ADVERTISEMENT

ಸರ್ಕಾರದ ನೆರವು ಬಯಸಿದ ವಾಹನ ಉದ್ದಿಮೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:30 IST
Last Updated 6 ಸೆಪ್ಟೆಂಬರ್ 2019, 19:30 IST
   

ನವದೆಹಲಿ (ಪಿಟಿಐ): ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ‘ಬಿಎಸ್‌–6’ಕ್ಕೆ ಸರಾಗವಾಗಿ ಬದಲಾಗುವುದಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ವಾಹನ ತಯಾರಿಕಾ ಉದ್ದಿಮೆಯು ಮನವಿ ಮಾಡಿಕೊಂಡಿದೆ.

ಮುಂದಿನ ವರ್ಷದ ಏಪ್ರಿಲ್‌ನಿಂದ ಈ ಹೊಸ ಮಾನದಂಡ ಜಾರಿಗೆ ಬರಲಿದೆ. ಹಳೆ ಮಾನದಂಡದ ವಾಹನಗಳ ತಯಾರಿಕೆ ಮತ್ತು ಮಾರಾಟವನ್ನು 2020ರ ಮಾರ್ಚ್‌ ಅಂತ್ಯಕ್ಕೆ ಹಠಾತ್ತಾಗಿ ಸ್ಥಗಿತಗೊಳಿಸುವ ಮತ್ತು ‘ಬಿಎಸ್‌–6’ ವಾಹನಗಳ ತಯಾರಿಕೆ ಆರಂಭಿಸುವುದು ಉದ್ದಿಮೆಯ ಪಾಲಿಗೆ ಅತಿದೊಡ್ಡ ಸವಾಲಾಗಿರಲಿದೆ ಎಂದು ಉದ್ದಿಮೆ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ನಡೆದ ವಾಹನ ಬಿಡಿಭಾಗ ತಯಾರಕರ ಸಂಘದ (ಎಸಿಎಂಎ) ವಾರ್ಷಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ADVERTISEMENT

‘ಕಠಿಣ ಸ್ವರೂಪದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಅನುಸರಿಸಲು ವಾಹನ ತಯಾರಕರು ಮತ್ತು ಬಿಡಿಭಾಗ ಪೂರೈಕೆದಾರರು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದಾರೆ. 2020ರ ಮಾರ್ಚ್‌ 31ಕ್ಕೆ ‘ಬಿಎಸ್‌–IV' ಮಾಲಿನ್ಯ ನಿಯಂತ್ರಣ ಮಾನದಂಡದ ವಾಹನಗಳ ತಯಾರಿಕೆ ಮತ್ತು ಮಾರಾಟ ಸ್ಥಗಿತಗೊಳ್ಳಲಿದೆ. ವಿಶ್ವದ ಯಾವುದೇ ಭಾಗದಲ್ಲಿ ಯಾವತ್ತೂ ಇಂತಹ ವಿದ್ಯಮಾನ ಘಟಿಸಿಲ್ಲ’ ಎಂದು ಭಾರತದ ವಾಹನ ತಯಾರಕರ ಸಂಘದ (ಎಸ್‌ಐಎಎಂ) ಅಧ್ಯಕ್ಷ ರಾಜನ್‌ ವಧೇರಾ ಅವರು ಹೇಳಿದ್ದಾರೆ.

‘ಮಾರ್ಚ್‌ ಅಂತ್ಯದ ವೇಳೆಗೆ ಮಾರಾಟದ ಅಂದಾಜು ಮಾಡುವುದು ಮತ್ತು ಡೀಲರ್ಸ್‌ಗಳ ಹತ್ತಿರ ‘ಬಿಎಸ್‌–IV' ವಾಹನಗಳು ಮಾರಾಟವಾಗದೆ ಉಳಿಯದಂತೆ ನೋಡಿಕೊಳ್ಳುವುದು ತುಂಬ ಕಠಿಣ ಕೆಲಸವಾಗಿದೆ. ಇದು ವಾಹನ ಖರೀದಿದಾರರಲ್ಲಿ ಗೊಂದಲ ಮೂಡಿಸಿದ್ದು, ಒಟ್ಟಾರೆ ವಾಹನ ತಯಾರಿಕಾ ಉದ್ದಿಮೆಯಲ್ಲಿ ಭಾರಿ ನಷ್ಟಕ್ಕೆ ಎಡೆಮಾಡಿಕೊಟ್ಟಿದೆ. ‘ಬಿಎಸ್‌–VI' ನಿಯಮ ಅಳವಡಿಸಿಕೊಳ್ಳಲು ವಾಹನ ತಯಾರಕರು (ಒಇಎಂ) ಮತ್ತು ಬಿಡಿಭಾಗ ಪೂರೈಕೆದಾರರು ಶ್ರಮಿಸುತ್ತಿದ್ದಾರೆ. ಸಾಕಷ್ಟು ಬಂಡವಾಳವನ್ನೂ ತೊಡಗಿಸಿದ್ದಾರೆ.

‘ಇದೊಂದು ತುಂಬ ಸಂಕೀರ್ಣಮಯ ಸಂಗತಿಯಾಗಿದ್ದು, ಇದಕ್ಕೆ ಸಾಧ್ಯವಾದಷ್ಟು ಬೇಗ ಕಾರ್ಯಸಾಧ್ಯವಾದ ಪರಿಹಾರ ಸೂಚಿಸಿ’ ಎಂದು ವಧೇರಾ ಅವರು, ಸಮಾರಂಭದಲ್ಲಿ ಉಪಸ್ಥಿತರಿದ್ದ ಹಣಕಾಸು ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಮತ್ತು ಭಾರಿ ಕೈಗಾರಿಕಾ ರಾಜ್ಯ ಸಚಿವ ಅರ್ಜುನ್‌ ರಾಂ ಮೇಘ್ವಾಲ್‌ ಅವರಿಗೆ ಮನವಿ ಮಾಡಿಕೊಂಡರು.

‘ಹಬ್ಬಗಳ ಸಂದರ್ಭದಲ್ಲಿ ವಾಹನಗಳ ಮಾರಾಟ ಶೇ 15 ರಿಂದ ಶೇ 20ರಷ್ಟು ಹೆಚ್ಚಳಗೊಳ್ಳಲಿದೆ. ಹಬ್ಬದ ದಿನಗಳು ಆರಂಭಗೊಳ್ಳುವ ಮುಂಚೆಯೇ ಕೇಂದ್ರ ಸರ್ಕಾರವು ಜಿಎಸ್‌ಟಿ ದರಗಳನ್ನು ಶೇ 28ರಿಂದ ಶೇ 18ಕ್ಕೆ ತಗ್ಗಿಸುವ ನಿರ್ಧಾರ ಪ್ರಕಟಿಸಬೇಕು ’ ಎಂದೂ ಅವರು ಒತ್ತಾಯಿಸಿದರು.

ಕೇಂದ್ರದ ನೆರವಿನ ಭರವಸೆ: ‘ಉದ್ದಿಮೆಯ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜಿಎಸ್‌ಟಿ ದರ ಕಡಿತದ ಬಗ್ಗೆ ಉದ್ದಿಮೆಯು ರಾಜ್ಯಗಳ ಹಣಕಾಸು ಸಚಿವರಿಗೂ ಮನವರಿಕೆ ಮಾಡಿಕೊಡಬೇಕು’ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.