ADVERTISEMENT

ಆರ್ಥಿಕ ವೃದ್ಧಿ ದರ ಚೇತರಿಕೆ ನಿರೀಕ್ಷೆ

ಪಿಟಿಐ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಆರ್ಥಿಕ ವೃದ್ಧಿ ದರ ಚೇತರಿಕೆ ನಿರೀಕ್ಷೆ
ಆರ್ಥಿಕ ವೃದ್ಧಿ ದರ ಚೇತರಿಕೆ ನಿರೀಕ್ಷೆ   

ನವದೆಹಲಿ: ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದ 2017ರಲ್ಲಿ ಇಳಿಕೆ ಕಂಡಿದ್ದ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಹೊಸ ವರ್ಷದಲ್ಲಿ ಚೇತರಿಕೆ ಹಾದಿಗೆ ಮರಳಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ತೈಲ ಬೆಲೆ ಏರಿಕೆ, ಚಿಲ್ಲರೆ ಹಣದುಬ್ಬರವು ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿ ನಿರ್ಧಾರಗಳು ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದೇ ಹೆಚ್ಚು. ಹೀಗಾಗಿ 2017ನೇ ವರ್ಷವನ್ನು ಮರೆಯುವುದೇ ಒಳಿತು ಎನ್ನುವ ಭಾವನೆ ಹಲವರಲ್ಲಿ ಮೂಡಿದೆ. ಒಟ್ಟಾರೆ ಜಿಡಿಪಿಯಲ್ಲಿ ಶೇ 2 ರಷ್ಟು ನಷ್ಟವಾಗಿರುವ ಅಂದಾಜು ಮಾಡಲಾಗಿದೆ.

ADVERTISEMENT

2015–16ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 9ರಷ್ಟು ಪ್ರಗತಿ ಕಂಡಿತ್ತು. ಆದರೆ 2017–18ರ ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿತು. ಆ ಬಳಿಕ ಎರಡನೇ ತ್ರೈಮಾಸಿಕದಲ್ಲಿ ಶೇ 6.7ಕ್ಕೆ ಏರಿಕೆ ಕಂಡು ಚೇತರಿಕೆ ಹಾದಿಗೆ ಮರಳಿರುವ ಸುಳಿವು ನೀಡಿದೆ.

ದೇಶದ ಸುಲಲಿತ ವಹಿವಾಟಿನ ಶ್ರೇಯಾಂಕ 130 ರಿಂದ 100ಕ್ಕೆ ಜಿಗಿತ ಕಂಡಿರುವುದು, ಭಾರತದ ಆರ್ಥಿಕತೆಗೆ ಮೂಡೀಸ್‌ ಸಂಸ್ಥೆಯು ಬಿಎಎ–2 ಸ್ಥಾನ ನೀಡಿರುವುದು ಜಿಡಿಪಿ ಚೇತರಿಕೆಗೆ ನೆರವಾಗುತ್ತಿವೆ.

ಜಿಡಿಪಿ ಪ್ರಗತಿಗೆ ಇದ್ದ ಪ್ರಮುಖ ಅಡೆತಡೆಗಳು ನಿವಾರಣೆಯಾಗಿವೆ. ಮುಂದಿನ ನಾಲ್ಕರಿಂದ ಐದು ತ್ರೈಮಾಸಿಕಗಳಲ್ಲಿ ಬೆಳವಣಿಗೆಯು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಸಂಸ್ಥೆಯು ತನ್ನ ‘2018ರ ಆರ್ಥಿಕ ಮುನ್ನೋಟ’ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.