ADVERTISEMENT

ಆರ್ಥಿಕ ಚೇತರಿಕೆಗೆ ಕೋವಿಡ್‌ ಅಡ್ಡಿ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್

ಪಿಟಿಐ
Published 24 ಅಕ್ಟೋಬರ್ 2020, 18:45 IST
Last Updated 24 ಅಕ್ಟೋಬರ್ 2020, 18:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪ್ರಕರಣಗಳು ಹೆಚ್ಚಾದರೆ, ಅದರಿಂದ ಆರ್ಥಿಕತೆಯ ಚೇತರಿಕೆಗೆ ಅಡ್ಡಿಯಾಗುವ ಅಪಾಯವಿದೆ ಎಂದುಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ದೇಶದ ಹಣಕಾಸು ಸ್ಥಿತಿ ಸುಧಾರಿಸುತ್ತಿದ್ದರೂ ಖಾಸಗಿ ಹೂಡಿಕೆ ಚಟುವಟಿಕೆಗಳು ಮಂದಗತಿಯಲ್ಲಿಯೇ ಸಾಗಿವೆ ಎಂದು ಅವರು ತಿಳಿಸಿದ್ದಾರೆ.

ಸಾಂಕ್ರಾಮಿಕದಿಂದ ಆಗಿರುವ ನಷ್ಟದಿಂದ ಹೊರಬರಲು ವರ್ಷಗಳೇ ಹಿಡಿಯಬಹುದು ಎಂದು ಡೆಪ್ಯುಟಿ ಗವರ್ನರ್‌ ಎಂ.ಡಿ. ಪಾತ್ರ ಹೇಳಿದ್ದಾರೆ.

ADVERTISEMENT

ಅಕ್ಟೋಬರ್‌ 7 ರಿಂದ 9ರವರೆಗೆ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೋವಿಡ್‌–19ಗೆ ಸಂಬಂಧಿಸಿದ ಅನಿಶ್ಚಿತ ಸ್ಥಿತಿಯಿಂದಾಗಿ ಮುಂದಿನ ಎರಡರಿಂದ ಮೂರು ತ್ರೈಮಾಸಿಕಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಹೊಸದಾಗಿ ನೇಮಕ ಆಗಿರುವ ಎಂಪಿಸಿಯ ಸ್ವತಂತ್ರ ಸದಸ್ಯ ಶಶಾಂಕ್‌ ಬಿ. ಹೇಳಿದ್ದಾರೆ.

ರೆಪೊ ದರ ಕಡಿತಕ್ಕೆ ಅವಕಾಶಗಳಿವೆ. ಆದರೆ ಹಣದುಬ್ಬರವು ಈಗಾಗಲೇ ಹಿತಕಾರಿ ಮಟ್ಟವನ್ನು ದಾಟಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಣದುಬ್ಬರ ಯಾವ ಪ್ರಮಾಣದಲ್ಲಿ ಇರಲಿದೆ ಎನ್ನುವುದರ ಮೇಲೆ ರೆಪೊ ದರ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದಾಸ್‌ ವಿವರಿಸಿದ್ದಾರೆ.

ಆರ್‌ಬಿಐ ಪ್ರಕಾರ, ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ ಕಾಣಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇನ್ನಷ್ಟು ಇಳಿಕೆಯಾಗಲಿದೆ.

ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6ಕ್ಕಿಂತಲೂ ಮೇಲ್ಮಟ್ಟದಲ್ಲಿತ್ತು. ಹಣದುಬ್ಬರವನ್ನು ಶೇ 4ರಲ್ಲಿ (ಅದಕ್ಕಿಂತ ಶೇ 2ರಷ್ಟು ಹೆಚ್ಚು ಅಥವಾ ಶೇ 2ರಷ್ಟು ಕಡಿಮೆ) ನಿಯಂತ್ರಿಸುವಂತೆ ಕೇಂದ್ರ ಸರ್ಕಾರ ಆರ್‌ಬಿಐಗೆ ಸೂಚನೆ ನೀಡಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ – 23.9ರಷ್ಟು ಕುಸಿತ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.