ADVERTISEMENT

11 ವರ್ಷದ ಗರಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

ಪಿಟಿಐ
Published 5 ಜುಲೈ 2022, 16:02 IST
Last Updated 5 ಜುಲೈ 2022, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜೂನ್‌ ತಿಂಗಳಿನಲ್ಲಿ ದೇಶದ ಸೇವಾ ವಲಯದ ಚಟುವಟಿಕೆಗಳು 2011ರ ಏಪ್ರಿಲ್‌ ನಂತರದ ಅತಿಹೆಚ್ಚಿನ ಮಟ್ಟವನ್ನು ತಲುಪಿವೆ. ಬೇಡಿಕೆಯಲ್ಲಿ ಸುಧಾರಣೆ ಕಂಡುಬಂದಿದ್ದು ಇದಕ್ಕೆ ಕಾರಣ.

ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜೂನ್‌ ತಿಂಗಳಿನಲ್ಲಿ 59.2ಕ್ಕೆ ತಲುಪಿದೆ. ಮೇ ತಿಂಗಳಲ್ಲಿ ಇದು 58.9ರಷ್ಟಿತ್ತು.

ಸತತ ಹನ್ನೊಂದು ತಿಂಗಳುಗಳಿಂದ ಸೇವಾ ವಲಯದ ಚಟುವಟಿಕೆಗಳು ಹೆಚ್ಚಳ ಕಾಣುತ್ತಿವೆ. ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಅದನ್ನು ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತ ಎಂದು ಕಾಣಲಾಗುತ್ತದೆ.

ADVERTISEMENT

‘ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸೇವಾ ವಲಯವು ಬೆಳವಣಿಗೆ ಕಾಣುವ ರೀತಿಯಲ್ಲಿ ಜೂನ್‌ ತಿಂಗಳಲ್ಲಿ ಚಟುವಟಿಕೆಗಳು ಸುಧಾರಣೆ ಕಂಡಿವೆ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದರೂ, ಹೊಸ ಬೇಡಿಕೆಗಳನ್ನು ಕಂಡುಕೊಳ್ಳಲು ಕಂಪನಿಗಳಿಗೆ ಜೂನ್‌ನಲ್ಲಿ ಸಾಧ್ಯವಾಗಿದೆ. ಜೂನ್‌ ತಿಂಗಳಲ್ಲಿ ಮಾರಾಟದ ಬೆಲೆಯ ಹೆಚ್ಚಳವು 2017ರ ಜುಲೈ ನಂತರದ ಅತಿವೇಗದ ಏರಿಕೆ ದಾಖಲಿಸಿದೆ. ಹಲವು ಕಂಪನಿಗಳು ತಮ್ಮ ಮೇಲಿನ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿವೆ.

ಹಣದುಬ್ಬರವು ಕಡಿಮೆ ಆಗದಿರುವುದು ಕಂಪನಿಗಳ ಪಾಲಿಗೆ ಕಳವಳ ಮೂಡಿಸಿದೆ. ಆದರೆ, ಮುಂದಿನ ಒಂದು ವರ್ಷದ ವಹಿವಾಟಿನ ವಿಚಾರವಾಗಿ ಕಂಪನಿಗಳು ಆಶಾವಾದ ಹೊಂದಿವೆ.

ಕೆಲವು ಕಂಪನಿಗಳು ಮಾತ್ರ ಜೂನ್‌ ತಿಂಗಳಲ್ಲಿ ಹೊಸದಾಗಿ ನೌಕರರನ್ನು ನೇಮಕ ಮಾಡಿಕೊಂಡಿವೆ. ಆದರೆ, ಶೇಕಡ 94ರಷ್ಟು ಕಂಪನಿಗಳಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ಹೀಗಿದ್ದರೂ, ಸೇವಾ ವಲಯದಲ್ಲಿನ ನೌಕರರ ಸಂಖ್ಯೆಯು ಜೂನ್‌ನಲ್ಲಿ ತುಸು ಹೆಚ್ಚಳ ಆಗಿದೆ. ಮೇ ತಿಂಗಳಲ್ಲಿ ಇದು ಇಳಿಕೆ ಕಂಡಿತ್ತು.

ಸೇವಾ ವಲಯ ಹಾಗೂ ತಯಾರಿಕಾ ವಲಯದ ಚಟುವಟಿಕೆಗಳನ್ನು ಒಟ್ಟಾಗಿ ಹೇಳುವ ಕಾಂ‍ಪೊಸಿಟ್ ಪಿಎಂಐ ಔಟ್‌ಪುಟ್ ಸೂಚ್ಯಂಕವು ಜೂನ್‌ನಲ್ಲಿ 58.2ಕ್ಕೆ ಇಳಿಕೆಯಾಗಿದೆ. ಇದು ಮೇ ತಿಂಗಳಲ್ಲಿ 58.3 ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.