ADVERTISEMENT

ಅಪಾಯಕ್ಕೆ ಸಿಲುಕದೆ, ಸುರಕ್ಷತೆಗೆ ಗಮನ ಮುಖ್ಯ

ಕೆ.ಜಿ ಕೃಪಾಲ್
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

ಷೇರುಪೇಟೆಯ ಹೆಗ್ಗುರುತಾದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆಪ್ಟೆಂಬರ್ ತಿಂಗಳಲ್ಲಿ ತಲುಪಿದ್ದ ವಾರ್ಷಿಕ ಗರಿಷ್ಠವಾದ 29,007 ಅಂಶಗಳಿಂದ ಈಗ  ಕೇವಲ 700 ಅಂಶಗಳಷ್ಟು ಹಿಂದಿದೆ. 2016ರ ಬಜೆಟ್ ದಿನವಾದ ಫೆ.29 ರಂದು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.ಒಂದು ಬಜೆಟ್‌ನಿಂದ ಮತ್ತೊಂದು ಬಜೆಟ್ ಅವಧಿಯಲ್ಲಿ  ಆಗಿರುವ ಬದಲಾವಣೆಯನ್ನು ಇದು ತೋರುತ್ತದೆ. 
 
ಮತ್ತೊಂದು ಪ್ರಮುಖ ಅಂಶ ಏನೆಂದರೆ ಶುಕ್ರವಾರ ಮುಂಬೈ ಷೇರು ವಿನಿಮಯ ಕೇಂದ್ರದ ಬಂಡವಾಳೀಕರಣ ಮೌಲ್ಯ ₹116.56ಲಕ್ಷ ಕೋಟಿಗೆ ತಲುಪಿದ್ದು, ಇದು ಸಾರ್ವಕಾಲೀನ ಗರಿಷ್ಠವಾಗಿದೆ.  2015 ರ ಮಾರ್ಚ್ ತಿಂಗಳಲ್ಲಿ  ಸೂಚ್ಯಂಕ  30,024 ಮಟ್ಟ ತಲುಪಿ ವಾರ್ಷಿಕ ಗರಿಷ್ಠವಲ್ಲದೆ ಸಾರ್ವಕಾಲೀನ ಗರಿಷ್ಠ ದಾಖಲೆ ನಿರ್ಮಿಸಿದಾಗಲೂ ಸಹ ಪೇಟೆಯ ಬಂಡವಾಳೀಕರಣ ಮೌಲ್ಯವು ₹107 ಲಕ್ಷ ಕೋಟಿ ಸಮೀಪವಿತ್ತು. ಅಂದರೆ,  ಈಗಿನ ದಿನಗಳಲ್ಲಿ ವಹಿವಾಟು ಸಂವೇದಿ ಸೂಚ್ಯಂಕದ ಹೊರಗಿನ ಷೇರುಗಳಲ್ಲಿ ಹೆಚ್ಚಾಗಿರುವುದರಿಂದ ಸೂಚ್ಯಂಕ ಏರಿಕೆ ಕಾಣದಿದ್ದರೂ ಬಂಡವಾಳೀಕರಣ ಮೌಲ್ಯವು ಹೆಚ್ಚಾಗಿದೆ.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಷೇರು ವಿಕ್ರಯಕ್ಕೆ ನಿಗದಿ ಪಡಿಸಿರುವ ಗುರಿಯನ್ನು ಈ ವರ್ಷ ₹56,500 ಕೋಟಿಗಳಿಂದ ₹45,500 ಕೋಟಿಗೆ ಇಳಿಸಲಾಗಿದೆ.  ಇದನ್ನು ಮುಂದಿನ ವರ್ಷ 2018ರಲ್ಲಿ  ₹72,500 ಕೋಟಿಗೆ  ಹೆಚ್ಚಿಸಲಾಗಿದೆ.  ಈವರೆಗೂ ₹37,700 ಕೋಟಿ ಸಂಗ್ರಹಿಸಲಾಗಿದೆ.ಫೆ. 7ರಂದು  ಕೇಂದ್ರ ಸರ್ಕಾರ ತನ್ನಲ್ಲಿರುವ'ಸ್ಪೆಷಲ್ ಅಂಡರ್ ಟೇಕಿಂಗ್ ಆಫ್ ಯುನಿಟ್  ಟ್ರಸ್ಟ್ ಆಫ್ ಇಂಡಿಯಾ'ದ ಭಾಗವನ್ನು ಹೊಂದಿರುವ ಷೇರುಗಳಲ್ಲಿರುವ ಶೇ  2ರಷ್ಟರ ಐಟಿಸಿ ಷೇರುಗಳನ್ನು ಪ್ರತಿ ಷೇರಿಗೆ ₹290ರಂತೆ ದಿನದ ಆರಂಭಿಕ  ವಹಿವಾಟಿನಲ್ಲಿ ಮಾರಾಟ ಮಾಡಿದೆ. ಅಂದರೆ ಷೇರಿನ ಬೆಲೆ ವಾರ್ಷಿಕ ಗರಿಷ್ಠದಲ್ಲಿದ್ದಾಗ ಈ ವಹಿವಾಟು ನಡೆದಿರುವುದು ಗಮನಾರ್ಹ. 

ಬಜೆಟ್ ನಂತರ ನಿರಂತರ ಏರಿಕೆಗೊಳಗಾಗಿರುವ ಈ ಷೇರು ಮಾರಾಟ ಕ್ರಮ 'ಪ್ರಾಫಿಟ್ ಬುಕ್' ನಂತಾಗಿದೆ. ಈ ಮಾರಾಟದ ನಂತರ ಸರ್ಕಾರ ಐಟಿಸಿ ಕಂಪೆನಿಯಲ್ಲಿ  ಶೇ 9.1ರ ಭಾಗಿತ್ವ ಹೊಂದಿದೆ.  ಮುಂದೆ ಇದೆ ರೀತಿಯ ಮಾರಾಟವನ್ನು ಲಾರ್ಸನ್ ಆ್ಯಂಡ್‌ ಟೋ ಬ್ರೊ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿಯೂ ನಡೆಯಬಹುದಾಗಿದೆ.

ಒಟ್ಟಾರೆ ವಾರಾಂತ್ಯದ ಅಂಶಗಳನ್ನು ನೋಡಿದಾಗ ಸಂವೇದಿ ಸೂಚ್ಯಂಕವು 93 ಅಂಶ ಚೇತರಿಕೆ ಕಂಡರೆ ಮಧ್ಯಮ ಶ್ರೇಣಿಯ ಸೂಚ್ಯಂಕ 183 ಅಂಶ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 179 ಅಂಶ ಏರಿಕೆ ಕಂಡವು.  ವಿದೇಶಿ ವಿತ್ತೀಯ ಸಂಸ್ಥೆಗಳು ಈ ವಾರ ₹179 ಕೋಟಿ ಹಣ ಹೂಡಿಕೆ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,298 ಕೋಟಿ ಹಣ ಹೂಡಿಕೆ ಮಾಡಿವೆ.   ಪೇಟೆಯ ಬಂಡವಾಳೀಕರಣ ಮೌಲ್ಯ ₹116.56 ಲಕ್ಷ ಕೋಟಿಗಳಿಗೆ ಏರಿರುವುದು ವಿಶೇಷ.

ಬೋನಸ್ ಷೇರು:  ಆರ್ಬಿಟ್ ಎಕ್ಸ್‌ಪೋರ್ಟ್ಸ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 15 ನಿಗದಿತ ದಿನವಾಗಿದೆ.  ಪೊಲಿ ಮೆಡಿಕ್ಯುರ್  ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಕಂಟೇನರ್ ಕಾರ್ಪೊರೇಷನ್  13 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಲಾಭಾಂಶ: ಅಕ್ಸಲ್ಯಾ ಕನ್ಸಲ್ಟಂಟ್ಸ್  ಪ್ರತಿ ಷೇರಿಗೆ ₹11, ಅಮೃತಾಂಜನ್ ಹೆಲ್ತ್ ಕೇರ್₹1.10 (ಮುಖಬೆಲೆ₹2),  ಎಬಿಬಿ ₹4 ( ₹2),  ಡಿಐಸಿ ಇಂಡಿಯಾ   ₹4,  ಭಾರತ್ ಪೆಟ್ರೋಲಿಯಂ  ₹19.50,ಭಾರತ್ ಫೋರ್ಜ್  ₹2.50(₹2),ಪೇಜ್ ಇಂಡಸ್ಟ್ರೀಸ್ ₹25, ಫೊಸೇಕೊ   ₹7,  ಸನ್ ಟೆಲಿವಿಷನ್₹5 (ಮುಖಬೆಲೆ ₹5), ಎಸ್‌ಆರ್ಎಫ್ ಪ್ರತಿ ಷೇರಿಗೆ ₹6.

ಹಕ್ಕಿನ ಷೇರು: ಸರ್ಕಾರಿ ಸ್ವಾಮ್ಯದ  ಕೆನರಾ ಬ್ಯಾಂಕ್  ಪ್ರತಿ 10 ಷೇರಿಗೆ ಒಂದರಂತೆ ₹207 ಬೆಲೆಯಲ್ಲಿ ಹಕ್ಕಿನ ಷೇರು ವಿತರಿಸಲು ಫೆ.20 ನಿಗದಿತ ದಿನವಾಗಿದೆ.  ಮಾರ್ಚ್ 2 ರಿಂದ 16 ರವರೆಗೂ ಈ ವಿತರಣೆಯು ತೆರೆದಿರುತ್ತದೆ.
ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ವಿತರಿಸಲಿರುವ  ಪ್ರತಿ ಷೇರಿಗೆ ₹14 ರಂತೆ, 1:3 ರ ಅನುಪಾತದ ಹಕ್ಕಿನ ಷೇರಿಗೆ ಫೆ. 17 ನಿಗದಿತ
ದಿನವಾಗಿದೆ.

ಷೇರು ಹಿಂದೆ ಕೊಳ್ಳುವಿಕೆ: ಎನ್ಎಚ್‌ಪಿಸಿ ಲಿಮಿಟೆಡ್‌ ಪ್ರಥಮ ಬಾರಿ 2009 ರಲ್ಲಿ ಪ್ರತಿ ಷೇರಿಗೆ ₹36 ರಂತೆ ಆರಂಭಿಕ ಷೇರು ವಿತರಣೆ ಮಾಡಿ ಪೇಟೆ ಪ್ರವೇಶಿಸಿತು.  ಕಂಪೆನಿಯ ಷೇರಿನ ಬೆಲೆಯು ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲೇ ವಹಿವಾಟಾಗುತ್ತಿತ್ತು. ನಾಲ್ಕು ವರ್ಷದ ನಂತರದಲ್ಲಿ ಕಂಪೆನಿಯು ತನ್ನಲ್ಲಿರುವ  ನಗದನ್ನು ಷೇರುಗಳನ್ನು  ಹಿಂದೆ ಕೊಳ್ಳುವುದಕ್ಕೆ ಉಪಯೋಗಿಸಿಕೊಂಡಿತು. ಪ್ರತಿ ಷೇರಿಗೆ ₹19.25 ರಂತೆ ಷೇರುದಾರರಿಂದ ಷೇರು  ಹಿಂದೆ ಕೊಂಡಿತು.   ಮೂರು ವರ್ಷಗಳ ನಂತರ  ಕೇಂದ್ರ ಸರ್ಕಾರವು ಪ್ರತಿ ಷೇರಿಗೆ ₹21.75 ರಂತೆ 'ಆಫರ್ ಫಾರ್ ಸೇಲ್' ಮೂಲಕ  ಬಂಡವಾಳ ಹಿಂತೆಗೆತದಡಿ ಮಾರಾಟ ಮಾಡಿತು.  ಸದ್ಯ ₹30ರ ಸಮೀಪದಲ್ಲಿ ವಹಿವಾಟಾಗುತ್ತಿರುವ ಈ ಷೇರಿಗೆ ಕಂಪೆನಿಯು ಮತ್ತೊಮ್ಮೆ ಷೇರು ಹಿಂದೆಕೊಳ್ಳುವ ಯೋಜನೆಗೆ ಕೈ ಹಾಕಿದೆ. 

ಪ್ರತಿ ಷೇರಿಗೆ ₹32.25 ರಂತೆ ಹಿಂದೆ ಕೊಳ್ಳಲು ಫೆ 20 ನಿಗದಿತ ದಿನವಾಗಿದೆ.   ಸರ್ಕಾರಿ ವಲಯದ ಕಂಪೆನಿಯು ಈ ರೀತಿಯ ಚಟುವಟಿಕೆ ನಡೆಸುವ ಬದಲು ತನ್ನಲ್ಲಿರುವ ಹೆಚ್ಚುವರಿ ಮೀಸಲು ಹಣವನ್ನು ಷೇರುದಾರರಿಗೆ ವಿಶೇಷ ಲಾಭಾಂಶವನ್ನು ಘೋಷಿಸಿ ವಿತರಿಸಿದ್ದಲ್ಲಿ ಹೂಡಿಕೆದಾರರ ಸ್ನೇಹಿಯಾಗುತ್ತಿತ್ತು. ಇದು ಈಗಿನ ದಿನಗಳಲ್ಲಿ ಸರ್ಕಾರಿ  ಇಲ್ಲವೇ ಖಾಸಗಿ ಕಂಪೆನಿಯಾಗಲಿ ಎಲ್ಲವೂ ವ್ಯವಹಾರಿಕತೆ ಅಳವಡಿಕೆ
ಯನ್ನು ಎತ್ತಿ ತೋರಿಸುತ್ತದೆ.

ಕೇವಲ ‘ಪ್ರಾಫಿಟ್ ಬುಕ್ ’ಗೆ ಹೆಚ್ಚು ಒತ್ತು ನೀಡುತ್ತೀರಲ್ಲಾ,  ದೀರ್ಘಕಾಲೀನ ಹೂಡಿಕೆಗೆ ಏಕೆ ಪ್ರೋತ್ಸಾಹಿಸುವುದಿಲ್ಲ ಎಂಬುದು ಓದುಗರೊಬ್ಬರ ಪ್ರಶ್ನೆಯಾಗಿದೆ.  ಇದಕ್ಕೆ ಉತ್ತರವಿಷ್ಟೇ.  ಹೂಡಿಕೆ ಮಾಡುವ ಉದ್ದೇಶವಾದರೂ ಏನು?  ಸ್ವಲ್ಪ ಹೆಚ್ಚಿನ ಹಣ ಗಳಿಸುವಿಕೆಯಲ್ಲವೆ?     ಈಗಿನ ಅಲ್ಪ ಬಡ್ಡಿ ಯುಗದಲ್ಲಿ ಹೂಡಿಕೆಯ ಅವಧಿ ಆಧರಿಸಿದ  ಅಂದರೆ ಶೇ 20ಕ್ಕೂ ಹೆಚ್ಚಿನ ಹಣಗಳಿಕೆ  ಸೂಕ್ತವಾದದು. ಶೇ 20ರಷ್ಟು ಏರಿಕೆಯನ್ನು ಕೆಲವು ಕಂಪೆನಿಗಳಲ್ಲಿ ಕೆಲವು ಸಂದರ್ಭಗಳಲ್ಲಿ ಒಂದೇ ದಿನ ಕಾಣುವಂತಾಗಿದೆ.  ಕೆಲವು ಬಾರಿ ಇಳಿಕೆ  ಉಂಟಾಗುವುದನ್ನು   ಕಾಣಬಹುದು.  ಹೀಗಿರುವಾಗ  ಕೇವಲ ಲಾಭಗಳಿಸುವ ದೃಷ್ಟಿಯಿಂದ ಹಣ ಹೂಡಿಕೆ ಮಾಡಿ ಅಪಾಯಕ್ಕೆ ಸಿಲುಕದೆ, ಸ್ವಲ್ಪ ಮಟ್ಟಿನ ಸುರಕ್ಷತೆಗೆ ಗಮನ ನೀಡುವುದು ಅಗತ್ಯ. ಈಗಿನ ಚಟುವಟಿಕೆಯಲ್ಲಿ ಹಲವಾರು ಅಗ್ರಮಾನ್ಯ ಕಂಪೆನಿಗಳು ಅನಿರೀಕ್ಷಿತ ರೀತಿಯಲ್ಲಿ ಲಾಭಗಳಿಸಿಕೊಂಡಿವೆ.  ಅದು ಒಂದೇ ತಿಂಗಳಲ್ಲಿ. 

ಇನ್ನು ದೀರ್ಘಕಾಲೀನ ಹೂಡಿಕೆಯ ಬಗ್ಗೆ ಚಿಂತನೆ ಮಾಡುವವರು ಈ ಬೆಳವಣಿಗೆ ಗಮನಿಸಿರಿ.  ಬಿಎಎಸ್ಎಫ್ ಒಂದು ಉತ್ತಮ ಅಗ್ರಮಾನ್ಯ ಸ್ಪೆಷಾಲಿಟಿ ಕೆಮಿಕಲ್  ಕಂಪೆನಿ.  ಈ ಕಂಪೆನಿಯ ಷೇರನ್ನು 2005ರ ಆರಂಭದಲ್ಲಿ ₹1,350 ಸಮೀಪದಲ್ಲಿ ಕೊಂಡವರು, ಬಂಡವಾಳ ಕರಗಿಸಿಕೊಳ್ಳಲು ಇಚ್ಚಿಸದೆ, ಒತ್ತಾಯ ಪೂರ್ವಕವಾಗಿ ದೀರ್ಘಕಾಲಿನ ಹೂಡಿಕೆದಾರರಾಗಿದ್ದಾರೆ. ಕಾರಣ ಈ ಷೇರಿನ ಬೆಲೆಯು ನಂತರದ ವರ್ಷದಲ್ಲಿ  ₹700 ರ ಸಮೀಪಕ್ಕೆ ಕುಸಿದು, ಬಹಳ ಸಮಯದ ನಂತರ ಕೆಲವು ದಿನಗಳ ಹಿಂದಷ್ಟೇ ₹1,340ನ್ನು ತಲುಪಿತಾದರೂ ನಂತರದ ದಿನದಿಂದಲೇ ಕುಸಿದು ಮತ್ತೆ ₹1,140 ರ ಸಮೀಪವಿದೆ. ಅಂದರೆ ಮಿಂಚಿನಂತೆ ಬರುವ ಅವಕಾಶ  ಉಪಯೋಗಿಸಿಕೊಳ್ಳದಿದ್ದಲ್ಲಿ ವಂಚಿತರಾಗುತ್ತೇವೆ. 

ಅಪಾಯಕಾರಿ ನಡೆ: ಕಳಪೆ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆಯು  ಹೆಚ್ಚು ಅಪಾಯಕಾರಿಯಾಗಿರುತ್ತದೆ. ಸತತವಾಗಿ ಗರಿಷ್ಠ ಆವರಣ ಮಿತಿಯಲ್ಲಿರುವ ಕೆಳಮಧ್ಯಮ ಶ್ರೇಣಿ ಮತ್ತು ಕಳಪೆ ವಲಯದ ಕಂಪೆನಿಗಳ   ಷೇರುಗಳಲ್ಲಿ ವಹಿವಾಟು ನಡೆಸುವಾಗ ಅತಿ ಹೆಚ್ಚಿನ ಎಚ್ಚರ ಅಗತ್ಯ. ಅವು ತಮ್ಮ ದಿಸೆಯನ್ನು ಬದಲಿಸಿಕೊಂಡು ಕನಿಷ್ಠ ಆವರಣ ಮಿತಿಯತ್ತ ತಿರುಗಿದಾಗ, ಷೇರುಪೇಟೆಯ ಮುಖ್ಯ ಗುಣವಾದ  ‘ಬೇಕಾದಾಗ ಮಾರಾಟ ಮಾಡಿ ಹಣ ಪಡೆಯುವ' ಅವಕಾಶದಿಂದ ವಂಚಿತರಾಗಬಹುದು. 

ಪೇಟೆಗಳು ಕುಸಿದಲ್ಲಿದ್ದಾಗ ದೀರ್ಘಕಾಲಿನ ಹೂಡಿಕೆಯ ಚಿಂತನೆ ಮಾಡಬೇಕು ಮತ್ತು ದೀರ್ಘಕಾಲದಲ್ಲಿ ದೊರೆಯಬಹುದಾದ ಲಾಭವನ್ನು ಅಲ್ಪಕಾಲದಲ್ಲೇ ಪಡೆಯಲು ಪೇಟೆ ಅವಕಾಶಮಾಡಿಕೊಟ್ಟರೆ ಅದನ್ನು ತಕ್ಷಣ ನಗದೀಕರಿಸಿಕೊಳ್ಳುವುದನ್ನು ರೂಢಿಸಿಕೊಂಡಲ್ಲಿ ಯಶಸ್ವಿ ಹೂಡಿಕೆದಾರರಾಗಬಹುದು.  ಪೇಟೆಗಳು, ಷೇರಿನ ದರಗಳು  ಉತ್ತುಂಗದಲ್ಲಿದ್ದಾಗ,   ದೀರ್ಘಕಾಲೀನ ಹೂಡಿಕೆ ಚಿಂತನೆ ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT