ADVERTISEMENT

ಪ್ರಶ್ನೋತ್ತರ: ಸಹಕಾರಿ ಬ್ಯಾಂಕ್‌ಗಳಲ್ಲಿ ಷೇರುಹಣ ಇರಿಸುವುದರಲ್ಲಿ ಪ್ರಯೋಜನ ಏನು?

ಯು.ಪಿ.ಪುರಾಣಿಕ್
Published 18 ಆಗಸ್ಟ್ 2020, 21:23 IST
Last Updated 18 ಆಗಸ್ಟ್ 2020, 21:23 IST
ಪುರಾಣಿಕ್
ಪುರಾಣಿಕ್   

ಆರ್‌.ಕೆ. ಪಂಡರಿನಾಥ, ರೆಡ್ಡಿಹಳ್ಳಿ
ಪ್ರಶ್ನೆ: ನಾನು ಕೃಷಿ ಕುಟುಂಬದಿಂದ ಬಂದವನು. ನಮಗೆ ಐದು ಎಕರೆ ಜಮೀನು ಇದೆ. ಇಬ್ಬರು (ಒಂದು ಗಂಡು, ಒಂದು ಹೆಣ್ಣು) ಮಕ್ಕಳಿದ್ದಾರೆ. ನಮ್ಮದು ನಾಲ್ಕು ಜನರ ಸಂಸಾರ. ಎಲ್ಲಾ ಖರ್ಚು ಕಳೆದು ₹ 2 ಲಕ್ಷ ಉಳಿಸಬಹುದು. ನಾವು ಆರ್‌.ಡಿ. ಅಥವಾ ಇನ್ನಿತರ ಉಳಿತಾಯ ಹೇಗೆ ಮಾಡಬಹುದು? ಕೃಷಿಕರಿಗಾಗಿಯೇ ಉಳಿತಾಯ ಯೋಜನೆ ಇದ್ದರೆ ತಿಳಿಸಿ.

ಉತ್ತರ: ಪ್ರತಿ ತಿಂಗಳೂ ಸಂಪಾದಿಸುವ ಜನರಿಗೆ ಆರ್‌.ಡಿ. ಉಪಯೋಕ್ಕೆ ಬರಲಿದೆ. ವಾರ್ಷಿಕವಾಗಿ ಉತ್ಪನ್ನ ಪಡೆಯುವ ನಿಮ್ಮಂಥವರಿಗೆ ಇದು ಉಪಯೋಗವಾಗಲಾರದು. ಒಂದು ವೇಳೆ ಹೂವು, ಹಣ್ಣು, ತರಕಾರಿ ಬೆಳೆಯುತ್ತಿದ್ದರೆ, ಆರ್‌.ಡಿ ಖಾತೆಯಿಂದ ಅನುಕೂಲ ಆಗಲಿದೆ. ನೀವು ಅಲ್ಪಾವಧಿ ಬೆಳೆ ಬೆಳೆಯುವುದಾದರೆ, ಅದರಿಂದ ಬರುವ ಹಣವನ್ನು ಆಗಾಗ, ಸಾಧ್ಯವಾದರೆ ವಾರದಲ್ಲಿ ಒಂದೆರಡು ಬಾರಿ ಉಳಿತಾಯ ಖಾತೆಗೆ ಜಮಾ ಮಾಡುತ್ತ ಬನ್ನಿ. ಹೀಗೆ ಕೂಡಿಟ್ಟ ಹಣ ತಿಂಗಳಾಂತ್ಯಕ್ಕೆ ದೊಡ್ಡ ಮೊತ್ತವಾಗುತ್ತದೆ. ವಾರದ ಖರ್ಚು ಕಳೆದು ಸರಾಸರಿ ಎಷ್ಟು ಉಳಿಸಬಹುದು ಎನ್ನುವುದನ್ನು ನಿರ್ಧರಿಸಿ, ಅಷ್ಟೂ ಮೊತ್ತಕ್ಕೆ ಆರ್‌.ಡಿ. ಮಾಡಿ.

ಉದಾಹರಣೆಗೆ ವಾರಾಂತ್ಯದಲ್ಲಿ ₹ 500 ಉಳಿಸಲು ಸಾಧ್ಯವಾದರೆ ತಿಂಗಳಾಂತ್ಯಕ್ಕೆ ₹ 2 ಸಾವಿರದ ಆರ್‌.ಡಿ. ಮಾಡಬಹುದು. ಹೀಗೆ ಆರ್‌.ಡಿ. ಮಾಡುವಾಗ ಐದು ವರ್ಷಗಳ ಅವಧಿ ಇರಲಿ. ವಾರ್ಷಿಕ ಬೆಳೆ ಬೆಳೆಯುವುದಾದಲ್ಲಿ ಬರುವ ಒಟ್ಟು ಆದಾಯದಲ್ಲಿ ಮುಂದಿನ ಖರ್ಚು ಕಳೆದು ಉಳಿದ ಮೊತ್ತವನ್ನು ಒಮ್ಮೆಗೇ ಬಡ್ಡಿ ಬರುವ ಅವಧಿ ಠೇವಣಿಗಳಲ್ಲಿ ಇರಿಸಿ. ಉದಾಹರಣೆಗೆ, ವಾರ್ಷಿಕ ಆದಾಯ ₹ 4 ಲಕ್ಷವಿದ್ದು, ಖರ್ಚು ಕಳೆದು ₹ 2 ಲಕ್ಷ ಉಳಿಯುತ್ತದೆ ಎಂದಾದಲ್ಲಿ, ಆ ಮೊತ್ತವನ್ನು ಒಮ್ಮೆಗೇ ಬಡ್ಡಿ ಬರುವ 5 ವರ್ಷಗಳ ಅವಧಿ ಠೇವಣಿ ಮಾಡಿ. ಕೃಷಿಕರಿಗೆಂದು ಪ್ರತ್ಯೇಕ ಉಳಿತಾಯ ಯೋಜನೆ ಇಲ್ಲ.

ADVERTISEMENT

-ರಾಘವೇಂದ್ರ ರಾಜು, ಬೆಂಗಳೂರು

ಪ್ರಶ್ನೆ: 2020ರ ಮಾರ್ಚ್ 31ಕ್ಕೆ ಅಂತ್ಯವಾದ ಹಣಕಾಸು ವರ್ಷದ ಹಣಕಾಸು ವ್ಯವಹಾರಗಳ ವಿಚಾರದಲ್ಲಿ ಸದಸ್ಯರಿಗೆ ಬ್ಯಾಂಕುಗಳ ಲಾಭದಲ್ಲಿ ಡಿವಿಡೆಂಡ್‌ ಕೊಡಲು ಬರುವುದಿಲ್ಲ ಎಂಬುದಾಗಿ ಕೆಲವುಸಹಕಾರಿ ಬ್ಯಾಂಕ್‌ಗಳು ಹೇಳುತ್ತಿವೆ. ಸಾವಿರಾರು ಸದಸ್ಯರು ಷೇರುಹಣವನ್ನು ಈ ಬ್ಯಾಂಕ್‌ಗಳಲ್ಲಿ ಇರಿಸಿರುತ್ತಾರೆ. ಹೀಗಾದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಷೇರುಹಣ ಇರಿಸುವುದರಲ್ಲಿ ಪ್ರಯೋಜನ ಏನು?

ಉತ್ತರ: ಸದಸ್ಯರಿಗೆ ಡಿವಿಡೆಂಡ್ ರೂಪದಲ್ಲಿ ಲಾಭಾಂಶವನ್ನು ಸದ್ಯಕ್ಕೆ ನೀಡದಂತೆ ಸಹಕಾರಿ ಬ್ಯಾಂಕ್‌ಗಳನ್ನೂ ಸೇರಿಸಿಕೊಂಡು ಎಲ್ಲಾ ಬ್ಯಾಂಕ್‌ಗಳಿಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನ ನೀಡಿದೆ. ಇದೇ ವೇಳೆ, ಆರ್‌ಬಿಐ ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಪ್ರತಿ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ, ಅಂದರೆ ಅನುತ್ಪಾದಕ ಆಸ್ತಿಯ (ಎನ್‌ಪಿಎ) ವಿವರ ಪಡೆದು, ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಉತ್ತಮವಾದಲ್ಲಿ ಡಿವಿಡೆಂಡ್‌ ಕೊಡಲು ಆದೇಶಿಸುವ ಸಾಧ್ಯತೆ ಇದೆ.

ಮುಖ್ಯವಾಗಿ ಡಿವಿಡೆಂಡ್‌ ಕೊಡಲು ಪ್ರತಿ ಬ್ಯಾಂಕ್‌ ವಾರ್ಷಿಕ ಮಹಾಸಭೆ ಕರೆಯಬೇಕಾಗುತ್ತದೆ ಹಾಗೂ ಸಭೆಯ ಪರವಾನಗಿ ಅಗತ್ಯ. ಈ ಸಾರಿ ಸರ್ಕಾರದ ಆದೇಶದಂತೆ ಡಿಸೆಂಬರ್‌ನಲ್ಲಿ ಎಲ್ಲಾ ಬ್ಯಾಂಕ್‌ಗಳೂ ಮಹಾಸಭೆ ಕರೆಯಬೇಕಾಗುತ್ತದೆ. ಅಷ್ಟರಲ್ಲಿ ಎಲ್ಲವೂ ಸರಿಹೋಗಿ ಸದಸ್ಯರು ಡಿವಿಡೆಂಡ್‌ ಪಡೆಯುವಂತಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.