ADVERTISEMENT

ಆಗಸ್ಟ್‌ನಲ್ಲಿ ರಫ್ತು ಶೇಕಡ 1.62ರಷ್ಟು ಅಲ್ಪ ಏರಿಕೆ

ಪಿಟಿಐ
Published 14 ಸೆಪ್ಟೆಂಬರ್ 2022, 14:10 IST
Last Updated 14 ಸೆಪ್ಟೆಂಬರ್ 2022, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ರಫ್ತು ವಹಿವಾಟು ಆಗಸ್ಟ್‌ನಲ್ಲಿ ಶೇಕಡ 1.62ರಷ್ಟು ಅಲ್ಪ ಏರಿಕೆ ಕಂಡಿದ್ದು, ₹ 2.69 ಲಕ್ಷ ಕೋಟಿಗೆ ತಲುಪಿದೆ.

ಕಚ್ಚಾ ತೈಲ ಆಮದು ಹೆಚ್ಚಾಗಿರುವುದರಿಂದ ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ವ್ಯಾಪಾರ ಕೊರತೆ ಅಂತರವು ಎರಡು ಪಟ್ಟು ಏರಿಕೆ ಕಂಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಲ್ಲಿ ಈ ಮಾಹಿತಿ ಇದೆ.

ಸಚಿವಾಲಯವು ಸೆಪ್ಟೆಂಬರ್‌ 3ರಂದು ಬಿಡುಗಡೆ ಮಾಡಿದ್ದ ಪ್ರಾಥಮಿಕ ಮಾಹಿತಿಯು, ಆಗಸ್ಟ್‌ನಲ್ಲಿ ರಫ್ತು ಶೇ 1.15ರಷ್ಟು ಇಳಿಕೆ ಕಂಡಿದೆ ಎಂದು ಹೇಳಿತ್ತು.

ADVERTISEMENT

2021ರ ಆಗಸ್ಟ್‌ನಲ್ಲಿ ವ್ಯಾಪಾರ ಕೊರತೆಯು ₹ 92,977 ಕೋಟಿ ಇತ್ತು. ಇದು ಈ ವರ್ಷದ ಆಗಸ್ಟ್‌ನಲ್ಲಿ ₹ 2.22 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಆಗಸ್ಟ್‌ನಲ್ಲಿ ಆಮದು ವಹಿವಾಟು ಶೇ 37ರಷ್ಟು ಹೆಚ್ಚಾಗಿ ₹ 4.91 ಲಕ್ಷ ಕೋಟಿಗೆ ಏರಿಕೆ ಆಗಿದೆ. ಕಚ್ಚಾ ತೈಲ ಆಮದು ಆಗಸ್ಟ್‌ನಲ್ಲಿ ಶೇ 87ರಷ್ಟು ಏರಿಕೆ ಕಂಡಿದೆ. ಆದರೆ, ಚಿನ್ನ ಆಮದು ಶೇ 47ರಷ್ಟು ಇಳಿಕೆ ಆಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ 23ರಷ್ಟು, ರಾಸಾಯನಿಕ ಶೇ 13 ಮತ್ತು ಔಷಧ ಉತ್ಪನ್ನಗಳ ರಫ್ತು ಶೇ 7ರಷ್ಟು ಹೆಚ್ಚಾಗಿದೆ.

2022–23ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ರಫ್ತು ವಹಿವಾಟು ಶೇ 17.68ರಷ್ಟು ಬೆಳವಣಿಗೆ ಕಂಡಿದ್ದರೆ ಆಮದು ವಹಿವಾಟು ಶೇ 45.74ರಷ್ಟು ಏರಿಕೆ ಆಗಿದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆ ಅಂತರವು ₹ 4.27 ಲಕ್ಷ ಕೋಟಿಯಿಂದ ₹ 9.88 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.