ADVERTISEMENT

ಬೆರಗಿನ ಬೆಳಕು: ಸತ್ಯದರ್ಶನ

ಡಾ. ಗುರುರಾಜ ಕರಜಗಿ
Published 20 ಜನವರಿ 2022, 16:02 IST
Last Updated 20 ಜನವರಿ 2022, 16:02 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬುದ್ಧಿ ಪ್ರಕಾಶದಿಂದಂತರನುಭವಶೋಧೆ |
ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ ||
ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ |
ಪದ್ಧತಿಯೆ ಧರ್ಮವೆಲೋ- ಮಂಕುತಿಮ್ಮ || 545||

ಪದ-ಅರ್ಥ: ಬುದ್ಧಿಪ್ರಕಾಶದಿಂದಂತರನುಭವಶೋಧೆ=ಬುದ್ಧಿಪ್ರಕಾಶದಿಂದ+ಅಂತರ+ಅನುಭವ+ಶೋಧೆ, ಸಿದ್ಧವಾ=ಸಿದ್ಧ+ಆ, ಶೋಧೆಯಿಂ=ಶೋಧೆಯಿಂದ, ಸತ್ಯಸಂವೀಕ್ಷೆ=ಸತ್ಯ+ಸಂವೀಕ್ಷೆ(ನಿಜವಾದ ದರ್ಶನ), ಜೀವಿತಪ್ರಶ್ನೆಗನ್ವಯಿಪ=ಜೀವಿತಪ್ರಶ್ನೆಗೆ+ಅನ್ವಯಿಪ(ಅನ್ವಯಿಸಿಕೊಳ್ಳುವ).

ವಾಚ್ಯಾರ್ಥ: ಬುದ್ಧಿಯ ಬೆಳವಣಿಗೆಯಿಂದ ಆಂತರ್ಯದಲ್ಲಿ ಅನುಭವಗಳ ಶೋಧನೆ. ಆ ಶೋಧನೆಯಿಂದ ಸತ್ಯದ ನಿಜದರ್ಶನ ಸಿದ್ಧವಾಗುತ್ತದೆ. ಆ ಶುದ್ಧ ಸತ್ಯವನ್ನು ಬದುಕಿನ ಪ್ರಶ್ನೆಗಳಿಗೆ ಅನ್ವಯಿಸುವ ಪದ್ಧತಿಯೇ ಧರ್ಮ.

ADVERTISEMENT

ವಿವರಣೆ: ಯಾವುದೇ ಜ್ಞಾನವೂ ಒಂದು ಅನುಭವವೇ. ಬುದ್ಧಿ ಅನುಭವಕ್ಕೆ ಒಂದು ಉಪಕರಣ. ಬುದ್ಧಿ ಬೆಳೆದಂತೆ, ವಿವೇಕಯುತವಾದಂತೆ, ಅನುಭವ ಹೆಚ್ಚು ಆಳವೂ, ಅರ್ಥಪೂರ್ಣವೂ ಆಗುತ್ತದೆ. ನಂತರ ಸಿದ್ಧವಾದ ಬುದ್ಧಿ ಅನುಭವಗಳನ್ನು ಶೋಧನೆ ಮಾಡಿ, ಇದು ಸರಿಯೇ, ಅದು ಸರಿಯೇ ಎಂದು ಪರೀಕ್ಷಿಸುತ್ತದೆ. ಇದಲ್ಲ, ಅದಲ್ಲ ಎಂದು ಹಗುರವಾದ ಅನುಭವಗಳನ್ನು ತಳ್ಳಿಹಾಕುತ್ತ ಕೊನೆಗೆ ಸತ್ಯದ ನಿಜದರ್ಶನ ಮಾಡಿಕೊಳ್ಳುತ್ತದೆ.

ಶಾಸ್ತ್ರದಲ್ಲಿ ಬರುವ ‘ನೇತಿ ನೇತಿ’ ತತ್ವವನ್ನು ಶ್ರೀ ರಾಮಕೃಷ್ಣ ಪರಮಹಂಸರು ಒಂದು ಸುಂದರವಾದ ದೃಷ್ಟಾಂತದ ಮೂಲಕ ತಿಳಿಸುತ್ತಾರೆ. ಒಬ್ಬ ತರುಣಿಗೆ ಮದುವೆ ನಿಶ್ಚಯವಾಗಿದೆ. ಗೆಳತಿಯರಿಗೆ ತನ್ನ ಭಾವೀಪತಿಯನ್ನು ತೋರಿಸಬೇಕಾಗಿದೆ. ಆಕೆ ಗೆಳತಿಯರೊಂದಿಗೆ ಮರೆಯಲ್ಲಿ ನಿಂತು ಯುವಕರ ಗುಂಪಿನಲ್ಲಿ ಕುಳಿತ ತರುಣನನ್ನು ತೋರಿಸಬೇಕಾಗಿದೆ. ಆಕೆಯ ಸ್ನೇಹಿತೆಯರು ಒಬ್ಬ ತರುಣನ ಕಡೆಗೆ ಬೆರಳು ತೋರಿಸಿ “ಅವನೇ” ಎಂದಾಗ ಆಕೆ “ಅಲ್ಲ(ನೇತಿ)” ಎನ್ನುತ್ತಾಳೆ. ಇದೇ ರೀತಿ ಬೇರೆ ಬೇರೆ ಯುವಕರನ್ನು ತೋರಿಸಿದಾಗ ಮತ್ತೆ “ಅಲ್ಲ, ಅಲ್ಲ (ನೇತಿ, ನೇತಿ)” ಎನ್ನುತ್ತ, ಕೊನೆಗೆ ಸರಿಯಾದ ಯುವಕನನ್ನು ತೋರಿದಾಗ ಏನನ್ನೂ ಮಾತನಾಡದೆ, ತಲೆ ತಗ್ಗಿಸಿ, ನಾಚಿ ಸುಮ್ಮನಾಗುತ್ತಾಳೆ. ಸತ್ಯದರ್ಶನದಲ್ಲಿಯೂ ಇದೇ ವಿಧಿ. ಪ್ರತಿಯೊಂದು ಅನುಭವವನ್ನು ಬುದ್ಧಿ ಪರೀಕ್ಷಿಸಿ, ಇದೇ ಸತ್ಯವೇ ಎಂದು ಕೇಳಿ ಪರೀಕ್ಷಿಸಿ ಕೊನೆಗೆ “ನೇತಿ” (ಇದಲ್ಲ) ಎನ್ನುತ್ತದೆ. ನಿಜವಾದ ತರುಣನನ್ನು ಗುರುತಿಸಿದಾಗ ತರುಣಿಯ ಮಾತು ನಿಂತಂತೆ ಸತ್ಯದರ್ಶನವಾದಾಗ, ಮಾತು ನಿಲ್ಲುತ್ತದೆ.

ಇದರಂತೆ ಬದುಕಿನಲ್ಲಿ ಬರುವ ಅನೇಕ ಅನುಭವಗಳಾದ ಐಶ್ವರ್ಯ-ದಾರಿದ್ರ್ಯ, ಪ್ರೀತಿ-ದ್ವೇಷ, ಯಶಸ್ಸು-ವೈಫಲ್ಯ, ಕೀರ್ತಿ-ಅಪಕೀರ್ತಿ ಇವುಗಳನ್ನು ವಿವೇಕದಿಂದ ಕೂಡಿದ ಬುದ್ಧಿ ಶೋಧಿಸುತ್ತದೆ. ಇದೇ ಸತ್ಯವೇ, ಇದೇ ನನ್ನ ಬದುಕಿಗೆ ಮುಖ್ಯವೇ ಎಂದು ಪ್ರಶ್ನಿಸುತ್ತದೆ. ಜೀವನದ ಯಾವ ಯಾವ ಸಂದರ್ಭಗಳಲ್ಲಿ ಈ ಸತ್ಯವನ್ನು ಅನ್ವಯಿಸುವುದು ಎಂದು ತಾಳೆ ನೋಡುತ್ತದೆ. ಹೀಗೆ ಸರಿಯಾಗಿ ವಿವೇಕದಿಂದ ಸಂದರ್ಭಗಳನ್ನು ಪರೀಕ್ಷಿಸಿ, ಅವುಗಳ ಮೌಲ್ಯಮಾಡಿ, ಬಳಸುವುದೇ ಧರ್ಮ. ಈ ಧರ್ಮದ ನಡೆ ಜೀವಿತಕ್ಕೊಂದು ಸಾರ್ಥಕ್ಯವನ್ನು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.