ADVERTISEMENT

ಐಪಿಒ: ತಗ್ಗಿದ ಬಂಡವಾಳ ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಆಗಸ್‌ ಅವಧಿ

ಪಿಟಿಐ
Published 4 ಅಕ್ಟೋಬರ್ 2023, 16:19 IST
Last Updated 4 ಅಕ್ಟೋಬರ್ 2023, 16:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ಕಂಪನಿಗಳು ಬಂಡವಾಳ ಸಂಗ್ರಹಿಸುವ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 26ರಷ್ಟು ಇಳಿಕೆ ಕಂಡಿದೆ ಎಂದು ಪ್ರೈಮ್‌ ಡೇಟಾಬೇಸ್‌ ಸಂಸ್ಥೆ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 31 ಕಂಪನಿಗಳು ಐಪಿಒಗೆ ಬಂದಿದ್ದು, ಒಟ್ಟು ₹26,300 ಕೋಟಿ ಬಂಡವಾಳ ಸಂಗ್ರಹ ಆಗಿದೆ. ಆದರೆ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 14 ಐಪಿಒ ಮೂಲಕ ₹35,456 ಕೋಟಿ ಬಂಡವಾಳ ಸಂಗ್ರಹ ಆಗಿತ್ತು ಎಂದು ಅದು ಮಾಹಿತಿ ನೀಡಿದೆ.

ಆದರೆ, 2022ರ ಮೇ ಎಲ್ಐಸಿ ಐಪಿಒ ಹೊರತುಪಡಿಸಿದರೆ ಈ ಬಾರಿ ಬಂಡವಾಳ ಸಂಗ್ರಹವು ಶೇ 76ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ADVERTISEMENT

ಈಕ್ವಿಟಿ ಮೂಲಕ ಸಂಗ್ರಹಿಸುವ ಬಂಡವಾಳವು 2022ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ₹43,694 ಕೋಟಿಯಷ್ಟು ಇತ್ತು. 2023ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಶೇ 69ರಷ್ಟು ಹೆಚ್ಚಾಗಿ, ₹73,747 ಕೋಟಿಗೆ ಏರಿಕೆ ಕಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಣವ್‌ಹಲ್ದಿಯಾ ಹೇಳಿದ್ದಾರೆ.

ಎಸ್‌ಎಂಇ ಪ್ಲಾಟ್‌ಫಾರಂ, ಆರ್‌ಇಐಟಿ, ಒಎಫ್‌ಎಸ್‌, ಅರ್ಹ ಸಾಂಸ್ಥಿಕ ನೀಡಿಕೆ (ಕ್ಯುಐಪಿ) ಮತ್ತು ಸಾರ್ವಜನಿಕ ಸಾಲ ನೀಡಿಕೆ ಮೂಲಕ ಸಂಗ್ರಹ ಮಾಡಿರುವ ಬಂಡವಾಳವನ್ನೂ ಇದು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆಫರ್‌ ಫಾರ್ ಸೇಲ್‌ (ಒಎಫ್‌ಎಸ್‌)  ಮೂಲಕ ₹1,446 ಕೋಟಿ ಬಂಡವಾಳ ಸಂಗ್ರಹ ಆಗಿದೆ. ಹಿಂದಿನ ಅವಧಿಯಲ್ಲಿ ₹15,541 ಕೋಟಿ ಸಂಗ್ರಹ ಆಗಿತ್ತು. ಕ್ಯುಐಪಿ ಮೂಲಕ ಸಂಗ್ರಹಿಸುವ ಮೊತ್ತವು ₹20,748 ಕೋಟಿಯಿಂದ ₹5,238 ಕೋಟಿಗೆ ಕುಸಿತ ಕಂಡಿದೆ ಎಂದು ಸಂಸ್ಥೆಯು ಹೇಳಿದೆ.

ಐಪಿಒ ಮೂಲಕ ಮ್ಯಾನ್‌ಕೈಂಡ್‌ ಫಾರ್ಮಾ ₹4,326 ಕೋಟಿಯಷ್ಟು ಗರಿಷ್ಠ ಬಂಡವಾಳ ಸಂಗ್ರಹಿಸಿದೆ. ಜೆಎಸ್‌ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ₹2,800 ಕೋಟಿ ಮತ್ತು ಆರ್‌.ಆರ್‌. ಕೇಬಲ್‌ ₹1,964 ಕೋಟಿ ಬಂಡವಾಳ ಸಂಗ್ರಹಿಸಿವೆ.

ಹಲವು ವಲಯಗಳು ಐಪಿಒಗೆ ಬಂದಿವೆಯಾದರೂ ಬ್ಯಾಂಕಿಂಗ್‌, ಫೈನಾನ್ಶಿಯಲ್‌ ಸರ್ವಿಸಸ್‌ ಆ್ಯಂಡ್‌ ಇನ್ಶುರೆನ್ಸ್ (ಬಿಎಫ್‌ಎಸ್‌ಐ) ವಲಯದ ಕಂಪನಿಗಳು ಕೇವಲ ₹1,525 ಕೋಟಿ ಬಂಡವಾಳ ಸಂಗ್ರಹಿಸಿವೆ. ಹಿಂದಿನ ಅವಧಿಯಲ್ಲಿ ಐಪಿಒ ಮೂಲಕ ಸಂಗ್ರಹ ಆಗಿದ್ದ ಮೊತ್ತದಲ್ಲಿ ಈ ವಲಯದ ಪಾಲು ಶೇ 61ರಷ್ಟು ಇತ್ತು ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.