ADVERTISEMENT

ಮೊಬೈಲ್: ಕನಿಷ್ಠ ದರ ನಿಗದಿಗೆ ಸರ್ಕಾರ ನಕಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:35 IST
Last Updated 1 ಅಕ್ಟೋಬರ್ 2021, 4:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಉದ್ಯಮ ಚೇತರಿಸಿಕೊಳ್ಳಲು ಸಹಾಯವಾಗುವಂತೆ ಕನಿಷ್ಠ ದರ ನಿಗದಿ ಮಾಡವಂತೆ (ಟ್ಯಾರಿಫ್‌)ದೂರಸಂಪರ್ಕ ಕಂಪನಿಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಸರ್ಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸೂಚನೆ ನೀಡಿಲ್ಲ.

‘ದೂರಸಂಪರ್ಕ ಉದ್ಯಮದಲ್ಲಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ. ಆದರೂ ಅದು ದರ ನಿಯಂತ್ರಣಕ್ಕೆ ಒಲವು ತೋರುತ್ತಿಲ್ಲ. ಸರ್ಕಾರವು ಇತ್ತೀಚೆಗೆ ಬೃಹತ್ ಪರಿಹಾರ ಪ್ಯಾಕೇಜ್‌ ಅನ್ನು ಘೋಷಿಸಿತ್ತು. ಇದು ಉದ್ಯಮ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುತ್ತದೆ’ ಎಂದು ದೂರಸಂಪರ್ಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರಸಂಪರ್ಕ ವಲಯದಲ್ಲಿ ಸಮಸ್ಯೆ ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಇದು ಶೀಘ್ರದಲ್ಲೇ ಕೊನೆಗೊಳ್ಳಲಿದ್ದು, ಸಂಸ್ಥೆಗಳು ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಉದ್ಯಮವನ್ನು ಸಂಕಷ್ಟದಿಂದ ಮೇಲೆತ್ತಲು ಕನಿಷ್ಠ ಎರಡು ವರ್ಷಗಳವರೆಗೆ ಕನಿಷ್ಠ ದರ ನಿಗದಿಗೆ ಸರ್ಕಾರ ಮುಂದಾಗಬೇಕಿದೆ ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ (ಸಿಒಎಐ) ಒತ್ತಾಯಿಸುತ್ತಿದೆ. ಆದರೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮೊಬೈಲ್ ಫೋನ್‌ಗಳಿಗೆ ಕನಿಷ್ಠ ದರ ನಿಗದಿಗೆ ಒಪ್ಪುತ್ತಿಲ್ಲ.

ಭಾರತದಲ್ಲಿ ಮೊಬೈಲ್ ಡೇಟಾ ದರವು ಜಗತ್ತಿನಲ್ಲಿ ಕಡಿಮೆಯಿದೆ. ಪ್ರಸ್ತುತ ಒಂದು ಜಿಬಿ ಡೇಟಾಗೆ ₹8 ದರವಿದ್ದು, ಇದನ್ನು ಹೆಚ್ಚಿಸಿ, ಕನಿಷ್ಠ ದರ ನಿಗದಿ ಮಾಡಬೇಕು ಎಂಬುದು ಎಲ್ಲ ದೂರಸಂಪರ್ಕ ಕಂಪನಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.