ADVERTISEMENT

ಸಣ್ಣ ಉಳಿತಾಯ: ಶೀಘ್ರದಲ್ಲೇ ವರದಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ಶ್ಯಾಮಲಾ ಗೋಪಿನಾಥ್ ಸಮಿತಿ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದು, ಈ ವರದಿ ಆಧರಿಸಿ, ವರ್ಷಾಂತ್ಯದೊಳಗೆ ಸೂಕ್ತ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸಣ್ಣ ಉಳಿತಾಯ ಯೋಜನೆಗಳು ಗಣನೀಯವಾಗಿ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಈ ಸಮಿತಿ ರಚಿಸಿತ್ತು. ಬ್ಯಾಂಕ್ ಬಡ್ಡಿ ದರದಷ್ಟೇ ಸಮ  ಪ್ರಮಾಣದ ಬಡ್ಡಿ ದರವನ್ನು  ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳಿಗೂ ನೀಡಬೇಕು ಎಂದು ಈ ಸಮಿತಿ ಶಿಫಾರಸು ಮಾಡುವ ಸಾಧ್ಯತೆಗಳಿವೆ.

`ಗೋಪಿನಾಥ್ ಸಮಿತಿ ಶಿಫಾರಸು ಆಧರಿಸಿ, ಮಾರ್ಚ್ ಅಂತ್ಯದೊಳಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ~ ಎಂದು  ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಮುಖವಾಗಿ ಅಂಚೆ ಕಚೇರಿಗಳು ನಿರ್ವಹಿಸುತ್ತಿರುವ ಸಣ್ಣ ಉಳಿತಾಯ ಯೋಜನೆಗಳು ಸರ್ಕಾರದ ಪ್ರಮುಖ ಸಾಲದ ಮೂಲಗಳಾಗಿವೆ. ಸದ್ಯ ಅಂಚೆ ಕಚೇರಿಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ಬ್ಯಾಂಕ್‌ಗಳು ನೀಡುತ್ತಿರುವುದರಿಂದ ಅಂಚೆ ಉಳಿತಾಯ ಯೋಜನೆ ಆಕರ್ಷಣೆ ಕಳೆದುಕೊಂಡಿದೆ. `ಆರ್‌ಬಿಐ~ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಠೇವಣಿ ಬಡ್ಡಿ ದರವೂ ಗಣನೀಯವಾಗಿ ಹೆಚ್ಚಿದೆ.
 
`ಬ್ಯಾಂಕ್ ಠೇವಣಿಗೆ ನೀಡುವ ಬಡ್ಡಿ ದರವನ್ನೇ ಅಂಚೆ ಉಳಿತಾಯ ಯೋಜನೆಗಳಿಗೂ ನೀಡುವುದು. ಒಂದು ವರ್ಷದ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿ ದರವನ್ನು ಈಗಿನ ಶೇ 6.8 ರಿಂದ ಶೇ 6.25ಕ್ಕೆ ಹೆಚ್ಚಿಸುವುದು, `10 ವರ್ಷದ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ ಯೋಜನೆ ಜಾರಿಗೊಳಿಸುವುದು  ಸೇರಿದಂತೆ ಹಲವು ಸಲಹೆಗಳನ್ನು ಗೋಪಿನಾಥ್ ಸಮಿತಿ ಪಟ್ಟಿ ಮಾಡಿದೆ.

ಸದ್ಯ ಅಂಚೆ ಕಿರು ಉಳಿತಾಯ, ನಿಗದಿತ ಉಳಿತಾಯ ಮತ್ತು ಮಾಸಿಕ ಉಳಿತಾಯ ಯೋಜನೆಗಳಿಗೆ ಶೇ 6.25 ರಿಂದ ಶೇ 8ರ ಒಳಗಿನ ಬಡ್ಡಿ ದರ ನೀಡಲಾಗುತ್ತಿದೆ.  ಅಂಚೆ ಉಳಿತಾಯ ಖಾತೆ ಠೇವಣಿಗೆ ವಾರ್ಷಿಕ ಶೇ 3.5ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಬ್ಯಾಂಕುಗಳ ಬಡ್ಡಿ ದರ ಇದಕ್ಕಿಂತಲೂ ಶೇ 4-5ರಷ್ಟು ಹೆಚ್ಚಿಗೆ ಇದೆ. ಸರ್ಕಾರಿ ಸಾಲಪತ್ರಗಳಿಗೆ ಶೇ 8ರಷ್ಟು ಬಡ್ಡಿ ದರ ಇದೆ.

ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ   (ಎನ್‌ಎಸ್‌ಎಸ್‌ಎಫ್) ್ಙ24 ಸಾವಿರ ಕೋಟಿ  ಹಣ ಹೊರಹೋಗಬಹುದು ಎಂದು ಸರ್ಕಾರ ಅಂದಾಜಿಸಿತ್ತು. ಆದರೆ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ್ಙ35 ಸಾವಿರ ಕೋಟಿ ಹೊರಹೋಗಿದೆ. `ಎನ್‌ಎಸ್‌ಎಸ್‌ಎಫ್~ ಕಡಿಮೆಯಾದ ಹಿನ್ನೆಲೆಯಲ್ಲಿ, ಸರ್ಕಾರ ಮಾರುಕಟ್ಟೆಯಿಂದ ಪಡೆಯುವ ಸಾಲದ ಪ್ರಮಾಣವೂ ಹೆಚ್ಚಿದೆ.ಸಣ್ಣ ಉಳಿತಾಯ ಯೋಜನಗಳ ಸುಧಾರಣೆಗಾಗಿ ವೈ.ವಿ ರೆಡ್ಡಿ ಸಮಿತಿ 2001ರಲ್ಲಿ ವರದಿ ನೀಡಿತ್ತು. ಇದಾದ ನಂತರ ಯಾವುದೇ ಸುಧಾರಣೆಗಳನ್ನು ಸರ್ಕಾರ ಜಾರಿಗೊಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.