ADVERTISEMENT

ಜಾತಕ ಕಥೆಗಳು | ಒಬ್ಬನ ತಪ್ಪು, ಸರ್ವರಿಗೆ ಅಪಾಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 20:30 IST
Last Updated 4 ಫೆಬ್ರುವರಿ 2020, 20:30 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಇಂದ್ರನಾಗಿದ್ದ. ಆಗ ಒಬ್ಬ ವಿದ್ಯಾಧರ ತನಗಿದ್ದ ಮಂತ್ರಶಕ್ತಿಯ ಬಲದಿಂದ ಅರ್ಧರಾತ್ರಿಯ ವೇಳೆಯಲ್ಲಿ ರಾಜನ ಅಂತಃಪುರಕ್ಕೆ ಹೋಗಿ ವಾರಾಣಸಿಯ ರಾಜನ ಪಟ್ಟ ಮಹಿಷಿಯೊಂದಿಗೆ ಅನಾಚಾರ ಮಾಡುತ್ತಿದ್ದ. ಇದು ನಿಧಾನಕ್ಕೆ ಪರಿಚಾರಿಕೆಯರಿಗೆ ತಿಳಿಯಿತು. ಅವರೆಲ್ಲಿ ರಾಜನಿಗೆ ಇದನ್ನು ಹೇಳುತ್ತಾರೋ, ಆಮೇಲೆ ಏನು ಅನಾಹುತವಾಗುತ್ತದೆಯೋ ಎಂದು ಹೆದರಿ ರಾಣಿ ತಾನೇ ರಾಜನಿಗೆ ತಿಳಿಸಿ ಅದರಿಂದ ಪಾರಾಗುವುದು ಹೇಗೆ ಎಂದು ಕೇಳಿದಳು. ರಾಜ ತನ್ನ ಹೆಂಡತಿಯನ್ನು ಮುಗ್ಧೆ ಎಂದು ಭಾವಿಸಿ, ‘ಇಂದು ರಾತ್ರಿ ಅವನು ಬಂದಾಗ ಅವನ ಮೇಲೆ ಏನಾದರೂ ಗುರುತು ಮಾಡು’ ಎಂದು ಹೇಳಿದ.

ರಾಣಿ ತನ್ನ ಹಾಸಿಗೆಯ ಬಳಿ ಹಸಿ ಅರಿಸಿನ ಮತ್ತು ಕುಂಕುಮದ ತಟ್ಟೆಯನ್ನು ಕಲಿಸಿಟ್ಟುಕೊಂಡು, ವಿದ್ಯಾಧರ ರಮಿಸಿ ಹೊರಡುವಾಗ ಅವನ ಬೆನ್ನಮೇಲೆ ಹಸಿ ಅರಿಸಿನದ ಕೈಯನ್ನು ಮೂಡಿಸಿದಳು. ಅದನ್ನೇ ಗಂಡನಿಗೆ ಹೇಳಿದಳು. ರಾಜ ತನ್ನ ದೂತರಿಗೆ ಹೇಳಿ ದಶ ದಿಕ್ಕುಗಳಲ್ಲಿ ಹುಡುಕಿ ಯಾವನಾದರೂ ಮನುಷ್ಯನ ಬೆನ್ನ ಮೇಲೆ ಅರಿಸಿನದ ಕೈ ಗುರುತು ಇದ್ದರೆ ಅವನನ್ನು ಹಿಡಿದು ತನ್ನಿ ಎಂದು ಆಜ್ಞೆ ಮಾಡಿದ. ಈ ವಿದ್ಯಾಧರ ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡಲು ಒಂಟಿ ಕಾಲ ಮೇಲೆ ನಿಂತಿದ್ದ. ಅವನನ್ನು ಕಂಡು ರಾಜದೂತರು ಹಿಡಿಯ ಹೋದಾಗ ಆತನಿಗೆ ತನ್ನ ಕೆಟ್ಟ ಕೆಲಸ ರಾಜನಿಗೆ ತಿಳಿದಿದೆ ಎಂದು ಗೊತ್ತಾಗಿ ಮಂತ್ರಶಕ್ತಿಯಿಂದ ಆಕಾಶದಲ್ಲಿ ಹಾರಿಹೋಗಿಬಿಟ್ಟ.

ದೂತರು ಬಂದು ರಾಜನಿಗೆ ವರದಿ ಕೊಟ್ಟರು. ‘ರಾಜಾ, ಆತನೊಬ್ಬ ಪ್ರವ್ರಜಿತ. ರಾತ್ರಿಯಲ್ಲಿ ಅನಾಚಾರ ಮಾಡಿ ಬೆಳಿಗ್ಗೆ ಸನ್ಯಾಸಿಗಳ ಹಾಗೆ ಪೂಜೆ ಮಾಡುತ್ತಿದ್ದ’. ಆಗ ರಾಜನಿಗೆ ಸಾಧು, ಸಂತರ ಮೇಲೆಯೇ ಕೋಪ ಬಂತು. ಎಲ್ಲ ಸಾಧುಗಳೂ ಹೀಗೆಯೇ ಎಂಬ ತೀರ್ಮಾನಕ್ಕೆ ಬಂದು, ನಾಡಿನಲ್ಲಿರುವ ಎಲ್ಲ ಸಾಧು, ಸಂತರನ್ನು ಓಡಿಸಿಬಿಡಿ, ಓಡದೆ ಹೋದರೆ ಅವರನ್ನು ಕೊಂದುಬಿಡಿ ಎಂದು ರಾಜಭಟರಿಗೆ ಆಜ್ಞೆ ಮಾಡಿದ.

ADVERTISEMENT

ರಾಜ್ಯದಲ್ಲಿದ್ದ ಸಾಧು ಸಂತರು ಬೇರೆ ಕಡೆಗೆ ಹೊರಟು ಹೋದರು. ದೇಶದಲ್ಲಿ ಒಬ್ಬ ಸಾಧುವೂ ಉಳಿಯಲಿಲ್ಲ. ಜನರಿಗೆ ಒಳ್ಳೆಯ ಉಪದೇಶ ತಪ್ಪಿ ಹೋಯಿತು. ತರುಣರು ಧರ್ಮಮಾರ್ಗದಿಂದ ವಿಮುಖರಾಗತೊಡಗಿದರು. ಹಿರಿಯರಲ್ಲೂ ಯಾರೂ ಸಾಧುಗಳಾಗಲಿಲ್ಲ. ಎಲ್ಲರೂ ಹೀಗೆ ಕಠಿಣ ಸ್ವಭಾವದವರೂ, ಸ್ವಾರ್ಥಿಗಳೂ ಆದುದ್ದರಿಂದ ಸ್ವರ್ಗಕ್ಕೆ ಯಾರೂ ಪ್ರವೇಶ ಪಡೆಯಲಿಲ್ಲ. ಇಂದ್ರನಾದ ಬೋಧಿಸತ್ವನಿಗೆ ಇದು ಕಳವಳಕ್ಕೆ ಕಾರಣವಾಯಿತು. ಅವನು ಧ್ಯಾನದಲ್ಲಿ ಕಂಡಾಗ ನಡೆದದ್ದು ತಿಳಿದು ರಾಜನ ತಪ್ಪು ತೀರ್ಮಾನವನ್ನು ಸರಿಪಡಿಸಬೇಕೆಂದು ಯೋಚಿಸಿದ.

ಮರುದಿನ ತಾನು ಅತ್ಯಂತ ಸುಂದರ ರೂಪದ, ಕಾಂತಿಯುತವಾದ ತರುಣನ ರೂಪ ಧರಿಸಿ ತನ್ನೊಡನೆ ಅತ್ಯಂತ ವಯಸ್ಸಾದ, ಕುರೂಪಿಯಾದ ಸನ್ಯಾಸಿಯೊಬ್ಬನನ್ನು ಕರೆದುಕೊಂಡು ರಾಜನ ಅರಮನೆಯ ಬಳಿಗೆ ಬಂದ. ಇದುವರೆಗೂ ಯಾವ ಸನ್ಯಾಸಿಯನ್ನು ನಗರದಲ್ಲಿ ಕಾಣದಿದ್ದ ಭಟರು ಓಡಿಹೋಗಿ ರಾಜನಿಗೆ ಒಬ್ಬ ಅತ್ಯಂತ ತೇಜಸ್ವಿಯಾದ ತರುಣ ವೃದ್ಧ ಸನ್ಯಾಸಿಯೊಂದಿಗೆ ಬಂದದ್ದನ್ನು ತಿಳಿಸಿದರು. ಆತ ಹೊರಗೆ ಬಂದು ತರುಣನನ್ನು ಕಂಡು ಕೇಳಿದ, ‘ನೀನು ಯಾರು ಮಹಾತ್ಮಾ? ಇಷ್ಟು ತೇಜಸ್ವಿಯಾಗಿರುವೆ! ನೀನು ಇಂಥ ಕುರೂಪಿಯಾದ, ಕಪಟಿಯಾದ ಸನ್ಯಾಸಿಯ ಸೇವೆಯನ್ನು ಏಕೆ ಮಾಡುತ್ತೀ?’. ತರುಣ ಹೇಳಿದ, ‘ರಾಜಾ, ಹೇಗೆ ಎಲ್ಲ ಗಿಡಬಳ್ಳಿಗಳ ರಸ ವಿಷವಲ್ಲವೋ, ಹೇಗೆ ಎಲ್ಲ ಸರ್ಪಗಳು ವಿಷಕಾರಿಯಲ್ಲವೋ, ಹೇಗೆ ಎಲ್ಲ ಹಣ್ಣುಗಳು ಕೊಳೆತವುಗಳಲ್ಲವೋ ಹಾಗೆಯೇ ಎಲ್ಲ ಸನ್ಯಾಸಿಗಳು ಕೆಟ್ಟವರಲ್ಲ.

ಕೆಲವು ದುರಾಚಾರಿ ಸಾಧುಗಳಿಂದಾಗಿ ಎಲ್ಲರೂ ಹಾಗೆಯೇ ಎಂದು ಕಲ್ಪಿಸುವುದು ತಪ್ಪು. ನಾನು ಸಾಮಾನ್ಯನಲ್ಲ, ನಾನೇ ಇಂದ್ರ. ಈ ವಿಷಯವನ್ನು ತಿಳಿಸಿ ನಿನ್ನ ಮನಸ್ಸಿನ ತಪ್ಪು ಕಲ್ಪನೆಯನ್ನು ತೆಗೆಯಲೆಂದೇ ಬಂದಿದ್ದೇನೆ’. ರಾಜನಿಗೆ ತನ್ನ ತಪ್ಪಿನ ಅರಿವಾಗಿ ಮತ್ತೆ ರಾಜ್ಯದಲ್ಲಿ ಸನ್ಯಾಸಿ, ಸಾಧುಗಳಿಗೆ ಸೇವೆಯ ಅವಕಾಶ ಮಾಡಿದ.

ಯಾವುದೇ ವೃತ್ತಿಯ ಒಬ್ಬನ ತಪ್ಪು ವೃತ್ತಿಗೆ ಕಳಂಕವನ್ನು ತರುತ್ತದೆ, ತಲ್ಲಣವನ್ನುಂಟು ಮಾಡುತ್ತದೆ. ಒಬ್ಬನಿಂದಾದ ಅಪರಾಧದಿಂದ ಎಲ್ಲರನ್ನು ಹಾಗೆಯೇ ಅಳೆಯುವುದೂ ಸರಿಯಾದ ಕ್ರಮವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.