ADVERTISEMENT

ಮೈಸೂರಿನ ಮಹಿಳಾ ಸಹಕಾರಿ ಬ್ಯಾಂಕ್‌ ಸಾಧನೆ

ಸ್ಮಿತಾ ಶಿರೂರ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಕೇಂದ್ರ ಸರ್ಕಾರದ ಒಡೆತನದ ಮೊಟ್ಟಮೊದಲ ‘ಭಾರತೀಯ ಮಹಿಳಾ ಬ್ಯಾಂಕ್‌’ ಈ ವರ್ಷ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಏಳು ಕಡೆ ಈಗಷ್ಟೇ ಕಣ್ಣು ಬಿಟ್ಟಿದ್ದರೆ, ಮೈಸೂರಿನಲ್ಲಿ ‘ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌’ 19 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಪ್ರಥಮ ಶಾಖೆಯೊಂದನ್ನು ಆರಂಭಿಸುವ ಕನಸು ಕಟ್ಟುತ್ತಿದೆ!

ಇನ್ನೊಂದೆಡೆ, ಬಂಗಾರ–ಬೆಳ್ಳಿ ಆಭರಣಗಳ ಮೇಲೆ ಸಾಲ ನೀಡುತ್ತಾ, ಬಡಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡುತ್ತಿರುವ ‘ಆರ್ಯ ಭಗಿನಿಯರ ಪರಸ್ಪರ ಸಹಕಾರ ಸಂಘ’ಕ್ಕೆ 84 ವರ್ಷಗಳು ತುಂಬಿದ್ದು, ಇದು ರಾಜ್ಯದ ಪ್ರಥಮ ಮಹಿಳಾ ಸಹಕಾರಿ ಸಂಘ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಂಕ್‌ ಬೇಕು ಎನ್ನುವ ಕಾಳಜಿ ಇಲ್ಲಿಯ ಮಹಿಳೆಯರಲ್ಲಿ ಮುಂಚಿತವಾಗಿಯೇ ಹುಟ್ಟಿತ್ತು. ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರಾಗಿಸಲು ಮಹಿಳೆಯರೇ ಒಟ್ಟಾಗಿ ರೂಪಿಸಿದ ಇಂಥ ಸಂಸ್ಥೆಗಳಿಂದ ಸಾಧ್ಯ ಎಂಬುದನ್ನು ಈ ಸಂಸ್ಥೆಗಳು ಸಾಬೀತು ಮಾಡಿವೆ.

ಲಾಭದಲ್ಲಿ ಮಹಿಳಾ ಬ್ಯಾಂಕ್‌
ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಸಹಕಾರ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌’ 1994ರಲ್ಲಿ ನೋಂದಣಿಯಾಗಿದೆ. 1995ರಲ್ಲಿ ವಹಿವಾಟು ಆರಂಭಿಸಿದಾಗ ಷೇರಿನ ಬೆಲೆ ತಲಾ ರೂ.25. ಆಗ ಇದ್ದ ಸದಸ್ಯರ ಸಂಖ್ಯೆ 2,500. ಅಂದರೆ, ಷೇರು ಬಂಡವಾಳವೇ ಒಟ್ಟು ರೂ.25 ಲಕ್ಷದಷ್ಟಿತ್ತು.

19 ವರ್ಷಗಳ ನಂತರ ಮಹಿಳಾ ಸದಸ್ಯರ ಸಂಖ್ಯೆ 7,500ಕ್ಕೆ ಹೆಚ್ಚಿದೆ. ಈಗ ಪ್ರತಿ ಷೇರಿನ ಬೆಲೆ ರೂ.1,000ರಷ್ಟಾಗಿದೆ. ಪ್ರಸ್ತುತ ರೂ.1.80 ಕೋಟಿ ಷೇರು ಬಂಡವಾಳ, ರೂ.25 ಕೋಟಿ ಠೇವಣಿ, ರೂ.20 ಕೋಟಿ ಸಾಲವಿದೆ. ಉಳಿದ ಸಹಕಾರಿ ಬ್ಯಾಂಕ್‌ಗಳ ನಿಯಮಗಳೇ ಇದಕ್ಕೆ ಅನ್ವಯಿಸುತ್ತವೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ಬ್ಯಾಂಕ್‌ನಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರು ಸದಸ್ಯರಾಗಬಹುದು. ಬ್ಯಾಂಕ್‌ ಖಾತೆಯನ್ನು ಪುರುಷರೂ ಹೊಂದಬಹುದು. ಇಲ್ಲಿರುವ ಒಟ್ಟು 13 ಸಿಬ್ಬಂದಿಗಳಲ್ಲಿ 11 ಮಂದಿ ಮಹಿಳೆಯರೇ ಇದ್ದಾರೆ ಎಂದು ವಿವರಿಸುತ್ತಾರೆ ವ್ಯವಸ್ಥಾಪಕಿ ಸುಮಾ.

15 ಮಂದಿಯ ನಿರ್ದೇಶಕ ಮಂಡಳಿ ಈ ಬ್ಯಾಂಕ್‌ಗೆ ಇದೆ. ಐದು ವರ್ಷಗಳಿಗೊಮ್ಮೆ ನಿರ್ದೇಶಕ ಮಂಡಳಿಗಾಗಿ ಚುನಾವಣೆ ನಡೆಯುತ್ತದೆ. ಕುವೆಂಪು ನಗರದಲ್ಲಿ ಸ್ವಂತ ನಿವೇಶವವಿದ್ದು ಪ್ರಥಮ ಶಾಖೆ ತೆರೆಯಲು ಅನುಮತಿಗಾಗಿ ಆರ್‌ಬಿಐಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಸುಮಾ.

‘ಲಾಕರ್‌ ವ್ಯವಸ್ಥೆ, ಪಿಗ್ಮಿ, ಇ–ಸ್ಟಾಂಪಿಂಗ್‌, ಎಫ್‌ಡಿ, ಆರ್‌ಡಿ ಮೊದಲಾದ ಸೇವೆಗಳು ಲಭ್ಯವಿವೆ. ಕಳೆದ ಮೂರು ವರ್ಷಗಳಿಂದ ‘ನೆಟ್‌ ಎನ್‌ಪಿಎ’ ಶೂನ್ಯ ಮಟ್ಟದಲ್ಲಿ ಕಾಯ್ದುಕೊಂಡು ಬರಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆ­ಯರ ಹೆಸರಿನಲ್ಲಿ ಯಾವುದೇ ಆಸ್ತಿ ದಾಖಲೆಗಳು ಇರುವುದಿಲ್ಲ. ಇದರಿಂದ ಸಾಲ ನೀಡಲು ತೊಡಕಾಗುತ್ತಿತ್ತು. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಈ ಸಮಸ್ಯೆ ತುಂಬಾ ಹೆಚ್ಚು. ಇನ್ನು ಹಲವು ಮಹಿಳೆಯರು ಬ್ಯಾಂಕ್‌ ವ್ಯವಹಾರ ಹಾಗೂ ಸಾಲ ವ್ಯವಹಾರಗಳಿಗೆ ಪತಿ ಅಥವಾ ಮನೆಯ ಗಂಡಸರನ್ನೇ ಅವಲಂಬಿಸಿರುವ ಪ್ರಕರಣಗಳೇ ಹೆಚ್ಚು. ಸಾಲ ನೀಡಲು ತೊಡಕಾಗದಂತೆ ನಿಯಮಗಳ ಸರಳೀಕರಿಸಲು ಯತ್ನಿಸಿದ್ದೇವೆ. ರಿಜಿಸ್ಟ್ರಾರ್‌ ಕಚೇರಿಯಿಂದ ನಿಯಮ ಬದಲಾವಣೆ ಮಾಡಿಸಿಕೊಂಡಿದ್ದೇವೆ. ಗಂಡನ ಹೆಸರಿನಲ್ಲಿ ಆಸ್ತಿಯಿದ್ದರೂ ಮಹಿಳೆಗೆ ಸಾಲ ಲಭಿಸುವಂತೆ ಮಾಡಿದ್ದೇವೆ’ ಎನ್ನುವುದು ಸುಮಾ ಅವರ ವಿವರಣೆ.

ಜಂಟಿ ಸಾಲ (ಗರಿಷ್ಠ ರೂ.35 ಲಕ್ಷ), ವಾಹನ ಸಾಲ (ಷೋರೂಂ ದರದ ಶೇ 75ರಷ್ಟು), ಸ್ವಯಂ ಉದ್ಯೋಗಕ್ಕಾಗಿ ರೂ. 1 ಲಕ್ಷ, ವೈಯಕ್ತಿಕ ಸಾಲ (ವೇತನದ 8 ಪಟ್ಟು), ಸ್ಥಿರ ಆಧಾರ ಸಾಲ ( ರೂ. 20 ಲಕ್ಷ), ನಗ ಆಧಾರ ಸಾಲ (ರೂ. 10 ಲಕ್ಷ) ಇಲ್ಲಿ ಲಭ್ಯವಿದೆ. ಪ್ರತಿ ವರ್ಷ ಷೇರಿನ ಮೇಲೆ ಶೇ 10ರಿಂದ 12ರವರೆಗೂ ಡಿವಿಡೆಂಡ್‌ ನೀಡಲಾಗುತ್ತಿದೆ.

‘ಬೆಳ್ಳಿಗೂ ಸಾಲ’
ಪದ್ಮಾವತಿಬಾಯಿ, ರಂಗಮ್ಮ ಹಾಗೂ ನಾಗೂಬಾಯಿ ಅವರು ಮನೆಮನೆಗೆ ಓಡಾಡಿ ತಲಾ ನಾಲ್ಕಾಣೆ (24 ಪೈಸೆ) ಸಂಗ್ರಹಿಸಿ ಕಟ್ಟಿದ ‘ಆರ್ಯ ಭಗಿನಿಯರ ಪರಸ್ಪರ ಸಹಕಾರ ಸಂಘ’ ಈಗ ಸ್ವಂತ ಕಟ್ಟಡ ಹೊಂದಿದೆ. ಮೈಸೂರಿನ ಸಿದ್ದಪ್ಪ ಚೌಕದ ಬಳಿ ಇರುವ ಈ ಸಂಘದ ಈಗಿನ ಷೇರು ಬೆಲೆ ರೂ.100!
ಉಳಿತಾಯ ಯೋಜನೆ ಹಾಗೂ ಬಂಗಾರದ ನಗ ಆಧಾರ ಸಾಲ ಯೋಜನೆಯೇ ಇಲ್ಲಿ ಪ್ರಮುಖ. ಮಹಿಳೆಯರಿಗಾಗಿಯೇ ವಿಶೇಷ ಠೇವಣಿ, ರಿಕರಿಂಗ್‌ ಠೇವಣಿ, ಚಾಮುಂಡಿ ಠೇವಣಿ, ನಿರಖು ಠೇವಣಿ, ಅರಿಸಿನ–ಕುಂಕುಮ ಠೇವಣಿ ಯೋಜನೆಗಳನ್ನು ಪರಿಚಯಿಸಲಾಗಿದೆ. ಅಮೃತ ಮಹೋತ್ಸವದ ನೆನಪಿಗಾಗಿ ನಿರ್ಮಿಸಿದ ಸಭಾಂಗಣದಲ್ಲಿ ಮಹಿಳೆ­ಯರಿ­ಗಾಗಿ ಕೌಶಲ ತರಬೇತಿಗಳನ್ನು ಆಯೋಜಿಸಲು ಯೋಚಿಸಲಾಗಿದೆ ಎನ್ನುತ್ತಾರೆ ಕಾರ್ಯದರ್ಶಿ ಲಕ್ಷ್ಮಿ.

ಅರಿಶಿನ–ಕುಂಕುಮ ಠೇವಣಿ
ಪ್ರಸ್ತುತ 1,307 ಸದಸ್ಯರಿದ್ದಾರೆ. ರೂ. 36.65 ಲಕ್ಷ ಷೇರು ಬಂಡವಾಳವಿದೆ. ರೂ.70 ಸಾವಿರ ಅರಿ ಶಿನ–ಕುಂಕುಮ ಠೇವಣಿ, ರೂ.4,15,000 ಎಫ್‌ಡಿ ಇದೆ. ತಿಂಗಳಿಗೆ ರೂ.5 ಲಕ್ಷದಷ್ಟು ವಹಿವಾಟು ನಡೆ ಯುತ್ತಿದೆ. ನಿರ್ದೇಶಕ ಮಂಡಳಿಯಲ್ಲಿ 9 ಮಹಿಳೆಯರಿದ್ದಾರೆ. ಗರಿಷ್ಠ ರೂ.50 ಸಾವಿರ ಸಾಲ ನೀಡುತ್ತೇವೆ. ಷೇರು ಹಣದ ಮೇಲೆ ರೂ.1 ಸಾವಿರ ದವರೆಗೆ ಕೈಗಡ ಕೊಡಲಾಗುತ್ತಿದೆ. ಸುಸ್ತಿ ಬಡ್ಡಿಯ ನ್ನೇನೂ ವಿಧಿಸು­ವುದಿಲ್ಲ. ತವರು ಮನೆಯವರು ಅರಿಸಿನ ಕುಂಕುಮ ಯೋಜನೆಯಡಿ ಠೇವಣಿಯಾಗಿ ಹಣ ಇಟ್ಟರೆ ವಾರ್ಷಿಕ ಶೇ 11ರಷ್ಟು ಬಡ್ಡಿ ಹಣವನ್ನು ಪ್ರತಿವರ್ಷ ಮಗಳ ಮನೆಗೆ ಗೌರಿ ಹಬ್ಬ ದಂದು ಕಳುಹಿಸಲಾಗುತ್ತದೆ. ಇದು ಸಂಘದ ವಿಶೇಷ ಯೋಜನೆಯೂ ಹೌದು ಎನ್ನುತ್ತಾರೆ ಅವರು.

ಪ್ರತ್ಯೇಕ ಬ್ಯಾಂಕ್‌ ಉತ್ತಮ’
ಹೆಣ್ಣುಮಕ್ಕಳಲ್ಲಿ ಉಳಿತಾಯ ಮನೋಭಾವ ಬೆಳೆಸಲು ಹಾಗೂ ಕುಟುಂಬ ನಿರ್ವಹಣೆಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಎಂ.ವಿ.ಬೃಹದಾಂಬಾ ಅವರು ‘ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌’ ಸ್ಥಾಪಿಸಿದರು. ಸಾವಿರಾರು ಮಹಿಳೆಯರು ಈ ಬ್ಯಾಂಕ್‌ನ ಉಪಯೋಗ ಪಡೆದಿದ್ದಾರೆ. ಸಾಲ ಹಾಗೂ ಇತರ ಸೌಲಭ್ಯ ಪಡೆಯಲು ಮಹಿಳೆಯರಿಗೆ ಇಲ್ಲಿ ಹೆಚ್ಚಿನ ಅವಕಾಶವಿದೆ. ಪ್ರತ್ಯೇಕ ಬ್ಯಾಂಕ್‌ನಿಂದ ಹೆಚ್ಚಿನ ಅನುಕೂಲವಾಗಿದೆ. ಈ ವರ್ಷ ನಮ್ಮ ಬ್ಯಾಂಕ್‌ ರೂ.25 ಲಕ್ಷ ಲಾಭದಲ್ಲಿದೆ.
ಶಿವಕುಮಾರಿ, ಅಧ್ಯಕ್ಷೆ, ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌

ಮೊದಲ ಮಹಿಳಾ ಸಹಕಾರ ಸಂಘ

ADVERTISEMENT

‘ಆರ್ಯ ಭಗಿನಿಯರ ಪರಸ್ಪರ ಸಹಕಾರ ಸಂಘ’ ಕರ್ನಾಟಕದಲ್ಲೇ ಮೊದಲ ಮಹಿಳಾ ಸಹಕಾರ ಸಂಘ. ಇದು ಇರುವುದೇ ಬಡ ಮಹಿಳೆಯರಿಗೆ ಸಹಾಯ ಮಾಡಲು. ಇದು ಸೇವಾ ಮನೋಭಾವದ ಬ್ಯಾಂಕ್‌. ಇತ್ತೀಚೆಗೆ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ನಮ್ಮಲ್ಲಿ ಸಾಲ ಪಡೆಯುವವರ ಪ್ರಮಾಣ ಕಡಿಮೆಯಾಗಿದೆ. ವ್ಯವಹಾರ ನಡೆಸುವುದು ಕಷ್ಟವಾಗುತ್ತಿದೆ. ಆದರೂ ನಿರ್ದೇಶಕ ಮಂಡಳಿಯವರ ಸಹಕಾರದಿಂದ ಸಂಘವು ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ.
–ಸರೋಜಾ ಕೃಷ್ಣಮೂರ್ತಿ, ಅಧ್ಯಕ್ಷೆ, ಆರ್ಯ ಭಗಿನಿಯರ ಪರಸ್ಪರ ಸಹಕಾರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.