ದಾವಣಗೆರೆ: ಜಲಾನಯನ ಪ್ರದೇಶಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನಿಂದ 2013-14ನೇ ಜಾರಿಯಾಗಿರುವ 'ಸುಜಲ-3' ಯೋಜನೆಗೆ ರಾಜ್ಯದ ಏಳು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ದಾವಣಗೆರೆ, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ಗದಗ, ಬೀದರ, ಚಾಮರಾಜನಗರ ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಜಿಲ್ಲೆಗಳಿಗೆ ಯೋಜನೆ ವಿಸ್ತರಣೆಯಾಗಲಿದೆ.ಈ ಸಾಲಿಗೆ ವಿಶ್ವಬ್ಯಾಂಕ್‌ನಿಂದ ರಾಜ್ಯಕ್ಕೆ ರೂ 25 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಆಯ್ಕೆಯಾದ ಜಿಲ್ಲೆಗಳಲ್ಲಿ ತಲಾ 25ಸಾವಿರ ಹೆಕ್ಟೇರ್ ತೋಟಗಾರಿಕೆ ಪ್ರದೇಶ ಅಭಿವೃದ್ಧಿಪಡಿಸುವ ಗುರಿ ಯೋಜನೆಯದ್ದಾಗಿದೆ.
ಏನಿದು ಯೋಜನೆ?
ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ-2ರಲ್ಲಿ ಕೈಗೊಂಡಿರುವ ಕಾರ್ಯಕ್ರಮವಿದು. 2013ನೇ ಸಾಲಿನಿಂದ ಆರು ವರ್ಷಗಳ ಕಾಲ ಯೋಜನೆ ಅನುಷ್ಠಾನಕ್ಕೆ ನಿಗದಿಪಡಿಸಲಾಗಿದೆ. ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಯತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶ ಯೋಜನೆಯದು.`ತೋಟಗಾರಿಕೆ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನಗಳ ಬಳಕೆ ಆರಂಭವಾಗಿದೆ. ಹೆಚ್ಚು ಇಳುವರಿ ಕೊಡುವ ತಳಿಗಳು ಪರಿಚಯಗೊಂಡಿವೆ. ತಂತ್ರಜ್ಞಾನ ಅಳವಡಿಕೆ ಮೂಲಕ ತೋಟಗಾರಿಕೆ ಬೆಳಗಾರರಿಗೆ ನೆರವಾಗಲು, ಪ್ರಾತ್ಯಕ್ಷಿಕೆ, ಕಾರ್ಯಾಗಾರ, ಸಂವಾದದ ಮೂಲಕ ಬೆಳೆಗಾರರಿಗೆ ಮಾರ್ಗದರ್ಶನ ನೀಡುವುದು 'ಸುಜಲ-3' ಯೋಜನೆಯ ಉದ್ದೇಶಗಳಾಗಿವೆ' ಎಂದು ಜಿಲ್ಲೆಯ 'ಸುಜಲ' ಯೋಜನಾಧಿಕಾರಿ ರಾಘವೇಂದ್ರ ಪ್ರಸಾದ್ 'ಪ್ರಜಾವಾಣಿ'ಗೆ ತಿಳಿಸಿದರು.
'ಯೋಜನೆಗೆ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ದಾವಣಗೆರೆ, ಹರಪನಹಳ್ಳಿ, ಜಗಳೂರು ಹಾಗೂ ಹೊನ್ನಾಳಿ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 2 ಸಾವಿರದಿಂದ 2,500 ಎಕರೆ ಪ್ರದೇಶ ಒಳಗೊಂಡ ಒಟ್ಟು 50 ಕಿರು ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಪ್ರತಿ ಭಾಗದಲ್ಲಿಯೂ ತೋಟಗಾರಿಕೆ ಬೆಳೆ ಹೇಗೆ ಬೆಳೆಯಬೇಕು ಎಂಬುದರ ಪ್ರಾತ್ಯಕ್ಷಿಕೆ ನಡೆಸಲಾಗುವುದು. ಜಲ ಸಂರಕ್ಷಣೆ, ಮಿತ ಬಳಕೆ ಹೇಗೆ? ಎಂಬುದನ್ನು ತಿಳಿಸಿಕೊಡಲಾಗುವುದು. ಕ್ಷೇತ್ರೋತ್ಸವ ನಡೆಸುವ ಮೂಲಕ ಅರಿವು ಮೂಡಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಕೇಂದ್ರ ಕಾರ್ಯನಿರ್ವಹಿಸಲಿದೆ' ಎಂದು ಮಾಹಿತಿ ನೀಡಿದರು.
ಪ್ರಯೋಗಾಲಯ ಸ್ಥಾಪನೆ: 'ಬೆಳೆಯ ಕೊಯ್ಲೋತ್ತರ ನಿರ್ವಹಣೆ ಕುರಿತು ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ಒದಗಿಸಲಾಗುವುದು. ಪ್ಯಾಕ್‌ಹೌಸ್, ಸಂಸ್ಕರಣ ಘಟಕಗಳ ಬಳಕೆ ಹೇಗೆ ಎಂಬುದನ್ನು ಇಲಾಖೆಯ ನಿಗದಿತ ಕ್ಷೇತ್ರದಲ್ಲಿ ತಿಳಿಸಿಕೊಡಲಾಗುವುದು. ಸಮಗ್ರ ಅಭಿವೃದ್ಧಿ ಹಾಗೂ ಮಾರುಕಟ್ಟೆ ಉದ್ದೇಶದಿಂದ ರೈತರಿಗೆ 'ಹಾಪ್‌ಕಾಮ್ಸ'ಗಳ ಜತೆ ಸಂಪರ್ಕ ಕಲ್ಪಿಸಲಾಗುವುದು. ಆಯಾ ಭಾಗದಲ್ಲಿ ರೈತರ ಗುಂಪುಗಳನ್ನು ರಚಿಸಿ, ಮಾರುಕಟ್ಟೆ ಅವಕಾಶಗಳ ಬಗ್ಗೆ ತಿಳಿಸಿಕೊಡಲಾಗುವುದು. ಮಣ್ಣು, ನೀರು ಹಾಗೂ ಎಲೆಗಳ ವಿಶ್ಲೇಷಣೆಗಾಗಿ ಪ್ರಯೋಗಾಲಯವೊಂದನ್ನು ಸ್ಥಾಪಿಸುವ ಯೋಜನೆಯಿದೆ' ಎಂದು ರಾಘವೇಂದ್ರ ತಿಳಿಸಿದರು.
ಯೋಜನೆಯಿಂದ, ಬೆಳೆಗಾರರಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನ, ಮಾರುಕಟ್ಟೆ ಅವಕಾಶ ದೊರೆಯಲಿದೆ. ಕೊಯ್ಲೋತ್ತರ ನಿರ್ವಹಣೆಯಲ್ಲಿ ಆಗುತ್ತಿರುವ ನಷ್ಟವನ್ನು ತಪ್ಪಿಸಬಹುದು. ಮಾದರಿ ಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆದೊಯ್ಯುವುದರಿಂದ ಅನುಭವ ಹಂಚಿಕೆ, ಮಾದರಿ ಕ್ರಮಗಳ ಅಳವಡಿಕೆ ಸಾಧ್ಯವಾಗಲಿದೆ. ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲೆಗೆ ರೂ4 ಕೋಟಿ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದುರು.
ಯೋಜನೆಗೆ ಆಯ್ಕೆಯಾಗಿರುವ ಜಿಲ್ಲೆಗಳಲ್ಲಿ, ಅನುಷ್ಠಾನಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಪ್ರತ್ಯೇಕವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ. ಯೋಜನಾ ಅಧಿಕಾರಿಯಾಗಿ ಉಪ ನಿರ್ದೇಶಕರು, ಇಬ್ಬರು ಸಹಾಯಕ ತೋಟಗಾರಿಕೆ ನಿರ್ದೇಶಕರು, ಮೂವರು ತೋಟಗಾರಿಕೆ ಸಹಾಯಕರು, ಒಬ್ಬ ಎಫ್‌ಡಿಎ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.