ADVERTISEMENT

ಹಣಹೂಡಿಕೆ: ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ

ವಿಶ್ವನಾಥ ಬಸವನಾಳಮಠ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಕೆಲ ಕಾರ್ಖಾನೆಗಳಲ್ಲಿ ನೌಕರರಿಗೆ ನೀಡಿರುವ ಪಂಚ್‌ಕಾರ್ಡ್‌ಗಳನ್ನು ನೀವು ಗಮನಿಸಿರಬಹುದು. ದಿನವೊಂದರಲ್ಲಿ ನಿರ್ದಿಷ್ಟ ಸಮಯದಲ್ಲಿ ಕರಾರುವಾಕ್ಕಾಗಿ ನಿಗದಿತ ಬಾರಿ ಮಾತ್ರ ಪಂಚ್ ಕಾರ್ಡ್ ಬಳಸಲು ಅವಕಾಶವಿರುತ್ತದೆ. ಇಂಥದೇ ಬಗೆಯ  ಪಂಚ್‌ಕಾರ್ಡ್ ತತ್ವವನ್ನು ಹೂಡಿಕೆಯಲ್ಲೂ ಅಳವಡಿಸಿಕೊಳ್ಳಬಹುದು.

ವ್ಯಕ್ತಿಯೊಬ್ಬ ಜೀವಿತಾವಧಿಯಲ್ಲಿ 20 ಹೂಡಿಕೆ ನಿರ್ಧಾರಗಳನ್ನು ಮಾತ್ರ ಮಾಡಿದರೆ ಸಾಕು ಎನ್ನುತ್ತಾರೆ ಬಫೆಟ್. ಪ್ರತಿಬಾರಿ ಹೂಡಿಕೆ ಮಾಡಿದಾಗಲೂ ಒಂದು ಬಾರಿ ಕಾರ್ಡ್ ಪಂಚ್ ಮಾಡಿದಂತಿರಬೇಕು.

 ಇಂಥ ಪಂಚ್ ಕಾರ್ಡ್ ನಿಯಮವನ್ನು ನಮ್ಮಷ್ಟಕ್ಕೆ ನಾವೇ ವಿಧಿಸಿಕೊಂಡರೆ ಹೂಡಿಕೆ ಮಾಡುವಾಗ ಎಚ್ಚರಿಕೆಯ ನಡೆ ಅನುಸರಿಸಲು ಸಾಧ್ಯ ಹಾಗೂ ದೀರ್ಘಾವಧಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.

ಹೀಗೆ ಮಾಡುವುದರಿಂದ ಅವಸರದ ಹಾಗೂ ಒತ್ತಡಕ್ಕೆ ಬಿದ್ದು ನಿರ್ಧಾರ ತೆಗೆದುಕೊಳ್ಳುವುದು ತಪ್ಪುತ್ತದೆ. ನಿಮ್ಮ ಹೂಡಿಕೆಯಲ್ಲಿ ಗುಣಮಟ್ಟ (ಕ್ವಾಲಿಟಿ) ಮುಖ್ಯವೇ ಹೊರತು ಪ್ರಮಾಣ (ಕ್ವಾಂಟಿಟಿ)ವಲ್ಲ.

ಆದ್ದರಿಂದ ಬಂದ ಬಾಲುಗಳೆಲ್ಲವನ್ನೂ ಬೌಂಡರಿಗೆ ಅಟ್ಟಲು ಯತ್ನಿಸುವುದನ್ನು ಬಿಟ್ಟು, ಸಿಕ್ಸರ್ ಎತ್ತಲು ಯೋಗ್ಯ ಎನ್ನಬಹುದಾದ ಬಾಲುಗಳನ್ನು ಮಾತ್ರ ಚಚ್ಚುವ ಹೊಡೆಬಡೆಯ ದಾಂಡಿಗರಾಗಿ!

ಕಾರ್ಪೊರೇಟ್ ಜ್ಯೊತಿಷಿಗಳಿಂದ ದೂರವಿರಿ
ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು. ದೇಶದ ನಾಲ್ಕನೇ ಸ್ಥಾನದಲ್ಲಿದ್ದ ಐ.ಟಿ ಸರ್ವಿಸಸ್ ಕಂಪೆನಿಯೊಂದು ತನ್ನ ಲಾಭಾಂಶ ಹಾಗೂ ಷೇರುಗಳ ಬೆಲೆಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ನಿಸ್ಸೀಮವಾಗಿತ್ತು.
 
ಪ್ರತಿ ತ್ರೈಮಾಸಿಕ ಫಲಿತಾಂಶದಲ್ಲೂ ಅದರದು ಎಚ್ಚರಿಕೆಯ ನಡೆ. ತನ್ನ ಪ್ರತಿಸ್ಪರ್ಧಿ ಕಂಪೆನಿಗಳು ಮೂರು ತಿಂಗಳಿಗೊಮ್ಮೆ ಫಲಿತಾಂಶ ಪ್ರಕಟಿಸಿದ ಎರಡು-ಮೂರು ದಿನಗಳಲ್ಲೇ ತನ್ನ ಫಲಿತಾಂಶವನ್ನೂ ಪ್ರಕಟಿಸಿಬಿಡುತ್ತಿತ್ತು.

ಅಷ್ಟೇ ಅಲ್ಲ ತನ್ನ ಉದ್ಯಮದ ಪ್ರಗತಿ ಇಂತಿಷ್ಟೇ ಇರಲಿದೆ ಎಂದೂ ಭವಿಷ್ಯ ಕೂಡ ನುಡಿಯುತ್ತಿತ್ತು. ಕಂಪನಿಯೊಂದರ ಸಾಧನೆ ಮೇಲೆಯೇ ಅದರ ಷೇರುಗಳ ಬೆಲೆ ನಿಗದಿಯಾಗುವುದು ಎಲ್ಲರಿಗೂ ತಿಳಿದ ವಿಚಾರವೇ. ಕೆಲ ವರ್ಷ ಇದೇ ರೀತಿ ಮಾಡಿದಾಗ ಕೊನೆಗೊಂದು ದಿನ ಪರೀಕ್ಷೆಯ ದಿನ ಬಂದೇ ಬಿಟ್ಟಿತು. `ಸತ್ಯ~ಕ್ಕೆ ಜಯವಾಯಿತು, ಕಂಪೆನಿಯ ಮುಖವಾಡ ಕಳಚಿತು.

ನಂತರ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆ ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ, ಇಷ್ಟು ದಿನ ಹೇಗೋ ಹುಂಬು ಧೈರ್ಯದಿಂದ ಹುಲಿ ಸವಾರಿ ಮಾಡಿಬಿಟ್ಟೆ. ಆದರೆ ಈಗ ಹುಲಿಯ ಬೆನ್ನ ಮೇಲಿನಿಂದ ಇಳಿಯುವ ವಿದ್ಯೆಯೇ ನನಗೆ ಗೊತ್ತಿಲ್ಲ.
 
ಸವಾರಿ ಮುಂದುವರಿದರೆ ಬೇಟೆಗಾರನಿಗೆ ಬಲಿಯಾಗುವುದು ಗ್ಯಾರಂಟಿ. ಬೇಟೆಗಾರನಿಂದ ತಪ್ಪಿಸಿಕೊಳ್ಳಲು ಕೆಳಗಿಳಿದರೆ ಹುಲಿಗೆ ಆಹಾರವಾಗುವುದು ಅನಿವಾರ್ಯ!

ಇಂಥ ಅಪಾಯಕಾರಿ ಕಂಪೆನಿಗಳ ಷೇರು ಕೊಳ್ಳುವುದರಿಂದ ದೂರವಿರುವುದೇ ಲೇಸು. ಈ ಷೇರುಗಳು ಹುಲಿ ಸಫಾರಿಯಂತೆ ಅಲ್ಪಾವಧಿಗೆ ಮಾತ್ರ ಲಾಭ ತರಬಲ್ಲವು. ಆದರೆ, ಒಂದು ದಿನ, ಅತ್ತ ದರಿ (ಪಾತಾಳಕ್ಕಿಳಿಯುವ ಷೇರಿನ ಬೆಲೆ) ಇತ್ತ ಪುಲಿ (ನಷ್ಟ) ಎಂಬ ಅನುಭವವಾಗುವುದರಲ್ಲಿ ಸಂದೇಹವಿಲ್ಲ.

ಷೇರುಪೇಟೆ ಒಂದು ಮಾಯಾ ಬಜಾರು. ಇಲ್ಲಿ ಇದಮಿತ್ಥಂ ಎಂದು ಭವಿಷ್ಯ ಹೇಳಲು ಸಾಧ್ಯವಿಲ್ಲ. ಯಾರಾದರೂ ಕರಾರುವಾಕ್ಕಾಗಿ ಭವಿಷ್ಯ ಹೇಳುತ್ತಿದ್ದಾರೆ ಹಾಗೂ ಅದು ವಾಸ್ತವವಾಗಿಯೂ ನಡೆಯುತ್ತಿದೆ ಎಂದರೆ ಅಲ್ಲೇನೋ ಮೋಸವಿದೆ ಎಂದೇ ಅರ್ಥ. 

ಆದ್ದರಿಂದ ಅಂಥ ಕಣ್ಕಟ್ಟಿನ ಉದ್ಯಮದಲ್ಲಿ ಹೂಡುವುದರಿಂದ ದೂರವಿರಿ. ನಿಮ್ಮ ಸಾಮರ್ಥ್ಯ ಹಾಗೂ ಕಂಪೆನಿಯೊಂದರ ವಿಶ್ವಾಸಾರ್ಹತೆ ಮೇಲೆ ನಂಬಿಕೆ ಇರಿಸಿ ಎನ್ನುತ್ತಾರೆ ಬಫೆಟ್.

ಕಣ್ಕಟ್ಟುಗಳು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೇ ಕ್ಷೀಣಗೊಳಿಸುತ್ತವೆ. ನಿಮ್ಮ ಮುಂದೆ ಮಿಥ್ಯಾ ಪ್ರಪಂಚವನ್ನೇ ಸೃಷ್ಟಿಸುತ್ತವೆ. ಇಂಥ ಮೋಸಗಳಿಂದ ದೂರವಿರಲು ಕಂಪೆನಿಯ ಹಿಂದಿನ ಸಾಧನೆ ಹಾಗೂ ಅದೇ ಸಾಧನಾ ಪಥದಲ್ಲಿ ಈಗಲೂ ಆ ಉದ್ಯಮ ಮುಂದುವರಿಯುತ್ತಿದೆಯೇ ಎಂಬುದನ್ನು ಗಮನಿಸಿ ಹೂಡಿಕೆ ಮಾಡಬೇಕು.

ಕೇವಲ ಭವಿಷ್ಯದ ಮುನ್ಸೂಚನೆ ಆಧಾರದಲ್ಲಿ ಹೂಡಿಕೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬುವುದು ಬಫೆಟ್ ಅನುಭವ ವಾಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT