ADVERTISEMENT

ಎನ್ಎಸ್‌ಇ ವಂಚನೆ ಪ್ರಕರಣ: ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ಪಿಟಿಐ
Published 7 ಮಾರ್ಚ್ 2022, 2:26 IST
Last Updated 7 ಮಾರ್ಚ್ 2022, 2:26 IST
ಚಿತ್ರಾ ರಾಮಕೃಷ್ಣ: ಐಎಎನ್‌ಎಸ್ ಚಿತ್ರ
ಚಿತ್ರಾ ರಾಮಕೃಷ್ಣ: ಐಎಎನ್‌ಎಸ್ ಚಿತ್ರ   

ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ)ಯ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ.

ಹಿಮಾಲಯದ ನಿಗೂಢ ಯೋಗಿಯೊಬ್ಬರ ಆದೇಶ ಪಾಲಿಸುತ್ತಿದ್ದ ಚಿತ್ರಾ ಮತ್ತು ಎನ್‌ಎಸ್‌ಇಯ ಇತರ ಅಧಿಕಾರಿಗಳು ಸೂಕ್ಷ್ಮ ಮಾಹಿತಿಗಳನ್ನು ಕಂಪನಿಯೊಂದಕ್ಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ನವದೆಹಲಿಯಲ್ಲಿ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಅವರನ್ನು ಸಿಬಿಐ ಕೆಂದ್ರ ಕಚೇರಿಯ ಲಾಕಪ್‌ನಲ್ಲಿ ಇರಿಸಲಾಗಿದೆ.

ADVERTISEMENT

ಚಿತ್ರಾ ಅವರನ್ನು ಮೂರು ದಿನಗಳಿಂದ ವಿಚಾರಣೆ ನಡೆಸಿದ್ದ ಸಿಬಿಐ, ಅವರ ಮನೆಯಲ್ಲಿ ಶೋಧ ನಡೆಸಿತ್ತು. ಅಧಿಕಾರಿಗಳ ಪ್ರಶ್ನೆಗೆ ಚಿತ್ರಾ ಸಮರ್ಪಕ ಉತ್ತರ ನೀಡದಿದ್ದ ಕಾರಣ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಹಿರಿಯ ಮನಶ್ಶಾಸ್ತ್ರಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿಗಳನ್ನೂ ಬಳಸಿಕೊಂಡು ಸಿಬಿಐ, ಚಿತ್ರಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಅವರು(ಚಿತ್ರಾ) ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಮನಶ್ಶಾಸ್ತ್ರಜ್ಞರು ಬಂದಿದ್ದರಿಂದ ಬಂಧಿಸುವುದನ್ನು ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ, ಸಿಬಿಐನ ವಿಶೇಷ ನ್ಯಾಯಾಲಯವು ಚಿತ್ರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನ ವಜಾ ಮಾಡಿತ್ತು.

ಹಿಮಾಲಯದ ನಿಗೂಢ ಯೋಗಿಯೊಬ್ಬರ ಸಲಹೆ ಮೇರೆಗೆ ಚಿತ್ರಾ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕ ಬಳಿಕ, ಫೆಬ್ರುವರಿ 25ರಂದು ಎನ್‌ಎಸ್‌ಇಯ ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿತ್ತು.

ಏನಿದು ಪ್ರಕರಣ?: ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್‌ ಪ್ರೈ.ಲಿ. ಕಂಪನಿಯ ಮಾಲೀಕ ಸಂಜಯ್ ಗುಪ್ತಾ ಎನ್‌ಎಸ್‌ಇಯ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಎನ್‌ಎಸ್‌ಇ ಸರ್ವರ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇದೆ. 2010ರಿಂದ 2012ರ ನಡುವೆ ಈ ಖಾಸಗಿ ಕಂಪನಿಗೆ ಷೇರುಪೇಟೆಯ ಸರ್ವರ್‌ಗೆ ಮೊದಲಿಗನಾಗಿ ಲಾಗಿನ್ ಆಗಲು ಎನ್‌ಎಸ್‌ಇಯ ಕೆಲವು ಅಧಿಕಾರಿಗಳು ಅಕ್ರಮವಾಗಿ ಅನುಕೂಲ ಮಾಡಿಕೊಡುತ್ತಿದ್ದರು. ಇದರಿಂದಾಗಿ ಈ ಕಂಪನಿಗೆ ಬೇರೆ ಯಾವುದೇ ಬ್ರೋಕರ್‌ಗಿಂತ ಮೊದಲು ಕೆಲವು ದತ್ತಾಂಶಗಳು ಸಿಗುತ್ತಿದ್ದವು ಎಂದು ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್ಐಆರ್‌)ಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.