ಬೆಂಗಳೂರು: ‘ಕೈಗಾರಿಕೆಗಳು ಆರ್ಥಿಕ ಬೆಳವಣಿಗೆಯ ಜೊತೆಗೆ ಪರಿಸರದ ಸುಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ. ಮಾಲಿನ್ಯ, ಸಂಪನ್ಮೂಲಗಳ ಅತಿಯಾದ ಬಳಕೆ ಹಾಗೂ ತ್ಯಾಜ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದಲ್ಲಿ ಬುಧವಾರ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಕರ್ನಾಟಕ ಘಟಕದಿಂದ ಹಮ್ಮಿಕೊಂಡಿದ್ದ ಎರಡನೇ ಆವೃತ್ತಿಯ ಇಎಸ್‌ಜಿ (ಪರಿಸರ, ಸಾಮಾಜಿಕ ಮತ್ತು ಆಡಳಿತ) ಶೃಂಗ ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಜ್ಯ ನಿರ್ವಹಣೆ, ವಾಯು ಗುಣಮಟ್ಟ ಸುಧಾರಣೆ, ಕೆರೆಗಳ ಪುನರುಜ್ಜೀವನ ಹಾಗೂ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಹೊಸ ನೀತಿಗಳನ್ನು ರೂಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
ಕೈಗಾರಿಕಾ ಅಭಿವೃದ್ಧಿಯ ವೇಳೆ ಪರಿಸರದ ಸುಸ್ಥಿರತೆ ಕಾಯ್ದುಕೊಳ್ಳಬೇಕು. ಪ್ರತಿಯೊಂದು ವಲಯವು ಹಸಿರು ತಂತ್ರಜ್ಞಾನ ಹಾಗೂ ಸುಸ್ಥಿರ ಬಳಕೆಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯು ಸದೃಢವಾಗಿ ಬೆಳೆಯುತ್ತಿದೆ. ದೇಶದಲ್ಲಿ ಸಾಂಪ್ರದಾಯಿಕ ಮಾದರಿ ಹಾಗೂ ಅತ್ಯಾಧುನಿಕ ಸೌಲಭ್ಯಗಳು ಇವೆ. ಇವುಗಳ ಬಳಕೆಯ ಮೂಲಕ ಸುಸ್ಥಿರತೆ ಸಾಧಿಸಬೇಕಿದೆ ಎಂದು ಹೇಳಿದರು.
ಸಿಐಐ ಕರ್ನಾಟಕದ ಅಧ್ಯಕ್ಷ ಎನ್. ವೇಣು ಮಾತನಾಡಿ, ‘ಪ್ರತಿಯೊಂದು ಕಂಪನಿಯು ಪರಿಸರ, ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಅರಿವು ಹೊಂದಬೇಕು. ದೀರ್ಘಕಾಲದವರೆಗೆ ಪರಿಸರದ ಸುಸ್ಥಿರತೆ ಕಾಯ್ದುಕೊಳ್ಳಲು ಒತ್ತು ನೀಡಬೇಕು’ ಎಂದು ಹೇಳಿದರು.
ಸಿಐಐ ದಕ್ಷಿಣ ವಲಯದ ಮಾಜಿ ಅಧ್ಯಕ್ಷ ಬಿ. ಸಂತಾನಂ ಮಾತನಾಡಿ, ‘ನಮ್ಮ ಚೆನ್ನೈ ಕಾರ್ಖಾನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ. 15 ಕೋಟಿ ಲೀಟರ್‌ನಷ್ಟು ನೀರು ಸಂಗ್ರಹಿಸಲಾಗುತ್ತಿದೆ. ಕುಡಿಯಲು ಇದೇ ನೀರನ್ನು ಬಳಸಲಾಗುತ್ತಿದೆ’ ಎಂದರು.
ಕಾರ್ಖಾನೆಯಲ್ಲಿ ₹4,500 ಕೋಟಿ ಹೂಡಿಕೆ ಮಾಡಿದ್ದು, 3 ಸಾವಿರ ಉದ್ಯೋಗಿಗಳು ಇದ್ದಾರೆ. ಪ್ರತಿದಿನ ಒಂದು ಸಾವಿರ ಕಿಲೊ ಲೀಟರ್ ನೀರು ಬಳಸಲಾಗುತ್ತಿದೆ. ಇಂತಹ ಮಾದರಿಯನ್ನು ಕಂಪನಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿಐಐ ಉಪ ಕಾರ್ಯ ನಿರ್ವಾಹಕ ನಿರ್ದೇಶಕ ಎನ್. ಮುತ್ತುಸೆಜಿಯನ್, ನಿರ್ದೇಶಕಿ ರಾಧಿಕಾ ಧಲ್, ಕೆನ್ನಮೆಟಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಜಯ ಕೃಷ್ಣನ್ ವೆಂಕಟೇಶನ್, ಸಂಯೋಜಕ ಸೋಹಂಜೀತ್ ರಾಂಧವಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.