ADVERTISEMENT

ಆನ್‌ಲೈನ್‌ ಆಟಗಳಿಗೆ ತೆರಿಗೆ ಪ್ರಮಾಣ ಬದಲಿಲ್ಲ: ಜಿಎಸ್‌ಟಿ ಮಂಡಳಿ

ಅನುಷ್ಠಾನದ ಆರು ತಿಂಗಳ ನಂತರದಲ್ಲಿ ಪರಾಮರ್ಶೆ: ನಿರ್ಮಲಾ

ಪಿಟಿಐ
Published 2 ಆಗಸ್ಟ್ 2023, 16:18 IST
Last Updated 2 ಆಗಸ್ಟ್ 2023, 16:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿ, ಗೋವಾ ಮತ್ತು ಸಿಕ್ಕಿಂ ಹಣಕಾಸು ಸಚಿವರ ವಿರೋಧ ಇದ್ದರೂ, ಆನ್‌ಲೈನ್‌ ಆಟಗಳು ಹಾಗೂ ಕ್ಯಾಸಿನೊಗಳಲ್ಲಿ ಪೂರ್ಣ ಬೆಟ್ಟಿಂಗ್‌ ಮೊತ್ತದ ಮೇಲೆ ಆರಂಭಿಕ ಹಂತದಲ್ಲಿ ಶೇಕಡ 28ರ ದರದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಜಿಎಸ್‌ಟಿ ಮಂಡಳಿ ತೀರ್ಮಾನಿಸಿದೆ.

ಈ ಪ್ರಮಾಣದ ತೆರಿಗೆ ವಿಧಿಸಲು ಕೇಂದ್ರ ಜಿಎಸ್‌ಟಿ ಕಾನೂನಿನಲ್ಲಿ ಮಾಡಬೇಕಿರುವ ತಿದ್ದುಪಡಿಗಳನ್ನು ಕೇಂದ್ರವು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿಯೇ ತರಲಿದೆ. ಇದಾದ ನಂತರದಲ್ಲಿ ರಾಜ್ಯ ಸರ್ಕಾರಗಳು ಕೂಡ ಕಾನೂನಿಗೆ ಅಗತ್ಯ ತಿದ್ದುಪಡಿಗಳನ್ನು ತರಲಿವೆ. ಅಕ್ಟೋಬರ್‌ 1ರಿಂದ ಶೇ 28ರಷ್ಟು ತೆರಿಗೆ ಜಾರಿಗೆ ಬರಲಿದೆ.

‘ಆಟಗಾರ ₹1,000 ಮೊತ್ತದ ಬೆಟ್ ಮಾಡಿ, ಆಟದಲ್ಲಿ ₹300 ಗೆದ್ದ ಎಂದು ಭಾವಿಸಿ. ನಂತರ ಆತ ಗೆದ್ದ ಮೊತ್ತವನ್ನೂ ಸೇರಿಸಿ ₹1,300 ಬೆಟ್ ಮಾಡಿದರೆ, ಗೆಲುವಿನ ಕಾರಣದಿಂದಾಗಿ ಪಡೆದ ಮೊತ್ತಕ್ಕೆ ಜಿಎಸ್‌ಟಿ ವಿಧಿಸುವುದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಯ ನಂತರ ತಿಳಿಸಿದ್ದಾರೆ.

ADVERTISEMENT

ಆನ್‌ಲೈನ್‌ ಆಟಗಳು ಹಾಗೂ ಕ್ಯಾಸಿನೊಗಳಿಗೆ ನಿಗದಿ ಮಾಡಿರುವ ತೆರಿಗೆ ಪ್ರಮಾಣದ ಕುರಿತು, ನಿಯಮಗಳಲ್ಲಿ ಬದಲಾವಣೆಯ ಅಗತ್ಯವಿದೆಯೇ ಎಂಬ ಬಗ್ಗೆ ಆರು ತಿಂಗಳ ನಂತರ ಪರಾಮರ್ಶೆ ನಡೆಸಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.

ಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿಯು ಹಿಂದಿನ ತಿಂಗಳು ನಡೆದ ಸಭೆಯಲ್ಲಿ ತೀರ್ಮಾನಿಸಿತ್ತು. ಬುಧವಾರ ನಡೆದ ಸಭೆಯು, ಈ ತೀರ್ಮಾನವನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ಕಾನೂನು ಬದಲಾವಣೆಗಳ ಬಗ್ಗೆ ಚರ್ಚಿಸುವ ಉದ್ದೇಶ ಹೊಂದಿತ್ತು.

ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಪ್ರತಿನಿಧಿಗಳು ಈ ಪ್ರಮಾಣದ ತೆರಿಗೆ ವಿಧಿಸುವುದಕ್ಕೆ ಬೆಂಬಲ ಸೂಚಿಸಿದರು, ತೀರ್ಮಾನವನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಪ್ರಾತಿನಿಧಿಕ ಚಿತ್ರ

ನೋಂದಣಿ ಕಡ್ಡಾಯ

ರೆವಿನ್ಯು ಕಾರ್ಯದರ್ಶಿ ವಿದೇಶಗಳಿಂದ ಕಾರ್ಯ ನಿರ್ವಹಿಸುವ ಗೇಮಿಂಗ್ ವೇದಿಕೆಗಳು ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ರೆವಿನ್ಯು ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ಹೇಳಿದ್ದಾರೆ. ನೋಂದಣಿ ಮಾಡಿಸಿಕೊಳ್ಳದೆ ಇದ್ದಲ್ಲಿ ಆ ವೇದಿಕೆಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ನಿರ್ಬಂಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಆನ್‌ಲೈನ್‌ ಆಟ ಹಣವನ್ನು ಒಳಗೊಳ್ಳುವ ಆನ್‌ಲೈನ್‌ ಆಟ ಆನ್‌ಲೈನ್‌ ಆಟಗಳಲ್ಲಿ ಪಾವತಿಗೆ ಬಳಕೆಯಾಗುವ ವಾಸ್ತವೋಪಮ ಡಿಜಿಟಲ್ ಆಸ್ತಿಗಳನ್ನು (ವಿಡಿಎ) ಕಾನೂನಿನ ಅಡಿಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.