ADVERTISEMENT

‘ರೈತರಿಗೆ ₹ 1635.38 ಕೋಟಿ ಇನ್‌ಪುಟ್‌ ಸಬ್ಸಿಡಿ ವಿತರಣೆ’

ಸಂಪುಟ ಉಪ ಸಮಿತಿ ಸಭೆಯಲ್ಲಿ ಮಳೆ ಪರಿಸ್ಥಿತಿ ಅವಲೋಕನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರೈತರಿಗೆ 2016–17ನೇ ಸಾಲಿನ ಬೆಳೆ ನಷ್ಟ ಪರಿಹಾರವಾಗಿ (ಇನ್‌ಪುಟ್‌ ಸಬ್ಸಿಡಿ) ₹ 1,635.38 ಕೋಟಿ ವಿತರಿಸಲಾಗಿದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

‘ಸುಮಾರು 23,31,565 ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಸಮರ್ಪಕ ದಾಖಲೆಗಳಿಲ್ಲದ ಕಾರಣಕ್ಕೆ ಇನ್ನೂ ₹ 50 ಕೋಟಿ ಹಂಚಲು ಸಾಧ್ಯವಾಗಿಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಮೊದಲು ರಾಜ್ಯ ಸರ್ಕಾರ ನೀಡಿದ್ದ ಪರಿಹಾರ ಹಣ ₹ 300 ಕೋಟಿಯನ್ನು ಬಳಿಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಹಿಂಗಾರು ಬೆಳೆ ನಷ್ಟಕ್ಕೆ ₹ 700 ಕೋಟಿ ಇನ್‌ಪುಟ್‌ ಸಬ್ಸಿಡಿ ಬಿಡುಗಡೆಯಾಗಿದ್ದು, 8,95,820 ರೈತರಿಗೆ ₹ 630 ಕೋಟಿ ಹಂಚಿಕೆ ಮಾಡಲಾಗಿದೆ’ ಎಂದರು.

ADVERTISEMENT

‘ಸೆ. 30ರವರೆಗೆ ರಾಜ್ಯದಲ್ಲಿ ಒಟ್ಟಾರೆ ಶೇ 8ರಷ್ಟು ಮಳೆ ಕೊರತೆ ಆಗಿದೆ. ಪ್ರವಾಹ ಮತ್ತು ಭಾರಿ ಮಳೆಗೆ 96ಮಂದಿ ಜೀವ ಕಳೆದುಕೊಂಡಿದ್ದಾರೆ. 751 ಜಾನುವಾರುಗಳು ಸಾವಿಗೀಡಾಗಿದ್ದು, 2,993 ಮನೆಗಳಿಗೆ ಹಾನಿ ಆಗಿದೆ. 18 ಜಿಲ್ಲೆಗಳ 659 ಗ್ರಾಮಗಳಿಗೆ 808 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಅವರು ಅಂಕಿಅಂಶ ನೀಡಿದರು.

‘ಮುಂದಿನ ವಾರ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದ ಮಳೆ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಲಾಗುವುದು. ಕೆಲವೆಡೆ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಎಲ್ಲೂ ತೀವ್ರ ಬರ ಇಲ್ಲ. ಆದರೆ, ಅಂತರ್ಜಲ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಆಗಿಲ್ಲ. ಆದರೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಳೆ ಗುರುತಿಸುವ ಕೆಲಸ ಆರಂಭವಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಜಂಟಿಯಾಗಿ ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ’ ಎಂದೂ ಅವರು ವಿವರಿಸಿದರು.

**

ಜಾರಿ ಕಷ್ಟ: ‘ಮೌಢ್ಯ ನಿಷೇಧ ಮಸೂದೆ ಕರಡನ್ನು ಸಂಪುಟ ಉಪ ಸಮಿತಿ ಸಭೆಯಲ್ಲಿ ಅಂತಿಮ ರೂಪ ನೀಡಲಾಗಿದ್ದು, ಸಂಪುಟ ಸಭೆ ಅದಕ್ಕೆ ಅನುಮೋದನೆ ನೀಡಿದೆ. ಆದರೆ, ಈ ಮಸೂದೆ ಬಗ್ಗೆ ನನಗೆ ಸಮಾಧಾನ ಇಲ್ಲ. ಅದನ್ನು ಜಾರಿ ಮಾಡುವುದೂ ಕಷ್ಟ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.