ಚೀನಾ ರೇಷ್ಮೆ ಹಾವಳಿ, ಕಾರ್ಮಿಕರ ಕೊರತೆ ಹಾಗೂ ನೀರಿನ ಅಭಾವಕ್ಕೆ ಸಿಲುಕಿ ನಲುಗಿರುವ ರೇಷ್ಮೆ ಉದ್ಯಮದ ಸಂಕಷ್ಟ ನಿವಾರಣೆಗೆ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಹೊಸ ಸ್ಪರ್ಶ ನೀಡುವ ಮೂಲಕ ಪ್ರಾಯೋಗಿಕ ಯೋಜನೆಯೊಂದನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ರಾಮನಗರದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಸರಳ ವಿಧಾನಗಳ ಮೂಲಕ ರೇಷ್ಮೆ ಗೂಡಿನ ಗುಣಮಟ್ಟವನ್ನು ಬಹಳಷ್ಟು ಕಾಲದವರೆಗೆ ಕೆಡದಂತೆ ಶೇಖರಿಸಿಡಬಹುದಾಗಿದೆ. ಸ್ವಯಂಚಾಲಿತ ಯಂತ್ರಗಳ ಮೂಲಕ ಬಿಚ್ಚಾಣಿಕೆ ಮಾಡುವ ನೂಲಿಗೆ ಅಂತರರಾಷ್ಟ್ರೀಯ ದರ್ಜೆ ಗುಣಮಟ್ಟದ ಹಿರಿಮೆ ದೊರಕುವಂತೆ ಮಾಡಬಹುದು. ಜತೆಗೆ, ಕಾರ್ಮಿಕರ ಕೊರತೆ ಎಂಬ ಸಮಸ್ಯೆಯನ್ನೂ ಸಮರ್ಥವಾಗಿ ಎದುರಿಸಬಹುದಾಗಿದೆ.
ಹೀಗೆ ಹತ್ತಾರು ಅತ್ಯಾಧುನಿಕ ಉಪಯುಕ್ತ ವಿಧಾನಗಳೊಂದಿಗೆ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ರಾಮನಗರ. ಇಲ್ಲಿನ ರೇಷ್ಮೆ ಸಂಸ್ಕರಣೆ ಉದ್ಯಮಿ ಸೈಯ್ಯದ್ ಜಿಯಾವುಲ್ಲಾ ಅವರು ₨5 ಕೋಟಿ ವೆಚ್ಚದಲ್ಲಿ ವಿನೂತನ ತಾಂತ್ರಿಕತೆಯ ಸ್ವಯಂಚಾಲಿತ ಸಿಲ್ಕ್ ರೀಲಿಂಗ್ ಘಟಕ ನೆಲೆಗೊಳಿಸುವ ಮೂಲಕ ಬದಲಾವಣೆಯ ಹೊಸ ಶೆಕೆಗೆ ನಾಂದಿ ಹಾಡಿದ್ದಾರೆ.
ರಾಮನಗರದ ಮಹಬೂಬ್ ನಗರದ ಜಿಯಾವುಲ್ಲಾ ಬ್ಲಾಕ್‌ನಲ್ಲಿ ಹೊಸದಾಗಿ ಆರಂಭಗೊಂಡಿರುವ ‘ಎಸ್ಆರ್ಆರ್ ಸಿಲ್ಕ್ ರೀಲಿಂಗ್’ ಕಾರ್ಖಾನೆಯಲ್ಲಿ ಚೀನಾದ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಅತ್ಯುನ್ನತ ಗುಣಮಟ್ಟದ ರೇಷ್ಮೆ ನೂಲನ್ನು ಉತ್ಪಾದಿಸಲಾಗುತ್ತಿದೆ. ಸಂಪೂರ್ಣ ವೈಜ್ಞಾನಿಕ ವಿಧಾನದ ಬಿಚ್ಚಾಣಿಕೆಯಿಂದ ಹೊರಬರುವ ರೇಷ್ಮೆ ನೂಲು ಗುಣಮಟ್ಟದಲಲಿ ಉತ್ಕೃಷ್ಟವಾಗಿರುವುದರಿಂದ ಯೋಜನೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.
ಶೀಘ್ರದಲ್ಲಿಯೇ ಈ ರೀತಿಯ ಘಟಕಗಳನ್ನು ರಾಜ್ಯದ ಹೆಚ್ಚು ರೇಷ್ಮೆ ಬೆಳೆಯುವ ಜಿಲ್ಲೆಗಳಲ್ಲಿ ತೆರೆಯಲು ಸರ್ಕಾರವೂ ಚಿಂತನೆ ನಡೆಸಿದೆ. ರೇಷ್ಮೆ ನೂಲಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಕ್ಯಾಟಲಿಕ್ ಯೋಜನೆಯಡಿ ಚೀನಾದಿಂದ ಅತ್ಯಾಧುನಿಕ ಯಂತ್ರಗಳನ್ನು ಆಮದು ಮಾಡಿಕೊಂಡು ಅಳವಡಿಸಲಾಗಿದೆ.
ಸಾಂಪ್ರದಾಯಿಕ ಫಿಲೇಚರ್ ಅಥವಾ ಮಲ್ಟಿ ಎಂಡ್ ಕಾರ್ಖಾನೆಗಳಿಗಿಂತ ಹೆಚ್ಚಿನ ಗುಣಮಟ್ಟದ ರೇಷ್ಮೆಯನ್ನು ಸ್ವಯಂಚಾಲಿತ ರೀಲಿಂಗ್ ಯೂನಿಟ್‌ನಲ್ಲಿ ತಯಾರಿಸಬಹುದಾಗಿದೆ. ಈ ವಿಧಾನದಲ್ಲಿ ಉತ್ಪಾದನೆಯಾದ ನೂಲಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪರ್ಧೆ ನೀಡುವ ಸಾಮರ್ಥ್ಯ ಇರುತ್ತದೆ.
ಇಂತ ಯಂತ್ರಗಳ ಅಳವಡಿಕೆಯಿಂದ ಕಾರ್ಮಿಕರ ಮೇಲಿನ ಅವಲಂಬನೆ ಶೇ 50ರಷ್ಟು ಕಡಿಮೆಯಾಗುತ್ತದೆ ಎಂಬುದು ಬಹುಮುಖ್ಯ ಅಂಶವಾಗಿದೆ. ಇದರಿಂದ ಮಾಲೀಕರಿಗೆ ಮಾನವ ಸಂಪನ್ಮೂಲ ಹೊಂದಿಸುವ ಒತ್ತಡ ಕಡಿಮೆಯಾಗುವತ್ತದೆ, ಜತೆಗೆ ಆರ್ಥಿಕ ಹೊರೆಯೂ ತಗ್ಗುತ್ತದೆ.
ವಿದೇಶಿ ರೇಷ್ಮೆಗೆ ಸ್ಪರ್ಧೆ
ದೇಶಿಯ ರೇಷ್ಮೆಗಿಂತ ಭಿನ್ನವೆಂಬ ಗೀಳಿನಿಂದ ಪೈಪೋಟಿಗೆ ಬಿದ್ದು ಚೀನಾ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ರೇಷ್ಮೆಯ ಗುಣಮಟ್ಟ ‘2ಎ’ದಿಂದ ‘3ಎ’ ದರ್ಜೆಯದ್ದಾಗಿರುತ್ತದೆ. ಆದರೆ ರಾಮನಗರದ ಆಟೋಮ್ಯಾಟಿಕ್ ರೀಲಿಂಗ್ ಯೂನಿಟ್‌ನಲ್ಲಿ ತಯಾರಾಗುವ ನೂಲು 4ಎ ದರ್ಜೆಯ ಗುಣಮಟ್ಟ ಹೊಂದಿರುತ್ತದೆ. ಇದಕ್ಕೆ ಇಲ್ಲಿನ ಉತ್ತಮ ಹವಾಮಾನ ಮತ್ತು ನೀರಿನ ಸಾರಾಂಶವೇ ಮುಖ್ಯ ಕಾರಣ ಎನ್ನಲಾಗಿದೆ.
ವಾರ್ಷಿಕ 34 ಟನ್ ನೂಲು
ಈಗ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಘಟಕಗಳಲ್ಲಿ ಪ್ರತಿದಿನ ಸರಾಸರಿ 700ರಿಂದ 800 ಕೆ.ಜಿ ರೇಷ್ಮೆಗೂಡುಗಳ ನೂಲನ್ನು ಬಿಚ್ಚಲು ಅವಕಾಶವಾಗುತ್ತಿದೆ. ಎರಡು ಪಾಳಿಗಳಲ್ಲಿ ಸುಮಾರು 50 ನೌಕರರನ್ನು ಬಳಸಿ ವಾರ್ಷಿಕ 34 ಟನ್ ರೇಷ್ಮೆ ನೂಲನ್ನು ಉತ್ಪಾದಿಸಲು ಅವಕಾಶವಿದೆ. ಎಷ್ಟೇ ಹೆಚ್ಚಿನ ಪ್ರಮಾಣದ ಗೂಡನ್ನು ಖರೀದಿಸಿದರೂ ಆರು ತಿಂಗಳ ಕಾಲ ಕೆಡದಂತೆ ಸಂಗ್ರಹಿಸಿ ಇಡಬಹುದಾಗಿದೆ.
ರೇಷ್ಮೆ ಗೂಡಿನಲ್ಲಿರುವ ತೇವಾಂಶವನ್ನು ಎಲೆಕ್ಟ್ರಿಕಲ್ ಡ್ರಯರ್ ಮೂಲಕ ಆವಿಯಾಗಿಸಿ, ಗೂಡನ್ನು ದೀರ್ಘ ಕಾಲ ಕೆಡದಂತೆ ಶೇಖರಿಸಿಡುವ ಹೊಸ ಕ್ರಮವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ರೇಷ್ಮೆ ಧಾರಣೆ ಏನೇ ಏರಿಳಿತವಾಗಲಿ ನೂಲು ಬಿಚ್ಚಾಣಿಕೆ ಘಟಕದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಕಚ್ಚಾಮಾಲಿಗೂ ಕೊರತೆ ಆಗುವುದಿಲ್ಲ.
ಫಿಲೇಚರ್‌ನ ಹಳೆ ವಿಧಾನದಲ್ಲಿ ರೇಷ್ಮೆಗೂಡನ್ನು ಖರೀದಿಸಿದ ಎರಡು ಅಥವಾ ಮೂರು ದಿನಗಳಲ್ಲಿ ಬಳಕೆ ಮಾಡಲೇಬೇಕಿತ್ತು. ಇಲ್ಲವಾದಲ್ಲಿ ರೇಷ್ಮೆ ಗೂಡಿನ ಕವಚ ಹರಿದು ಚಿಟ್ಟೆ ಹೊರಬಂದುಬಿಡುತ್ತಿತ್ತು. ಆಗ ರೇಷ್ಮೆ ನೂಲು ತೆಗೆಯಲಾಗದೆ ನೂಲು ಬಿಚ್ಚಾಣಿಕೆ ಘಟಕದ ಮಾಲೀಕರಿಗೆ ನಷ್ಟವಾಗುತ್ತಿತ್ತು.
ದುಬಾರಿ ಯೋಜನೆ
ಕಾರ್ಖಾನೆ ತೆರೆಯಲು ಕನಿಷ್ಠ ಒಂದು ಎಕರೆಯಷ್ಟು ವಿಸ್ತಾರಣವಾದ ಸ್ಥಳಾವಕಾಶ ಬೇಕು. ಭೂಮಿ, ಕಟ್ಟಡ ನಿರ್ಮಾಣ, ವಿದ್ಯುತ್ ಸಂಪರ್ಕ, ಯಂತ್ರೋಪಕರಣ ಖರೀದಿ ಎಂದು ಆರಂಭಿಕ ಬಂಡವಾಳವೇ ₨5 ಕೋಟಿಯಷ್ಟು ಬೇಕಾಗುತ್ತದೆ. ರೇಷ್ಮೆ ನೂಲು ತೆಗೆಯುವ ಘಟಕಗಳನ್ನು ಅತ್ಯಾಧುನಿಕಗೊಳಿಸುವ ಈ ಯೋಜನೆಗೆ ಕೇಂದ್ರ ರೇಷ್ಮೆ ಮಂಡಳಿ ₨50 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ₨1 ಕೋಟಿ ಸಹಾಯಧನವೂ ದೊರಕಲಿದೆ. ಉಳಿದ ಹಣವನ್ನು (₨3.50 ಕೋಟಿ) ಸ್ವಂತದ ಮೂಲಗಳಿಂದಲೇ ಭರಿಸಬೇಕಾಗುತ್ತದೆ.
ಆಟೋಮ್ಯಾಟಿಕ್ ರೀಲಿಂಗ್ ಘಟಕಕ್ಕೆ ರಾಜ್ಯ ಸರ್ಕಾರ ನೀಡುವ ₨1 ಕೋಟಿಯನ್ನು ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇದರಿಂದ ಘಟಕ ಸ್ಥಾಪನೆಗೆ ಅಗತ್ಯವಾದ ಬಂಡವಾಳ ಹೊಂದಿಸಿಕೊಳ್ಳಲು ಸಣ್ಣ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಬಂಡವಾಳ ಹೂಡಿದವರು ಲಕ್ಷಾಂತರ ರೂಪಾಯಿಯನ್ನು ಬಡ್ಡಿ ಕಟ್ಟಲೆಂದೇ ವ್ಯಯಿಸಬೇಕಾಗಿದ್ದು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
‘ಪ್ರಸ್ತುತ ಭಾರತಕ್ಕೆ ರೇಷ್ಮೆ ವಸ್ತ್ರಗಳ ತಯಾರಿಕೆಗಾಗಿ ವಾರ್ಷಿಕ 28ರಿಂದ 30 ಸಾವಿರ ಮೆಟ್ರಿಕ್ ಟನ್‌ಗಳಷ್ಟು ರೇಷ್ಮೆ ನೂಲು ಅಗತ್ಯವಿದೆ. ಆದರೆ ಇಲ್ಲಿ ವಾರ್ಷಿಕ ಉತ್ಪಾದನೆಯಾಗುತ್ತಿರುವುದು 15 ರಿಂದ 16 ಸಾವಿರ ಮೆಟ್ರಿಕ್ ಟನ್ ಮಾತ್ರ. ಹಾಗಾಗಿ ರೇಷ್ಮೆ ನೂಲಿನ ಬೇಡಿಕೆ ಪೂರೈಸಲು ಬೇರೆ ದೇಶಗಳ ಮೊರೆ ಹೋಗಬೇಕಾಗಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ‘ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ’ದ (ಕೆಎಸ್ಐಸಿ) ಮಾಜಿ ಅಧ್ಯಕ್ಷರೂ ಆದ ಎಸ್ಆರ್ಆರ್ ಕಾರ್ಖಾನೆ ಮಾಲೀಕ ಸೈಯದ್ ಜಿಯಾವುಲ್ಲಾ.
‘ದೇಶದ ರೇಷ್ಮೆ ವಸ್ತ್ರೋದ್ಯಮಕ್ಕೆ ಅಗತ್ಯವಿರುವಷ್ಟು ರೇಷ್ಮೆಯನ್ನು ಆಂತರಿಕವಾಗಿಯೇ ಸಿದ್ಧಪಡಿಸಿಕೊಳ್ಳಲು ಅಗತ್ಯವಾಗಿ ಬೇಕಾದ ವ್ಯವಸ್ಥೆಗಳನ್ನು ಸರ್ಕಾರ ಮಾಡಿಕೊಡಬೇಕಿದೆ. ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡಬೇಕು, ಆಧುನಿಕ ತಂತ್ರಜ್ಞಾನದ ವಿಧಾನಗಳ ಮೂಲಕ ರೇಷ್ಮೆ ಕೃಷಿಯನ್ನು ಇನ್ನಷ್ಟು ವಿಸ್ತಾರ ಮಾಡಿದಲ್ಲಿ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಲಿದೆ.
ಹಾಗೆಯೇ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆಗಳ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರವೇ ರೇಷ್ಮೆಗೂಡಿನ ಸಂಸ್ಕರಣಾ ಘಟಕಗಳನ್ನು ತೆರೆಯಬೇಕು. ಈ ವಿಧಾನದಿಂದ ಡ್ರಯರ್ ಮೂಲಕ ರೇಷ್ಮೆಗೂಡನ್ನು ದೀರ್ಘಕಾಲ ಕೆಡದಂತೆ ಸಂಸ್ಕರಿಸಿ ಇಡಬಹುದಾಗಿದೆ’ ಎನ್ನುತ್ತಾರೆ ಅವರು.
‘ಒಂದು ಘಟಕದ ಸ್ಥಾಪನೆಗೆ ₨1 ಕೋಟಿಯನ್ನು ಸರ್ಕಾರವೇ ವಿನಿಯೋಗಿಸಿದರೆ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ಉದ್ಯಮ ನಷ್ಟ ಅನುಭವಿಸುವುದನ್ನು ತಡೆಯಬಹುದಾಗಿದೆ. ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಗೂಡು ಬರುವ ಸಂದರ್ಭದಲ್ಲಿ ಸರ್ಕಾರವೇ ಮುಂದಾಗಿ ಖರೀದಿಸಬೇಕು.
ನಂತರ ಡ್ರಯರ್ ಬಳಸಿ ಸುರಕ್ಷಿತವಾಗಿ ರೇಷ್ಮೆ ಗೂಡುಗಳನ್ನು 6 ತಿಂಗಳವರೆಗೆ ಸಂಗ್ರಹಿಸಿಟ್ಟು, ಬೇಡಿಕೆಬಂದಾಗೆಲ್ಲಾ ಉಪಯೋಗಿಸಿಕೊಂಡು ತನ್ನದೇ ಘಟಕದಲ್ಲಿ ರೇಷ್ಮೆ ನೂಲು ತಯಾರಿಸಿಕೊಳ್ಳಬಹುದಾಗಿದೆ. ಜತೆಗೆ ರೇಷ್ಮೆ ಬೀಜೋತ್ಪಾದನೆಯಲ್ಲೂ ಹೊಸ ತಾಂತ್ರಿಕ ಕೌಶಲವನ್ನು ಅನುಸರಿಸಬೇಕಾಗಿದೆ.
ಚೀನಾದಲ್ಲಿ 20ಕ್ಕೂ ಹೆಚ್ಚು ತಳಿಗಳಿದ್ದು, ಆಯಾ ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬಹುದಾಗಿದೆ. ಆದರೆ ನಮ್ಮ ದೇಶದಲ್ಲಿ ಕೇವಲ ಐದಾರು ತಳಿಗಳು ಮಾತ್ರ ಚಾಲ್ತಿಯಲ್ಲಿ ಇವೆ ಎನ್ನುತ್ತಾರೆ ಜಿಯಾವುಲ್ಲ. ‘ಸದ್ಯದ ಸನ್ನಿವೇಶದಲ್ಲಿ ವಿವಿಧ ಕಾರಣಗಳಿಂದಾಗಿ ರಾಜ್ಯದ ಇಡೀ ರೇಷ್ಮೆ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ.
ಉದ್ಯಮದ ಉಳಿವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಕು. ಶಾಶ್ವತ ಪರಿಹಾರವೊಂದನ್ನು ಕಂಡುಹಿಡಿಯಬೇಕು. ಸುಮ್ಮನೇ ಬೆಂಬಲ ಬೆಲೆ ನಿಗದಿ ಅಥವಾ ಆಮದು ಸುಂಕ ರದ್ದು ಎಂಬ ತಾತ್ಕಾಲಿಕ ಕ್ರಮಗಳಿಂದ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲು ಸಾಧ್ಯವಿಲ್ಲ.
ಇಲಾಖೆಗಳ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸಮಗ್ರ ಬದಲಾವಣೆಗೆ ಗಮನ ಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ರೇಷ್ಮೆ ಉದ್ದಿಮೆಗೆ ಭವಿಷ್ಯವಿಲ್ಲ. ಈ ಉದ್ಯಮವನ್ನೇ ನಂಬಿಕೊಂಡಿರುವ ಜನರಿಗೂ ಉಳಿಗಾಲವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಮದು ಯಂತ್ರ
ಚೀನಾದಿಂದ ಆಮದು ಮಾಡಿಕೊಂಡಿರುವ ಸ್ವಯಂಚಾಲಿತ ನೂಲು ತೆಗೆವ ಯಂತ್ರದ (ಆಟೊಮ್ಯಾಟಿಕ್ ರೀಲಿಂಗ್ ಮೆಷಿನ್; ಎಆರ್‌ಎಂ) ಬೆಲೆ ₨2.30 ಕೋಟಿ. ಈ ಯಂತ್ರದಲ್ಲಿ ರೇಷ್ಮೆಗೂಡಿನಿಂದ ಪ್ರತ್ಯೇಕ ಎಳೆಯಾಗಿ ನೂಲು ತೆಗೆಯಲು 40 ಬೇಸಿನ್‌ಗಳು ಇರುತ್ತವೆ. ಪ್ರತಿ ಬೇಸಿನಲ್ಲಿ ಪ್ರತ್ಯೇಕವಾಗಿ ನೂಲು ತೆಗೆದು ರೀಲಿಗೆ ಸುತ್ತುವಂತಹ ಒಟ್ಟು 400 ಸಣ್ಣ ರಾಟೆಗಳು (ಇಂಟ್ಸ್) ಇರುತ್ತವೆ.
ನೂಲು ತೆಗೆವ ಸಾಮಾನ್ಯ ಯಂತ್ರದಲ್ಲಾದರೆ 400 ರಾಟೆಗಳನ್ನು ನಿಯಂತ್ರಿಸಲು, 400 ಜನ ಕಾರ್ಮಿಕರೇ ಬೇಕಾಗುತ್ತದೆ. ಆದರೆ ಚೀನಾದಿಂದ ಆಮದು ಮಾಡಿಕೊಳ್ಳಲಾಗಿರುವ ಸ್ವಯಂಚಾಲಿತ ನೂಲು ತೆಗೆವ ಯಂತ್ರದಲ್ಲಿ 400 ರಾಟೆಗಳಿಗೆ 25 ರಿಂದ 30 ಕಾರ್ಮಿಕರಷ್ಟೇ ಸಾಕು.
ಅಲ್ಲದೇ, ಈ ಅತ್ಯಾಧುನಿಕ ಯಂತ್ರದಿಂದ ತೆಗೆವ ರೇಷ್ಮೆಗೆ ಕೆ.ಜಿಗೆ ಅಂದಾಜು ₨200ರಿಂದ ₨300ರಷ್ಟು ಲಾಭ ದೊರೆಯುತ್ತದೆ. ಪ್ರತ್ಯೇಕ ಎಳೆಎಳೆಯಾಗಿರುವ ರೇಷ್ಮೆ ದಾರವನ್ನು ಟ್ವಿಸ್ಟಿಂಗ್ (ಎರಡು ಮೂರ ಎಳೆ ಜೋಡಿಸಿ ತಿರುವುತ್ತಾ ಒಂದೇ ದಾರ ) ಮಾಡಿದರೆ ಸುಮಾರು ₨500ರವರೆಗೂ ಲಾಭ ಬರುವ ಸಾಧ್ಯತೆ ಇರುತ್ತದೆ.
ಈ ಸ್ವಯಂಚಾಲಿತ ನೂಲು ತೆಗೆವ ಯಂತ್ರದಲ್ಲಿ ‘ಡೀನಿಯಲ್ ಇಂಡಿಕೇಟರ್’ ಎಂಬ ನೂಲಿನ ಸಾಮರ್ಥ್ಯ ಮತ್ತು ಗುಣಮಟ್ಟ ಗುರುತಿಸುವ ಅತ್ಯಾಧುನಿಕ ವ್ಯವಸ್ಥೆಯೇ ಇದೆ. ಇದರಿಂದ ರೇಷ್ಮೆ ದಾರದ ಗುಣಮಟ್ಟವನ್ನು ನಿಖರವಾಗಿ ತಿಳಿಯಬಹುದಾಗಿದೆ. ಎಳೆಎಳೆಯಾಗಿ ಹರಿದುಬರುತ್ತಾ ಇರುವ ರೇಷ್ಮೆ ನೂಲಿನ ಗುಣಮಟ್ಟದಲ್ಲಿ ಸ್ವಲ್ಪ ಮಾತ್ರದ ವ್ಯತ್ಯಾಸವಾದರೂ ಈ ‘ಡೀನಿಯಲ್ ಇಂಡಿಕೇಟರ್’ ತಕ್ಷಣ ನೂಲಿನ ಲೋಪವನ್ನು ತೋರಿಸುತ್ತದೆ.
ಈ ನಿಖರ ಮಾನದಂಡದ ವ್ಯವಸ್ಥೆ ಇರುವುದರಿಂದ ಈ ‘ಎಆರ್ಎಂ’ ಯಂತ್ರದಿಂದ ಹೊರತೆಗೆದ ರೇಷ್ಮೆ ದಾರ ಒಂದೇ ಸಾಮರ್ಥ್ಯ ಮತ್ತು ಗುಣಮಟ್ಟದ್ದಾಗಿರುತ್ತದೆ. ರೇಷ್ಮೆಗೂಡನ್ನು ಬಿಸಿನೀರು ಮತ್ತು ರಾಸಾಯನಿಕದಲ್ಲಿ ಅದ್ದಿ ಬೇಯಿಸಿದ ನಂತರ ನೂಲು ತೆಗೆವ ಯಂತ್ರದ ಬೇಸಿನ್‌ಗೆ ವರ್ಗಾಯಿಸಲಾಗುತ್ತದೆ. ನಂತರ ಈ ಯಂತ್ರ ಬೇಸಿನ್‌ನಲ್ಲಿರುವ ರೇಷ್ಮೆ ಗೂಡುಗಳಿಂದ ದಾರದ ಎಳೆಯನ್ನು ತೆಗೆದುಕೊಂಡು ಪ್ರತ್ಯೇಕವಾಗಿ ರಾಟೆಗೆ ಜೋಡಿಸಿ ಸುತ್ತುತ್ತಾ ಹೋಗುತ್ತದೆ.
ಸಾಮಾನ್ಯ ರೀಲಿಂಗ್ ಯಂತ್ರಕ್ಕೂ ಇದಕ್ಕೂ ಇರುವ ವ್ಯತ್ಯಾಸವೆಂದರೆ ಈ ಆಮದು ಯಂತ್ರದಲ್ಲಿ ಕೆಲಸ ನಿರ್ವಹಿಸಲು ಬಹಳ ಕಡಿಮೆ ಸಂಖ್ಯೆಯ ಕಾರ್ಮಿಕರು ಸಾಕು, ರೇಷ್ಮೆ ನೂಲಿನಲ್ಲಿ ಒಂದೇ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಈ ಆಮದು ಯಂತ್ರದಲ್ಲಿ ನೂಲು ತೆಗೆಯಲು ‘ಸಿಎಸ್‌ಆರ್’ ಬಿಳಿಗೂಡು ಬೇಕಾಗುತ್ತದೆ.
ಆದರೆ, ಈ ಸಿಎಸ್‌ಆರ್ ರೇಷ್ಮೆ ಗೂಡನ್ನು ಆಂದ್ರಪ್ರದೇಶ, ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹಾಗಾಗಿ, ಈ ಯಂತ್ರದಿಂದ ನೂಲು ತೆಗೆಸಲು ಹೊರ ರಾಜ್ಯಗಳಿಂದಲೇ ಹೆಚ್ಚಿನ ರೇಷ್ಮೆ ಗೂಡು ಖರೀದಿಸಬೇಕಾಗುತ್ತದೆ.
ಈ ಯಂತ್ರದ ಒಂದು ಘಟಕದಲ್ಲಿ ನಿತ್ಯ ನೂಲು ತೆಗೆಸಲು ಏನಿಲ್ಲವೆಂದರೂ ೭೫೦ ಕೆ.ಜಿಗಳಷ್ಟು ರೇಷ್ಮೆಗೂಡು ಬೇಕಾಗುತ್ತದೆ. ಪ್ರತಿನಿತ್ಯ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಿದರೆ ೮೦ರಿಂದ ೮೫ ಕೆ.ಜಿಯಷ್ಟು ಉತ್ತಮ ಗುಣಮಟ್ಟದ ರೇಷ್ಮೆ ನೂಲನ್ನು ತೆಗೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.