ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.34ರಷ್ಟು ದಾಖಲಾಗಿದೆ. 2019ರ ಆಗಸ್ಟ್ ಬಳಿಕ ದಾಖಲಾಗಿರುವ ಕನಿಷ್ಠ ಮಟ್ಟ ಇದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿರುವ ಶೇ 4ರ ಸರಾಸರಿ ಗುರಿಗಿಂತಲೂ ಕಡಿಮೆ ದಾಖಲಾಗಿದೆ. ಹಾಗಾಗಿ, ಜೂನ್‌ನಲ್ಲಿ ನಿಗದಿಯಾಗಿರುವ ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಮೂರನೇ ಬಾರಿಗೆ ರೆಪೊ ದರ ಕಡಿತಗೊಳಿಸುವ ಭರವಸೆ ಚಿಗುರೊಡೆದಿದೆ.
ತರಕಾರಿಗಳು, ಮೊಟ್ಟೆ, ದ್ವಿದಳ ಧಾನ್ಯಗಳು, ಮಾಂಸ ಮತ್ತು ಮೀನು, ಏಕದಳ ಧಾನ್ಯಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಇಳಿಕೆಯೇ ಇದಕ್ಕೆ ಕಾರಣ ಎಂದು ಮಂಗಳವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್ಒ) ವರದಿ ತಿಳಿಸಿದೆ.
ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 3.61ರಷ್ಟು ದಾಖಲಾಗಿತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಶೇ 4.85ರಷ್ಟಿತ್ತು.
ಆಹಾರ ಪದಾರ್ಥಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಫೆಬ್ರುವರಿಯಲ್ಲಿ ಶೇ 3.75ರಷ್ಟಿದ್ದ ಆಹಾರ ಹಣದುಬ್ಬರವು, ಮಾರ್ಚ್‌ನಲ್ಲಿ ಶೇ 2.69ಕ್ಕೆ ತಗ್ಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4ರಷ್ಟು ದಾಖಲಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಕಳೆದ ವಾರ ನಡೆದ ಎಂಪಿಸಿ ಸಭೆಯು ‘ತಟಸ್ಥ’ ನಿಲುವಿನಿಂದ ‘ಅನುಕೂಲಕರ’ ಹಾದಿ ತುಳಿದಿದೆ. ಆ ಮೂಲಕ ಮತ್ತೆ ರೆಪೊ ದರ ಕಡಿತ ಸುಳಿವು ನೀಡಿತ್ತು. ಈಗ ಚಿಲ್ಲರೆ ಹಣದುಬ್ಬರ ಇಳಿಕೆಯು ಈ ಭರವಸೆಯನ್ನು ಮತ್ತಷ್ಟು ಬಲಗೊಳಿಸಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
‘ಎರಡು ಎಂಪಿಸಿ ಸಭೆಗಳಲ್ಲಿ ರೆಪೊ ದರವನ್ನು ಒಟ್ಟು ಶೇ 0.50ರಷ್ಟು ಕಡಿತಗೊಳಿಸಲಾಗಿದೆ. ಮುಂದಿನ ಮೂರು ಸಭೆಗಳಲ್ಲಿ ಶೇ 0.50ರಷ್ಟು ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ. 2024–25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕಲ್ಲಿ ಜಿಡಿಪಿ ಬೆಳವಣಿಗೆ ಕಡಿಮೆಯಾದರೂ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಮೊಟ್ಟೆ ಶೇ 3.16, ತರಕಾರಿಗಳು ಶೇ 7.04, ದ್ವಿದಳ ಧಾನ್ಯಗಳು ಶೇ 2.73 ಮತ್ತು ಮಸಾಲೆ ಪದಾರ್ಥಗಳ ಬೆಲೆ ಶೇ 4.92ರಷ್ಟು ಇಳಿಕೆಯಾಗಿದೆ. ಆದರೆ ತೈಲ ಮತ್ತು ಕೊಬ್ಬಿನ ಪದಾರ್ಥಗಳ ಬೆಲೆಯು ಶೇ 17.7 ಮತ್ತು ಹಣ್ಣುಗಳ ಬೆಲೆ ಶೇ 16.27ರಷ್ಟು ಹೆಚ್ಚಳವಾಗಿದೆ.
ಫೆಬ್ರುವರಿಯಲ್ಲಿ ಶೇ 3.32ರಷ್ಟಿದ್ದ ನಗರ ಪ್ರದೇಶದ ಹಣದುಬ್ಬರವು ಶೇ 3.43ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 3.79ರಿಂದ ಶೇ 3.25ಕ್ಕೆ ಇಳಿದಿದೆ.
ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರ (ಶೇ 6.59) ದಾಖಲಾಗಿದ್ದರೆ, ತೆಲಂಗಾಣದಲ್ಲಿ ಅತಿ ಕಡಿಮೆ (ಶೇ 1.06) ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.