ADVERTISEMENT

ಉದ್ಯೋಗ ಅವಕಾಶ; ‘ಅಸೀಮ್‌‘ ಅಂತರ್ಜಾಲ ತಾಣಕ್ಕೆ ಚಾಲನೆ

ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಉಪಕ್ರಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:53 IST
Last Updated 10 ಜುಲೈ 2020, 14:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪರಿಣತ ಉದ್ಯೋಗಿಗಳ ಬೇಡಿಕೆ, ಪೂರೈಕೆ ಅಂತರ ತಗ್ಗಿಸಲು ಮತ್ತು ಉದ್ಯೋಗ ಮಾರುಕಟ್ಟೆಯ ಮಾಹಿತಿ ಸುಧಾರಿಸುವ ಉದ್ದೇಶಕ್ಕೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂಎಸ್‌ಡಿಇ) ಸಚಿವಾಲಯವು ಪ್ರತ್ಯೇಕ ಅಂತರ್ಜಾಲ ತಾಣ ಆರಂಭಿಸಿದೆ.

ಆತ್ಮನಿರ್ಭರ ಸ್ಕಿಲ್ಡ್‌ ಎಂಪ್ಲಾಯಿ ಎಂಪ್ಲಾಯರ್‌ ಮ್ಯಾಪಿಂಗ್‌ (ಅಸೀಮ್‌–ASEEM) ಹೆಸರಿನ ಈ ಅಂತರ್ಜಾಲ ತಾಣವು (https://smis.nsdcindia.org/) ವೃತ್ತಿ ಪರಿಣತರು ಹೊಸ ಜೀವನೋಪಾಯ ಕಂಡುಕೊಳ್ಳಲು ನೆರವಾಗಲಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು (ಎನ್‌ಎಸ್‌ಡಿಸಿ), ಬೆಂಗಳೂರಿನ ಬೆಟರ್‌ಪ್ಲೇಸ್‌ ಕಂಪನಿಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಸೌಲಭ್ಯವು ಮೊಬೈಲ್‌ ಆ್ಯಪ್‌ನಲ್ಲಿಯೂ ದೊರೆಯಲಿದೆ.

ಕೋವಿಡ್‌ ದಿಗ್ಬಂಧನ ನಂತರದ ದಿನಗಳಲ್ಲಿ ಲಭ್ಯ ಇರುವ ಹೊಸ ಉದ್ಯೋಗ ಅವಕಾಶಗಳ ಬಗ್ಗೆ ಮತ್ತು ಪ್ರಸ್ತುತವಾಗುವ ವೃತ್ತಿ ಕೌಶಲ್ಯಗಳ ಬಗ್ಗೆ ಈ ತಾಣದಲ್ಲಿ ಅಗತ್ಯ ವಿವರಗಳು ದೊರೆಯಲಿವೆ. ವ್ಯಾಪಕವಾಗಿ ಬದಲಾಗುತ್ತಿರುವ ಕೆಲಸದ ಸ್ವರೂಪಕ್ಕೆ ತಕ್ಕಂತೆ ಉದ್ಯೋಗ ಆಕಾಂಕ್ಷಿಗಳು ತಮ್ಮ ವೃತ್ತಿ ಕೌಶಲ ಪುನರ್‌ರೂಪಿಸಿಕೊಳ್ಳುವ ಅಗತ್ಯ ಇದೆ. ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯ ಇರುವ ಕುಶಲ ಉದ್ಯೋಗಿಗಳಿಗೆ ಅನುಗುಣವಾಗಿ ತಮ್ಮ ನೇಮಕಾತಿ ಯೋಜನೆ ಹಾಕಿಕೊಳ್ಳಲು ಈ ತಾಣವು ಉದ್ಯೋಗದಾತರಿಗೂ ನೆರವಾಗಲಿದೆ.

ADVERTISEMENT

ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಮಹೇಂದ್ರನಾಥ ಪಾಂಡೆ ಅವರು ‘ಅಸೀಮ್‌’ ಅಂತರ್ಜಾಲ ತಾಣಕ್ಕೆ ವಿಡಿಯೊ ಕಾನ್‌ಫೆರನ್ಸ್‌ ಮೂಲಕ ಚಾಲನೆ ನೀಡಿದರು. ‘ಕೋವಿಡ್‌ನಿಂದ ಬಾಧಿತ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಲಭ್ಯ ಇರುವ ಹೊಸ ಉದ್ಯೋಗ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಈ ತಾಣವು ಯುವ ಜನತೆಗೆ ನೆರವಾಗಲಿದೆ. ಕೌಶಲ ವೃದ್ಧಿಗೆ ಸಂಬಂಧಿಸಿದಂತೆ ಸಂಘಟಿತ ಸ್ವರೂಪದಲ್ಲಿ ಸಮನ್ವಯತೆ ಸಾಧಿಸಲೂ ಇದರಿಂದ ಸಾಧ್ಯವಾಗಲಿದೆ. ದೇಶದಾದ್ಯಂತ ಚೆದುರಿ ಹೋಗಿರುವ ವಲಸೆ ಕಾರ್ಮಿಕರು ತಮ್ಮ ಕೌಶಲಕ್ಕೆ ತಕ್ಕಂತೆ ಲಭ್ಯ ಇರುವ ಉದ್ಯೋಗ ಅವಕಾಶ ಕಂಡುಕೊಳ್ಳಲು ಈ ತಾಣವು ಅವರ ನೆರವಿಗೆ ಬರಲಿದೆ. ಉದ್ಯೋಗ ಆಕಾಂಕ್ಷಿಗಳಲ್ಲಿ ಆತ್ಮವಿಶ್ವಾಸ ತುಂಬಲಿದೆ‘ ಎಂದು ಹೇಳಿದ್ದಾರೆ.

ಉದ್ಯೋಗ ಆಕಾಂಕ್ಷಿಗಳು ತಮ್ಮ ವೃತ್ತಿ ಕೌಶಲ ಭರ್ತಿ ಮಾಡಿ ತಮ್ಮ ವಾಸಸ್ಥಳದ ಸಮೀಪದಲ್ಲಿ ಲಭ್ಯ ಇರುವ ಉದ್ಯೋಗ ಅವಕಾಶಗಳ ಬಗ್ಗೆ ಈ ತಾಣದಲ್ಲಿ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.