ADVERTISEMENT

‘ಆರ್ಥಿಕ ಬಲವರ್ಧನೆಗೆ ಸಣ್ಣ ಉದ್ಯಮ ಮುಖ್ಯ’

ಪಿಟಿಐ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
‘ಆರ್ಥಿಕ ಬಲವರ್ಧನೆಗೆ ಸಣ್ಣ ಉದ್ಯಮ ಮುಖ್ಯ’
‘ಆರ್ಥಿಕ ಬಲವರ್ಧನೆಗೆ ಸಣ್ಣ ಉದ್ಯಮ ಮುಖ್ಯ’   

ನವದೆಹಲಿ (ಪಿಟಿಐ): ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಂಎಸ್‌ಎಂಇ) ವಲಯವು ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್ಥಿಕ ಬಲವರ್ಧನೆಯಲ್ಲಿ ಈ ವಲಯವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

ಎಂಎಸ್‌ಎಂಇ ವಲಯದಲ್ಲಿ ನಡೆಯುತ್ತಿರುವ ತಕ್ಷಣದ ಬೆಳವಣಿಗೆಗಳನ್ನು ಗಮನಿಸಿ ವರದಿ ನೀಡುವ ಕ್ರಿಸಿಡ್‌ಎಕ್ಸ್‌ (CriSidEx) ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

‘ದೇಶದ ಆರ್ಥಿಕ ಬಲವರ್ಧನೆಯಲ್ಲಿ ಎಂಎಸ್ಎಂಇ ವಲಯ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ವಲಯಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಪ್ರಮುಖವಾದ ರಚನಾತ್ಮಕ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಆರ್ಥಿಕ ಬಲವರ್ಧನೆಯ ದೃಷ್ಟಿಯಿಂದ ಇದೀಗ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯೂ ಮುಖ್ಯವಾಗಲಿದೆ.
‘ಕಾರ್ಮಿಕ ಪ್ರಧಾನವಾಗಿರುವ ಈ ವಲಯದ ಸ್ವಾಸ್ಥ್ಯ ಕಾಯ್ದುಕೊಳ್ಳುವ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಇಲ್ಲಿ ಜನರು ತಮ್ಮ ಉದ್ಯಮಶೀಲತಾ ಕೌಶಲ ಪ್ರದರ್ಶಿಸುವುದಷ್ಟೇ ಅಲ್ಲದೆ, ಉದ್ಯೋಗ ಸೃಷ್ಟಿಗೂ ಕಾರಣರಾಗುತ್ತಿದ್ದಾರೆ. ಹೀಗಾಗಿಯೇ ತಯಾರಿಕೆ ಮತ್ತು ವ್ಯಾಪಾರ ರಂಗದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ’ ಎಂದು ಹೇಳಿದರು.

ADVERTISEMENT

ಏನಿದು ವ್ಯವಸ್ಥೆ? ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ (ಎಸ್‌ಐಡಿಬಿಐ) ಮತ್ತು ಜಾಗತಿಕ ಮೌಲ್ಯಮಾಪನಾ ಸಂಸ್ಥೆ ಕ್ರಿಸಿಲ್‌ ಜತೆಯಾಗಿ ‘CriSidEx’ ವ್ಯವಸ್ಥೆಯನ್ನು ರೂಪಿಸಿವೆ.

ಈ ವ್ಯವಸ್ಥೆಯು ಪ್ರಮುಖ 8 ಮಾನದಂಡಗಳಿಂದ ವಲಯದ ಸ್ಥಿತಿಗತಿಯ ಬಗ್ಗೆ ವರದಿ ನೀಡುತ್ತದೆ. ಸೂಚ್ಯಂಕ ‘0’ ಇದ್ದರೆ ಸಂಪೂರ್ಣವಾಗಿ ನಕಾರಾತ್ಮಕ, ಸೂಚ್ಯಂಕ ’200’ ಇದ್ದರೆ ಸಂಪೂರ್ಣವಾಗಿ ಸಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ‘ಈ ಸೂಚ್ಯಂಕದಿಂದ ಎಂಎಸ್‌ಎಂಇ ವಲಯದಲ್ಲಿ ಆಗಬೇಕಿರುವ ಬದಲಾವಣೆಗಳನ್ನು ಗಮನಿಸಲು ಯೋಜನೆಗಳನ್ನು ಸಿದ್ಧಪಡಿಸಲು ನೀತಿ ರೂಪಿಸುವವರಿಗೆ ಹೆಚ್ಚು ಅನುಕೂಲ ಆಗಲಿದೆ.

ಈ ಉದ್ಯಮದಲ್ಲಿ ಇರುವ ಹಣಕಾಸು ಮತ್ತು ಅಭಿವೃದ್ಧಿಯ ಅಂತರ ತಗ್ಗಿಸಲು ಇದು ನೆರವಾಗುತ್ತದೆ ಎಂದು ಎಸ್‌ಐಡಿಬಿಐ ಅಧ್ಯಕ್ಷ ಮಹಮ್ಮದ್ ಮುಸ್ತಫಾ ಹೇಳಿದ್ದರು.

‘ಷೇರು ವಹಿವಾಟು ತೆರಿಗೆ’ ಕೈಬಿಡುವುದಿಲ್ಲ

‘ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

‘ಶ್ರೀಮಂತ ಹೂಡಿಕೆದಾರರು ಹೆಚ್ಚು ದಿನಗಳವರೆಗೆ ತೆರಿಗೆ ವಿನಾಯ್ತಿ ಲಾಭವನ್ನು ಅನುಭವಿಸಲು ಆಗದು. ಸಣ್ಣ ಹೂಡಿಕೆದಾರರ ಹಿತರಕ್ಷಣೆ ಉದ್ದೇಶದಿಂದ ₹ 1 ಲಕ್ಷದವರೆಗಿನ ಗಳಿಕೆ ಮೊತ್ತಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಗಳಿಸುವ ₹ 1 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಶೇ 10 ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಪಾವತಿಸಬೇಕಾಗುತ್ತದೆ. ‘ಷೇರುಪೇಟೆಯಲ್ಲಿ ಎಸ್‌ಟಿಟಿ ವ್ಯವಸ್ಥೆ ಹಾಗೇಯೇ ಮುಂದುವರಿಯಲಿದೆ’ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.