ADVERTISEMENT

ಎಜಿಆರ್‌: ಮೊಬೈಲ್‌ ಕಂಪನಿಗಳ ಬಾಕಿ ಮೊತ್ತ ₹ 1.30 ಲಕ್ಷ ಕೋಟಿ

ಲೋಕಸಭೆಗೆ ದೂರಸಂಪರ್ಕ ರಾಜ್ಯ ಸಚಿವ ಸಂಜಯ್ ಮಾಹಿತಿ

ಪಿಟಿಐ
Published 4 ಮಾರ್ಚ್ 2020, 20:42 IST
Last Updated 4 ಮಾರ್ಚ್ 2020, 20:42 IST

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿಯಲ್ಲಿ ದೂರಸಂಪರ್ಕ ಕಂಪನಿಗಳು ಇದುವರೆಗೆ ₹ 15,896.5 ಕೋಟಿ ಪಾವತಿಸಿವೆ. ಇನ್ನೂ ₹ 1,30,440.4 ಕೋಟಿ ಪಾವತಿಯಾಗಬೇಕಿದೆ ಎಂದು ದೂರಸಂಪರ್ಕ ರಾಜ್ಯ ಸಚಿವ ಸಂಜಯ್ ಧೋತ್ರೆ ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ದೂರಸಂಪರ್ಕ ವಲಯದ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಈ ವಲಯದ ಭವಿಷ್ಯದ ಹಿತದೃಷ್ಟಿಯಿಂದ ದೊಡ್ಡ ಯೋಜನೆ ಕೈಗೊಳ್ಳುವ ಆಲೋಚನೆ ಏನಾದರೂ ಸರ್ಕಾರಕ್ಕೆ ಇದೆಯೇ ಎಂದು ಸದಸ್ಯರು ಕೇಳಿದ ಪೂರಕ ಪ್ರಶ್ನೆಗೆ,‘ಸದ್ಯಕ್ಕೆ ಅಂತಹ ಯಾವುದೇ ಯೋಜನೆ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವೊಡಾಫೋನ್‌ ಐಡಿಯಾ ಕಂಪನಿಯನ್ನು ಮುಚ್ಚುವ ಬಗ್ಗೆ ವದಂತಿಗಳು ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆ ಬೆಳವಣಿಗೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಸರ್ಕಾರದ ಬಳಿ ಇಲ್ಲ. ಬಾಕಿ ಪಾವತಿಸದೇ ಇದ್ದರೆ,ಪರವಾನಗಿ ಒಪ್ಪಂದದ ಪ್ರಕಾರ ದೂರಸಂಪರ್ಕ ಸೇವಾ ಸಂಸ್ಥೆಗಳೂ ಒಳಗೊಂಡಂತೆ ಪರವಾನಗಿ ಪಡೆದಿರುವವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ.

ವಿಳಂಬ ಬೇಡ:ಎಜಿಆರ್‌ ಬಾಕಿ ಮೊತ್ತವನ್ನು ವಿಳಂಬ ಮಾಡದೇ ಪಾವತಿಸುವಂತೆ ದೂರಸಂಪರ್ಕ ಇಲಾಖೆಯು ಕಂಪನಿಗಳಿಗೆ ಸೂಚನೆ ನೀಡಿದೆ.

ಬಾಕಿ ಪಾವತಿಗೆ ಸಂಬಂಧಿಸಿದಂತೆ ಕಂಪನಿಗಳೇ ಖುದ್ದು ಲೆಕ್ಕಾಚಾರ ಹಾಕಿರುವ ಮಾಹಿತಿಯನ್ನೂ ಸಲ್ಲಿಸುವಂತೆ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.