ADVERTISEMENT

ಬ್ಯಾಂಕ್, ಐ.ಟಿ ಷೇರು ನಷ್ಟ

ಸಂವೇದಿ ಸೂಚ್ಯಂಕ 241 ಅಂಶ ಇಳಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 18:33 IST
Last Updated 12 ಫೆಬ್ರುವರಿ 2019, 18:33 IST

ಮುಂಬೈ (ಪಿಟಿಐ): ಷೇರುಪೇಟೆಯು ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ ನಕಾರಾತ್ಮಕ ಅಂತ್ಯಕಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ. ಹೀಗಿದ್ದರೂ ಹೂಡಿಕೆದಾರರು ಮಂಗಳವಾರದ ವಹಿವಾಟಿನಲ್ಲಿ ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಿದರು. ಇದರಿಂದ ಸೂಚ್ಯಂಕ ಇಳಿಕೆ ಕಾಣುವಂತಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ರಿಲಯ್‌ ಎಸ್ಟೇಟ್‌, ಐ.ಟಿ, ಎಫ್ಎಂಸಿಜಿ ಮತ್ತು ಬ್ಯಾಂಕಿಂಗ್‌ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ADVERTISEMENT

ಮುಂಬೈ ಷೇರುಪೇಟೆಯು (ಬಿಎಸ್‌ಇ)ವಹಿವಾಟಿನ ಆರಂಭದಲ್ಲಿ ಕಂಡಿದ್ದ ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫವಾಗಿದೆ. ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದರಿಂದ 241 ಅಂಶಗಳ ಇಳಿಕೆ ಕಂಡು 36,153 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಹಿಂದಿನ ಮೂರು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ 580 ಅಂಶಗಳಷ್ಟು ಇಳಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 57 ಅಂಶ ಇಳಿಕೆಯಾಗಿ 10,831 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಹೀರೊ ಮೋಟೊ ಕಾರ್ಪ್‌, ಎಚ್‌ಡಿಎಫ್‌ಸಿ, ಎಸ್‌ಬಿಐ, ಇನ್ಫೊಸಿಸ್‌, ಎಚ್‌ಸಿಎಲ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಒಎನ್‌ಜಿಸಿ, ಬಜಾಜ್‌ ಆಟೊ ಮತ್ತು ಇಂಡಸ್ ಇಂಡ್‌ ಬ್ಯಾಂಕ್‌ ಷೇರುಗಳು ಶೇ 2.63ರವರೆಗೂ ಇಳಿಕೆ ಕಂಡಿವೆ.

ರೂಪಾಯಿ: ತಿಂಗಳ ಗರಿಷ್ಠ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 48 ಪೈಸೆ ಹೆಚ್ಚಾಗಿದೆ. ಇದರಿಂದ ಒಂದು ಡಾಲರ್‌ಗೆ ₹ 70.70ರಂತೆ ವಿನಿಮಯಗೊಂಡಿತು.

ಇದು ಒಂದು ತಿಂಗಳ ಗರಿಷ್ಠ ಮಟ್ಟವಾಗಿದೆ. 2019ರ ಜನವರಿ 11 ರಂದು ₹ 70.49ರಲ್ಲಿ ವಹಿವಾಟು ಅಂತ್ಯಗೊಂಡಿತ್ತು.

ಆರು ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯ 110 ಪೈಸೆಗಳಷ್ಟು ಹೆಚ್ಚಾಗಿದೆ.

ಬ್ರೆಂಟ್‌ ಕಚ್ಚಾ ತೈಲ ದರವು 2 ಸೆಂಟ್‌ಗಳಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 62.74 ಡಾಲರ್‌ಗಳಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.