ADVERTISEMENT

ಸಂಪತ್ತು ಸೃಷ್ಟಿಗೆ ಹೊಣೆಗಾರಿಕೆಯ ಹೂಡಿಕೆ

​ಕೇಶವ ಜಿ.ಝಿಂಗಾಡೆ
Published 23 ಜುಲೈ 2019, 19:30 IST
Last Updated 23 ಜುಲೈ 2019, 19:30 IST
   

ಖಾಸಗಿ ವಲಯದ ಮೂರನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಆ್ಯಕ್ಸಿಸ್‌ ಬ್ಯಾಂಕ್‌ನ ಅಂಗಸಂಸ್ಥೆಯಾಗಿರುವ ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌, ಹೂಡಿಕೆದಾರರ ಸಂಪತ್ತು ನಿರ್ವಹಣಾ ಕ್ಷೇತ್ರಕ್ಕೆ ತಡವಾಗಿ (2009ರಲ್ಲಿ) ಪ್ರವೇಶ ಮಾಡಿತ್ತು. ಇತರ ಸಂಸ್ಥೆಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿನ ಅನುಭವ ಕಡಿಮೆ ಎಂದರೂ, ಕಳೆದ 10 ವರ್ಷಗಳಲ್ಲಿ ಸಾಧನೆ ಉತ್ತಮ ಮಾಡಿದೆ. ಇದಕ್ಕೆ ಸಂಸ್ಥೆ ಅಳವಡಿಸಿಕೊಂಡಿರುವ ಸಂಪತ್ತು ನಿರ್ವಹಣೆಯ ವಿಶಿಷ್ಟ ವಿಧಾನವೇ ಕಾರಣ. ಹೊಣೆಗಾರಿಕೆಯ ಹಣ ನಿರ್ವಾಹಕ, ಜವಾಬ್ದಾರಿಯುತ ಸಲಹೆಗಾರ ಮತ್ತು ಹೊಣೆ ಅರಿತ ಹೂಡಿಕೆ ತತ್ವಗಳನ್ನಾಧರಿಸಿ ವಹಿವಾಟು ನಡೆಸುತ್ತ ಭಿನ್ನ ಹಾದಿಯಲ್ಲಿ ಸಾಗಿದೆ.

‘ಇತರ ಸಂಸ್ಥೆಗಳಿಂದ ಆದ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವು. ಹೀಗಾಗಿ ನಾವು ಮ್ಯೂಚುವಲ್‌ ಫಂಡ್‌ ಕ್ಷೇತ್ರದಲ್ಲಿ ಹಣ ಹೂಡಿಕೆ ನಿರ್ವಹಣೆಗೆ ಹೊಸ ವ್ಯಾಖ್ಯಾನ ನೀಡಲು ನಮ್ಮಿಂದ ಸಾಧ್ಯವಾಗಿದೆ’ ಎಂದು ಸಂಸ್ಥೆಯ ಸಿಇಒ ಚಂದ್ರೇಶ್‌ ಕುಮಾರ್‌ ನಿಗಮ್‌ ಹೇಳುತ್ತಾರೆ. ಬಂಡವಾಳ ಹೂಡಿಕೆ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಇವರಿಗೆ ಮೂರು ದಶಕಗಳ ಅಪಾರ ಅನುಭವ ಇದೆ.

‘ಜನರಲ್ಲಿ ಮನೆ ಮಾಡಿರುವ ಸಾಂಪ್ರದಾಯಿಕ ಹೂಡಿಕೆ ಮನಸ್ಥಿತಿಯನ್ನು ಬದಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ವಿಧಾನದಲ್ಲಿ ಹಣ ಹೂಡಿಕೆ ಮಾಡುವುದರಿಂದ ಕಡಿಮೆ ನಷ್ಟ ಸಾಧ್ಯತೆ ಇರುವುದರಿಂದ ಇದೊಂದು ಒಳ್ಳೆಯ ವಿಧಾನವಾಗಿದೆ. ದೀರ್ಘಾವಧಿ ದೃಷ್ಟಿಯಿಂದ ನೋಡಿದರೆ ಜನರ ಸಂಪತ್ತನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸುವುದು ಹೆಚ್ಚು ಲಾಭಕರವಾಗಿರುವುದರಲ್ಲಿ ಎರಡು ಮಾತಿಲ್ಲ.

ADVERTISEMENT

‘ನಮ್ಮೆಲ್ಲ ಉತ್ಪನ್ನಗಳು ಮ್ಯೂಚುವಲ್‌ ಫಂಡ್‌ ಉದ್ದಿಮೆಯ ಇತರ ಸಂಸ್ಥೆಗಳ ಹಣಕಾಸು ಉತ್ಪನ್ನಗಳಿಗಿಂತ ವಿಶಿಷ್ಟವಾಗಿವೆ. ಸಾಂಸ್ಥಿಕ ಹೂಡಿಕೆಯಲ್ಲಿ ನಾವು ವಿಶ್ವಾಸ ಇರಿಸಿದ್ದೇವೆ. ನಾಲ್ಕೈದು ವರ್ಷಗಳಲ್ಲಿ ನಾವು ನಮ್ಮ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದ್ದೇವೆ. ಮ್ಯೂಚುವಲ್‌ ಫಂಡ್ಸ್‌ಗಳ ಹೂಡಿಕೆ ಬಗ್ಗೆ ಕೆಲ ‘ಫಂಡ್‌ ಮ್ಯಾನೇಜರ್‌’ಗಳು ನೀಡುವ ಸಲಹೆಯನ್ನು ಹೂಡಿಕೆದಾರರು ಕಣ್ಣು ಮುಚ್ಚಿ ಪಾಲಿಸುವುದು ಒಳ್ಳೆಯದಲ್ಲ.

‘ಹೊಸ ಉತ್ಪನ್ನಗಳನ್ನು ಆರಂಭಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅಷ್ಟು ಸುಲಭವಾಗಿ ಅವಕಾಶ ನೀಡುವುದಿಲ್ಲ. ಸಂಸ್ಥೆಯು ತನ್ನ ಬಳಿ ಇರುವ ಸಂಪತ್ತಿನ ನಿರ್ವಹಣೆಯ ಶೇ 35ರಷ್ಟನ್ನು ಜಾಗತಿಕ ಕಂಪನಿಗಳಲ್ಲಿ ಮತ್ತು ಉಳಿದ ಶೇ 65ರಷ್ಟನ್ನು ದೇಶಿ ನಿಧಿಗಳಲ್ಲಿ ಹೂಡಿಕೆ ಮಾಡುತ್ತಿದೆ. ಒಂದೇ ದಿನದಲ್ಲಿ ಪರಿ‍ಪಕ್ವಗೊಳ್ಳುವ (ಓವರ್‌ನೈಟ್‌ ಫಂಡ್ಸ್‌) ಯೋಜನೆಯನ್ನೂ ಸಂಸ್ಥೆಯು ನಿರ್ವಹಿಸುತ್ತಿದೆ.

‘ದೇಶದ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಆ್ಯಕ್ಸಿಸ್‌ ಬ್ಯಾಂಕ್‌ನ ಗ್ರಾಹಕರ ಜತೆಗಿನ ಉತ್ತಮ ಬಾಂಧವ್ಯದ ಕಾರಣಕ್ಕೆ ವಹಿವಾಟು ಪ್ರಗತಿ ಸಾಧಿಸಿದೆ. ಅವರಲ್ಲಿ ಅನೇಕರು ಮ್ಯೂಚುವಲ್‌ ಫಂಡ್‌ ವಹಿವಾಟಿನಲ್ಲಿ ಹಣ ತೊಡಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಗ್ರಾಹಕರ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಬ್ಯಾಂಕ್ ಗ್ರಾಹಕರ ಆಚೆಗೂ ವಹಿವಾಟು ವಿಸ್ತರಣೆ ಆಗುತ್ತಿದೆ. ಈಗ ಸಂಸ್ಥೆಯ ಶೇ 85ರಷ್ಟು ವಹಿವಾಟು ಬ್ಯಾಂಕ್‌ ವ್ಯಾಪ್ತಿಯಿಂದ ಹೊರಗೆ ನಡೆಯುತ್ತಿದೆ.

‘ನಾವು ತಡವಾಗಿ ಮಾರುಕಟ್ಟೆ ಪ್ರವೇಶಿಸಿರುವುದು ಹೊಸ ಪಾಠ ಕಲಿಯಲು ನೆರವಾಗಿತ್ತು. ಡೆಟ್‌, ಹೈಬ್ರಿಡ್‌, ಲಿಕ್ವಿಡ್‌ ಫಂಡ್‌ಗಳನ್ನು ಪರಿಚಯಿಸಿದ್ದೇವೆ. ಮ್ಯೂಚುವಲ್‌ ಫಂಡ್‌ ಹೂಡಿಕೆಯಿಂದ ಗರಿಷ್ಠ ಲಾಭ ಒದಗಿಸುವ ಭರವಸೆಯನ್ನೇನೂ ನಾವು ನೀಡುವುದಿಲ್ಲ.

‘28 ವರ್ಷಗಳ ನನ್ನ ಅನುಭವ ಆಧರಿಸಿ ಹೇಳುವುದಾದರೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಎದುರಿಸುತ್ತಿರುವ ನಗದು ಬಿಕ್ಕಟ್ಟು ಸಮಸ್ಯೆಯು ಕೆಲ ಮ್ಯೂಚುವಲ್‌ ಫಂಡ್‌ಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌, ನಗದು ಬಿಕ್ಕಟ್ಟು ಎದುರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಗಳ ವಹಿವಾಟಿನಲ್ಲಿ ಹೂಡಿಕೆ ಮಾಡಿಲ್ಲ. ಹೀಗಾಗಿ ನಮ್ಮ ನಿರ್ವಹಣೆಯಲ್ಲಿ ಇರುವ ಸಂಪತ್ತು ಸುರಕ್ಷಿತವಾಗಿದೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಬಳಕೆ ತುಂಬ ಸರಳವಾಗಿದೆ. ಸದ್ಯಕ್ಕೆ ಸಂಸ್ಥೆಯ ಶೇ 70ರಷ್ಟು ವಹಿವಾಟು ಆನ್‌ಲೈನ್‌ನಲ್ಲಿಯೇ ನಡೆಯುತ್ತಿದೆ. ಮೂರು ವರ್ಷಗಳಲ್ಲಿ ಇದನ್ನು ಶೇ 90ರಷ್ಟಕ್ಕೆ ಹೆಚ್ಚಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

‘ಹೂಡಿಕೆ ಮತ್ತು ಅದರಿಂದ ನಿರೀಕ್ಷಿಸುವ ಲಾಭವು ಸುಸ್ಥಿರವಾಗಿರಬೇಕು. ಹೂಡಿಕೆಯು 10 ವರ್ಷಗಳವರೆಗೆ ನಿರಂತರವಾಗಿ ಇರಬೇಕು ಎನ್ನುವುದು ಸಂಸ್ಥೆಯ ಉದ್ದೇಶವಾಗಿದೆ. ಅಲ್ಪಾವಧಿಯಲ್ಲಿ ಹೂಡಿಕೆಗೆ ಗರಿಷ್ಠ ಲಾಭದ ಆಮಿಷ ಒಡ್ಡುವುದಾಗಲಿ ಮತ್ತು ನಿರೀಕ್ಷಿಸುವುದಾಗಲಿ ಒಳ್ಳೆಯದಲ್ಲ. ಅಲ್ಪಾವಧಿಯಲ್ಲಿ ಗರಿಷ್ಠ ಲಾಭ ಮಾಡಿಕೊಳ್ಳಲು ಮುಂದಾಗುವುದು ವಹಿವಾಟಿನ ದೃಷ್ಟಿಯಿಂದ ಸರಿಯಲ್ಲ.

‘ನಮ್ಮ ಸಂಸ್ಥೆಯು ಕಡಿಮೆ ನಷ್ಟ ಸಾಧ್ಯತೆ ಇರುವ ಸರಳ ಉತ್ಪನ್ನಗಳನ್ನು ಪರಿಚಯಿಸಿದೆ. ತನ್ನ ಹೂಡಿಕೆಯಿಂದ ಶೇ 12 ರಿಂದ ಶೇ 14ರಷ್ಟು ಪ್ರತಿಫಲವನ್ನು ಸಾಮಾನ್ಯ ಹೂಡಿಕೆದಾರ ನಿರೀಕ್ಷಿಸುತ್ತಾನೆ. ಅದನ್ನು ಅಲ್ಪಾವಧಿಯಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಸಹನೆಯಿಂದ ದೀರ್ಘಾವಧಿವರೆಗೆ ಕಾದು ನೋಡಿದರೆ ಅಂತಹ ಪ್ರತಿಫಲ ಖಂಡಿತವಾಗಿಯೂ ದೊರೆಯುತ್ತದೆ. ಮ್ಯೂಚುವಲ್‌ ಫಂಡ್‌ ಉದ್ದಿಮೆಯ ವಹಿವಾಟಿನ ಬೆಳವಣಿಗೆಯು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಇದು ಸದ್ಯಕ್ಕೆ ಉದ್ದಿಮೆ ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ. ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ನಿಯಮಿತವಾಗಿ ದೀರ್ಘಾವಧಿವರೆಗೆ ಹೂಡಿಕೆ ಮಾಡಿದರೆ ಖಂಡಿತವಾಗಿಯೂ ಉತ್ತಮ ಲಾಭ ಸಿಗಲಿದೆ’ ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

ಕೆಲ ಸಾಮಾನ್ಯ ತಪ್ಪುಗಳು

ಹೂಡಿಕೆದಾರರು ಮಾಡುವ ಕೆಲ ಸಾಮಾನ್ಯ ತಪ್ಪುಗಳಿಂದಾಗಿ ಅವರು ನಿರೀಕ್ಷಿಸಿದ ಲಾಭ ದೊರೆಯಲಾರದು.

1. ಮಾರುಕಟ್ಟೆಯಲ್ಲಿನ ಏರಿಳಿತಗಳಿಗೆ ಅತಿಯಾಗಿ ಸ್ಪಂದಿಸುವುದು

2. ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಗಳಿಸಲು ಆದ್ಯತೆ ನೀಡುವುದು

3. ಹಣ ಹೂಡಿಕೆ ನಿರ್ಧಾರವನ್ನು ವಿಳಂಬ ಮಾಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.