ADVERTISEMENT

2012 ರಲ್ಲಿ ವಾಹನ ಮಾರುಕಟ್ಟೆ ಸ್ಥಿರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ನವದೆಹಲಿ (ಪಿಟಿಐ): ಬೆಲೆ ಏರಿಕೆ ಭೀತಿ, ವಿವಿಧ ರಿಯಾಯ್ತಿ ಕೊಡುಗೆಗಳ ಆಮಿಷ ಇತ್ಯಾದಿ ಸಂಗತಿಗಳಿಂದ ಡಿಸೆಂಬರ್ ತಿಂಗಳಲ್ಲಿ ದೇಶದ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟ ಶೇ 8.49ರಷ್ಟು ಪ್ರಗತಿ ದಾಖಲಿಸಿದೆ.

ಹಣದುಬ್ಬರ, ಬ್ಯಾಂಕ್ ಬಡ್ಡಿ ದರ ಏರಿಕೆ, ತೈಲ ಬೆಲೆ ಹೆಚ್ಚಳ  ಇತ್ಯಾದಿ ಪ್ರತಿಕೂಲ ಸಂಗತಿಗಳ ನಡುವೆಯೂ 2011ರಲ್ಲಿ ಒಟ್ಟು ವಾಹನ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14ರಷ್ಟು ಹೆಚ್ಚಳ ಕಂಡಿದೆ.

ಕಳೆದ ವರ್ಷ ಒಟ್ಟು 1,48,04,108 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಪ್ರಸಕ್ತ ಅವಧಿಯಲ್ಲಿ ಇದು 1,69,13,355ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಸಂಘ  (ಎಸ್‌ಐಎಎಂ) ಹೇಳಿದೆ.

ಡಿಸೆಂಬರ್ ತಿಂಗಳಲ್ಲಿ ಒಟ್ಟು 1,59,325 ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ 8ರಷ್ಟು ಏರಿಕೆ ಕಂಡಿದೆ. ಹೊಸ ವರ್ಷದಿಂದ ಕಂಪೆನಿಗಳು ವಾಹನಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿರುವುದೇ ಡಿಸೆಂಬರ್‌ನಲ್ಲಿ ಮಾರಾಟ ಹೆಚ್ಚಲು ಪ್ರಮುಖ ಕಾರಣ ಎಂದು `ಎಸ್‌ಐಎಎಂ~ ಅಧ್ಯಕ್ಷ ಎಸ್. ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ.

ಫಿಟ್ಚ್ ವರದಿ: 2012ರಲ್ಲಿ ದೇಶೀಯ ವಾಹನ ಮಾರುಕಟ್ಟೆ ಸ್ಥಿರತೆ ಕಾಯ್ದುಕೊಳ್ಳಲಿದ್ದು,  ಶೇ 3ರಿಂದ 5ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಜಾಗತಿಕ ಮೌಲ್ಯ ಮಾಪನ ಸಂಸ್ಥೆ ಫಿ   ಟ್ಚ್ ಹೇಳಿದೆ.2012ರಲ್ಲಿ ವಾಣಿಜ್ಯ ಬಳಕೆಯ (ಸಿವಿಎಸ್) ಮತ್ತು ಬಹೂಪಯೋಗಿ ವಾಹನಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದ್ದು, ಶೇ 8ರಿಂದ 10ರಷ್ಟು ಏರಿಕೆ ಕಾಣಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.