ನವದೆಹಲಿ: ಇನ್ಫೊಸಿಸ್ ಕಂಪನಿಯು 800 ಟ್ರೈನಿಗಳ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಒಂದು ವಾರದವರೆಗೆ ಮುಂದೂಡಿದೆ.
ಟ್ರೈನಿಗಳಿಗೆ ಹೆಚ್ಚಿನ ಸಿದ್ಧತೆ ಕೈಗೊಳ್ಳಲು ಅನುಕೂಲವಾಗುವಂತೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಕಂಪನಿಯು ಸ್ಪಷ್ಟನೆ ನೀಡಿದೆ.
ಕಂಪನಿಗೆ ನೇಮಕಗೊಂಡ ಟ್ರೈನಿಗಳು ತರಬೇತಿ ಬಳಿಕ ಆಂತರಿಕ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಉತ್ತೀರ್ಣರಾಗಲು ಮೂರು ಬಾರಿ ಅವರಿಗೆ ಅವಕಾಶ ನೀಡಲಾಗುತ್ತದೆ. ಇದರಲ್ಲಿ ಅನುತ್ತೀರ್ಣರಾದರೆ ಕೆಲಸದಿಂದ ವಜಾಗೊಳಿಸಲಾಗುತ್ತದೆ. ಕಳೆದ ವಾರ ಮೈಸೂರು ಕ್ಯಾಂಪಸ್‌ನಿಂದ ಟ್ರೈನಿಗಳನ್ನು ವಜಾಗೊಳಿಸಲಾಗಿತ್ತು.
ಕಂಪನಿಯ ಈ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಐ.ಟಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಸಂಘವಾದ ಎನ್‌ಐಟಿಇಎಸ್ ಮಧ್ಯಪ್ರವೇಶದಿಂದಾಗಿ ಕೇಂದ್ರ ಕಾರ್ಮಿಕ ಇಲಾಖೆಯು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
‘ಟ್ರೈನಿಗಳನ್ನು ವಜಾಗೊಳಿಸಿರುವ ಇನ್ಫೊಸಿಸ್ ಕ್ರಮದ ವಿರುದ್ಧ ಹೋರಾಟ ಮುಂದುವರಿಸಲಾಗಿದೆ. ನಮ್ಮ ಮಧ್ಯಪ್ರವೇಶದಿಂದಾಗಿ ಆಂತರಿಕ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಮುಂದೂಡಲಾಗಿದೆ’ ಎಂದು ಎನ್‌ಐಟಿಇಎಸ್ ಹೇಳಿದೆ.
ಐ.ಟಿ ವಲಯಲ್ಲಿ ಏಕಾಏಕಿಯಾಗಿ ಉದ್ಯೋಗಿಗಳನ್ನು ವಜಾಗೊಳಿಸುವ ಕಂಪನಿಗಳ ನಿರ್ಧಾರದ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದೆ.
‘ಮಂಗಳವಾರ ಟ್ರೈನಿಗಳ ಆಂತರಿಕ ಮೌಲ್ಯಮಾಪನ ನಡೆಸಿ ಬುಧವಾರದಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಿತ್ತು. ನಮ್ಮ ಹೋರಾಟ, ಸರ್ಕಾರದ ಮಧ್ಯಪ್ರವೇಶ ಮತ್ತು ಮಾಧ್ಯಮಗಳ ಬೆಂಬಲದಿಂದ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಮುಂದೂಡಿದೆ. ಇದರಿಂದ ಹಲವು ಟ್ರೈನಿಗಳು ನಿರಾಳಾಗಿದ್ದಾರೆ’ ಎಂದು ಹೇಳಿದೆ.
ಬೆದರಿಕೆ ತಂತ್ರ ಅನುಸರಿಸಿಲ್ಲ’
ನವದೆಹಲಿ (ಪಿಟಿಐ): ‘ಮೈಸೂರು ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದಿದ್ದ 300 ಟ್ರೈನಿಗಳನ್ನು ಕೆಲಸದಿಂದ ವಜಾಗೊಳಿಸುವಲ್ಲಿ ಒಲವಂತದ ಅಥವಾ ಬೆದರಿಕೆಯ ತಂತ್ರ ಅನುಸರಿಸಿಲ್ಲ. ಪರಿಸ್ಥಿತಿ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೂ ಮನವರಿಕೆ ಮಾಡಿಕೊಡಲಾಗುವುದು’ ಎಂದು ಇನ್ಫೊಸಿಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶಾಜಿ ಮ್ಯಾಥ್ಯೂ ಸ್ಪಷ್ಟಪಡಿಸಿದ್ದಾರೆ. ‘ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆಂತರಿಕ ಮೌಲ್ಯಮಾಪನದಲ್ಲಿ ಅನುತ್ತೀರ್ಣರಾದವರ ಟ್ರೈನಿಗಳ ಸಂಖ್ಯೆ ಹೆಚ್ಚಿದೆ. ಕಂಪನಿಯ ನಿಯಮಾವಳಿ ಅನ್ವಯ ಈ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. 2025–26ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ 20 ಸಾವಿರ ಉದ್ಯೋಗಿಗಳ ನೇಮಕಕ್ಕೆ ಯೋಜನೆ ರೂಪಿಸಲಾಗಿದೆ. ಅವರಿಗೆ ಉತ್ತಮ ಕಾರ್ಪೊರೇಟ್ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.