ADVERTISEMENT

ಸಿಎಜಿ ವರದಿಗೆ ತತ್ತರಿಸಿದ ಪೇಟೆ

ಕೆ.ಜಿ ಕೃಪಾಲ್
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಕಳೆದ ಶುಕ್ರವಾರ ಯುಗಾದಿಯಂದು ಸಂವೇದಿ ಸೂಚ್ಯಂಕವು 165 ಅಂಶಗಳಷ್ಟು ಏರಿಕೆ ಕಂಡಿತು. ಅದರ ಹಿಂದಿನ ದಿನ ಕಂಡಿದ್ದ 405 ಅಂಶಗಳಷ್ಟು ಇಳಿಕೆಯಿಂದ ಆತಂಕಗೊಂಡಿದ್ದ ಹೂಡಿಕೆದಾರರು, ಶುಕ್ರವಾರ ಸ್ವಲ್ಪ ಗೊಂದಲಕ್ಕೆ ಒಳಗಾಗಿದ್ದು ಸಹಜ.

ಶುಕ್ರವಾರ ಆರಂಭದಲ್ಲಿ ಸೂಚ್ಯಂಕವು ಏರಿಕೆ ಕಂಡರೂ, ಮಧ್ಯಂತರದಲ್ಲಿ ನಕಾರಾತ್ಮಕವಾಗಿದ್ದು ನಂತರ ಚೇತರಿಕೆ ಕಂಡಿತು. ಪೇಟೆಯಲ್ಲಿನ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ಬದಲಾವಣೆ ಕಾಣುತ್ತಿದ್ದು, ಅದಕ್ಕೆ ತಕ್ಕಂತೆ ಏರಿಳಿತಗಳು ದಾಖಲಾಗುತ್ತಿವೆ.

ನೂತನ ರೈಲ್ವೆ ಮಂತ್ರಿಗಳು ಪ್ರಯಾಣದ ದರ ಏರಿಕೆಯನ್ನು ಹಿಂಪಡೆದ ಕಾರಣ ಹಾಗೂ ಕಲ್ಲಿದ್ದಲು ನಿಕ್ಷೇಪದ ಬಗ್ಗೆ ಮಹಾಲೇಖಪಾಲರು (ಸಿಎಜಿ) ಸಲ್ಲಿಸಿದ ವರದಿ ಪೇಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿತು. ಆದರೆ, ಶುಕ್ರವಾರದಂದು ಅಂತರರಾಷ್ಟ್ರೀಯ ಹೂಡಿಕೆ ಸಂಸ್ಥೆ ಗೋಲ್ಡ್‌ಮನ್ ಸ್ಯಾಚೆ  ಭಾರತದ ರೇಟಿಂಗ್ ಹೆಚ್ಚಿಸಿದೆ ಎಂಬ ಕಾರಣ ಚೇತರಿಕೆಗೆ ಕಾರಣವಾಯಿತು. ಕಳೆದ ವಾರದ ಗಮನಾರ್ಹ ಬೆಳವಣಿಗೆ ಎಂದರೆ ಪ್ರಮುಖ ಕಂಪೆನಿಗಳಾದ ಇಐಡಿ ಪ್ಯಾರಿ, ಕೊಲ್ಗೇಟ್ ಪಾಲ್ಮೊಲಿವ್ ಅಮೃತ್ ವನಸ್ಪತಿಗಳು ಆಕರ್ಷಕ ಲಾಭಾಂಶ ಪ್ರಕಟಿಸಿವೆ ಎನ್ನುವುದು. ಆದರೆ, ನಂತರ ಹೂಡಿಕೆದಾರರು ಖರೀದಿಸುವ ಆಲೋಚನೆಗೂ ಸಮಯಾವಕಾಶ ನೀಡಲಿಲ್ಲ. ಅಷ್ಟು ತ್ವರಿತವಾಗಿ ಷೇರುಗಳು ಲಾಭಾಂಶ ರಹಿತ ವಹಿವಾಟು ಆರಂಭವಾಗಿ ಏರಿಳಿತಗಳು ಹರಿತವಾಗುವಂತೆ ಮಾಡಿದವು.

ವಾರದಲ್ಲಿ ಸಂವೇದಿ ಸೂಚ್ಯಂಕ ಒಟ್ಟಾರೆ 104 ಅಂಶಗಳಷ್ಟು ಹಾನಿ ಕಂಡಿತು. ಮಧ್ಯಮ ಶ್ರೇಣಿ ಸೂಚ್ಯಂಕ 10 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 78 ಅಂಶಗಳಷ್ಟು ಇಳಿಕೆಗೆ ಕಾರಣವಾಯಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ1150 ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ656 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆಯ  ಬಂಡವಾಳ ಮೌಲ್ಯವು ರೂ62.42 ಲಕ್ಷ ಕೋಟಿಯಿಂದ       ರೂ 62.07 ಲಕ್ಷ ಕೋಟಿಗೆ ಕುಸಿದಿದೆ.
 
ಹೊಸ ಷೇರಿನ ವಿಚಾರ
ಮುಂಬೈನ ಮಹೇಶ್ ಟ್ಯುಟೋರಿಯಲ್ಸ್ ಸಂಸ್ಥೆಯು `ಎಂ.ಟಿ. ಎಜುಕೇರ್ ಲಿಮಿಟೆಡ್~ ಹೆಸರಿನಲ್ಲಿ ಪ್ರತಿ ಷೇರಿಗೆ ರೂ 74 ರಿಂದ ರೂ80ರ ಅಂತರದಲ್ಲಿ ಸಾರ್ವಜನಿಕ ವಿತರಣೆ ಮಾಡಲಿದೆ. ಈ ವಿತರಣೆಯು ಮಾರ್ಚ್ 27 ರಿಂದ 29ರ   ವರೆಗೂ ತೆರೆದಿರುತ್ತದೆ. ಎಂ.ಟಿ. ಎಜುಕೇರ್ ಲಿ. ಕಂಪೆನಿಯು 9 ಮತ್ತು 10ನೇ ತರಗತಿಯ (ರಾಜ್ಯ, ಸಿಬಿಎಸ್‌ಇ. ಮತ್ತು ಐಸಿಎಸ್‌ಇ ಆಧಾರಿತ), 11 ಮತ್ತು 12ನೇ ತರಗತಿ, ವೃತ್ತಿಪರ ಶಿಕ್ಷಣಗಳಾದ ಎಂಜಿನಿಯರಿಂಗ್ ವೈದ್ಯಕೀಯ ಮತ್ತು ಎಂಬಿಎಗಳ ಪ್ರವೇಶ ಪರೀಕ್ಷೆ ತರಬೇತಿ, ಅಲ್ಲದೆ ಚಾರ್ಟರ್ಡ್ ಅಕೌಂಟೆಂಟ್ ಶಿಕ್ಷಣದ ತರಬೇತಿ ತರಗತಿ ನಡೆಸುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡುಗಳಲ್ಲಿ ಸುಮಾರು 110 ಸ್ಥಳಗಳಲ್ಲಿ 188 ಶೈಕ್ಷಣಿಕ ಕೇಂದ್ರ ಹೊಂದಿದೆ. ಈಗಿನ ಶಿಕ್ಷಣ ವಲಯದ ಷೇರುಗಳು ನೀರಸಮಯ ವಾತಾವರಣಲ್ಲಿರುವುದರಿಂದ, ಈ ಕಂಪೆನಿಯ ಷೇರು ಲೀಸ್ಟಿಂಗ್ ನಂತರ ಯಾವ ರೀತಿಯ ಬೆಂಬಲ ಪಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

*ಫ್ಯೂಚರಿಸ್ಟಿಕ್ ಸೊಲ್ಯೂಷನ್ಸ್ ಲಿ. ಕಂಪೆನಿಯು ದೆಹಲಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿದ್ದು, 21ರಿಂದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ `ಟಿ~ ಗುಂಪಿನಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿದೆ.

*ಮುಂಬೈನಲ್ಲಿನ ರುನಿಚಾ ಟಕ್ಸ್‌ಟೈಲ್ಸ್ ಲಿ. ಕಂಪೆನಿಯು 23 ರಿಂದ `ಟಿ~ ಗುಂಪಿನಲ್ಲಿ ಪರ್ಮಿಟೆಡ್ ಸೆಕ್ಯುರಿಟೀಸ್ ವಲಯದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರಿನ ವಿಚಾರ
*ಆಪ್ಟೋ ಸರ್ಕ್ಯೂಟ್ಸ್ ಲಿ. ಕಂಪೆನಿ ವಿತರಿಸಲಿರುವ 3:10ರ ಅನುಪಾತ ಬೋನಸ್ ಷೇರಿಗೆ ಮಾರ್ಚ್ 31 ನಿಗದಿತ ದಿನ.

*ಆಯಿಲ್ ಇಂಡಿಯಾ ವಿತರಿಸಲಿರುವ 3:2ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ 31 ನಿಗದಿತ ದಿನ.

*ಇಂಡೊಕೊ ರೆಮೆಡೀಸ್ ಲಿ. ಕಂಪೆನಿಯು 29 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಲಾಭಾಂಶ ವಿಚಾರ
ಅಮೃತ್ ವನಸ್ಪತಿ ಶೇ 600 (ಈ ಕಂಪನಿ ಪ್ರತಿ ಷೇರಿಗೆ ರೂ60 ರಂತೆ ಲಾಭಾಂಶ ಪ್ರಕಟಿಸಿದ್ದು, 23 ನಿಗದಿತ ದಿನವೆಂದು ಘೋಷಿಸಿದೆ. 21 ರಿಂದ ಲಾಭಾಂಶ ರಹಿತ ವಹಿವಾಟು ಆರಂಭವಾಯಿತು. ಷೇರಿನ ಬೆಲೆ ಗರಿಷ್ಠ ರೂ 239.50 ರವರೆಗೂ ಜಿಗಿದು ಲಾಭಾಂಶದ ನಂತರ ವಾರಾಂತ್ಯ ಕಂಡಿತು), ಕೊಲ್ಗೇಟ್ ಪಾಲ್ಮೊಲಿವ್ ಶೇ 800 (ಮು.ಬೆ. ರೂ 1, ನಿ.ದಿ. 22, ಈಗ ಲಾಭಾಂಶ ರಹಿತ ವಹಿವಾಟು ಆರಂಭವಾಗಿದೆ) ಇಐಡಿ ಪ್ಯಾರಿ ಶೇ 400 (ಮು.ಬೆ. ರೂ1, ನಿ.ದಿ. 21, ಈಗ ಲಾಭಾಂಶ ರಹಿತ ವಹಿವಾಟು ಆರಂಭವಾಗಿದೆ). ಮದ್ರಾಸ್ ಸಿಮೆಂಟ್ಸ್ ಶೇ 200 (ಮು.ಬೆ. ರೂ1) ಸ್ಟೇಟ್ ಬ್ಯಾಂಕ್ ಆಫ್ ಬಿಕನೂರ್ ಅಂಡ್ ಜೈಪುರ್ ಶೇ 145 (ನಿ.ದಿ. ಮಾರ್ಚ್ 27), ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಶೇ 100 (ನಿ.ದಿ. ಮಾರ್ಚ್ 28) ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಶೇ 160 (ನಿ.ದಿ. ಮಾರ್ಚ್ 30). ರಾಂಕೊ ಇಂಡಸ್ಟ್ರೀಸ್ ಶೇ 90 (ಮು.ಬೆ. ರೂ1) (ನಿ.ದಿ. ಮಾರ್ಚ್ 28). ಸ್ಟೀಲ್ ಕ್ಯಾಸ್ಟ್ ಶೇ 20 (ನಿ.ದಿ. ಮಾರ್ಚ್ 30).

ಮುಖಬೆಲೆ ಸೀಳಿಕೆ ವಿಚಾರ
ಇಂಡೊಕೊ ರೆಮೆಡೀಸ್ ಲಿ. ಕಂಪೆನಿಯು 29 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ. ಸದ್ಯದ ಷೇರಿನ ಮುಖಬೆಲೆ ರೂ 10 ಆಗಿದೆ.

ವಹಿವಾಟಿನಿಂದ ನಿರ್ಗಮನ
ನಿರ್ಮಾ ಲಿ. ಕಂಪೆನಿಯು 28ನೇ ಮಾರ್ಚ್‌ನಿಂದ ಡಿ. ಲೀಸ್ಟ್ ಆಗಲಿದೆ. ಇದಾದ ನಂತರ ಸ್ವಾದೀನದಾರರಾದ ಕರ್ಸನ್‌ಭಾಯಿ ಕೆ ಪಟೇಲ್, ಶಾಂತಾ ಬೆನ್‌ಪಟೇಲ್ ಮತ್ತು ಕುಲ್‌ಗಾ ಹೋಲ್ಡಿಂಗ್ಸ್ ಪ್ರೈ ಲಿ. ರವರು ಅಕ್ಟೋಬರ್ 3 ರವರೆಗೆ ಪ್ರತಿ ಷೇರಿಗೆ ರೂ260 ರಂತೆ ಷೇರುದಾರರಿಂದ ಕೊಳ್ಳಲಿದ್ದಾರೆ ಇದಕ್ಕೆ ಬೇಕಾದ ಒಪ್ಪಿಗೆ ಪತ್ರವನ್ನು ಕಂಪೆನಿ ಅಥವಾ ರಿಜಿಸ್ಟ್ರಾರ್‌ಗೆ ಕಳುಹಿಸಿ ಹಣ ಪಡೆಯಬಹುದು.

ಚಿನ್ನದ ಸಾಲದ ಕಂಪೆನಿಗಳ ನಿಯಂತ್ರಣ
2009ರಲ್ಲಿ ಭಾರತವು ವಿಶ್ವಬ್ಯಾಂಕ್‌ನಿಂದ 200 ಟನ್ ಬಂಗಾರವನ್ನು ಕೊಂಡ ನಂತರ ವಿವಿಧ ದೇಶಗಳು ಸಹ ಬಂಗಾರದ ಶೇಖರಣೆಗೆ ಮುಂದಾಗಿ ಚಿನ್ನದ ಬೆಲೆ ಮತ್ತು ಬೇಡಿಕೆ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿ ಸ್ಥಳೀಯವಾಗಿ ಚಿನ್ನದ ಬೆಲೆಯು ಗಗನಕ್ಕೇರಿದ ಕಾರಣ ಚಿನ್ನದ ಸಾಲದ ಕಂಪೆನಿಗಳು ಕೇವಲ ಶೇ 60ರಷ್ಟು ಚಿನ್ನದ ಮೌಲ್ಯವನ್ನು ಸಾಲ ನೀಡಬಹುದೆಂಬ ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣವು ತಡವಾಗಿ ಬಂದರೂ ಸ್ವಾಗತಾರ್ಹ. ಅಲ್ಲದೆ ಈ ಕಂಪೆನಿಗಳು ವಿತರಿಸುವ ಸಾಲದ ಶೇ 12 ರಷ್ಟು ಬಂಡವಾಳ ಹೊಂದಿರಬೇಕೆಂದು ರಿಸರ್ವ್ ಬ್ಯಾಂಕ್ ನಿರ್ದೇಶಿಸಿದೆ. ಈ ಕಾರಣ ಚಿನ್ನದ ಮೇಲೆ ಸಾಲ ನೀಡುವ ಮುತ್ತೋಟ್ ಫೈನಾನ್ಸ್ ಮತ್ತು ಮಣಪುರಂ ಫೈನಾನ್ಸ್ ಕಂಪೆನಿಗಳು ಭಾರಿ ಕುಸಿತ ಕಂಡವು.
 

ವಾರದ ವಿಶೇಷ
ಯಾವುದಾದರೂ ಪದಾರ್ಥಗಳು, ಸೇವೆಗಳ ದರ ಹೆಚ್ಚಿಸಿದರೆ ಅದನ್ನು ವಿರೋಧಿಸಿ ಹಿಂಪಡೆಯಲು ಸಂಬಂಧಿತ ಇಲಾಖೆಯ ಮೇಲೆ ಒತ್ತಡ ತರುವುದು ಇದುವರೆಗೂ ನಡೆದು ಬಂದ ವಿಧಾನ. ಆದರೆ ಜಾಗತೀಕರಣದ ನಂತರ ದೃಷ್ಠಿಕೋನಗಳು ಬದಲಾಗಿವೆ. ವಿವಿಧ ಸೇವೆಗಳು, ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದ್ದರೆ ಪೇಟೆಯ ಪರಿಸ್ಥಿತಿಗೆ ಅನುಗುಣವಾಗಿದ್ದರೆ ಅವುಗಳು ಸುಧಾರಣಾ ಕ್ರಮವೆಂದು ಮೆಚ್ಚಿಕೊಳ್ಳುತ್ತಾರೆ. ಸರ್ಕಾರ ನೀಡುವ ಸಬ್ಸಿಡಿಗಳು ಮೊಟಕುಗೊಳಿಸಿದರೆ ಅದೂ ಸಹ ಸುಧಾರಣೆ ಕ್ರಮವಾಗಿದೆ. 

 ಪೆಟ್ರೋಲಿಯಂ ಪದಾರ್ಥಗಳು ವಿಶೇಷವಾಗಿ ಡೀಸೆಲ್ ಮತ್ತು ಪೆಟ್ರೋಲ್‌ನ ಬೆಲೆಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿಲ್ಲ ಎಂಬ ಕಾರಣದಿಂದ ತೈಲ ಕಂಪೆನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 7 ರೂಪಾಯಿಗಳ ಹಾನಿ ಅನುಭವಿಸುತ್ತಿವೆ.  ಸರ್ಕಾರ ಪೆಟ್ರೋಲ್ ಬೆಲೆ ಹೆಚ್ಚಿಸಲು ವಿಳಂಬ ಮಾಡುತ್ತಿರುವುದು ಸುಧಾರಣೆಯ ವಿರುದ್ಧವೆಂದು ಅರ್ಥೈಸಲಾಗುತ್ತಿದೆ. ಈ ಕಾರಣ ಪೇಟೆಗಳು ಮಾರಾಟದ ಒತ್ತಡ ಎದುರಿಸುತ್ತವೆ.

ಷೇರುಪೇಟೆಯ ದೃಷ್ಠಿಯಿಂದ ನೋಡಿದರೆ ಇಂತಹ ಸುಧಾರಣಾ ಕ್ರಮಗಳನ್ನು ಅರ್ಥೈಸುವ ಬ್ರೋಕಿಂಗ್ ಹೌಸ್‌ಗಳು ಗ್ರಾಹಕರನ್ನು ಆಕರ್ಷಿಸಲು ಬ್ರೋಕರೇಜ್ ದರಗಳನ್ನು ಹಿಗ್ಗಾ-ಮುಗ್ಗಾ ಕಡಿತಗೊಳಿಸುವುದು ಸುಧಾರಣಾ ಕ್ರಮವೆ. ಇಂತಹ ಸಂಸ್ಥೆಗಳಿಂದ ಉತ್ತಮ ಸೇವೆ ಪಡೆಯಬಹುದೇ ಅನುಭವವೇ ಉತ್ತರಿಸುವುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT