ಇಳಿಸಬೇಕೆಂದೆನಲು ಆಸೆಗಳನಿಳಿಸಿ ಬಿಡು/
ಉಳಿಸಬೇಕೆಂದೆನಲು ಹಣವನುಳಿಸು//
ಬಳಸು ಸಮಯವ ಮಾತ್ರ ಅದರ ನಿಯಮದ ಮೇರೆ/
ಅಳಿವದಕೆ ಇಲ್ಲವೆಲೊ!! -ನವ್ಯಜೀವಿ//
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ನಾನು `ಸೀಮೆನ್ಸ್' ಕಂಪೆನಿಯಲ್ಲಿ ಕೆಲಸದಲ್ಲಿದ್ದಾಗ ಜರ್ಮನಿಗೆ ಹಲವು ಸಲ ಹೋಗಿ ಬಂದಿದ್ದೆ. ಜರ್ಮನಿಯ ಮಂದಿ ಅಮೆರಿಕದವರಂತೆ ಖುಲ್ಲಂ ಖುಲ್ಲಂ ವ್ಯವಹರಿಸುವುದಿಲ್ಲ. ಅವರದೇನಿದ್ದರೂ ಪೊದೆಗಳ ಮರೆಯ ಕಣ್ಣುಮುಚ್ಚಾಲೆಯಾಟ. ಏನಾದರೂ ಹೇಳುವುದಿದ್ದರೆ ಅದನ್ನು ತೂಕ ಮಾಡಿ ತುಲನೆಗೊಡ್ಡಿ ಕೇಳುತ್ತಿರುವವರು ಇನ್ನೇನು ನಿದ್ರಿಸುವ ಸರಿ ಹೊತ್ತಿನಲ್ಲಿ ಮಾತುಗಳನ್ನು ಹರಿಬಿಡುತ್ತಾರೆ. ಅದರಲ್ಲಿ ಒಂದು ಬಿಗಿ ಇದೆ. ಒಂದು ನಿರ್ದಿಷ್ಟವಾದ ಗುರಿ ಇದೆ. ಈ ಪರಿಯ ಮೀಟಿಂಗುಗಳೆಲ್ಲ ಮುಗಿಯುವ ಹೊತ್ತಿಗೆ ಕುಳಿತ ಮಂದಿ ತಮ್ಮ ಎದೆಯಂತರಾಳದಲ್ಲೇ ಎದ್ದು ನಿಂತು ತಮ್ಮ ಎರಡೂ ಬೂಟು ಕಾಲುಗಳನ್ನು ಸಪ್ಪಳದೊಂದಿಗೆ ಒಂದು ಮಾಡಿ, ಬಲಗೈಯನ್ನು ಮುಂದೆ ತಂದು `ಹೇಲ್ ಹಿಟ್ಲರ್' ಎನ್ನುತ್ತಿದ್ದಾರೇನೋ ಎನ್ನಿಸಿ ಬಿಡುತ್ತದೆ. ಇದಕ್ಕೆ ತದ್ವಿರುದ್ಧವಾದ ಮೀಟಿಂಗುಗಳನ್ನು ಮಾಡುತ್ತಾ ಬಂದಿರುವ ನನ್ನಂತಹ ದೇಶಿಯರಿಗಂತೂ ಕಚೇರಿಗಳಲ್ಲಿ ಈ ಪರಿಯ ಶಿಸ್ತಿನ ಅಗತ್ಯವಿದೆಯೇ ಎಂದೆನ್ನಿಸಿ ಬಿಡುತ್ತದೆ!
ಕಚೇರಿಯಲ್ಲಿನ ಈ ತರಹದ ಶಿಸ್ತಿನ ಸಿಪಾಯಿಯೊಡನೆ ಈಗ ನೀವು ರಾತ್ರಿ ಊಟಕ್ಕೆಂದು ಅಲ್ಲಿನ ಒಂದು ಬಿಯರ್ ಗಾರ್ಡನ್ನಿಗೆ ಬಂದಿದ್ದೀರಿ. ಆತ ತನ್ನ ಟೈ ಕಳಚಿ ಅದನ್ನು ನೀಟಾಗಿ ಮಡಚಿ ಕೋಟಿನ ಜೇಬಿನಲ್ಲಿಟ್ಟಿದ್ದಾನೆ. ನಿಮಗವನು ವರ್ಷದಿಂದ ಗೊತ್ತು. ಹಾಗಾಗಿ ಅಲ್ಲಿ ಸ್ನೇಹ ಬಿಚ್ಚಿಕೊಳ್ಳುತ್ತದೆ. ನೊರೆಯುಕ್ತವಾದ ಜರ್ಮನಿಯ ವಿಶ್ವದ ಅತ್ಯಂತ ರುಚಿಕರವಾದ ಬಿಯರ್ ಗಂಟಲನ್ನು ಒದ್ದೆ ಮಾಡುತ್ತಿದ್ದಂತೆಯೇ ಆತ ಹಗುರವಾಗಿದ್ದಾನೆ. `ಹೇಲ್ ಹಿಟ್ಲರ್' ಈಗ ಮರೆತು ಹೋಗಿದೆ. ಅವನಲ್ಲಿ ಎಲ್ಲೋ ಅಡಗಿ ಕುಳಿತಿದ್ದ ನಮ್ಮ ನರಸಿಂಹರಾಜು, ಬಾಲಣ್ಣ, ದ್ವಾರಕೀಶ್ ಎಲ್ಲರೂ ಈಗ ಒಮ್ಮಗೇ ಹೊರಬರುವ ತರಾತುರಿಯಲ್ಲಿ ಇದ್ದಾರೆ. ಅಲ್ಲಿಂದ ನಡೆಯುವುದೆಲ್ಲ ಬರಿಯ ಮೋಜು ಮಸ್ತಿ.
ಬಿಯರ್ ಗ್ಲಾಸನ್ನು ಹಿಡಿದಿರುವ ಜರ್ಮನಿ ಮಂದಿಯ ಹಾಸ್ಯ ಪ್ರಜ್ಞೆ ನನಗೆ ಬಹಳ ಇಷ್ಟವಾದ ವಿಷಯ. ಏಕೆಂದರೆ ನಮ್ಮಂತೆ ಆ ಜನ ತಮ್ಮ ಜೋಕುಗಳನ್ನೆಲ್ಲ ಸದಾ ಸರದಾರ್ಜಿಯೊಬ್ಬನ ತಲೆಗೆ ಕಟ್ಟಿಯೋ ಅಥವಾ ಮತ್ತಾರನ್ನೋ ಮುಂದಿಟ್ಟುಕೊಂಡು ಮಾಡುವುದಿಲ್ಲ. ಬಹುತೇಕ ವೇಳೆ ಅವರ ಹಾಸ್ಯ ಚಟಾಕಿಗಳೆಲ್ಲ ತಮ್ಮ ಬಗ್ಗೆಯೇ ಆಗಿರುತ್ತವೆ. ತಮ್ಮ ಜೀವನವನ್ನೇ ಕುರಿತದ್ದಾಗಿರುತ್ತವೆ. ತಮ್ಮನ್ನೇ ಅಣಕಿಸಿಕೊಂಡು ನಗುವ ಆ ಮಂದಿ ಆ ಕ್ಷಣದಲ್ಲಿ ನನಗೆ ಪ್ರಿಯವಾಗಿ ಬಿಡುತ್ತಾರೆ!
ಅವರ ಅನೇಕ ಜೋಕುಗಳಲ್ಲಿ ನನಗೀಗ ಒಂದು ನೆನಪಿಗೆ ಬರುತ್ತದೆ. ತಮ್ಮಡನೆ ಹಂಚಿಕೊಂಡು ಅರೆಗಳಿಗೆ ನಗುವ ಮನಸ್ಸಾಗುತ್ತಿದೆ.
ನನ್ನ ಜರ್ಮನಿನ ಸ್ನೇಹಿತ ನನಗೆ ಹೇಳುತ್ತಿದ್ದ - `ಸೀಮೆನ್ಸ್' ಕಂಪೆನಿಯ ಮುಖ್ಯ ಕಚೇರಿಯ ಮುಂದಿನ ಹಾಫ್‌ಮನ್‌ಸ್ಟ್ರಾಸೆ ಎಂಬ ರಸ್ತೆಯಲ್ಲಿ ಒಂದು ಮಧ್ಯಾಹ್ನದ ಊಟದ ವೇಳೆ ಜನವೋ ಜನ. ನಾನೂ ಅಲ್ಲಿಗೆ ಬಂದೆ. ಆಗಿನ್ನೂ ಜನ್ಮ ತಳೆದಿದ್ದ ಮುದ್ದಾದ ಮಗುವೊಂದನ್ನು ಯಾರೋ ರಸ್ತೆಯಲ್ಲಿ ಬಿಟ್ಟು ಹೋಗಿಬಿಟ್ಟಿದ್ದಾರೆ. ನಮ್ಮ ಕಂಪೆನಿಯ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಆ ಮಗುವನ್ನು ಕೈಯಲ್ಲಿ ಎತ್ತಿ ಹಿಡಿದು ಅದು ಯಾವ ಕಂಪೆನಿಗೆ ಸೇರಿದ್ದು ಎಂಬ ತಪಾಸಣೆಯಲ್ಲಿದ್ದಾರೆ.
ಇದು ನಡೆಯುತ್ತಿದ್ದಾಗ ಅಲ್ಲಿಗೊಬ್ಬ ಜ್ಞಾನಿ ಬಂದ. ಮಗುವನ್ನು ಒಮ್ಮೆ ದೃಷ್ಟಿಸಿ `ಇದು ಬೇರೆ ಯಾವುದೋ ಕಂಪೆನಿಯದು. ಸೀಮೆನ್ಸ್ ಕಂಪೆನಿಯದಂತೂ ಆಗಿರುವುದಕ್ಕೆ ಸಾಧ್ಯವೇ ಇಲ್ಲ' ಎಂದು ಖಡಾಖಂಡಿತವಾಗಿ ನುಡಿದುಬಿಟ್ಟ. ನೆರೆದ ನಮಗೆಲ್ಲ ಆಶ್ಚರ್ಯ. ಅದು ಹೇಗೆ ಆತ ಅಷ್ಟು ನಿಖರವಾಗಿ ಮಗು ಸೀಮೆನ್ಸ್ ಕಂಪೆನಿಯದಲ್ಲ ಎಂದು ಹೇಳುತ್ತಿದ್ದಾನೆ ಎಂದು ತಿಳಿದುಕೊಳ್ಳುವ ಕಾತರ. `ದಯವಿಟ್ಟು ವಿಶದವಾಗಿ ತಿಳಿಸಿ' ಎಂದು ಕೇಳಿಕೊಂಡಾಗ ಆ ಜ್ಞಾನಿ ಹೇಳುತ್ತಾನೆ - `ನೋಡಿ, ನಿಮ್ಮ ಸೀಮೆನ್ಸ್ ಕಂಪೆನಿ ಇದುವರೆಗೂ ಯಾವುದೇ ವಸ್ತುವನ್ನು ಸರಿಯಾಗಿ ಒಂಬತ್ತು ತಿಂಗಳಲ್ಲಿ ಸಿದ್ಧಪಡಿಸಿ ಗ್ರಾಹಕರಿಗೆ ಕಳುಹಿಸಿಲ್ಲ. ಹಾಗೂ ಯಾವುದೇ ವಸ್ತುವನ್ನು ತುಂಡು ತುಂಡು ಮಾಡದೆ ಸಮಗ್ರವಾಗಿ ತಯಾರಿಸಿಯೇ ಇಲ್ಲ. ಹಾಗಾಗಿ ಈ ಮಗು ನಿಮ್ಮದಂತೂ ಆಗಿರುವುದಕ್ಕೆ ಸಾಧ್ಯವೇ ಇಲ್ಲ'!
ಗಹಗಹಿಸಿ ನಗುತ್ತಿದ್ದ ಸ್ನೇಹಿತನೊಂದಿಗೆ ನಾನೂ ನಗೆಗೂಡಿಸಿದ್ದೆ. ಆದರೆ ಇಪ್ಪತ್ತೈದು ವರ್ಷಗಳ ನಂತರ ಈ ಜೋಕು ನನ್ನ ಒಂದು ಲೇಖನಕ್ಕೆ ವಸ್ತುವಾಗಬಹುದೆಂದು ಆ ದಿನ ನನಗೆ ಗೊತ್ತಿರಲಿಲ್ಲ ಅಷ್ಟೆ!
ಸೀಮೆನ್ಸ್ ಕಂಪೆನಿಯನ್ನು ಬಹಳ ಹತ್ತಿರದಿಂದ ಕಂಡ ನನಗೆ ಈ ಜೋಕು ಸೀಮೆನ್ಸ್‌ಗಿಂತಲೂ ನಮ್ಮದೇ ಭಾರತೀಯ ಕಂಪೆನಿಗಳಿಗೆ ಹೆಚ್ಚು ಅನ್ವಯ ಎನ್ನಿಸುತ್ತದೆ. ಆದರೆ ನಾವು ಇಂತಹ ವಾಸ್ತವಗಳನ್ನು ಅರಿತುಕೊಳ್ಳದೇ ಮತ್ತೊಬ್ಬರ ಹೆಸರಿಗೆ ಸೇರಿಸಿ ಮೈ ಕುಲಕಿಸಿ ನಕ್ಕು ಬಿಡುತ್ತೇವೆ. ನಮ್ಮೆಲ್ಲ ನ್ಯೂನತೆಗಳನ್ನು ಮರೆತು ಬಿಡುತ್ತೇವೆ.
ಮಗುವೊಂದರ ಜನ್ಮ ನಿಸರ್ಗದ ಅದ್ಭುತಗಳಲ್ಲಿ ಒಂದು. ಸ್ತ್ರೀ ಅಂಡಾಣು ಗರ್ಭಕೋಶಕ್ಕೆ ಬಂದು ಅಲ್ಲಿ ಮೂರ‌್ನಾಲ್ಕು ದಿನಗಳವರೆಗೆ ವೀರ್ಯಾಣುವೊಂದಕ್ಕೆ ಕಾಯುತ್ತದೆ. ಅಷ್ಟರಲ್ಲಿ ವೀರ್ಯಾಣುವೊಂದು ದೊರಕಿ ಅದರೊಡನೆ ಮಿಲನವಾದರೆ ಸರಿ. ಇಲ್ಲವಾದರೆ ಸತ್ತು ಮತ್ತೊಂದು ದಿನ ಹುಟ್ಟಿ ಬರಬೇಕು, ಮತ್ತೊಂದು ಮಿಲನಕ್ಕೆ ಕಾಯಬೇಕು. ವೀರ್ಯಾಣುವಿನ ಕತೆಯೂ ಅಷ್ಟೇ ಸ್ವಾರಸ್ಯ. ಲಕ್ಷಗಟ್ಟಲೆ ವೀರ್ಯಾಣುಗಳು ಹೊರಬಂದರೂ ಪ್ರಸಕ್ತ ವೇಳೆಯಲ್ಲಿ ಒಂದೇ ಒಂದು ವೀರ್ಯಾಣು ಮಾತ್ರ ತನಗಾಗಿ ಕಾದಿರುವ ಅಂಡಾಣುವನ್ನು ಸೇರಬಹುದು. ಮಿಕ್ಕೆಲ್ಲ ನಶಿಸಿ ಹೋಗುತ್ತವೆ.
ಎಲ್ಲ ಸರಿಯಾಗಿ ನಡೆದು ಗರ್ಭಧಾರಣೆಯಾದಾಗ ಅಲ್ಲಿಗೆ ಒಂದು ಹಂತ ಮುಗಿದಂತೆ. ಅಲ್ಲಿಂದ ನವಮಾಸಗಳ ಮತ್ತೊಂದು ಸುಂದರ ಯಾತ್ರೆ ಶುರು. ಗರ್ಭವತಿಯ ಲಾಲನೆ-ಪಾಲನೆಗಳ ಮುಖೇನ ಅವಳ ಕರುಳಿನ ಬಳ್ಳಿಯ ಪೋಷಣೆ. ಮೂಲದಲ್ಲಿ ಬಿಂದುವಿನ ಜೀವ ದಿನಕ್ಕೆ ಇಂತಿಷ್ಟು ಎಂಬ ಒಂದು ನಿರ್ದಿಷ್ಟವಾದ ನಿಸರ್ಗದ ನಿಯಮದ ಮೇರೆಗೆ ಬದಲಾಗುತ್ತ, ಬೆಳೆಯುತ್ತ ಸಾಗುತ್ತಿದೆ. ಸಮಯಕ್ಕೆ ತಕ್ಕಂತೆ ಅದರ ಅಂಗಾಂಗಗಳೆಲ್ಲಾ ಮೂಡುತ್ತಾ ಅದರ ಚೇಷ್ಟೆಗಳೆಲ್ಲ ನಡೆಯುತ್ತವೆ. ಹೀಗೆ ಬಿಡಿಬಿಡಿಯಾದ ಒಂದೊಂದು ಪ್ರಸಂಗವೂ ಹಿಡಿಹಿಡಿಯಾಗಿ, ಒಂದಾಗಿ ಸರಿಯಾದ ಸಮಯಕ್ಕೆ ಸಮಗ್ರವಾಗಿ ಧರೆಗಿಳಿಯುತ್ತದೆ. ದೈವ ನಿಯಮದ ಈ ಒಂದು ಪುಟ್ಟ ಪ್ರಕ್ರಿಯೆಯೇ ಸಾಕು. ಮನುಜ ಮಿತಿಯನ್ನು ಸಾರಿ ಸಾರಿ ತಿಳಿಸಲು, ನಾವೆಷ್ಟು ತೃಣಮಾತ್ರರೆಂಬ ಅರಿವು ಮೂಡಿಸಲು.
ಸೀಮೆನ್ಸ್ ಕಂಪೆನಿಯ ಜೋಕನ್ನು ಮತ್ತೆ ಜ್ಞಾಪಿಸಿಕೊಳ್ಳಿ. `ನೀವೆಂದೂ ಒಂಬತ್ತು ತಿಂಗಳಲ್ಲಿ ಅಥವಾ ನಿರ್ದಿಷ್ಟವಾದ ಕಾಲಮಾನದಲ್ಲಿ ಏನನ್ನೂ ತಯಾರಿಸಿಲ್ಲ ಹಾಗೂ ಗ್ರಾಹಕನಿಗೆ ನೀವೆಂದೂ ಸಮಗ್ರವಾಗಿ ಏನನ್ನೂ ನೀಡಿಲ್ಲ' ಎಂಬುವುದು ಬರಿಯ ಹಾಸ್ಯವಲ್ಲ. ಇದರಲ್ಲಿ ಚಿಂತನೆಯೇ ಅಧಿಕವಾಗಿದೆ ಎನ್ನಿಸಿದರೆ ನಮ್ಮ ಪಯಣ ಸಕಾರಾತ್ಮಕವಾದ ಹಾದಿಯಲ್ಲಿ ಮುಂದುವರೆಯಲು ಸಾಧ್ಯ. ಇದಕ್ಕೆ ಕಾರಣವೇನು ಎಂಬ ಅರಿವನ್ನು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದೇವು ಕೂಡ.
ಬೋರ್ಡ್ ರೂಮಿನ ಸುತ್ತಮುತ್ತಲಿನ ಅಧಿಕಾರಿಗಳು ಮಾಡುವ ಬಹಳ ದೊಡ್ಡ ತಪ್ಪೆಂದರೆ `ಸಮಯವನ್ನು ಅತಿಯಾಗಿ ಅಳಿಸುವ ಅಥವಾ ಸಂಕುಚಿತಗೊಳಿಸುವ' ಮೂರ್ಖ ಪ್ರಯತ್ನ. ಉದಾಹರಣೆಗೆ, ಉತ್ಪನ್ನವೊಂದನ್ನು ರೂಪುಗೊಳಿಸಿ ಅದನ್ನು ಎಲ್ಲಾ ತಪಾಸಣೆಗಳಿಗೊಡ್ಡಿ ಸರ್ವರೀತಿಯಲ್ಲಿ ನ್ಯೂನತೆಗಳಿಲ್ಲದಂತೆ ಹೊರತರಲು ಒಂಬತ್ತು ತಿಂಗಳು ಬೇಕು ಎಂದಿಟ್ಟುಕೊಳ್ಳೋಣ. ಅಧಿಕಾರಿಗಳು ಈ ಕಾಲಮಾನವನ್ನು ವಿವೇಚನೆ ಇಲ್ಲದೇ, ತರ್ಕರಹಿತವಾಗಿ, ಸದಾ ಬದಲಾಗುತ್ತಿರುವ ಮಾರುಕಟ್ಟೆಯ ಒತ್ತಡಗಳಿಗೆ ಮಣಿದು ನಾಲ್ಕು ತಿಂಗಳುಗಳಿಗೆ ಇಳಿಸಿ ಬಿಡುತ್ತಾರೆ. ಆದಷ್ಟು ಬೇಗ ಮಾರುಕಟ್ಟೆಗೆ ಉತ್ಪನ್ನವನ್ನು ತಂದು ಆದಷ್ಟು ಬೇಗ ಅಲ್ಲಿ ರಾರಾಜಿಸಬೇಕೆಂಬ ಅತಿ ಆಸೆ. ಇದಕ್ಕೆ ಪೂರಕವಾಗಿ, ಆ ಕೆಲಸಕ್ಕಾಗಿ ಹೆಚ್ಚು ಜನರನ್ನು ಬಳಸಿ ಹೆಚ್ಚು ಹಣವನ್ನು ಖರ್ಚು ಮಾಡಿಬಿಟ್ಟರೆ ಅದಕ್ಕಾಗುವ ಸಮಯವನ್ನು ಅರ್ಧಕ್ಕಿಳಿಸಬಹುದೆಂಬ ನವಯುಗದ ಮ್ಯಾನೇಜ್‌ಮೆಂಟ್ ಚಿಂತನೆ ಅವರದ್ದು. ಜಿದ್ದಿಗೆ ಬಿದ್ದವರಂತೆ ರಾತ್ರಿ-ಹಗಲು ಪ್ರಾಮಾಣಿಕವಾಗಿ ಅದೇ ಪ್ರಯತ್ನದಲ್ಲಿ ತಮ್ಮನ್ನು ಹಾಗೂ ತಮ್ಮ ತಂಡದವರನ್ನೆಲ್ಲ ಹುರಿದುಂಬಿಸಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಈ ಒಂದು ತಪ್ಪಿನಿಂದ ಸಾಧಾರಣವಾಗಿ ಒಂಬತ್ತು ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸವೂ ಕೂಡ ಸಂಪೂರ್ಣ ಹದಗೆಟ್ಟು ವರುಷವೆರಡಾದರೂ ಮುಗಿಯದೇ ತಲೆಬೇನೆಯಾಗಿ ಕಾಡುತ್ತದೆ. ಸಮಯವನ್ನು ಅಳಿಸಿ ಬಿಡುತ್ತೇವೆಂಬ ಹುಚ್ಚು ಆಸೆಗೆ ಮಣಿದು ಈಗ ಸಮಯವನ್ನು ಉಳಿಸಲೂ ಆಗದೇ ಚಡಪಡಿಸುವಂತಾಗಿ ಬಿಡುತ್ತದೆ!
ಒಂಬತ್ತು ತಿಂಗಳ ಪ್ರಾಜೆಕ್ಟುಗಳಲ್ಲಿ ನಾಲ್ಕೈದು ತಿಂಗಳುಗಳನ್ನು ಉಳಿಸ ಹೊರಟು ವರುಷಗಳ ನಂತರ ಜೀವಂತ ಮಗುವಿನ ಬದಲು ನಿರ್ಜೀವವಾದ ಮಾಂಸದ ಮುದ್ದೆಯೊಂದನ್ನು ಹುಟ್ಟು ಹಾಕಿದ ಅನೇಕ ದೇಶೀಯ ಕಂಪೆನಿಗಳನ್ನು ನಾನು ಬಲ್ಲೆ. ಆದ್ದರಿಂದ ಇಷ್ಟನ್ನು ಮಾತ್ರ ಖಂಡಿತವಾಗಿ ಹೇಳಬಲ್ಲೆ -`ನೂರು ಮೀಟರ್ ಓಟವನ್ನು ಒಂಬತ್ತು ಕ್ಷಣಗಳಲ್ಲಿ ಓಡಬೇಕೆಂಬ ನಿರ್ಧಾರ ಅತ್ಯಂತ ಸಮಂಜಸವಾದದ್ದು. ಅದೇ ದೂರವನ್ನು ಎಂಟು ಕ್ಷಣಗಳಲ್ಲಿ ಓಡಬೇಕೆಂಬ ನಿರ್ಧಾರ ಅತ್ಯಂತ ಸಕಾರಾತ್ಮಕವಾದದ್ದು. `ಇದು ಸತ್ಯ' ಎಂಬ ಅರಿವಿನಿಂದ ಮಾಡಿದ್ದು. ಹಾಗಾಗಿ, ಅದು ಇಂದಲ್ಲ ನಾಳೆ ಸಾಧ್ಯವಾಗುವ ಸಂಭವವೇ ಹೆಚ್ಚು. ಆದರೆ, ಅದೇ ದೂರವನ್ನು ನಾಲ್ಕು ಕ್ಷಣಗಳಲ್ಲಿ ಓಡಿಯೇ ತೀರುತ್ತೇನೆ ಎಂದು ಸಂಪೂರ್ಣವಾಗಿ ನಂಬಿ ಪ್ರಯತ್ನಿಸಿದರೆ, ಮೇಲ್ನೋಟಕ್ಕೆ ಅದೆಷ್ಟೇ ಸೂಕ್ತವಾಗಿ ಕಂಡರೂ ಅದರಿಂದ ಎಂದೆಂದೂ ತುಂಬಲಾರದ ಹಾನಿಯೇ ಅಧಿಕ'!
ಮನುಷ್ಯ ಏನನ್ನೂ ಬೇಕಾದರೂ ಅಳಿಸಬಲ್ಲ ಅಥವಾ ನಿಯಂತ್ರಿಸಬಲ್ಲ. ಆದರೆ, ಸಮಯ ಹಾಗೂ ಸಾವು ಅವನ ಹಿಡಿತದಲ್ಲಿಲ್ಲ ಎಂಬ ಈ ವೇದಾಂತದ ಸತ್ಯ ನವಯುಗದ ಬೋರ್ಡ್‌ರೂಮಿನ ಸುತ್ತಮುತ್ತಲಿನವರಿಗೆಲ್ಲ ಸರ್ವದಾ ಇರಲಿ. ಕೊಡಬೇಕಾದ ಒಂಬತ್ತು ತಿಂಗಳುಗಳನ್ನು ನೀಡಿ, ಆ ವೇಳೆಯಲ್ಲಿ ಮೂಡಬೇಕಾದ ಎಲ್ಲ ಕರ್ತವ್ಯಗಳನ್ನು ಪಾಲಿಸುತ್ತ ದೈವಕೃಪೆಗಾಗಿ ಪ್ರಾರ್ಥಿಸಿದರೆ, ಮಗು ಹಿಡಿಯಾಗಿ, ಆರೋಗ್ಯಕರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಮೂಡಿ ಬರುತ್ತದೆ ಎಂಬುದರಲ್ಲಿ ಸಂಶಯವೇ ಬೇಡ. ಇದೇ ನಿಸರ್ಗದ ನಿಯಮ ಕೂಡ!
ಲೇಖಕರನ್ನು satyesh.bellur@gmail.com ಇಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.