ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ

ಬೇಡಿಕೆ ಕುಸಿತ, ಸಂಗ್ರಹಾಗಾರಗಳ ಭರ್ತಿ

ಏಜೆನ್ಸೀಸ್
Published 21 ಏಪ್ರಿಲ್ 2020, 2:09 IST
Last Updated 21 ಏಪ್ರಿಲ್ 2020, 2:09 IST
   

ಸಿಂಗಪುರ: ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ.

ಪೂರೈಕೆ ಹೆಚ್ಚಳ ಮತ್ತು ಬೇಡಿಕೆ ಕುಸಿತದ ಕಾರಣಕ್ಕೆ ಮಾರುಕಟ್ಟೆಯಲ್ಲಿ ತೈಲದ ಪ್ರವಾಹ ಹೆಚ್ಚಿದೆ. ಸಂಗ್ರಹಾಗಾರಗಳು ಭರ್ತಿಯಾಗುತ್ತಿವೆ. ಹೆಚ್ಚುವರಿ ತೈಲ ಸಂಗ್ರಹಿಸಿ ಇಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಬೆಲೆಯು ಎರಡು ದಶಕಗಳಿಗಿಂತ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಅಮೆರಿಕದ ತೈಲ ಮಾರುಕಟ್ಟೆಯ ಮಾನದಂಡ ಬೆಲೆಯಾದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಇ) ಬೆಲೆಯು ಏಷ್ಯಾದ ಮಾರುಕಟ್ಟೆಯ ಸೋಮವಾರದ ವಹಿವಾಟಿನ ಅರಂಭದಲ್ಲಿ ಶೇ 20ರಷ್ಟು ಕುಸಿತ ಕಂಡು ಪ್ರತಿ ಬ್ಯಾರಲ್‌ಗೆ 15 ಡಾಲರ್‌ಗೆ ತಲುಪಿದೆ. ಇದು 1999ರ ನಂತರದ ಕನಿಷ್ಠ ಮಟ್ಟವಾಗಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯ ಮಾನದಂಡವಾಗಿರುವ ಬ್ರೆಂಟ್‌ ತೈಲದ ಬೆಲೆಯು ಶೇ 3ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರಲ್‌ಗೆ 27.23 ಡಾಲರ್‌ಗೆ ತಲುಪಿದೆ.

ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದಲ್ಲಿ ಕಚ್ಚಾ ತೈಲ ದಾಸ್ತಾನು ಪ್ರಮಾಣವು ಹಿಂದಿನ ವಾರ 1.90 ಕೋಟಿ ಟನ್‌ ಬ್ಯಾರಲ್‌ಗೆ ಏರಿಕೆಯಾಗಿತ್ತು. ಬೇಡಿಕೆಯಲ್ಲಿನ ಕುಸಿತ ಮತ್ತು ಸಂಗ್ರಹಾಗಾರಗಳು ಭರ್ತಿಯಾಗುತ್ತಿರುವುದರಿಂದ ಅಮೆರಿಕದ ತೈಲಾಗಾರಗಳು ತ್ವರಿತವಾಗಿ ತೈಲ ಸಂಸ್ಕರಿಸುತ್ತಿಲ್ಲ.

ಇನ್ನಷ್ಟು ಕುಸಿತ ನಿರೀಕ್ಷೆ: ಪ್ರತಿ ದಿನ 97 ಲಕ್ಷ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತಗೊಳಿಸುವ ತೈಲ ಉತ್ಪಾದನಾ ದೇಶಗಳ ನಿರ್ಧಾರವು ತೈಲ ಬಿಕ್ಕಟ್ಟಿನ ಮೇಲೆ ಅಲ್ಪ ಪ್ರಮಾಣದ ಪ್ರಭಾವ ಬೀರಿದೆ. ಬೆಲೆ ಕುಸಿತ ಮುಂದುವರೆಯಲಿದೆ. 1998ರ ಮಟ್ಟವಾದ ಪ್ರತಿ ಬ್ಯಾರಲ್‌ಗೆ 11 ಡಾಲರ್‌ಗೆ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಕೋಟ್ಯಂತರ ಜನರು ಮನೆಯಲ್ಲಿ ಕುಳಿತಿದ್ದಾರೆ. ಬಸ್‌, ರೈಲು, ವಿಮಾನ ಪ್ರಯಾಣಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವಿಶ್ವದಾದ್ಯಂತ ಇಂಧನಗಳ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ.

ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಅದರ ಮಿತ್ರ ಪಕ್ಷಗಳು (ಒಪಿಇಸಿ +) ಉತ್ಪಾದನೆ ತಗ್ಗಿಸಲು ತೆಗೆದುಕೊಂಡಿರುವ ನಿರ್ಧಾರವು ತೈಲ ಮಾರುಕಟ್ಟೆಯಲ್ಲಿ ಸಮತೋಲನ ಸಾಧಿಸಲು ನೆರವಾಗುತ್ತಿಲ್ಲ. ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ನೀಡಿರುವ ಲಾಕ್‌ಡೌನ್‌ ಯಾವಾಗ ತೆರವಾಗಲಿದೆ ಎನ್ನುವುದನ್ನು ತೈಲ ಪೂರೈಕೆದಾರರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.