ADVERTISEMENT

ಷೇರುವಿಕ್ರಯಕ್ಕೆ ಯಶಸ್ವಿ ಮುನ್ನುಡಿ..!

ಕೆ.ಜಿ ಕೃಪಾಲ್
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಕಳೆದ ವಾರಾಂತ್ಯದಲ್ಲಿ ಒಟ್ಟು 286 ಅಂಶಗಳಷ್ಟು ಇಳಿಕೆ ಕಂಡಿದೆ. ಕಳೆದ ವಾರ ಪ್ರಕಟವಾದ ಕೆಲವೇ ಕಂಪೆನಿಗಳ ಲಾಭಾಂಶಗಳು ದೊಡ್ಡ ಪ್ರಮಾಣದಲ್ಲಿದ್ದವು.  ಇತ್ತೀಚೆಗೆ ಪ್ರಕಟವಾದ ತ್ರೈಮಾಸಿಕ ಆರ್ಥಿಕ ವೃದ್ಧಿ ದರ (ಜಿಡಿಪಿ) ಅಂಕಿ ಅಂಶಗಳು ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.  ಸಾರ್ವಜನಿಕ ಉದ್ದಿಮೆಗಳಲ್ಲಿನ ಬಂಡವಾಳ ಹಿಂತೆಗೆತದ ಕ್ರಮದಲ್ಲಿ `ಒಎನ್‌ಜಿಸಿ~ ಕಂಪೆನಿಯ ಷೇರುಗಳನ್ನು ಹರಾಜಿನ ಮೂಲಕ ವಿತರಿಸಿದ್ದು, ಶೇ 5ರ ಸರ್ಕಾರದ ಭಾಗಿತ್ವವನ್ನು ಪ್ರತಿ ಷೇರಿಗೆ ರೂ303.67 ರಂತೆ `ಬಿಡ್~ದಾರರಿಗೆ ವಿತರಿಸಿ ಒಟ್ಟು ರೂ12,766.75 ಕೋಟಿ ಸಂಗ್ರಹಣೆ ಮಾಡಲಾಗಿದೆ. ಪೇಟೆಯ ದರವು ಶುಕ್ರವಾರದಂದು ರೂ281ರ ಸಮೀಪಕ್ಕೆ ಇಳಿಯಿತು. ಈ ಹರಾಜಿನಲ್ಲಿ ಶೇ 95ರಷ್ಟನ್ನು ಭಾರತೀಯ ಜೀವವಿಮಾ ಸಂಸ್ಥೆ ರೂ12,000 ಕೋಟಿ ಹೂಡಿಕೆಯಿಂದ ಪಡೆದಿರುವುದು ಹರಾಜಿನ ಯಶಸ್ಸಿಗೆ ಕಾರಣವಾಗಿದೆ. ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯಕ್ಕೆ ಇದು ಉತ್ತಮ ಮುನ್ನುಡಿ ಬರೆದಿದೆ.

ಇತ್ತೀಚೆಗೆ ಪ್ರತಿ ಷೇರಿಗೆ ರೂ1,032ರ ಗರಿಷ್ಠ ಬೆಲೆಯಲ್ಲಿ ಸಾರ್ವಜನಿಕ ವಿತರಣೆ ಮಾಡಿದ ಎಂ.ಸಿ. ಎಕ್ಸ್ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ರಾಹುಲ್ ಬಜಾಜ್‌ರವರ ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ಸ್ 15.6 ಲಕ್ಷ ಷೇರುಗಳನ್ನು ಕೊಳ್ಳುವ ಮೂಲಕ ಶೇ 3.06 ಭಾಗಿತ್ವ ಪಡೆದಿದೆ.

ಒಟ್ಟಾರೆ 286 ಅಂಶಗಳಷ್ಟು ಕುಸಿತ ಕಂಡ ಸಂವೇದಿ ಸೂಚ್ಯಂಕ ಮಧ್ಯಮ ಶ್ರೇಣಿಯ ಸೂಚ್ಯಂಕವನ್ನು ಕೇವಲ 45 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 29 ಅಂಶಗಳ ಇಳಿಕೆಗೆ ಕಾರಣವಾಯಿತು.

ಗುರುವಾರದಂದು ವಿದೇಶೀ ವಿತ್ತೀಯ ಸಂಸ್ಥೆಗಳು ಮಾರಾಟದ ಒತ್ತಡ ಹೇರಿದರೂ ಒಟ್ಟಾರೆ ರೂ2,088 ಕೋಟಿ ಹೂಡಿಕೆ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ1,797 ಕೋಟಿ ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ರೂ63.40 ಲಕ್ಷ ಕೋಟಿಯಿಂದ ರೂ63.15 ಲಕ್ಷ ಕೋಟಿಗೆ ಇಳಿದಿದೆ.

ದಿಸಾ ಇಂಡಿಯಾ ಸಾಧನೆ
ದಿಸಾ ಇಂಡಿಯಾ ಕಂಪೆನಿಯು ಪ್ರತಿ ಷೇರಿಗೆ ರೂ200 ರಂತೆ ಲಾಭಾಂಶ ಪ್ರಕಟಿಸಿದ ಕಾರಣ ಕೊನೆಯ ಎರಡು ದಿನಗಳಲ್ಲಿ ಅಂದರೆ ಗುರುವಾರ ಮತ್ತು ಶುಕ್ರವಾರದಂದು ಶೇ 20 ರಷ್ಟು ಏರಿಕೆ ಕಂಡು ಮಿಂಚಿತು. ರೂ2,000 ಸಮೀಪವಿದ್ದ ಷೇರಿನ ದರವು ರೂ2,895ರ ಗರಿಷ್ಠ ಮಟ್ಟಕ್ಕೆ ಜಿಗಿದಿರುವುದು ಗಮನಾರ್ಹವಾಗಿದೆ. ಶೇ 2,000 ದಷ್ಟು ಲಾಭಾಂಶ ಪ್ರಕಟಿಸಿದ ಈ ಕಂಪೆನಿಯು ತನ್ನ ಷೇರಿನ ಬೆಲೆಯ ಜಿಗಿತವನ್ನು ರೂ1,561 ರಿಂದ ರೂ2,895 ರವರೆಗೆ ಕಳೆದ ಒಂದು ತಿಂಗಳಲ್ಲಿ ಪ್ರದರ್ಶಿಸಿದೆ. 2001ರ ಅಕ್ಟೋಬರ್‌ನಲ್ಲಿ ಜಾರ್ಜ್ ಫಿಷರ್ ದಿಸಾ ಲಿ. ಎಂಬ ಹೆಸರಿನಿಂದ ದಿಸಾ ಇಂಡಿಯಾ ಲಿ. ಎಂದು ಕಂಪೆನಿಯ ಹೆಸರನ್ನು ಬದಲಿಸಲಾಗಿದೆ.

ಲಾಭಾಂಶದ ವಿಚಾರ
ಬಿಎಚ್‌ಇಎಲ್ ಶೇ136 (ಮು.ಬೆ.ರೂ2), ಬಾಷ್ ಶೇ 500, ಬಾಟಾ ಇಂಡಿಯಾ ಶೇ 60, ಬ್ಯಾಂಕಿಂಗ್ ಬೀಸ್‌ಶೇ 110 (ನಿ.ದಿ. 12.3.12), ಕ್ಲಾರಿಸ್ ಲೈಫ್ ಸೈನ್ಸಸ್ ಶೇ 20, ದಿಸಾ ಇಂಡಿಯಾ ಶೇ 2000 ಗುಡ್‌ರಿಕ್ ಗ್ರೂಪ್ ಶೇ 40 (ನಿ.ದಿ. ಏಪ್ರಿಲ್ 10), ಕೇವಲ್ ಕಿರಣ್ ಶೇ 60 (ನಿ.ದಿ. 16.3.12), ನಿಪ್ಟಿ ಬೀಸ್ ಶೇ 100 (ನಿ.ದಿ. 12.3.12), ಆರ್‌ಬಿಟ್ ಎಕ್ಸ್‌ಪೋರ್ಟ್ಸ್ ಶೇ 25, ಸ್ಟ್ರೈಡ್ಸ್ ಆರ್ಕೊಲ್ಯಾಬ್ ಶೇ 20, ಸ್ಟೊವೆಕ್ ಇಂಡಸ್ಟ್ರೀಸ್ ಶೇ 68.5, ವೆಸುವಿಯಸ್ ಶೇ 42.5 (ನಿ.ದಿ. 19.4.12).

ಬೋನಸ್ ಷೇರಿನ ವಿಚಾರ
*ಕೆಪಿಐಟಿ ಕಮ್ಮಿನ್ಸ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ 14ನೇ ಮಾರ್ಚ್ ನಿಗದಿತ ದಿನವಾಗಿದೆ.

* ಶಾಲಿನ್ ಟೆಕ್ಸ್‌ಟೈಲ್ಸ್ ಕಂಪೆನಿ 19:1ರ ಅನುಪಾತದ ಬೋನಸ್ ಪ್ರಕಟಿಸಿದೆ.
*ಚಿಸಲ್ ಅಂಡ್ ಹ್ಯಾಮರ್ (ಮೊಬೆಲ್) ಲಿ. ಕಂಪೆನಿಯು 2:1ರ ಅನುಪಾತದ ಬೋನಸ್ ಪ್ರಕಟಿಸಿದೆ.

ಕ್ರೋಡಿಕರಣ ವಿಚಾರ
ಮಹಾನ್ ಇಂಡಸ್ಟ್ರೀಸ್ ಕಂಪೆನಿಯ ರೂ1ರ ಮುಖಬೆಲೆಯ 10 ಷೇರುಗಳನ್ನು ಕ್ರೋಡಿಕರಿಸಿ ರೂ 10ರ ಮುಖಬೆಲೆಯ 1 ಷೇರನ್ನು ನೀಡಲು ಮಾರ್ಚ್ 12 ನಿಗದಿತ ದಿನವಾಗಿದೆ.

ಬಾಂಡ್
ಆರ್‌ಇಸಿ ಕಂಪೆನಿಯು ರೂ3,000 ಕೋಟಿ ಮೌಲ್ಯದ ತೆರಿಗೆ ಮುಕ್ತ ಬಾಂಡ್‌ಗಳನ್ನು ವಿತರಿಸಲಿದ್ದು ಇದರಲ್ಲಿ ಸಣ್ಣ ಹೂಡಿಕೆದಾರರಿಗಾಗಿ ರೂ750 ಕೋಟಿ ಮೌಲ್ಯದ ಬಾಂಡ್ ಮೀಸಲಿಟ್ಟಿದೆ. ಇದರಲ್ಲಿ, ಈ ಹಿಂದಿನ ವಿತರಣೆಗಳಾದ ಎನ್‌ಎಚ್‌ಎಐ, ಹುಡ್ಕೊ, ಪಿಎಫ್‌ಸಿ ಬಾಂಡ್‌ಗಳಾಗಿದ್ದಂತೆ ಸಣ್ಣ ಹೂಡಿಕೆದಾರರ ಮಿತಿ ರೂ 5 ಲಕ್ಷ ಇರದೆ ಕೇವಲ ಒಂದು ಲಕ್ಷ ರೂಪಾಯಿಗಳ ಗರಿಷ್ಠ ಮಿತಿ ಇರುವುದು. ಈ ಮಿತಿಯನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ನಿರ್ಧರಿಸಿದ್ದು, ಇದು `ಸೆಬಿ~ 2010 ರಲ್ಲಿ ವಿಧಿಸಿದ್ದ ರೂ 2 ಲಕ್ಷದ ಗರಿಷ್ಠ ಮಟ್ಟವನ್ನು ಸಹ ಪರಿಗಣಿಸಿಲ್ಲ. ಈ ಕ್ರಮದಿಂದ ಆರ್.ಇ.ಸಿ. ಕಂಪೆನಿಯ ಈ ವಿತರಣೆಯ ಮರ್ಚಂಟ್ ಬ್ಯಾಂಕರ್‌ಗಳು ಹೆಚ್ಚಿನ ಸಂಖ್ಯೆಯ ಸಣ್ಣ ಹೂಡಿಕೆದಾರರನ್ನು ಆಕರ್ಷಿಸಬೇಕಾಗಿದೆ. ಈ ಗಜಗಾತ್ರದ ಹೂಡಿಕೆದಾರರನ್ನು ಆಕರ್ಷಿಸಿ ನಂತರ ಆ ಅರ್ಜಿಗಳನ್ನು ಪರಿಷ್ಕರಿಸಿ, ವಿತರಿಸಿದ ಬಾಂಡ್‌ದಾರರಿಗೆ ಸೇವೆ ಒದಗಿಸಲು ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಕಷ್ಟ. ಈ ಕಂಪೆನಿಯ ಸೇವೆಗಳು ಉತ್ತಮವಾಗಿರದೇ ಇಂತಹ ಗಜಗಾತ್ರದ ಹೂಡಿಕೆದಾರರ ಹಿತವನ್ನು ಎಷ್ಟರಮಟ್ಟಿಗೆ ರಕ್ಷಿಸಲು ಮುಂದಾಗುವುದು ಎಂಬುದನ್ನು ಕಾದುನೋಡಬೇಕಾಗಿದೆ.

ಅಮಾನತು ತೆರವು
*ಕಲರ್ ಚಿಪ್ಸ್ (ಇಂಡಿಯಾ) ಲಿ. ಕಂಪೆನಿಯ ಮೇಲೆ ಸೆಪ್ಟೆಂಬರ್ 2007 ರಲ್ಲಿ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ ಮಾರ್ಚ್ 6 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.

*ಸೂರ್ಯ ಇಂಡಸ್ಟ್ರಿಯಲ್ ಕಾರ್ಪೊರೇಷನ್ ಲಿ. ಮೇ 2000 ದಿಂದಲೂ ಇದ್ದ ಅಮಾನತನ್ನು ತೆರವುಗೊಳಿಸಿಕೊಂಡು ಮಾರ್ಚ್ 9 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.

*ಮೂನ್ ಬೀಮ್ ಇಂಡಸ್ಟ್ರೀಸ್ ಲಿ. ಕಂಪೆನಿಯ ಮೇಲಿನ ಮೇ 2004ರ ಅಮಾನತು ತೆರವುಗೊಳಿಸಿದ ಕಾರಣ 9 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.

ವಿಭಾಗ ಬೇರ್ಪಡಿಸುವಿಕೆ
ಪ್ರೊವೋಗ್ ಇಂಡಿಯಾ ಲಿ. ಕಂಪೆನಿಯ ರೀಟೇಲ್ ಗ್ರಾಹಕ ಆಧಾರಿತ ರಿಯಲ್ ಎಸ್ಟೇಟ್ ಅಭಿವೃದ್ಧಿ ವ್ಯವಹಾರವನ್ನು ಬೇರ್ಪಡಿಸಿ ಪ್ರೊಝೊನ್ ಕ್ಯಾಪಿಟಲ್ ಷಾಪಿಂಗ್ ಸೆಂಟರ್ಸ್ ಲಿ. ರಚಿಸಲಾಗಿದ್ದು ಪ್ರೊವೋಗ್ ಕಂಪೆನಿಯ ರೂ2 ಮುಖಬೆಲೆಯ 1 ಷೇರಿಗೆ ಹೊಸ ಕಂಪೆನಿಯ ಒಂದು ಷೇರು ನೀಡಲಾಗುವುದು. ಇದಕ್ಕಾಗಿ ಮಾರ್ಚ್ 9 ನಿಗದಿತ ದಿನವಾಗಿದೆ.

ವಾರದ ಪ್ರಶ್ನೆ
ಷೇರುಪೇಟೆಯಲ್ಲಿನ ಅಸ್ಥಿರತೆಯಿಂದ ನನ್ನ ಬಳಿ ಇರುವ ಎಲ್ಲ ಷೇರುಗಳನ್ನು ಮಾರಾಟ ಮಾಡಿ, ಡಿಬೆಂಚರ್‌ಗಳಲ್ಲಿ ಹಾಗೂ ಚಿನ್ನ, ಬೆಳ್ಳಿಯ ಮೇಲೆ ಹೂಡಿಕೆ ಮಾಡಿ ನಿಶ್ಚಿಂತೆಯಿಂದ ಇರಬೇಕು ಎಂದುಕೊಂಡಿದ್ದೇನೆ. ನಿಮ್ಮ ಸಲಹೆ ಏನು?

ಉತ್ತರ: ಹೂಡಿಕೆ ಮಾಡಲು, ಈಗಿನ ದಿನಗಳಲ್ಲಿ, ದೃಢ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ದುಸ್ತರ. ಕಾರಣ ಎಲ್ಲವೂ ಚಂಚಲ ಮತ್ತು ಅಸ್ಥಿರ. ಎಲ್ಲಾ ರೀತಿಯ ಹೂಡಿಕೆಗಳಲ್ಲೂ ವೈವಿಧ್ಯಮಯ ಲಕ್ಷಣಗಳಿದ್ದು ಅಪಾಯದ ಅಂಶ ಅಡಕವಾಗಿದೆ. ಬ್ಯಾಂಕ್ ಡಿಪಾಜಿಟ್, ಪೋಸ್ಟ್ ಆಫೀಸಿನ ಉಳಿತಾಯ ಯೋಜನೆಗಳು ಸುರಕ್ಷಿತ ಹಂತದಲ್ಲಿವೆ. ಆದರೆ ಬರುವ ಆದಾಯದ ಇಳುವರಿ ಅತ್ಯಲ್ಪವಾದ್ದರಿಂದ ಆಕರ್ಷಕವಾಗಿರುವುದಿಲ್ಲ. ಈ ಹಂತದಲ್ಲಿ ಪರ್ಯಾಯ ಹೂಡಿಕೆಯಾಗಿ ಕಂಪೆನಿ ಡಿಪಾಜಿಟ್‌ಗಳು, ಷೇರುಗಳು ಲಭ್ಯವಿದ್ದರೂ, ಡಿಪಾಜಿಟ್‌ಗಳು ಅಸುರಕ್ಷಿತ ಹಾಗೂ ಖಾತ್ರಿ ಇರುವುದಿಲ್ಲ. ಕಂಪೆನಿಯ ಭವಿಷ್ಯವನ್ನು ಅವಲಂಬಿಸಿರುತ್ತದೆ. ಇನ್ನು ಡಿಬೆಂಚರ್‌ಗಳೆಂದರೆ ಹೆಚ್ಚಾಗಿ ಫೈನಾನ್ಸ್ ವಲಯದ ಕಂಪೆನಿಗಳೇ ಬಿಡುಗಡೆ ಮಾಡುತ್ತಿರುವುದರಿಂದ ಹೂಡಿಕೆಗೆ ಮುನ್ನ ಎರಡರಷ್ಟು ತುಲನೆ ಅಗತ್ಯ. ಡಿಬೆಂಚರ್‌ಗಳು ಸುರಕ್ಷಿತವೇ ಆದರೂ ಖಾತ್ರಿ ಇರುವುದಿಲ್ಲ. ಕಂಪೆನಿಯ ಕಾರ್ಯವೈಖರಿಯನ್ನೇ ಅವಲಂಭಿಸಿರುತ್ತದೆ. ಹಾಗಾಗಿ ಅಪಾಯವಿದ್ದೇ ಇದೆ.

ಚಿನ್ನ-ಬೆಳ್ಳಿಗಳ ಮೇಲಿನ ಹೂಡಿಕೆಯು ಸುಭದ್ರವೆನ್ನುವ ದಿನಗಳಿದ್ದವು. ಆದರೆ, ಈಗ ಅದನ್ನು ಇತರೆ ಸರಕಿನ ರೀತಿ ವ್ಯವಹರಿಸಲು ಸಾಧ್ಯವಿದ್ದು, ಜತೆಗೆ ಡಿಮ್ಯಾಟ್ ಮೂಲಕ ವಹಿವಾಟಾಗಲು ಅವಕಾಶ ಇರುವುದರಿಂದ ಏರಿಳಿತದ ವೇಗ ಹೆಚ್ಚಾಗಿದೆ. ಉದಾಹರಣೆಗೆ ಮಂಗಳವಾರ 28 ರಂದು, ನ್ಯಾಶನಲ್‌ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿ ರೂ 6,001 ರಿಂದ ರೂ6,280 ಪ್ರತಿ 100 ಗ್ರಾಂ ಬೆಳ್ಳಿಗೆ, ಏರಿಕೆ ಕಂಡಿತು. ಅಂದರೆ ಪ್ರತಿ ಕಿಲೋ ಬೆಳ್ಳಿಯ ಬೆಲೆ ರೂ60,010 ರಿಂದ ರೂ62,800ರ ಬೆಲೆಯಾಗಿ ಸುಮಾರು ರೂ2,800  ಏರಿಕೆ ಕಂಡಿತು.

ಆದರೆ 29 ರಂದು ಬೆಳ್ಳಿಯ ಬೆಲೆಯು ರೂ6,299ರ ಗರಿಷ್ಠದಿಂದ ರೂ5,930 ರವರೆಗೂ ಇಳಿಕೆ ಕಂಡಿತು. (ಪ್ರತಿ 100 ಗ್ರಾಂಗೆ) ಅಂದರೆ ಪ್ರತಿ ಕಿಲೋಗೆ ರೂ3,700 ರಷ್ಟು ಕುಸಿತ ಕೇವಲ ಒಂದೇ ದಿನದ ಏರಿಕೆಯು ರಭಸವಾಗಿದ್ದು ಮರುದಿನದ ಇಳಿಕೆ ಆಘಾತಕಾರಿಯಾಗಿತ್ತು. ಇದು ಅಸ್ಥಿರತೆ ಹೆಚ್ಚಿಸಿದ ಕಾರಣ ಸುರಕ್ಷಿತ ಎನ್ನಲಾಗದು.

ಕಮಾಡಿಟಿ ಪೇಟೆಯ ಚುಕ್ತಾ ದಿನವಾದ್ದರಿಂದ ಭಾರಿ ಏರಿಳಿತಗಳನ್ನು ಕಾಣುವಂತಾಯಿತು.ಒಟ್ಟಿನಲ್ಲಿ ಬೆಲೆಗಳು ಕುಸಿದಾಗ ಉತ್ತಮವಾದ ಕಂಪೆನಿ ಷೇರುಗಳಲ್ಲಿ ಹೂಡಿಕೆ ಮಾಡುವುದು, ಚುರುಕಾದ ಏರಿಕೆ ಕಂಡಾಗ ನಿರ್ಗಮಿಸುವುದು ಷೇರು ಹೂಡಿಕೆಯಲ್ಲಿ ಯಶಸ್ಸು ಕಾಣಲು ಸಹಕಾರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT