ADVERTISEMENT

ಎಚ್‌ಡಿಕೆ ಅವಧಿಯಲ್ಲಿ ಭರಪೂರ ಅನುದಾನ ಪಡೆದಿದ್ದ ಮಂಡ್ಯಕ್ಕೆ ಈ ಸಲ ಸಿಕ್ಕಿದ್ದೇನು?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 11:26 IST
Last Updated 5 ಮಾರ್ಚ್ 2020, 11:26 IST
   

ಬೆಂಗಳೂರು: ಮೈತ್ರಿ ಸರ್ಕಾರದ ಎರಡು ಬಜೆಟ್‌ಗಳಲ್ಲಿ ಭರಪೂರ ಅನುದಾನ ಪಡೆದಿದ್ದ ಮಂಡ್ಯಕ್ಕೆ ಈ ಬಾರಿಯ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಹೊಸದೇನೂ ಸಿಕ್ಕಿಲ್ಲ.

ಎಚ್‌.ಡಿ ಕುಮಾರಸ್ವಾಮಿ ನೇತೃತ್ವದ ಎರಡೂ ಬಜೆಟ್‌ಗಳಲ್ಲೂ ಮಂಡ್ಯ ಹೆಚ್ಚಿನ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೇ ಹಿನ್ನೆಲೆಯಲ್ಲಿಬಿಜೆಪಿ ನಾಯಕರು ಕುಮಾರಸ್ವಾಮಿ ಅವರ ಬಜೆಟ್‌ ಅನ್ನು‘ಮಂಡ್ಯ ಬಜೆಟ್‌’ ಎಂದು ಟೀಕಿಸಿದ್ದರು.ಆದರೆ, ಈ ಬಾರಿ ಸಿಎಂ ಬಿ. ಎಸ್‌ ಯಡಿಯೂರಪ್ಪ ಅವರ ತವರು ಜಿಲ್ಲೆ ಎಂಬುದನ್ನೂ ಮೀರಿಮಂಡ್ಯ ಅನುದಾನದ ಬರ ಅನುಭವಿಸಿದಂತಿದೆ.

‘ಜಲಧಾರೆ ಯೋಜನೆಯ ಮೊದಲ ಹಂತದಲ್ಲಿ ಏಷ್ಯನ್‌ ಬ್ಯಾಂಕ್‌ ಸಹಯೋಗದಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್‌ ಕುಡಿಯುವ ನೀರು ಯೋಜನೆಯನ್ನು 700 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು, ’ ಎಂಬ ಒಂದು ಸಾಲನ್ನು ಹೊರತುಪಡಿಸಿದರೆಇಡೀ ಬಜೆಟ್‌ ಪ್ರತಿಯಲ್ಲಿ ಮಂಡ್ಯದ ಉಲ್ಲೇಖವೇ ಇಲ್ಲ. ಜಲಧಾರೆಯ ಈ ಕಾರ್ಯಕ್ರಮದಲ್ಲಿಯೂ ಮಂಡ್ಯಕ್ಕೆ ಎಷ್ಟು ಸಿಗಬಹುದು ಎಂಬುದರ ಕುರಿತು ಯಾವುದೇ ವಿವರಣೆಗಳಿಲ್ಲ.

ADVERTISEMENT

ಟೀಕೆಗೆ ಗುರಿಯಾಗಿದ್ದ ಮಂಡ್ಯ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡಿಸಿದ 2018, 2019ನೇ ಸಾಲಿನ ಬಜೆಟ್‌ಗಳನ್ನು ಬಿಜೆಪಿ ಮುಖಂಡರು ‘ಮಂಡ್ಯ ಬಜೆಟ್‌’ ಎಂದು ಜರಿದಿದ್ದರು. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕುಮಾರಸ್ವಾಮಿ ಜಾರಿಗೊಳಿಸಿದ್ದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿದ್ದವು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಗೆ ಬಿಜೆಪಿ ಸರ್ಕಾರ ಯಾವ ಕೊಡುಗೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

‘ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಎಚ್‌.ಡಿ.ಕುಮಾರಸ್ವಾಮಿಯವರು ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದರು. ಮೈಷುಗರ್‌, ಪಿಎಸ್‌ಎಸ್‌ಕೆ ಪುನಶ್ಚೇತನ ಕಾರ್ಯ ಆರಂಭಿಸಿದ್ದರು. ಹಿಂದಿನ ಸರ್ಕಾರದ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಬಾರದು. ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು’ ಎಂದು ಶಾಸಕ ಎಂ.ಶ್ರೀನಿವಾಸ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.