ADVERTISEMENT

ವಾಹನ, ಎಫ್‌ಎಂಸಿಜಿ ಷೇರು ಗಳಿಕೆ: ಸೂಚ್ಯಂಕ ಏರಿಕೆ

ಪಿಟಿಐ
Published 15 ಜುಲೈ 2022, 13:41 IST
Last Updated 15 ಜುಲೈ 2022, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ನಾಲ್ಕು ದಿನಗಳ ನಕಾರಾತ್ಮಕ ವಹಿವಾಟಿನಿಂದ ಶುಕ್ರವಾರ ಹೊರಬಂದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 344 ಅಂಶ ಹೆಚ್ಚಾಗಿ 53,761 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 111 ಅಂಶ ಏರಿಕೆ ಕಂಡು 16,049 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 721 ಅಂಶ ಮತ್ತು ನಿಫ್ಟಿ 171 ಅಂಶ ಇಳಿಕೆ ಕಂಡಿವೆ.

ವಹಿವಾಟು ಅಸ್ಥಿರವಾಗಿದ್ದರೂ ಎಫ್‌ಎಂಸಿಜಿ, ವಾಹನ ಮತ್ತು ಬಂಡವಾಳ ಸರಕು ವಲಯಗಳ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿಸಿದ್ದರಿಂದ ಅಂತಿಮವಾಗಿ ಅಲ್ಪ ಗಳಿಕೆ ಕಂಡುಕೊಳ್ಳಲು ಸಾಧ್ಯವಾಯಿತು.

ADVERTISEMENT

ಯುರೋಪ್‌ನ ಮಾರುಕಟ್ಟೆಗಳ ವಹಿವಾಟು ಸಕಾರಾತ್ಮಕವಾಗಿ ಆರಂಭ ಆಗಿದ್ದು ಹಾಗೂ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಖರೀದಿಗೆ ಮುಂದಾಗಿದ್ದು ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.60ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 99.72 ಡಾಲರ್‌ಗಳಿಗೆ ತಲುಪಿತು.

‘ಅಮೆರಿಕದಲ್ಲಿ ಹಣದುಬ್ಬರವು ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಹೀಗಾಗಿ ಹೂಡಿಕೆದಾರರು ಅಮೆರಿಕದ ಫೆಡರಲ್‌ ರಿಸರ್ವ್‌ನ ಹಣಕಾಸು ನೀತಿಯ ಬಗ್ಗೆ ಗಮನ ಹರಿಸಿದ್ದಾರೆ. ಇದರಿಂದಾಗಿ ಷೇರುಪೇಟೆಗಳ ವಹಿವಾಟು ಅಸ್ಥಿರವಾಗಿತ್ತು. ಐ.ಟಿ. ವಲಯದ ಆರ್ಥಿಕ ಸಾಧನೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು, ರೂಪಾಯಿ ಮೌಲ್ಯ ಇಳಿಕೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಿಂದಾಗಿ ಸೂಚ್ಯಂಕಗಳು ಹೆಚ್ಚಿನ ಏರಿಕೆ ಕಾಣಲಿಲ್ಲ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

==

ವಲಯವಾರು ಗಳಿಕೆ (%)

ವಾಹನ;2.34

ಎಫ್‌ಎಂಸಿಜಿ;1.48

ಬಂಡವಾಳ ಸರಕುಗಳು;1.47

ದೂರಸಂಪರ್ಕ;1.35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.