ADVERTISEMENT

ಬಿಕ್ಕಟ್ಟು ಹಾಗೇ ಬಿಟ್ಟು ವಿಶ್ವಮಾನ್ಯತೆಗೆ ಪಟ್ಟು

ಇನ್ನೂ ಹುಟ್ಟದ ಉನ್ನತ ವಿದ್ಯಾಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಉತ್ಕೃಷ್ಟವಂತೆ; ಏನೀ ಕತೆ?

ನಾರಾಯಣ ಎ
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇವೆಲ್ಲಾ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ಬೆಳವಣಿಗೆಗಳಲ್ಲ. ಹೋದ ವಾರ ಕೇಂದ್ರ ಸರ್ಕಾರ ಕೆಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ‘ಉತ್ಕೃಷ್ಟ ಸಂಸ್ಥೆಗಳು’ ಎಂಬ ಸ್ಥಾನಮಾನ ನೀಡಿಬಿಟ್ಟಿತು. ಆಗಲಿ, ಸಂತೋಷ. ಯಾವ್ಯಾವ ಸಂಸ್ಥೆಗಳಿಗೆ ಈ ಬಿರುದು ಸಿಕ್ಕಿದೆ ಅಂತ ನೋಡಿದರೆ ಅಲ್ಲಿತ್ತು ಆಶ್ಚರ್ಯದ ವಿಷಯ. ಉತ್ಕೃಷ್ಟ ಎನ್ನುವ ಬಿರುದು ಪಡೆದ ಸಂಸ್ಥೆಗಳ ಪೈಕಿ ಒಂದು ಖಾಸಗಿ ಸಂಸ್ಥೆ ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ. ಈ ಉದ್ದೇಶಿತ ಸಂಸ್ಥೆಯ ಉದ್ದೇಶಿತ ಹೆಸರು ‘ಜಿಯೊ ಇನ್‌ಸ್ಟಿಟ್ಯೂಟ್’ ಅಂತ. ಜಿಯೊ ಅಂದರೆ ತಿಳಿಯಿತಲ್ಲ. ಜಿಯೊ ಫೋನನ್ನು ದೇಶದ ಕೈಗಿತ್ತ ಅದೇ ರಿಲಯನ್ಸ್ ಸಮೂಹ ಈ ಹೊಸ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಹೊರಟಿದೆ. ಪ್ರಸ್ತಾಪಿತ ಸಂಸ್ಥೆಯ ಒಂದೇ ಒಂದು ಸ್ತಂಭವೂ ಇನ್ನೂ ಎದ್ದು ನಿಲ್ಲುವ ಮೊದಲೇ ಕೇಂದ್ರ ಸರ್ಕಾರ ಅದನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆ ಅಂತ ಘೋಷಿಸಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ದು ಮಾತ್ರವಲ್ಲ, ಪದವಿಯನ್ನೂ ನೀಡಿದ ಕತೆ ಇದು.

ತನ್ನ ನಡೆಯನ್ನು ಸರ್ಕಾರ ಸಹಜವಾಗಿಯೇ ಬಲವಾಗಿ ಸಮರ್ಥಿಸಿಕೊಂಡಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹ ಸಂಸ್ಥೆಗಳ ಬಳಿ ಧನವಿದೆ, ಭೂಮಿಯಿದೆ, ಛಲವಿದೆ ಎಂಬುದನ್ನು ಉನ್ನತ ಮಟ್ಟದ ಸಮಿತಿಯೊಂದು ಪರಿಶೀಲಿಸಿದ ನಂತರವೇ ಜಿಯೊ ಸಂಸ್ಥೆಗೆ ಈ ಬಿರುದು ನೀಡಲಾಗಿದೆ; ಇದರಲ್ಲಿ ತಪ್ಪೇನಿಲ್ಲ ಅಂದಿದೆ. ಸಮರ್ಥನೆಗೇನು ಬರ? ಈ ದೇಶದಲ್ಲಿ ಏನನ್ನಾದರೂ ಸಮ
ರ್ಥಿಸಿಕೊಳ್ಳಬಹುದು. ಅದ್ಯಾವ ಸಮರ್ಥನೆ ನೀಡಿದರೂ ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯೊಂದಕ್ಕೆ ಸರ್ಕಾರ ಈ ರೀತಿ ಅಧಿಕೃತ ಸ್ಥಾನವೊಂದನ್ನು ನೀಡುವುದು ತೀರಾ ವಿಚಿತ್ರವಾಗಿದೆ. ಹಣ ಮತ್ತು ಭೂಮಿ ಇದ್ದಾಕ್ಷಣ ಒಂದು ಉನ್ನತ ಶಿಕ್ಷಣ ಸಂಸ್ಥೆಯು ಉತ್ಕೃಷ್ಟ ಸಂಸ್ಥೆಯಾಗಿಬಿಡುತ್ತದೆ ಎನ್ನುವ ಯೋಚನೆಯೇ ಸಮಸ್ಯಾತ್ಮಕ. ಈ ಸಮೂಹದವರು ಈಗಾಗಲೇ ನಡೆಸುತ್ತಿರುವ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿರಲಿ, ದೇಶದೊಳಗೂ ಯಾವುದೇ ಗುಣಮಟ್ಟದ ಸಂಚಲನ ಸೃಷ್ಟಿಸಿಲ್ಲ. ಆದುದರಿಂದ ಕೇಂದ್ರ ಸರ್ಕಾರದ ಈ ನಿರ್ಧಾರದ ಹಿಂದೆ-ಮುಂದೆ ಹುಟ್ಟಿಕೊಳ್ಳುವ ಪ್ರಶ್ನೆಗಳು ಉನ್ನತ ಶಿಕ್ಷಣ ರಂಗದಲ್ಲಿ ದೇಶದ ಆದ್ಯತೆಗಳೆಲ್ಲಾ ಹೇಗೆ ಬುಡ ಮೇಲಾಗುತ್ತಿವೆ ಎನ್ನುವುದನ್ನು ಸ್ಪಷ್ಟವಾಗಿ ಸಾರುತ್ತಿವೆ.

ಅಷ್ಟಕ್ಕೂ ರಿಲಯನ್ಸ್ ಸಮೂಹದವರಿಗೆ ತಮ್ಮ ಉದ್ದೇಶಿತ ಸಂಸ್ಥೆಗೆ ಈ ರೀತಿ ವಿವಾದಾತ್ಮಕವಾದ ಒಂದು ಹಣೆಪಟ್ಟಿಯನ್ನು ಸರ್ಕಾರದಿಂದ ಪಡೆದುಕೊಳ್ಳುವ ಅಗತ್ಯವಾದರೂ ಏನಿತ್ತು? ಇಡೀ ಬೆಳವಣಿಗೆಯ ಮಹತ್ವ ಇರುವುದೇ ಈ ಪ್ರಶ್ನೆಯಲ್ಲಿ. ಖಾಸಗಿ ಸಂಸ್ಥೆಯೊಂದು ಕೇಂದ್ರ ಸರ್ಕಾರದಿಂದ ಒಮ್ಮೆ ಈ ಸ್ಥಾನಮಾನ ಪಡೆದುಕೊಂಡುಬಿಟ್ಟರೆ ಮತ್ತೆ ಅಂತಹ ಸಂಸ್ಥೆಗಳು ಯಾವುದೇ ರೀತಿಯಲ್ಲಿ ಸರ್ಕಾರಿ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಸರ್ಕಾರಿ ಸ್ವಾಮ್ಯದ ನಿಯಂತ್ರಣ ಸಂಸ್ಥೆಗಳಾದ ಯುಜಿಸಿ (ಅದನ್ನೀಗ ಉನ್ನತ ಶಿಕ್ಷಣ ನಿಯಂತ್ರಣ ಆಯೋಗ ಅಂತ ಬದಲಾಯಿಸುತ್ತಿದ್ದಾರೆ), ಎಂಸಿಐ, ಎಐಸಿಟಿಇ ಮೊದಲಾದ ಯಾವುದೇ ನಿಯಂತ್ರಣ ಮಂಡಳಿಗಳಿಗೂ ಇಂತಹ ಸಂಸ್ಥೆಗಳ ಮೇಲೆ ಯಾವುದೇ ನಿಗಾ ಇರುವುದಿಲ್ಲ. ಒಮ್ಮೆ ಒಂದು ಸಂಸ್ಥೆ ‘ಉತ್ಕೃಷ್ಟ ಸಂಸ್ಥೆ’ ಅಂತ ಸರ್ಕಾರದಿಂದ ಹೆಸರಿಸಿಕೊಂಡರೆ ಮುಗಿಯಿತು. ಆ ನಂತರ ಅದು ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗುತ್ತದೆ. ವಿದ್ಯಾರ್ಥಿಗಳ ನೇಮಕದಿಂದ ಹಿಡಿದು, ಶಿಕ್ಷಕರ ನೇಮಕದಿಂದ ಹಿಡಿದು, ಪಠ್ಯಕ್ರಮ, ಪರೀಕ್ಷೆ ಹೀಗೆ ಎಲ್ಲದರಲ್ಲೂ ಅವು ಸರ್ವತಂತ್ರ ಸ್ವತಂತ್ರ ಸಂಸ್ಥೆಗಳಾಗುತ್ತವೆ.

ADVERTISEMENT

ಸರ್ಕಾರಿ ನಿಯಂತ್ರಣದಿಂದ ಹೊರಬರಬೇಕು ಎನ್ನುವ ಉದ್ದೇಶದಿಂದ ಖಾಸಗಿ ಸಂಸ್ಥೆಗಳು ವಿವಿಧ ಒತ್ತಡ ಹೇರುತ್ತಿರುವುದಕ್ಕೆ ಒಂದು ಇತಿಹಾಸವೇ ಇದೆ. ಇದರ ಪರಿಣಾಮವಾಗಿ ಕೆಲ ಸಂಸ್ಥೆಗಳಿಗೆ ಸ್ವಾಯತ್ತೆ ಅಂತ ನೀಡುವ ಪರಿಪಾಟ ಪ್ರಾರಂಭವಾಗಿ ಬಹಳ ಸಮಯವಾದರೂ, ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ನಿಯಂತ್ರಣ ಮುಂದುವರಿದೇ ಇತ್ತು. ಈಗ ಯುಜಿಸಿಯನ್ನು ಮುರಿದು ಕಟ್ಟಿ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಅಂತ ಸರ್ಕಾರ ಸ್ಥಾಪಿಸಹೊರಟಿರುವುದು ಕೂಡ ಬೇರೆ ಬೇರೆ ರೀತಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಉನ್ನತ ಸಂಸ್ಥೆಗಳನ್ನು ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿಯುವಂತೆ ಮಾಡಬೇಕು ಎನ್ನುವ ಅದೇ ಉದ್ದೇಶದಿಂದ. ಹಾಗಿರುವಾಗ ಇದ್ದಕ್ಕಿದ್ದಂತೆಯೇ ಕೆಲ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರಣದಿಂದ ಪೂರ್ಣವಾಗಿ ಹೊರಗಿಡುವ ಈ ಯೋಚನೆ ಕೇಂದ್ರ ಸರ್ಕಾರಕ್ಕೆ ಬಂದದ್ದಾ
ದರೂ ಯಾಕೆ? ಈ ಪ್ರಶ್ನೆಯ ಜಾಡು ಹಿಡಿದು ಹೋದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಆಡುತ್ತಿರುವ ಹಲವು ಆಟಗಳ ಪರಿಚಯವಾಗುತ್ತದೆ.

ದೇಶದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯು ಜಾಗತಿಕ ಮಟ್ಟದ ಶ್ರೇಷ್ಠ 500 ಸಂಸ್ಥೆಗಳ ಪೈಕಿ ಸ್ಥಾನ ಪಡೆದಿಲ್ಲ ಎಂಬ ವಿಷಯವೊಂದು ಬಹಳ ಕಾಲದಿಂದ ಆಗಾಗ ಪ್ರಸ್ತಾಪವಾಗುತ್ತಲೇ ಇದೆ. ಈಗಿನ ಕೇಂದ್ರ ಸರ್ಕಾರ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆಯಂತೆ. ಹೇಗಾದರೂ ಮಾಡಿ ಕೆಲವು ಭಾರತೀಯ ಸಂಸ್ಥೆಗಳಾದರೂ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡಬೇಕು ಎನ್ನುವ ಸಂಕಲ್ಪ ಮಾಡಿದೆಯಂತೆ. ಅದಕ್ಕೆ ಅನುಗುಣವಾಗಿ ಒಂದು ಸಮಿತಿಯನ್ನು ನೇಮಿಸಿ 10 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮತ್ತು 10 ಖಾಸಗಿ ಸಂಸ್ಥೆಗಳಿಗೆ ಉತ್ಕೃಷ್ಟ ಸಂಸ್ಥೆಗಳು ಎನ್ನುವ ಬಿರುದು ನೀಡಿ ಅವುಗಳನ್ನು ವಿಶ್ವಮಟ್ಟಕ್ಕೆ ಬೆಳೆಸಲು ಪ್ರೇರೇಪಣೆ ನೀಡುವುದು ಉದ್ದೇಶ. ಸರ್ಕಾರಿ ಸಂಸ್ಥೆಗಳಿಗೆ ಸ್ವಾಯತ್ತತೆಯ ಜತೆಗೆ ₹ 1000 ಕೋಟಿ ಅನುದಾನವೂ ಇದೆ. ಖಾಸಗಿ ಸಂಸ್ಥೆಗಳಿಗೆ ಅನುದಾನವಿಲ್ಲ. ಕೇವಲ ಸ್ವಾಯತ್ತತೆ ಮಾತ್ರ.

ಈ ಲೆಕ್ಕಾಚಾರದ ಪ್ರಕಾರ ಯೋಚಿಸಿದರೆ ಭಾರತೀಯ ಸಂಸ್ಥೆಯೊಂದು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದರೆ ಅದು ಸರ್ಕಾರದ ನಿಯಂತ್ರಣದಿಂದ ಹೊರಬರಬೇಕು ಎಂದು ಸರ್ಕಾರವೇ ಒಪ್ಪಿಕೊಂಡ ಹಾಗೆ ಆಗಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಸರ್ಕಾರದ ನಿಯಂತ್ರಣವೇ ಮಾರಕ ಅಂತ ಸರ್ಕಾರ ಒಪ್ಪಿಕೊಂಡಿದೆ. ಸರ್ಕಾರದ
ನಿಯಂತ್ರಣವು ಉನ್ನತ ಶಿಕ್ಷಣಕ್ಕೆ ಅಷ್ಟೊಂದು ಮಾರಕವಾಗಿದ್ದರೆ ಮೊದಲು ಆ ನಿಯಂತ್ರಣಗಳನ್ನು ಎಲ್ಲಾ ಸಂಸ್ಥೆಗಳಿಗೂ ಅನ್ವಯವಾಗುವ ಹಾಗೆ ಪುನರ್‌ರಚಿಸಿದರೆ ಆಗ ಅದು ಸೂಕ್ತ ಕ್ರಮವಾಗುತ್ತದೆ. ಈಗ ಸರ್ಕಾರ ಮಾಡಹೊರಟದ್ದು ಏನು ಅಂದರೆ ಶ್ರೀಮಂತ ಸಂಸ್ಥೆಗಳಿಗೊಂದು ನೀತಿ, ಉಳಿದ ಸಂಸ್ಥೆಗಳಿಗೆ ಇನ್ನೊಂದು ನೀತಿ ಎಂಬ ತತ್ವವನ್ನು. ಖಾಸಗಿಯಾಗಿ ಲಭಿಸುವ ಮಾಹಿತಿ ಪ್ರಕಾರ ರಿಲಯನ್ಸ್ ಸಂಸ್ಥೆಯವರು ಅದೆಷ್ಟು ಬೃಹತ್ತಾಗಿ ಈ ಸಂಸ್ಥೆಯನ್ನು ಕಟ್ಟಲು ಹೊರಟಿದ್ದಾರೆ ಎಂದರೆ ಅವರ ಪೈಪೋಟಿ ಭಾರತದ ಯಾವುದೇ ವಿಶ್ವವಿದ್ಯಾಲಯದ ಅಥವಾ ಸಂಸ್ಥೆಯ ಜತೆಗಲ್ಲ. ವಿಶ್ವದ ಅತ್ಯುತ್ಕೃಷ್ಟ ಅಂತ ಪರಿಗಣಿಸಲಾದ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನೇ ಮುಂದಿನ ಹತ್ತು ವರ್ಷಗಳಲ್ಲಿ ಮಣಿಸುವುದು ಅವರ ಉದ್ದೇಶವಂತೆ. ಉನ್ನತ ಶಿಕ್ಷಣ ರಂಗದಲ್ಲಿ ಈ ರೀತಿ ಖಾಸಗಿ ಹಣ ಸವಾರಿ ಮಾಡುವು
ದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರ ನಿಗಾ ಇಡಬೇಕಾಗಿತ್ತು. ಬದಲಿಗೆ, ಸರ್ಕಾರ ಮಾಡಿದ್ದೇ ಬೇರೆ. ಅದು ಈ ಉದ್ದೇಶಿತ ಸಂಸ್ಥೆಯನ್ನು ಏಕಾಏಕಿ ತನ್ನ ನಿಯಂತ್ರಣದಿಂದಲೇ ಹೊರಗಿರಿಸಿದೆ. ಇದರ ಹಿಂದಿರಬಹುದಾದ ಇತರ ಲೆಕ್ಕಾಚಾರದ ಬಗ್ಗೆ ಜನ ಆಡಿಕೊಳ್ಳುವ ಹಾಗಾಗಿದೆ.

ಅಷ್ಟಕ್ಕೂ ಏನಿದು, ಭಾರತದ ಸಂಸ್ಥೆಗಳನ್ನು ಶತಾಯಗತಾಯ ಜಾಗತಿಕ ಉತ್ಕೃಷ್ಟ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಬೇಕು ಎನ್ನುವ ಹಟ? ಮೇಲ್ನೋಟಕ್ಕೆ ಇದೊಂದು ಉತ್ತಮ ಗುರಿ ಅಂತ ಅನ್ನಿಸಬಹುದು. ಆದರೆ ಈ ವಿಷಯವನ್ನು ಭಾರತದ ಉನ್ನತ ಶಿಕ್ಷಣ ರಂಗದ ಈಗಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು. ಸದ್ಯ ಈ ಕ್ಷೇತ್ರವನ್ನು ಕಾಡುತ್ತಿರುವ ಅಸಮಾನತೆ, ಅಸಮತೋಲನ, ಗುಣಮಟ್ಟದ ಕುಸಿತ ಹೇಗಿದೆ ಎಂದರೆ ಅದು ಇಡೀ ದೇಶದ ಭವಿಷ್ಯವನ್ನೇ ಮಂಕಾಗಿಸುವಷ್ಟಿದೆ. ಅಲ್ಲೊಂದು ಇಲ್ಲೊಂದು ಉತ್ಕೃಷ್ಟ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು– ಅವುಗಳ ಪ್ರಸಿದ್ಧಿಯ ನೆರಳಲ್ಲಿ ಇಡೀ ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟನ್ನು ಮರೆಮಾಚಿಬಿಡುವುದು ಬಹಳ ಕಾಲದಿಂದ ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನ. ಬೇರೆಲ್ಲಾ ವಿಷಯ ಹಾಗಿರಲಿ. ಈ ದೇಶದ ಬಹುತೇಕ ಸರ್ಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪೂರ್ಣಪ್ರಮಾಣದ ಶಿಕ್ಷಕರ ಸಂಖ್ಯೆ ಶೇಕಡ ಐವತ್ತರಷ್ಟೂ ಇಲ್ಲ. ಉಳಿದಂತೆ ಅರೆಕಾಲಿಕ ಪ್ರಾಧ್ಯಾಪಕರೇ ಪಾಠಪ್ರವಚನ ನಡೆಸುತ್ತಿರುವುದು. ಇದರಿಂದಾಗಿ ಉನ್ನತ ಶಿಕ್ಷಣ ವ್ಯವಸ್ಥೆಯೇ ಕುಸಿದಿದೆ. ಸದಾ ಸೇವಾ ಅಭದ್ರತೆ ಮತ್ತು ಚಿಕ್ಕಾಸು ವೇತನಕ್ಕೆ ದುಡಿಯುವ ಈ ಆಧುನಿಕ ಗುಲಾಮಗಿರಿಗೆ ಬಹುಪಾಲು ಮಕ್ಕಳ ಭವಿಷ್ಯವನ್ನು ಒಪ್ಪಿಸಿ ಎಲ್ಲೋ ಒಂದೆರಡು ಸಂಸ್ಥೆಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಿದರೆಷ್ಟು ಬಿಟ್ಟರೆಷ್ಟು!

ಕೆಲವೊಂದು ಬಿಕ್ಕಟ್ಟುಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಇನ್ನು ಕೆಲವು ಬಿಕ್ಕಟ್ಟುಗಳು ಮಾತಿಗೂ ವಸ್ತುವಾಗುವುದಿಲ್ಲ. ಕೃಷಿ ಕ್ಷೇತ್ರದ ಬಿಕ್ಕಟ್ಟು ದೊಡ್ಡ ಚರ್ಚೆಯ ವಿಷಯ. ಕೃಷಿಯಷ್ಟೇ ಬಿಕ್ಕಟ್ಟು ಎದುರಿಸುತ್ತಿರುವ ಉನ್ನತ ಶಿಕ್ಷಣ ಕ್ಷೇತ್ರದ ಬಗ್ಗೆ ದಿವ್ಯ ಮೌನ ಆವರಿಸಿಬಿಟ್ಟಿದೆ. ಅಥವಾ ಎಲ್ಲವೂ ಸರಿಯಾಗಿದೆ ಅಂತ ಸಮಸ್ಯೆಯನ್ನು ಸಾರಿಸಿಬಿಡಲಾಗುತ್ತಿದೆ. ನಿಜಕ್ಕೂ ಈ ಎರಡೂ ಕ್ಷೇತ್ರಗಳ ಬಿಕ್ಕಟ್ಟನ್ನು ಒತ್ತಟ್ಟಿಗೆ ಇರಿಸಿ ನೋಡುವ ಅಗತ್ಯವಿದೆ. ಯಾಕೆಂದರೆ ಕೃಷಿಯ ಬಿಕ್ಕಟ್ಟು ಅಂತ್ಯಗೊಳಿಸಲು ವ್ಯವಸಾಯದ ಮೇಲಿನ ಅವಲಂಬನೆ ತಪ್ಪಿ ಜನ ಇತರ ಕ್ಷೇತ್ರಗಳಲ್ಲಿ ಜೀವನ ಕಂಡುಕೊಳ್ಳಬೇಕು. ಹೀಗಾಗಬೇಕಾದರೆ ಉನ್ನತ ಶಿಕ್ಷಣ ರಂಗ ಶಕ್ತವಾಗಿರಬೇಕು.

ಕೃಷಿಯ ಸಮಸ್ಯೆ ಹೇಗೂ ಸಮಸ್ಯೆಯೇ, ಅದಕ್ಕೆ ಪರಿಹಾರವಾಗಬಹುದಾದ ಉನ್ನತ ಶಿಕ್ಷಣ ರಂಗವೂ ಸಮಸ್ಯೆಗಳ ಆಗರವೇ ಆಗುತ್ತಿದೆ. ರೈತರು ಬೆಳೆದ ಕೃಷಿ ವಸ್ತುಗಳಿಗೆ ಬೆಲೆ ಇಲ್ಲ ಅಂತ ಅವುಗಳನ್ನು ಅವರು ಬೀದಿಯಲ್ಲಿ ಸುರಿದು ಪ್ರತಿಭಟಿಸಿದಾಗ ಕಡೇಪಕ್ಷ ಪತ್ರಿಕೆಗಳಲ್ಲಾದರೂ ಫೋಟೊ ಬರುತ್ತದೆ. ಅದೇ ವೇಳೆ ಒಂದು ಕಾಲದಲ್ಲಿ ಬೇಕಾಬಿಟ್ಟಿಯಾಗಿ ಸ್ಥಾಪನೆಯಾದ ಎಂಜಿನಿಯರಿಂಗ್ ಕಾಲೇಜುಗಳು ಸೀಟುಗಳು ಭರ್ತಿಯಾಗದೆ ಮುಚ್ಚಿಹೋಗುತ್ತಿವೆ. ಕಾಲೇಜುಗಳಿಂದ ಮತ್ತು ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವವರ (ಎಂಜಿನಿಯರಿಂಗ್ ಪದವೀಧರರೂ ಸೇರಿದಂತೆ) ಉದ್ಯೋಗಾರ್ಹತೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದು ನಿರುದ್ಯೋಗದ ಸಮಸ್ಯೆಯಲ್ಲ. ಅದು ಬೇರೆ. ಇದು, ಇರುವ ಉದ್ಯೋಗಗಳಿಗೆ ಪದವಿ ಪಡೆದವರನ್ನು ನೇಮಿಸಲಾಗದ ಸಮಸ್ಯೆ.

ಆದರೆ ಇವುಗಳ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಈ ವಿಚಾರಗಳೆಲ್ಲಾ ಚುನಾವಣಾ ಪ್ರಣಾಳಿಕೆಗಳಲ್ಲಿ ಸೇರಿದರೂ ಅವುಗಳನ್ನು ಹಾರ ಹಿಡಿದು ಯಾರೂ ಬೆಂಬತ್ತುವುದಿಲ್ಲ. ಆದರೆ ಸದ್ಯದಲ್ಲೇ ನಾವು ಜಾಗತಿಕ ಶ್ರೇಷ್ಠ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಒಂದೆರಡು ಭಾರತೀಯ ಸಂಸ್ಥೆಗಳ ಹೆಸರುಗಳನ್ನೂ ನೋಡಬಹುದು. ಜಾಗತಿಕ ಮಟ್ಟದ ಭಾರತೀಯ ಸಂಸ್ಥೆಗಳಲ್ಲಿ ಕಲಿತ ಮಕ್ಕಳು ಯಥಾಪ್ರಕಾರ ಅಮೆರಿಕಕ್ಕೋ ಯುರೋಪಿಗೂ ವಿಮಾನ ಹತ್ತುತ್ತಾರೆ. ಈ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಕತೆ ಹೀಗೇ ಮುಂದುವರಿದರೆ ಮುಂದೊಂದು ದಿನ ಇಲ್ಲಿ ನೆಟ್ಟಗೆ ದುಡಿಯಬಲ್ಲ ಒಬ್ಬ ಗುಮಾಸ್ತನನ್ನು ನೇಮಿಸುವುದಕ್ಕೂ ಕಷ್ಟವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.