ADVERTISEMENT

ವಿಜಯ ಬ್ಯಾಂಕ್‌ ನಿವ್ವಳ ಲಾಭ ₹79 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಶಂಕರ ನಾರಾಯಣನ್‌
ಶಂಕರ ನಾರಾಯಣನ್‌   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ತೃತೀಯ ತ್ರೈಮಾಸಿಕದಲ್ಲಿ ₹ 79.56 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

‘ಭವಿಷ್ಯದಲ್ಲಿನ ನಷ್ಟಕ್ಕೆ ಹೆಚ್ಚು ಹಣ ತೆಗೆದು ಇರಿಸಿದ ಕಾರಣಕ್ಕೆ  ನಿವ್ವಳ ಲಾಭವು ಕಡಿಮೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿನ ₹ 230 ಕೋಟಿಗಳಿಗೆ ಹೋಲಿಸಿದರೆ ಈ ಬಾರಿ ಶೇ 65.45ರಷ್ಟು ಇಳಿಕೆಯಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌. ಎ. ಶಂಕರ ನಾರಾಯಣನ್‌ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬ್ಯಾಂಕ್‌ನ ಒಟ್ಟು ವರಮಾನವು ಕೂಡ ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 3,714 ಕೋಟಿಗಳಿಗೆ ಹೋಲಿಸಿದರೆ ಶೇ 7ರಷ್ಟು ಕಡಿಮೆಯಾಗಿ ₹ 3,450 ಕೋಟಿಗಳಿಗೆ ಇಳಿದಿದೆ. ₹ 276 ಕೋಟಿಗಳಷ್ಟು ಭವಿಷ್ಯದ ವೆಚ್ಚಗಳಿಗಾಗಿ ತೆಗೆದು ಇರಿಸಲಾಗಿದೆ. ಹೀಗೆ ಮಾಡಿರದಿದ್ದರೆ ಬ್ಯಾಂಕ್‌ನ ನಿವ್ವಳ ಲಾಭವು ₹ 350 ಕೋಟಿಗಳಿಗಿಂತ ಹೆಚ್ಚಿಗೆ ಇರುತ್ತಿತ್ತು’ ಎಂದರು.

ADVERTISEMENT

‘ಬ್ಯಾಂಕ್‌, ಪ್ರಗತಿ ಮತ್ತು ಲಾಭದ ಸರಿಯಾದ ಹಾದಿಯಲ್ಲಿ ಸಾಗಿದೆ. ವಸೂಲಾಗದ ಸಾಲದ ಪ್ರಮಾಣಕ್ಕೆ (ಎನ್‌ಪಿಎ) ಕಡಿವಾಣ ವಿಧಿಸಲಾಗುತ್ತಿದೆ. ಉಳಿದೆಲ್ಲ ವಿಭಾಗಗಳಲ್ಲಿ ಪ್ರಗತಿ ದಾಖಲಿಸುತ್ತಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ವಸೂಲಾಗದ ಸಾಲದ ಒಂದೆರಡು ಖಾತೆಗಳ ವಿರುದ್ಧ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ದೂರು ನೀಡಲಾಗಿದೆ. ನಿವ್ವಳ ಎನ್‌ಪಿಎ ಶೇ 3.99ಕ್ಕೆ ಇಳಿದಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ನಮ್ಮ ಹಣಕಾಸು ಸಾಧನೆ ಈ ಹಿಂದಿನಕ್ಕಿಂತ ಉತ್ತಮವಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.