ADVERTISEMENT

ವರ್ಷಾಂತ್ಯಕ್ಕೆ ಹೊಸ ಮಾರುತಿ 800

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST
ವರ್ಷಾಂತ್ಯಕ್ಕೆ ಹೊಸ ಮಾರುತಿ 800
ವರ್ಷಾಂತ್ಯಕ್ಕೆ ಹೊಸ ಮಾರುತಿ 800   

ನವದೆಹಲಿ (ಪಿಟಿಐ): ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ವರ್ಷಾಂತ್ಯಕ್ಕೆ ಹೊಸ `ಮಾರುತಿ 800~ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಗರಿಷ್ಠ ಇಂಧನ ಕ್ಷಮತೆ ಹೊಂದಿರುವ ಈ ಕಾರು ಈಗಿನ ಜನಪ್ರಿಯ `ಆಲ್ಟೊ~ ಮಾದರಿಗಿಂತಲೂ ದುಬಾರಿ ಆಗಿರಲಿದೆ. ಅಧಿಕೃತ ಮೂಲಗಳ ಪ್ರಕಾರ, ಕಂಪೆನಿಯ ಗುಡಗಾಂವ್‌ನಲ್ಲಿರುವ ತಯಾರಿಕಾ ಘಟಕದಲ್ಲಿ ಹೊಸ 800 ಸಿ.ಸಿ ಕಾರಿನ ತಯಾರಿಕೆ ಜುಲೈ-ಆಗಸ್ಟ್‌ನಿಂದ ಪ್ರಾರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ದೀಪಾವಳಿಯ ಹೊತ್ತಿಗೆ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಕಂಪೆನಿಯದ್ದು. ಆದರೆ, ಕಂಪೆನಿಯ ವಕ್ತಾರ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

`ಇದು 800 ಸಿ.ಸಿ ಸಾಮರ್ಥ್ಯದ ಹೊಸ ಕಾರು. ತಾಂತ್ರಿಕವಾಗಿ ಹಿಂದಿನ ಮಾರುತಿ 800ಗಿಂತಲೂ ಸುಧಾರಿತ ತಂತ್ರಜ್ಞಾನ ಮತ್ತು ಪರಿಷ್ಕೃತ ಎಂಜಿನ್ ಹೊಂದಿದೆ. ಆದರೆ, ಬೆಲೆ ಮಾತ್ರ `ಆಲ್ಟೋ~ಗಿಂತಲೂ ದುಬಾರಿ ಆಗಬಹುದು. ಈಗಾಗಲೆ ವಿವಿಧ ಹಂತಗಳ ಪರೀಕ್ಷಾರ್ಥ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ~  ಎಂದು ಮೂಲಗಳು ಹೇಳಿವೆ.

ADVERTISEMENT

ಕಂಪೆನಿಯ ವೆಬ್‌ಸೈಟ್‌ನಲ್ಲಿರುವ ಅಧಿಕೃತ ಮಾಹಿತಿಯ ಪ್ರಕಾರ ಸದ್ಯ ಮಾರುತಿ 800ನ ಮಾದರಿಗಳಿಗೆ  (ದೆಹಲಿ ಎಕ್ಸ್‌ಷೋರೂಂ) ರೂ. 2.05 ಲಕ್ಷದಿಂದ ರೂ. 2.30 ಲಕ್ಷದವರೆಗೆ ಬೆಲೆ ಇದೆ. `ಆಲ್ಟೊ~ ಮಾದರಿಗೆ ರೂ. 2.40 ಲಕ್ಷದಿಂದ ರೂ. 3.43 ಲಕ್ಷದವರೆಗೆ ದರ ಇದೆ. 1000 ಸಿ.ಸಿ ಸಾಮರ್ಥ್ಯದ `ಆಲ್ಟೊ~ ಮಾದರಿ ಬೆಲೆ ರೂ. 3.14 ಲಕ್ಷದಿಂದ ರೂ. 3.31ಲಕ್ಷದವರೆಗೆ ಇದೆ. 1983ರಲ್ಲಿ ಮಾರುತಿ 800ನ ಮೊದಲ ಮಾದರಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು, ಇಲ್ಲಿಯವರೆಗೆ ಸುಮಾರು 2.5 ದಶಲಕ್ಷ `ಎಂ-800~ ಕಾರುಗಳು ಮಾರಾಟವಾಗಿವೆ.

ಇತ್ತೀಚೆಗೆ ಆಯ್ದ ಕೆಲವು ನಗರಗಳಲ್ಲಿ  ಕಂಪೆನಿ `ಮಾರುತಿ 800~ ತಯಾರಿಕೆ ಸ್ಥಗಿತಗೊಳಿಸಿದೆ.  ಈ ಕಾರಿನ ಇಂಗಾಲ ಹೊರಸೂಸುವಿಕೆ ಪ್ರಮಾಣವು `ಭಾರತ್ ಸ್ಟೇಜ್ 4~ ಮಾನದಂಡಕ್ಕಿಂತ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣ. ಕೆಲವೆಡೆ ಮಾರುತಿ 800ನ ಮೊದಲ ಮಾದರಿ ಇನ್ನೂ ಮಾರಾಟವಾಗುತ್ತಿದೆ.

ಮಾರುತಿ ಸುಜುಕಿಯ ಅತ್ಯಂತ ಬೇಡಿಕೆ ಇರುವ ಕಾರು `ಆಲ್ಟೊ~. ಆದರೆ, ಇತ್ತೀಚಿನ ದಿನಗಳಲ್ಲಿ ಗರಿಷ್ಠ ಬಡ್ಡಿ ದರ, ಹಣದುಬ್ಬರ ಏರಿಕೆ, ಪೆಟ್ರೋಲ್ ಬೆಲೆ ಹೆಚ್ಚಳದಿಂದ ಕಂಪೆನಿಯ ಒಟ್ಟು ಕಾರು ಮಾರಾಟ ಗಣನೀಯವಾಗಿ ಕುಸಿದಿದೆ.  ಕಳೆದ ತಿಂಗಳಿಂದ ಕಂಪೆನಿ ಆಲ್ಟೊ, ಎಂ-800, ಎ-ಸ್ಟಾರ್ ಎಸ್ಟಿಲೊ, ಓಮ್ನಿ ಕಾರುಗಳ ಪೆಟ್ರೋಲ್ ಮಾದರಿ ತಯಾರಿಕೆ ಸ್ಥಗಿತಗೊಳಿಸಿದೆ.

ಭಾರತೀಯ ವಾಹನ ತಯಾರಿಕಾ ಸಂಸ್ಥೆಗಳ ಒಕ್ಕೂಟದ (ಎಸ್‌ಎಐಎಂ) ಅಂಕಿ ಅಂಶಗಳ ಪ್ರಕಾರ ಮಾರುತಿ ಸುಜುಕಿ ಕಾರು ಮಾರಾಟ ಮೇ ತಿಂಗಳಲ್ಲಿ ಶೇ 8.42ರಷ್ಟು ಕುಸಿತ ಕಂಡಿದ್ದು, 87,220ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.