ADVERTISEMENT

ಮಾನವರಹಿತ ಸರ್ವೇಕ್ಷಣಾ ವಿಮಾನ ಅಭಿವೃದ್ಧಿಗೆ ಡಿಆರ್‌ಡಿಒ ಆದ್ಯತೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಬೆಂಗಳೂರು: ಗುಪ್ತಚರ ಸಂಸ್ಥೆಗಳಿಗೆ ನೆರವಾಗುವ ಉದ್ದೇಶದಿಂದ ಭಾರತವು ಮಾನವರಹಿತ ಸರ್ವೇಕ್ಷಣಾ ವಿಮಾನ (ಯುಎವಿ) ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.

ನಗರದ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ `ಅಟಾನಮಸ್ ಅನ್‌ಮ್ಯಾನ್ಡ್ ವೆಹಿಕಲ್ಸ್-2012~ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಡಿಆರ್‌ಡಿಒ ವೈಮಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ನಿಯಂತ್ರಕ ಕೆ.ಸುಭಾನಂದ ರಾವ್, `ಅಮೆರಿಕದಂತಹ ರಾಷ್ಟ್ರಗಳು ಮಾನವ ರಹಿತ ಯುದ್ಧ ವಿಮಾನ (ಯುಸಿಎವಿ) ಅಭಿವೃದ್ಧಿ ಮತ್ತು ಉತ್ಪಾದನೆಗೆ ಆದ್ಯತೆ ನೀಡುತ್ತಿವೆ.

ಆದರೆ, ಭಾರತವು ಸದ್ಯದ ಸ್ಥಿತಿಯಲ್ಲಿ ಮಾನವರಹಿತ ಸರ್ವೇಕ್ಷಣಾ ವಿಮಾನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತದೆ~ ಎಂದರು.

`ಭವಿಷ್ಯದ ಯುದ್ಧಗಳು ಗುಪ್ತಚರ ವ್ಯವಸ್ಥೆಯ ಶಕ್ತಿಯನ್ನೇ ಅವಲಂಬಿಸಿರುತ್ತವೆ. ಈ ಕಾರಣಕ್ಕಾಗಿ ಯುಎವಿ ಅಭಿವೃದ್ಧಿಗೆ ಆದ್ಯತೆ ನೀಡುವುದು ಸೂಕ್ತ. ಯುಸಿಎವಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಮಗೆ ಒಪ್ಪಿಗೆ ನೀಡಿಲ್ಲ. ಸರ್ಕಾರ ಅನುಮತಿ ನೀಡಿದರೆ ಆ ಯೋಜನೆಯನ್ನೂ ಕೈಗೆತ್ತಿಕೊಳ್ಳುತ್ತೇವೆ~ ಎಂದು ಅವರು ಹೇಳಿದರು.

`ಅತ್ಯಂತ ವೇಗವಾಗಿ ಗುಪ್ತಚರ ಮಾಹಿತಿಯನ್ನು ಕಲೆಹಾಕಿ ಸೇನಾ ನೆಲೆಗಳಿಗೆ ಒದಗಿಸುವ ವ್ಯವಸ್ಥೆ ಅಗತ್ಯ. ಅಂತಹ ಸಾಧನವನ್ನು ಸಿದ್ಧಪಡಿಸಿ, ಸೇನೆಗೆ ನೀಡುವ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದೇ ವಿಮಾನವನ್ನು ಯುದ್ಧ ವಿಮಾನವನ್ನಾಗಿ ಬಳಸುವ ದಿಕ್ಕಿನಲ್ಲಿ ನಂತರ ಅಭಿವೃದ್ಧಿಪಡಿಸಲಾಗುವುದು~ ಎಂದರು.

24 ಗಂಟೆಗಳ ಕಾಲ ಕೆಲಸ ಮಾಡಬಲ್ಲ, 300 ಕಿಲೋ ಮೀಟರ್ ದೂರದವರೆಗಿನ ಮಾಹಿತಿ  ಕಲೆಹಾಕಬಲ್ಲ ಯುಎವಿ ಅಭಿವೃದ್ಧಿಪಡಿಸಲು ಈಗ ಡಿಆರ್‌ಡಿಒ ಅನುಮತಿ ಹೊಂದಿದೆ. ಶೀಘ್ರದಲ್ಲಿ ಸೌರಶಕ್ತಿ ಆಧಾರಿತ ಯುಎವಿ ಮತ್ತು ಮಾನವರಹಿತ ಹೆಲಿಕಾಪ್ಟರ್ ಅಭಿವೃದ್ಧಿ ಯೋಜನೆಗಳನ್ನು ಸಂಸ್ಥೆ ಕೈಗೆತ್ತಿಕೊಳ್ಳಲಿದೆ ಎಂದು ರಾವ್ ಹೇಳಿದರು.

ಸೇನಾಪಡೆಗಳು ಯುಎವಿಗಳ ಬಳಕೆಗೆ ಹೆಚ್ಚು ಆಸಕ್ತಿ ವ್ಯಕ್ತಿಪಡಿಸಿವೆ. ಡಿಆರ್‌ಡಿಒ ಈಗಾಗಲೇ ಅಭಿವೃದ್ಧಿಪಡಿಸಿರುವ ಲಕ್ಷ್ಯ, ನಿಶಾಂತ್ ಮತ್ತು ರುಸ್ತುಂ-1 ಮಾನವರಹಿತ ಸರ್ವೇಕ್ಷಣಾ ವಿಮಾನಗಳನ್ನು ಬಳಸಿಕೊಳ್ಳಲು ಸೇನೆಯ ಮೂರು ವಿಭಾಗಗಳೂ ಉತ್ಸುಕವಾಗಿವೆ ಎಂದರು.

ಇದಕ್ಕೂ ಮುನ್ನ ಸಮ್ಮೇಳನದಲ್ಲಿ ಮಾತನಾಡಿದ ರಾವ್, ನಾಲ್ಕನೇ ಹಂತದ ವೈಮಾನಿಕ ಕ್ಷೇತ್ರದಲ್ಲಿ ಭಾರತವು ಹಲವು ಬಗೆಯ ತಂತ್ರಜ್ಞಾನ ಅಭಿವೃದ್ಧಿ ಪ್ರಯತ್ನಗಳನ್ನು ನಡೆಸಿದೆ. ಏರೋಸ್ಟಾಟ್‌ಗಳು ಮತ್ತು ಏರ್‌ಷಿಪ್‌ಗಳ ಅಭಿವೃದ್ಧಿಗೆ ಡಿಆರ್‌ಡಿಒ ಆದ್ಯತೆ ನೀಡಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.