ADVERTISEMENT

ಹಿತಾಸಕ್ತಿ ಸಂಘರ್ಷ ರಜೆ ಮುಂದುವರಿಸಲು ಚಂದಾಗೆ ನಿರ್ದೇಶನ

ಪಿಟಿಐ
Published 18 ಜೂನ್ 2018, 18:48 IST
Last Updated 18 ಜೂನ್ 2018, 18:48 IST
ಚಂದಾ ಕೊಚ್ಚರ್‌
ಚಂದಾ ಕೊಚ್ಚರ್‌   

ಮುಂಬೈ: ವಿಡಿಯೊಕಾನ್‌ ಸಾಲ ನೀಡಿಕೆಗೆ ಸಂಬಂಧಿಸಿದ ಸ್ವತಂತ್ರ ತನಿಖೆ ಪೂರ್ಣಗೊಳ್ಳುವವರೆಗೆ ಸಿಇಒ ಚಂದಾ ಕೊಚ್ಚರ್‌ ಅವರು ತಮ್ಮ ರಜೆ ಮುಂದುವರೆಸಲಿದ್ದಾರೆ ಎಂದು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ತಿಳಿಸಿದೆ.

ಸೋಮವಾರ ಇಲ್ಲಿ ಸಭೆ ಸೇರಿದ್ದ ಮಂಡಳಿಯು, ಸಂದೀಪ್‌ ಬಕ್ಷಿ ಅವರನ್ನು ಬ್ಯಾಂಕ್‌ ಸಿಒಒ ಆಗಿ ನೇಮಿಸಿದೆ. ಚಂದಾ ಅವರು ಸಿಇಒ ಹುದ್ದೆಯಲ್ಲಿಯೇ ಮುಂದುವರೆಯಲಿದ್ದಾರೆ. ಕಾರ್ಪೊರೇಟ್‌ ಆಡಳಿತದ ಉನ್ನತ ನಿಯಮಗಳನ್ನು ಪಾಲಿಸಲು, ವಿಚಾರಣೆ ಪೂರ್ಣಗೊಳ್ಳುವವರೆಗೆ ರಜೆ ಮುಂದುವರೆಸಲು ಚಂದಾ ನಿರ್ಧರಿಸಿದ್ದಾರೆ ಎಂದು ಬ್ಯಾಂಕ್‌ ಹೇಳಿದೆ.

ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಇನ್ಶುರನ್ಸ್‌ನ ಸಿಇಒ ಆಗಿರುವ ಬಕ್ಷಿ ಅವರು ಮಂಗಳವಾರದಿಂದಲೇ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ.

ADVERTISEMENT

ಕೆಲ ಸಾಲ ಮಂಜೂರಾತಿ ಪ್ರಕರಣಗಳಲ್ಲಿ ಚಂದಾ ಕೊಚ್ಚರ್‌ ಅವರ ವಿರುದ್ಧ  ಹಿತಾಸಕ್ತಿ ಸಂಘರ್ಷದ ದೂರುಗಳು ಕೇಳಿ ಬಂದಿವೆ. ವಿಡಿಯೊಕಾನ್‌ ಗ್ರೂಪ್‌ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ ಅವರು  ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಅವರ ಜತೆ ವಾಣಿಜ್ಯ ಸಂಬಂಧ ಹೊಂದಿದ್ದಾರೆ. ಪರಸ್ಪರ ಕೊಡುಕೊಳ್ಳುವುದರ ಆಧಾರದ ಮೇಲೆ ಸಾಲ ಮಂಜೂರು ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಮಾರ್ಚ್‌ ತಿಂಗಳಲ್ಲಿ ದೂರುಗಳು ಬಹಿರಂಗವಾಗುತ್ತಿದ್ದಂತೆ, ಚಂದಾ ಕೊಚ್ಚರ್‌ ಅವರ  ಬೆಂಬಲಕ್ಕೆ ನಿಂತಿದ್ದ ಆಡಳಿತ ಮಂಡಳಿಯು, ಅವರಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿತ್ತು.

ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವುದಾಗಿ ಬ್ಯಾಂಕ್‌ ಹಿಂದಿನ ತಿಂಗಳು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.