ADVERTISEMENT

ಔಷಧ ಕಂಪನಿಗಳ ಉತ್ತಮ ಪ್ರದರ್ಶನ

ಕೆ.ಜಿ ಕೃಪಾಲ್
Published 17 ಜೂನ್ 2018, 18:59 IST
Last Updated 17 ಜೂನ್ 2018, 18:59 IST
ಔಷಧ ಕಂಪನಿಗಳ ಉತ್ತಮ ಪ್ರದರ್ಶನ
ಔಷಧ ಕಂಪನಿಗಳ ಉತ್ತಮ ಪ್ರದರ್ಶನ   

ಷೇರುಪೇಟೆಯ ವಿಸ್ಮಯಕಾರಿ ಗುಣಗಳು ದಿಢೀರ್ ಬದಲಾವಣೆಗಳನ್ನು ಕಂಡುಕೊಳ್ಳುತ್ತಿವೆ. ಇದಕ್ಕೆ ಪೂರಕ ಅಂಶವಾಗಿ ಈ ವಾರ ಫಾರ್ಮಾ ವಲಯದ ಕಂಪನಿಗಳು ಕಂಡು, ಪ್ರದರ್ಶಿಸಿದ ಅಭೂತಪೂರ್ವ ಏರಿಕೆ ಉತ್ತಮ ಉದಾಹರಣೆ.

ಕೆಲವು ಷೇರುಗಳ ಬೆಲೆ ಏರಿಕೆಯು ಟೈಮ್, ವ್ಯಾಲ್ಯೂ ಆಫ್ ಮನಿ ಎಂಬುದನ್ನು ಮನಿ, ವ್ಯಾಲ್ಯೂ ಆಫ್ ಟೈಮ್ ಎಂದು ಪರಿವರ್ತಿತವಾಗಿ ಸಮಯಾಧಾರಿತ ಹಣದ ಬದಲಿಗೆ, ಹಣ ಆಧಾರಿತ ಸಮಯವೆಂಬಂತಾಗಿದೆ.

ಸೋಮವಾರ  ಅಲೆಂಬಿಕ್ ಫಾರ್ಮಾಸುಟಿಕಲ್ಸ್‌ ಕಂಪನಿ ಷೇರಿನ ಬೆಲೆ ದಿನದ ಮಧ್ಯಂತರದಲ್ಲಿ ₹460  ರ ಸಮೀಪದಿಂದ ₹520ಕ್ಕೆ ಕ್ಷಣಾರ್ಧದಲ್ಲಿ ಜಿಗಿತ ಕಂಡಿತು.  ಒಂದು ದಿನದಲ್ಲಿ ಕನಿಷ್ಠ ₹440 ರಿಂದ ₹521 ಕ್ಕೆ ಜಿಗಿತ ಕಂಡಿರುವ ವೇಗವು ಮಾತ್ರ ತೀರಾ ಅಪರೂಪದ ಅಂಶವಾಗಿದೆ. ಈ ಷೇರಿನ ಬೆಲೆ ಒಂದು ದಿನ ₹86 ರಷ್ಟು ಏರಿಕೆ ಕಂಡಿದೆ. ಯುಎಸ್‌ಎಫ್‌ಡಿಎ ಈ ಕಂಪನಿಯ ಮಾತ್ರೆಗಳಿಗೆ ಅನುಮತಿ ನೀಡಿದ ಸುದ್ದಿಯಿಂದ ಪ್ರೇರಿತವಾದ ಈ ಏರಿಕೆ ಗಮನಾರ್ಹವಾದುದು. ಮೇ 25 ರಂದು ₹412 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದ್ದ ಷೇರಿನ ಬೆಲೆ ಕೇವಲ ಇಪ್ಪತ್ತು ದಿನಗಳಲ್ಲಿ ₹540 ರವರೆಗೂ ಜಿಗಿತ ಕಂಡಿರುವುದು ಪೇಟೆಯ ವೇಗಕ್ಕೆ ಕನ್ನಡಿ ಹಿಡಿದಂತಾಗಿದೆ.  

ADVERTISEMENT

ಯುಎಸ್‌ಎಫ್‌ಡಿಎ ನೀಡಿದ ಅನುಮತಿಯ ಕಾರಣ ಡಾ. ರೆಡ್ಡಿಸ್ ಲ್ಯಾಬ್ ಸಹ ಶುಕ್ರವಾರ ₹100 ಕ್ಕೂ ಹೆಚ್ಚಿನ ಏರಿಕೆ ಒಂದು ಹಂತದಲ್ಲಿ ದಾಖಲಿಸಿತ್ತು. ಈ ಷೇರಿನ ಬೆಲೆ ಒಂದೇ ವಾರದಲ್ಲಿ ₹2,052 ರ ಸಮೀಪದಿಂದ ₹2,382 ರವರೆಗೂ ಏರಿಕೆ ಕಂಡಿದೆ.

ಮತ್ತೊಂದು ಪ್ರಮುಖ ಫಾರ್ಮಾ ಕಂಪನಿ ಲುಪಿನ್ ಲಿಮಿಟೆಡ್ ಸಹ  ಆಕರ್ಷಕವಾದ ಏರಿಕೆಯನ್ನು ಪಡೆದುಕೊಂಡಿದೆ. ಆದರೆ ಈ ಷೇರಿನ ಬೆಲೆ ಒಂದು ವರ್ಷದ ಹಿಂದೆ ಸರಿಯಾಗಿ 2017ರ ಜೂನ್‌ 15 ರಂದು  ₹1,192 ರ ಸಮೀಪವಿದ್ದ ಷೇರಿನ ಬೆಲೆ 2018 ಜೂನ್  15 ರಂದು ₹923 ರಲ್ಲಿದ್ದರೂ,  ಒಂದೇ ತಿಂಗಳಲ್ಲಿ ₹726 ರ ಸಮೀಪದಿಂದ ₹923 ರವರೆಗೂ ಏರಿಕೆ ಕಂಡುಕೊಂಡಿದೆ.

ಇದೇ ರೀತಿ ಸಿಪ್ಲಾ ಲಿಮಿಟೆಡ್ ಕಂಪನಿ ಸಹ ಬಹಳ ದಿನಗಳ ನಂತರ ಹೆಚ್ಚಿನ ಚುರುಕು ಪ್ರದರ್ಶಿಸಿ ಒಂದೇ  ತಿಂಗಳಲ್ಲಿ  ₹508ರ ಸಮೀಪದಿಂದ ₹614 ರವರೆಗೂ ಏರಿಕೆ ಕಂಡಿದೆ. ಟೊರೆಂಟ್ ಫಾರ್ಮಸುಟಿಕಲ್ಸ್ ಸಹ ಒಂದು ತಿಂಗಳಲ್ಲಿ ₹1,282 ರ ಸಮೀಪದಿಂದ ₹1,516 ರವರೆಗೂ ಏರಿಕೆ ಕಂಡಿದೆ. ಈ ರೀತಿಯ ವಲಯದ ಅಗ್ರಮಾನ್ಯ ಕಂಪನಿಗಳು ಉತ್ತಮ ಏರಿಕೆ ಕಂಡುಕೊಳ್ಳುವುದು ಈಚೀನ ದಿನಗಳಲ್ಲಿ ಅಪರೂಪದ ವಿಷಯವಾಗಿದೆ.

ಸಂವೇದಿ ಸೂಚ್ಯಂಕದ ಚಟುವಟಿಕೆಯಲ್ಲಿ ಈ ವಾರ ರಿಲಯನ್ಸ್ ಇಂಡಸ್ಟ್ರೀಸ್ ಲಿ ಕಂಪನಿ ತನ್ನ ಕೊಡುಗೆ ನೀಡಿದೆ.  ಶುಕ್ರವಾರ ವಾರ್ಷಿಕ ಗರಿಷ್ಠಕ್ಕೆ ಏರಿಕೆ ಕಂಡಿದೆ.  ಇದರ ಹಿಂದೆ ಈ ತಿಂಗಳ 27 ರಿಂದ ₹6 ರ ಲಾಭಾಂಶ ರಹಿತ ವಹಿವಾಟು ಆರಂಭವಾಗುವ ಕಾರಣ ಈ ಏರಿಕೆ ಪ್ರದರ್ಶಿತವಾಗಿದೆ.

ಅಗ್ರಮಾನ್ಯ ಸಾಫ್ಟ್‌ವೇರ್‌  ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್,  ಬೋನಸ್ ಷೇರುಗಳನ್ನು ಈಚೆಗೆ ವಹಿವಾಟಿಗೆ ಬಿಡುಗಡೆ ಮಾಡಿದೆ. ಅದರೊಂದಿಗೆ ವೃದ್ಧಿಯಾಗಿರುವ ಹರಿದಾಡುವ ಷೇರುಗಳ ಪ್ರಮಾಣ ಮತ್ತೊಮ್ಮೆ ಮೊಟಕುಗೊಳಿಸುವಂತಿದೆ.

ಶುಕ್ರವಾರ ಕಂಪನಿಯು ಮತ್ತೊಮ್ಮೆ ಷೇರು ಮರುಖರೀದಿ ಪ್ರಕಟಿಸಿದೆ. ಇದರಂತೆ ಷೇರುಗಳನ್ನು ಪ್ರತಿ ಷೇರಿಗೆ ₹2,100 ರಂತೆ ಮರು ಖರೀದಿ ಮಾಡುವ ಯೋಜನೆ ಪ್ರಕಟಿಸಿದೆ.

ಸುಮಾರು ₹16, 000 ಕೋಟಿ ಹಣದಲ್ಲಿ ನಡೆಸಲಿರುವ ಈ ಮರು ಖರೀದಿ ಕಾರಣ ಷೇರಿನ ಬೆಲೆಯೂ ವಾರ್ಷಿಕ ಗರಿಷ್ಠಕ್ಕೆ ಜಿಗಿತ ಕಂಡಿತು.

ಹಿಂದಿನ ವರ್ಷ ಇನ್ಫೊಸಿಸ್‌ ಕಂಪನಿ ಪ್ರತಿ ಷೇರಿಗೆ ₹1,150 ರಂತೆ ಬೈಬ್ಯಾಕ್ ಮಾಡಿತ್ತು.  ಬೈಬ್ಯಾಕ್ ಪ್ರಕಟಿಸಿದ ಸಂದರ್ಭದಲ್ಲಿ ಷೇರಿನ ಬೆಲೆ ₹860 ರ ಸಮೀಪಕ್ಕೂ ಕುಸಿದಿತ್ತು.  ಬೈಬ್ಯಾಕ್ ನಂತರ ಷೇರಿನ ಬೆಲೆ ಏರಿಕೆ ಕಂಡಿದೆ.

ಇನ್ನು ಸಕ್ಕರೆ ವಲಯದ ಕಂಪನಿ ಬಲರಾಂಪುರ್ ಚಿನ್ನಿ ಮಿಲ್ಸ್ ಪ್ರತಿ ಷೇರಿಗೆ ₹150 ರಂತೆ ಬೈಬ್ಯಾಕ್ ಮಾಡಿದೆ. ಮಾರ್ಚ್ ನಲ್ಲಿ ನಡೆದ ಈ ಬೈಬ್ಯಾಕ್ ಸಂದರ್ಭದಲ್ಲಿ ಷೇರಿನ ಬೆಲೆಯೂ ₹100 ರ ಮೇಲಿತ್ತು.  ತದನಂತರದಲ್ಲಿ ಷೇರಿನ ಬೆಲೆ ₹60 ರ ಸಮೀಪಕ್ಕೆ ಕುಸಿದು ಸಧ್ಯ ₹74 ರ ಸಮೀಪವಿದೆ.

ಸಾರ್ವಜನಿಕ ವಲಯದ ಬಿಇಎಲ್‌ ಕಂಪನಿ ಸಹ ಪ್ರತಿ ಷೇರಿಗೆ ₹182.50 ರಂತೆ ಬೈಬ್ಯಾಕ್ ಮಾಡಿದಾಗ ಷೇರಿನ ಬೆಲೆ ₹150 ರ ಸಮೀಪವಿದ್ದು, ಸದ್ಯ, ಈ ಷೇರಿನ ಬೆಲೆ ₹117  ರ ಸಮೀಪವಿದೆ. ಅಂದರೆ ಬೈಬ್ಯಾಕ್ ಅದ
ಮೇಲೆ ಷೇರಿನ  ಬೆಲೆ ಯಾವ ರೀತಿ ಇರಬಹುದೆಂಬುದನ್ನು ಅಂದಿನ ಪೇಟೆಯ ವಾತಾವರಣವೇ ನಿರ್ಧರಿಸುತ್ತದೆ.

ಹೊಸ ಷೇರು:  ಕೇಂದ್ರ ಸರ್ಕಾರದ ಮೂಲ ಸೌಕರ್ಯಗಳ ವಲಯದ ರೈಟ್ಸ್ ಲಿಮಿಟೆಡ್ ಕಂಪನಿಯ ಆರಂಭಿಕ ಷೇರು ವಿತರಣೆ ಜೂನ್ 20 ರಿಂದ ಜೂನ್ 22 ರವರೆಗೂ ನಡೆಯಲಿದೆ.  ವಿತರಣೆಯನ್ನು ₹180   ರಿಂದ ₹185ರ ಬೆಲೆಯ ಅಂತರದಲ್ಲಿ ಮಾಡಲಾಗುವುದು.

ಅರ್ಜಿಯನ್ನು 80 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದ್ದು, ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹6 ರ ರಿಯಾಯ್ತಿ ಇದೆ.

ಫೈನ್ ಆರ್ಗ್ಯಾನಿಕ್‌ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ₹5 ರ ಮುಖಬೆಲೆ ಷೇರುಗಳನ್ನು ಪ್ರತಿ ಷೇರಿಗೆ ₹780 ರಿಂದ ₹783 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದ್ದು,  ವಿತರಣೆಯು ಜೂನ್ 20 ರಿಂದ 22 ರವರೆಗೂ ಮಾಡಲಾಗುವುದು. ಅರ್ಜಿಯನ್ನು 19 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಬೋನಸ್ ಷೇರು

* ಎಲ್‌ಜಿ ಬಾಲಕೃಷ್ಣ ಅಂಡ್ ಬ್ರದರ್ಸ್ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಗೆ ಈ ತಿಂಗಳ 16 ನಿಗದಿತ ದಿನ.

* ಎಸ್ಸೆಲ್ ಪ್ರೋಪ್ಯಾಕ್ ಕಂಪನಿ ವಿತರಿಸಲಿರುವ 1:1  ಅನುಪಾತದ  ಬೋನಸ್ ಷೇರಿಗೆ ಈ ತಿಂಗಳ 21 ನಿಗದಿತ ದಿನ.

* ಇಮಾಮಿ ಲಿಮಿಟೆಡ್ ಕಂಪನಿ ವಿತರಿಸಲಿರುವ 1:1 ರ  ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 22 ನಿಗದಿತ ದಿನ

* ಹಿಕಾಲ್ ಲಿಮಿಟೆಡ್ ಕಂಪನಿ ವಿತರಿಸಲಿರುವ 1:2 ರ  ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 25 ನಿಗದಿತ ದಿನ.

* ಜ್ಯೋತಿ ಲ್ಯಾಬೊರೇಟರೀಸ್ ಲಿಮಿಟೆಡ್ ಕಂಪನಿ ವಿತರಿಸಲಿರುವ 1:1 ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 30 ನಿಗದಿತ ದಿನ.

* ಮಿಂದಾ ಇಂಡಸ್ಟ್ರೀಸ್ ಕಂಪನಿ ವಿತರಿಸಲಿರುವ 2:1 ರ ಅನುಪಾತದ ಬೋನಸ್ ಷೇರಿಗೆ ಜುಲೈ 12 ನಿಗದಿತ ದಿನ.

* ಟ್ರಾನ್ಸ್ ಕಾರ್ಪ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ ವಿತರಿಸಲಿರುವ 1:4 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 20 ನಿಗದಿತ ದಿನ.

ವಾರದ ಮುನ್ನೋಟ

ವೇದಾಂತ ಲಿಮಿಟೆಡ್ ಕಂಪನಿ 18 ರಿಂದ ಸ್ಥಾನ ಪಡೆದುಕೊಳ್ಳುತ್ತಿದ್ದು,  ಈಗಾಗಲೇ ತನ್ನ ತೂತುಕುಡಿ ಘಟಕದ ಕಾರಣ ಹೆಚ್ಚು ಕುಸಿತ ಕಂಡಿರುವ ಈ ಕಂಪನಿ ಷೇರು ಪುಟಿದೇಳಬಹುದು.

ಡಾ. ರೆಡ್ಡಿಸ್ ಲ್ಯಾಬ್ ಷೇರುಪೇಟೆಯಿಂದ ಹೊರಬರುವುದರಿಂದ  ಈಗಾಗಲೇ ಹೆಚ್ಚಿನ ಏರಿಕೆ ಕಂಡಿರುವ ಷೇರಿನ ಬೆಲೆಯ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ.

ಮ್ಯೂಚುವಲ್‌ ಫಂಡ್‌ಗಳು ಎಸ್ಐಪಿ ಮೂಲಕ ಮೇ ತಿಂಗಳಲ್ಲಿ ದಾಖಲೆಯ ₹7,304 ಕೋಟಿ ಸಂಗ್ರಹಿಸಿವೆ ಎಂಬ ಅಂಶ ಪೇಟೆಯಲ್ಲಿ ಹೆಚ್ಚು ಚುರುಕು ಮೂಡಿಸಲಿದೆ.

ರೇಟಿಂಗ್‌ ಸಂಸ್ಥೆ ಫಿಚ್‌,  ಐಸಿಐಸಿಐ ಬ್ಯಾಂಕ್ ಸ್ಥಾನವನ್ನು ಕೆಳದರ್ಜೆಗೆ ಇಳಿಸಿರುವುದು, ಆಕ್ಸಿಸ್ ಬ್ಯಾಂಕ್‌ನ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಈ ಕಂಪನಿ ಷೇರುಗಳನ್ನು ಹೆಚ್ಚು ಏರಿಳಿತಕ್ಕೊಳಪಡಿಸಬಹುದು.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.