ADVERTISEMENT

ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕ್‌: ₹24 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:20 IST
Last Updated 13 ಸೆಪ್ಟೆಂಬರ್ 2019, 20:20 IST
ಆವಲಹಳ್ಳಿ ಚಂದ್ರಪ್ಪ ಆರ್‌.
ಆವಲಹಳ್ಳಿ ಚಂದ್ರಪ್ಪ ಆರ್‌.   

ಬೆಂಗಳೂರು: ಪಟ್ಟಣ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಯಶಸ್ವಿಯಾಗಿ 113ನೆ ವರ್ಷದಲ್ಲಿ ಮುನ್ನಡೆಯುತ್ತಿರುವ ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕ್‌, 2018–19ನೆ ಹಣಕಾಸು ವರ್ಷದಲ್ಲಿ ₹ 23.89 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

‘ಎಲ್ಲ ಮಾನದಂಡಗಳ ಪ್ರಕಾರ, ಸಹಕಾರಿ ಬ್ಯಾಂಕ್‌ನ ಆರ್ಥಿಕ ಸ್ಥಿತಿಗತಿ ಸದೃಢವಾಗಿದೆ. ಗ್ರಾಹಕ ಕೇಂದ್ರಿತ ಉತ್ತಮ ಸೇವೆ ಒದಗಿಸುತ್ತಿರುವುದರಿಂದ ಬ್ಯಾಂಕ್‌, ಸದಸ್ಯರ ಅಭಿಮಾನಕ್ಕೆ ಪಾತ್ರವಾಗಿದೆ. ಬ್ಯಾಂಕ್‌ ನಿರಂತರವಾಗಿ ಪ್ರಗತಿಪಥದಲ್ಲಿ ನಡೆಯಲು ಸದಸ್ಯರ ಸಹಕಾರ ಮತ್ತು ಸಿಬ್ಬಂದಿಯ ಪರಿಶ್ರಮ ಮುಖ್ಯವಾಗಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಆವಲಹಳ್ಳಿ ಚಂದ್ರಪ್ಪ ಆರ್‌. ಅವರು ಹೇಳಿದ್ದಾರೆ.

74 ಸಾವಿರಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಬ್ಯಾಂಕ್‌, ₹ 2,049 ಕೋಟಿ ಮೊತ್ತದ ಠೇವಣಿ ಹೊಂದಿದೆ. ₹ 1,336 ಕೋಟಿ ಮೊತ್ತದ ಸಾಲ ಮಂಜೂರು ಮಾಡಿದೆ. ಸಾಲ ಮತ್ತು ಠೇವಣಿ ಅನುಪಾತವು (ಸಿ:ಡಿ) ಶೇ 70ರಷ್ಟಿದೆ. ಇತರ ಸಹಕಾರಿ ಬ್ಯಾಂಕ್‌ಗಳಲ್ಲಿ ಇದು ಶೇ 50ರಷ್ಟು ಇದೆ. ಗರಿಷ್ಠ ಪ್ರಮಾಣದ ಸಾಲ ಮಂಜೂರಾತಿ ಮತ್ತು ಕನಿಷ್ಠ ಪ್ರಮಾಣದ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಬ್ಯಾಂಕ್‌ನ ವಿಶೇಷತೆಯಾಗಿದೆ.

ADVERTISEMENT

ಸಾಲ ಮಂಜೂರಾತಿಯು ಗರಿಷ್ಠ ಪ್ರಮಾಣದಲ್ಲಿ ಇದ್ದರೂ, ಒಟ್ಟು ಮತ್ತು ನಿವ್ವಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದಿದೆ. ಶೇ 15ರಷ್ಟು ಲಾಭಾಂಶ ನೀಡುತ್ತ ಬರಲಾಗಿದೆ. ಸಹಕಾರಿ ಇಲಾಖೆಯ ವಾರ್ಷಿಕ ಲೆಕ್ಕಪತ್ರ ತಪಾಣೆಯಲ್ಲಿ ಮೊದಲಿನಿಂದಲೂ ‘ಎ’ ವರ್ಗೀಕರಣ ಪಡೆಯುತ್ತ ಬಂದಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ಆರ್‌ಬಿಐನ ಲೆಕ್ಕಪತ್ರ ತಪಾಸಣೆಯಲ್ಲಿಯೂ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ.

ವಿದ್ಯಾರ್ಥಿಗಳ ಸನ್ಮಾನ: ಇದೇ 15ರಂದು ನಡೆಯಲಿರುವ ಸರ್ವ ಸದಸ್ಯರ ಸಭೆಯ ಮುನ್ನಾದಿನವಾದ ಶನಿವಾರ (ಸೆ. 14) ಬ್ಯಾಂಕ್‌ನ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಗುತ್ತಿದೆ. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ₹ 1,000 ನಗದು ಬಹುಮಾನ, ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಗುವುದು. ಪೋಷಕರೂ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.