ADVERTISEMENT

ಸಮಗ್ರ ಹಣದುಬ್ಬರ ಅಲ್ಪ ಇಳಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST
ಸಮಗ್ರ ಹಣದುಬ್ಬರ ಅಲ್ಪ ಇಳಿಕೆ
ಸಮಗ್ರ ಹಣದುಬ್ಬರ ಅಲ್ಪ ಇಳಿಕೆ   

ನವದೆಹಲಿ (ಪಿಟಿಐ): ಈರುಳ್ಳಿ, ಹಣ್ಣುಗಳು ಮತ್ತು ಪ್ರೊಟಿನ್ ಆಧಾರಿತ  ಆಹಾರ ಪಧಾರ್ಥಗಳ ಬೆಲೆಗಳು ಇಳಿಕೆ ಕಂಡ ಹಿನ್ನೆಲೆಯಲ್ಲಿ ಸಗಟು ಸೂಚ್ಯಂಕ ಆಧರಿಸಿದ ಸಮಗ್ರ ಹಣದುಬ್ಬರ ದರ (ಡಬ್ಲ್ಯುಪಿಐ) ಮಾರ್ಚ್ ತಿಂಗಳಲ್ಲಿ ಶೇ. 6.89ಕ್ಕೆ ಕುಸಿತ ಕಂಡಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಸಮಗ್ರ ಹಣದುಬ್ಬರ ಶೇ. 6.95ರಷ್ಟಿತ್ತು.

ಕೇಂದ್ರ ಹಣಕಾಸು ಸಚಿವಾಲಯ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ದರ ಶೇ.6.5ಕ್ಕೆ ಕುಸಿಯಲಿದೆ ಎಂದು ಅಂದಾಜಿಸಿತ್ತು. ಆದರೆ, ಸೋಮವಾರ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ, `ಡಬ್ಲ್ಯುಪಿಐ~ ಸರ್ಕಾರಿ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿದೆ.

ಮಾರ್ಚ್ ತಿಂಗಳಲ್ಲಿ ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಏರಿಕೆ ಕಂಡಿವೆ. ಆಹಾರ ಪಧಾರ್ಥಗಳು ಶೇ.9.94ರಷ್ಟು ತುಟ್ಟಿಯಾಗಿವೆ. ಈರುಳ್ಳಿ ಬೆಲೆ ಮಾತ್ರ ಶೇ. (-)24ರಷ್ಟು ಕುಸಿತ ಕಂಡಿದೆ. ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆ ಶೇ. 17ರಷ್ಟು ಹೆಚ್ಚಿವೆ. ಹಾಲಿನ ದರ  ಶೇ. 15ರಷ್ಟು ಹೆಚ್ಚಳವಾದರೆ, ಅಕ್ಕಿ ಮತ್ತು ದ್ವಿದಳ ಧಾನ್ಯಗಳು ಕ್ರಮವಾಗಿ ಶೇ. 4.73 ಮತ್ತು ಶೇ.4.41ರಷ್ಟು ಏರಿಕೆ ಕಂಡಿವೆ. ಆಲೂಗಡ್ಡೆ ಧಾರಣೆಯೂ ಶೇ. 11.60ರಷ್ಟು ಹೆಚ್ಚಿದೆ. 

ಒಟ್ಟಾರೆ ಸಮಗ್ರ ಹಣದುಬ್ಬರ ದರಕ್ಕೆ ಈ ಆಹಾರ ಪಧಾರ್ಥಗಳ ವಲಯ ಶೇ.14.3ರಷ್ಟು ಕೊಡುಗೆ ನೀಡುತ್ತವೆ.  ಕಳೆದ ವರ್ಷದ (2011) ಮಾರ್ಚ್ ತಿಂಗಳಲ್ಲಿ `ಡಬ್ಲ್ಯುಪಿಐ~ ಶೇ. 9.94ರಷ್ಟಿತ್ತು. ಪ್ರಸಕ್ತ ಅವಧಿಯಲ್ಲಿ ಒಟ್ಟಾರೆ ಪ್ರಾಥಮಿಕ ಸರಕುಗಳ ಬೆಲೆಗಳು ಶೇ.9.62ರಷ್ಟು ತುಟ್ಟಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬ್ಬಿಣದ ಅದಿರು, ತಯಾರಿಕೆ ಉತ್ಪನ್ನಗಳು ಶೇ. 17ರಷ್ಟು ದುಬಾರಿಯಾಗಿವೆ.
 
ತಂಬಾಕು ಉತ್ಪನ್ನಗಳು ಮತ್ತು ಪ್ರಾಥಮಿಕ ಲೋಹಗಳ ಹಣದುಬ್ಬರ ಶೇ. 8.22 ಮತ್ತು ಶೇ 9.51ರಷ್ಟಾಗಿದೆ. ನಾರು, ಎಣ್ಣೆಕಾಳುಗಳನ್ನು ಒಳಗೊಂಡ ಆಹಾರೇತರ ಪ್ರಾಥಮಿಕ ಸರಕುಗಳ ಬೆಲೆಗಳು ಶೇ. 1.20ರಷ್ಟು ಏರಿಕೆ ಕಂಡಿವೆ. ಇಂಧನ ಮತ್ತು ತೈಲ ಹಣದುಬ್ಬರ ದರ ಮಾರ್ಚ್ ತಿಂಗಳಲ್ಲಿ ಶೇ.10.41ರಷ್ಟು ಹೆಚ್ಚಳವಾಗಿವೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಶೇ. 5.75ರಷ್ಟಿದ್ದ ತಯಾರಿಕೆ ವಲಯದ ಹಣದುಬ್ಬರ ಮಾರ್ಚ್‌ನಲ್ಲಿ ಶೇ. 4.87ಕ್ಕೆ ಕುಸಿತ ಕಂಡಿದೆ.

ಇದರಿಂದ ಭಾರತೀಯ ರಿಸರ್ವ್ ಬ್ಯಾಂಕ್, ವಾರ್ಷಿಕ ಸಾಲ ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಸರ್ಕಾರ ಪೂರೈಕೆ ವ್ಯವಸ್ಥೆಯಲ್ಲಿನ    ಲೋಪಗಳನ್ನು ಬಗೆಹರಿಸದಿದ್ದರೆ ಹಣದುಬ್ಬರ  ಹಿತಕರ ಮಟ್ಟಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.