ADVERTISEMENT

ವಿಯೆಟ್ನಾಂ ಕಾಳುಮೆಣಸು ಕಲಬೆರಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ವಿಯೆಟ್ನಾಂ ಕಾಳುಮೆಣಸು ಕಲಬೆರಕೆ ಮಾರಾಟ
ವಿಯೆಟ್ನಾಂ ಕಾಳುಮೆಣಸು ಕಲಬೆರಕೆ ಮಾರಾಟ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಸ್ಥಳೀಯ ಮಾರುಕಟ್ಟೆಗಳಿಗೆ ಕೆಲವು ತಿಂಗಳಿಂದ ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸು ಪೂರೈಕೆಯಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಭಾರತಕ್ಕೆ ನೂರಾರು ಟನ್‌ ಕಾಳುಮೆಣಸು ಆಮದಾಗಿದ್ದು, ಇದರಿಂದ ಸ್ಥಳೀಯ ಕಾಳುಮೆಣಸಿಗೆ ಬೇಡಿಕೆ ಕುಸಿದಿದೆ. ಜತೆಗೆ, ಬೆಲೆಯೂ ಇಳಿಮುಖವಾಗುತ್ತಲೇ ಸಾಗುತ್ತಿದೆ. ಚಳಿಗಾಲದ ವೇಳೆಗೆ ಪ್ರತಿ ಕೆ.ಜಿ ಕಾಳುಮೆಣಸಿನ ಬೆಲೆ ₹ 800ಕ್ಕೆ ತಲುಪಬಹುದೆಂಬ ಎಂಬ ಸುದ್ದಿ ಹರಿದಾಡುತ್ತಿದ್ದು, ದಾಸ್ತಾನ ಮಾಡಿದ್ದ ಬೆಳೆಗಾರರು ಆತಂಕಗೊಂಡಿದ್ದಾರೆ.

ಕಳೆದ ಫೆಬ್ರುವರಿ– ಮಾರ್ಚ್‌ನಲ್ಲಿ ಪ್ರತಿ ಕೆ.ಜಿ ಕಾಳುಮೆಣಸಿಗೆ ₹ 600 ಇತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಈಗ ₹ 300ಕ್ಕೆ ಕುಸಿದಿದೆ. ವಿಯೆಟ್ನಾಂನಿಂದ ಕಳ್ಳಮಾರ್ಗದಲ್ಲಿ ಕಾಳುಮೆಣಸು ಆಮದು ಮಾಡಿಕೊಂಡಿರುವುದೇ ಬೆಲೆ ಕುಸಿಯಲು ಕಾರಣ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.

ADVERTISEMENT

ಬೆಳಕಿಗೆ ಬಂದಿದ್ದು ಹೇಗೆ?: ಮಾರುಕಟ್ಟೆಯಲ್ಲಿ ಕಾಳುಮೆಣಸಿನ ದರ ಕುಸಿದ ಪರಿಣಾಮ ರೈತರು ಪ್ರತಿಭಟನೆಗೆ ಇಳಿದರು. ಅದೇ ವೇಳೆಗೆ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯ ಇಬ್ಬರು ನಾಮನಿರ್ದೇಶಿತ ಸದಸ್ಯರು, ವಿಯೆಟ್ನಾಂ ಕಾಳುಮೆಣಸು ರೋಸ್‌ಮೇರಿ ಇಂಟರ್‌
ನ್ಯಾಷನಲ್‌ಗೆ ಸೇರಿದ ಗೋದಾಮು ಸೇರುತ್ತಿರುವ ಪ್ರಕರಣವನ್ನು ಬೆಳಕಿಗೆ ತಂದರು. ಬಳಿಕ ಎಚ್ಚೆತ್ತುಕೊಂಡು ಕಾಫಿ ಬೆಳೆಗಾರರ ಒಕ್ಕೂಟವು ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹಾಗೂ ಮೂವರು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

ಸೌರವ್‌ ಬಂಕ ಹಾಗೂ ಜತೀನ್‌ ಷಾ ಅವರಿಗೆ ಸೇರಿದ ಮಳಿಗೆಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು 1,045 ಚೀಲಗಳಷ್ಟು ಕಾಳುಮೆಣಸಿನ ಪುಡಿ ಹಾಗೂ ಹತ್ತಿಬೀಜ ತುಂಬಿರುವ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಗೋಣಿಕೊಪ್ಪಲು ಸೇರಿದಂತೆ ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ವಿಯೆಟ್ನಾಂ ಕಾಳುಮೆಣಸಿನ ಪುಡಿಯನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಬಲವಾಗಿದೆ. ಪುಡಿಯ ಮಾದರಿಯನ್ನು ಮೈಸೂರಿನ ಸಿಎಫ್‌ಟಿಆರ್‌ಐಗೆ ಕಳುಹಿಸಲಾಗಿದ್ದು ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ತನಿಖೆಗೆ ಆಗ್ರಹಿಸಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಎಸಿಬಿಗೂ ದೂರು ಸಲ್ಲಿಸಲಾಗಿದೆ. ಜತೆಗೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

‘ಇದೇ ವರ್ಷದ ಜುಲೈನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರವೇ ಆಮದು ಮಾಡಿಕೊಂಡ ಕಾಳುಮೆಣಸಿಗೆ ವ್ಯಾಪಾರಿ ಸೌರವ್ ಬಂಕ ಸೆಸ್ ಪಾವತಿಸಿದ್ದಾರೆ. ಸಂಬಂಧಪಟ್ಟ ದಾಖಲೆಗಳಿವೆ. ವಿಯೆಟ್ನಾಂನಿಂದ ಪ್ರತಿ ಕೆ.ಜಿಗೆ ₹200 ನೀಡಿ 385 ಟನ್‌ನಷ್ಟು ಆಮದು ಮಾಡಿಕೊಂಡು ಕೊಡಗಿನ ಕಾಳುಮೆಣಸು ಎಂದು ಸುಳ್ಳುಹೇಳಿ ಸುಂಟಿಕೊಪ್ಪ, ಕೇರಳದಲ್ಲಿ ₹475ಕ್ಕೆ ಮಾರಾಟ ಮಾಡಲಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಶಂಕೆಯಿದೆ. ಇದರಿಂದ ಸ್ಥಳೀಯ ಬೆಳೆಗಾರರಿಗೆ ಪೆಟ್ಟುಬಿದ್ದಿದೆ’ ಎಂದು ನಾಮ ನಿರ್ದೇಶಿತ ಸದಸ್ಯ ಎ.ಎಸ್.ನರೇನ್ ಕಾರ್ಯಪ್ಪ ತಿಳಿಸಿದ್ದಾರೆ.

‘ನಮ್ಮ ಆಡಳಿತಾವಧಿಯಲ್ಲಿ ಆಮದು ವ್ಯವಹಾರವೇ ನಡೆದಿಲ್ಲ. ಹಿಂದೆ ನಡೆದಿದ್ದ ಪ್ರಕರಣವನ್ನು ನಾವೇ ಪತ್ತೆಹಚ್ಚಿ ಆಮದು ಮಾಡಿಕೊಂಡಿರುವ ಕಾಳುಮೆಣಸು ವ್ಯಾಪಾರಕ್ಕೆ ತಡೆ ನೀಡಿದ್ದೇವೆ’ ಎಂದು ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುವಿನ್ ಗಣಪತಿ ಸ್ಪಷ್ಟನೆ ನೀಡಿದ್ದಾರೆ.

* ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ತನಕ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ

- ಸುವಿನ್ ಗಣಪತಿ, ಅಧ್ಯಕ್ಷ, ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.