ADVERTISEMENT

ರೂಪಾಯಿ: ಪ್ರಧಾನಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ನವದೆಹಲಿ(ಪಿಟಿಐ): ಕಳೆದ ಕೆಲವು ವಾರಗಳಿಂದ ರೂಪಾಯಿ ಸತತವಾಗಿ ಅಪಮೌಲ್ಯಗೊಳ್ಳುತ್ತಾ ದೇಶದ ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಆಮದು ಕ್ಷೇತ್ರವನ್ನು ಬಹಳ ಕಳವಳಕ್ಕೀಡು ಮಾಡಿದೆ.
 
ಆದರೆ ಅರ್ಥಶಾಸ್ತ್ರಜ್ಞರೂ ಆದ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಗವರ್ನರ್ ಡಿ.ಸುಬ್ಬರಾವ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಜತೆ ಈ ಬಗ್ಗೆ ಚರ್ಚಿಸಿದರು.

ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿ(ಪಿಎಂಇಎಸಿ) ಅಧ್ಯಕ್ಷ ಸಿ.ರಂಗರಾಜನ್ ಅವರೂ ಸಭೆಯಲ್ಲಿದ್ದರು.
ನಂತರ ಸುದ್ದಿಗಾರರಿಗೆ ವಿವರ ನೀಡಿದ ರಂಗರಾಜನ್, `ರೂಪಾಯಿ ಕುಸಿತ ತಡೆಗೆ ಯಾವ ಬಗೆಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಜತೆಗೆ ದೇಶದಲ್ಲಿನ ಸದ್ಯದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ವಿಚಾರವೂ ಚರ್ಚೆಗೊಳಗಾಯಿತು~ ಎಂದರು.

`ರೂಪಾಯಿ ಮೇಲಿನ ಒತ್ತಡ ನಿವಾರಿಸಲು ಡಾಲರ್ಸ್‌ ಅನ್ನು ನೇರವಾಗಿಯೇ ತೈಲ ಕಂಪೆನಿಗಳಿಗೆ ನೀಡಲು ಆರ್‌ಬಿಐ ಚಿಂತಿಸುತ್ತಿದೆ~ ಎಂದು ಸುಬ್ಬರಾವ್ ಗುರುವಾರ ಹೇಳಿದ್ದರು. ಮರುದಿನವೇ ಮೂವರೂ ಪ್ರಮುಖರ ಜತೆ ಪ್ರಧಾನಿ ಸಭೆ ನಡೆಸಿ ಚರ್ಚಿಸಿದ್ದಾರೆ.

ರೂ ಸುಧಾರಣೆ:ಈ ಮಧ್ಯೆ, ಗುರುವಾರ ಡಾಲರ್ ವಿರುದ್ಧ 55.65ರ ಬೆಲೆಗೆ ಬಂದಿದ್ದ ರೂಪಾಯಿ, ಶುಕ್ರವಾರ 27 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿತು. ಆ ಮೂಲಕ ಡಾಲರ್‌ಗೆ 55.37ರ ಲೆಕ್ಕದಲ್ಲಿ ರೂಪಾಯಿ ವಿನಿಮಯ ನಡೆಸಿತು.

ರೂಪಾಯಿ ಮೌಲ್ಯ 6 ತಿಂಗಳಲ್ಲಿ 52ಕ್ಕೆ

ಮುಂಬೈ(ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಮುಂದಿನ 6 ತಿಂಗಳಲ್ಲಿ ರೂ.52ಕ್ಕೆ ಬರಲಿದೆ ಎಂದು ಮಾರುಕಟ್ಟೆ ಸಲಹಾ ಸಂಸ್ಥೆ  `ಬರ್ಕ್ಲೆ ಕ್ಯಾಪಿಟಲ್~ ಅಂದಾಜು ಮಾಡಿದೆ.

ಶುಕ್ರವಾರ ವಿನಿಮಯ ಮಾರುಕಟ್ಟೆಯಲ್ಲಿ ರೂ. ಮೌಲ್ಯ ಮತ್ತೆ 56.07ಕ್ಕೆ ಕುಸಿದಿದೆ. ಗ್ರೀಸ್ ಬಿಕ್ಕಟ್ಟು ಸೇರಿದಂತೆ ಜಾಗತಿಕ ಬೆಳವಣಿಗೆಗಳು ರೂಪಾಯಿ ಅಪ ಮೌಲ್ಯಕ್ಕೆ ಕಾರಣವಾಗುತ್ತಿವೆ. ವಿಶ್ವ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿ ್ದದಂತೆ ರೂ. ಮೌಲ್ಯ ಸ್ಥಿರಗೊಳ್ಳಲಿದೆ ಎಂದೂ ವರದಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.