುಟ್ಟಿದೆ. ಮೂರು ವರ್ಷಗಳ ಹಿಂದೆ ಏಲಕ್ಕಿ ಬೆಳೆ ದರ ಕುಸಿತ ಕಂಡ ದಿನಗಳಲ್ಲಿ ಅದನ್ನು ನಿರ್ಲಕ್ಷಿಸಿದ್ದ ಬೆಳೆಗಾರರಿಗೆ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಮಲೆನಾಡು ಭಾಗದ ಬಿಳಿ ಏಲಕ್ಕಿ ಧಾರಣೆ ಸಹ ಕಿಲೋಗೆ ಒಂದು ಸಾವಿರದ ಗಡಿ ದಾಟಿದ್ದರೆ, ಹಸಿರು ಏಲಕ್ಕಿ ದರ ರೂ.140ರ ಅಸುಪಾಸಿನಲ್ಲಿದೆ. 

ಐದು ವರ್ಷದ ಹಿಂದೆ ಚಿನ್ನದ ಧಾರಣೆ ಕಂಡು ಎಲ್ಲರಲ್ಲೂ ಸಂಚಲನ ಮೂಡಿಸಿದ್ದ ವೆನಿಲ್ಲಾ ಬೆಳೆ ಬೆಲೆ ಸ್ವಲ್ಪ ಚೇತರಿಕೆ ಕಂಡಿದೆ. ಕಳೆದ ವರ್ಷ ಹಸಿ ವೆನಿಲ್ಲಾ ಕಿಲೋಗೆ ರೂ. 80 ರಷ್ಟಿದ್ದ ದರ ಈ ಭಾರಿ ರೂ. 160ಕ್ಕೆ  ಏರಿಕೆ ಕಂಡಿದೆ. ಸಂಸ್ಕರಿಸಿದ ವೆನಿಲ್ಲಾ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರಲಿದ್ದು ವಿದೇಶಿ ಮಾರುಕಟ್ಟೆಯನ್ನು ಅವಲಂಬಿಸಿರುವ ಇದರ ಬೆಲೆ ಎನಾಗಲಿದೆ ಎಂಬುದನ್ನು ಕಾದು ನೋಡಬೇಕು.

ಕೊಪ್ಪ, ಶೃಂಗೇರಿ, ಹಾಗೂ ಮೂಡಿಗೆರೆ ತಾಲ್ಲೂಕಿನ ಹಲವಡೆ ಇತ್ತಿಚೆಗೆ ಕಂಡು ಬರುತ್ತಿರುವ ಜಾಯಿಕಾಯಿ ಬೆಳೆಗೆ ಇತಿಹಾಸದಲ್ಲೇ ಮೊದಲ ಬಾರಿ ದಾಖಲೆ ಬೆಲೆ ಬಂದಿದೆ. ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶಗಳ ರೈತರು ಪರ್ಯಾಯವಾಗಿ ತೋಟದಲ್ಲಿ ಹತ್ತು ವರ್ಷಗಳ ಹಿಂದೆ ನೆಟ್ಟಿದ್ದ ಜಾಯಿಕಾಯಿ ಈಗ ರೈತರ ಕೈಹಿಡಿದಿದೆ.

ಸುಮಾರು ರೂ.150-160ರ ಅಸುಪಾಸಿನಲ್ಲಿದ್ದ ಬೆಲೆ ಈಗ ರೂ. 370ಕ್ಕೆ ಏರಿದೆ. ಇನ್ನು ಜಾಪತ್ರೆ ದರ ರೂ. 350- 400 ಇದ್ದದ್ದು ಈಗ ರೂ.1700ಕ್ಕೆ ಏರಿಕೆ ಕಂಡಿದೆ. ಕೇವಲ ಒಂದು ಕ್ವಿಂಟಲ್ ಪತ್ರೆಗೆ 1.70 ಲಕ್ಷ ಬೆಲೆ. ಈ ತಾಲ್ಲೂಕುಗಳಲ್ಲಿ ಈ ಬಾರಿ ಸುಮಾರು ನಾಲ್ಕು ಟನ್ ಜಾಯಿಕಾಯಿ ಹಾಗೂ 400ಕೆಜಿ ಜಾಪತ್ರೆ ನಿರೀಕ್ಷಿಸಲಾಗಿದೆ.

ಜಾಯಿಕಾಯಿ ಬೆಳೆಯುವ ದೇಶಗಳಾದ ಇಂಡೋನೇಷ್ಯಾ, ಶ್ರೀಲಂಕಾಗಳಲ್ಲಿ ಈ ಭಾರಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಕೈಕೊಟ್ಟಿರುವುದೇ ಬೆಲೆ ಎರಿಕೆಗೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಬಿಹಾರ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಹೆಚ್ಚಾಗಿ ಅಡುಗೆಗೆ ಬಳಸುತ್ತಿದ್ದು ಅಲ್ಲಿನ ಗೃಹಿಣಿಯರಿಗೆ ಇದು ಅನಿವಾರ್ಯ ಎನ್ನುವಂತಾಗಿದೆ.

ಅಲ್ಪ ಪ್ರಮಾಣದಲ್ಲಿ ಇದನ್ನು ಗುಟ್ಕಾ ತಯಾರಿಕೆಯಲ್ಲೂ ಬಳಸುತ್ತಿದರುವುದು ದರ ಎರಿಕೆಗೆ ಮತ್ತೊಂದು ಕಾರಣ ಎನ್ನುತ್ತಾರೆ ಬಿಹಾರ ರಾಜ್ಯದ ಪಾಟ್ನಾದ ವ್ಯಾಪಾರಿ ಶ್ಯಾಮ್. ಇನ್ನು ಲವಂಗ ಬೆಳೆಯೂ ಸಹ ಕಿಲೋಗೆ ರೂ. 350 ದಾಟಿದೆ. ಮಲೆನಾಡು ಬಾಗದಲ್ಲಿ ಈ ಭಾರಿ ಸುಮಾರು ಎರಡು ಟನ್ ಬೆಳೆ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.