ADVERTISEMENT

ಮೋದಿ ಪಾಲಿಗೆ ಗುಜರಾತ್ ಏರುದಾರಿಯ ಹಾದಿಯೇ?

ಉಮಾಪತಿ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ಮೋದಿ ಪಾಲಿಗೆ ಗುಜರಾತ್ ಏರುದಾರಿಯ ಹಾದಿಯೇ?
ಮೋದಿ ಪಾಲಿಗೆ ಗುಜರಾತ್ ಏರುದಾರಿಯ ಹಾದಿಯೇ?   

ಕಳೆದ 22 ವರ್ಷಗಳಿಂದ ಗುಜರಾತನ್ನು ಆಳುತ್ತಿರುವ ಬಿಜೆಪಿ ಸದ್ಯದಲ್ಲೇ ತನ್ನ ಪರವಾಗಿ ಮತ್ತೊಂದು ಜನಾದೇಶದ ನಿರೀಕ್ಷೆಯಲ್ಲಿದೆ.

ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ, ಗುಜರಾತನ್ನು ಕೈ ಬಿಟ್ಟು ಬೆನ್ನುಮೂಳೆಯಿಲ್ಲದಂತೆ ಪ್ರವರ್ತಿಸಿದೆ.

ಪ್ರಧಾನಿಯವರ ತವರು ರಾಜ್ಯದಲ್ಲಿ ಚುನಾವಣೆಗೆ ಮುನ್ನ ಮತದಾರರನ್ನು ಒಲಿಸಿಕೊಳ್ಳಲು ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅವುಗಳಿಗೆ ಹಣ ಹಂಚಿಕೆಯನ್ನು ಘೋಷಿಸಲು ಆಳುವ ಪಕ್ಷ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿರುವ ಈ ನಡೆ ನಿಚ್ಚಳ ಪಕ್ಷಪಾತದ್ದು ಎಂಬ ಟೀಕೆಯನ್ನು ಆಯೋಗ ಎದುರಿಸಿದೆ.

ADVERTISEMENT

1992ರಲ್ಲಿ ಬಾಬರಿ ಮಸೀದಿ ನೆಲಸಮದ ನಂತರ ಗುಜರಾತಿನಲ್ಲಿ ಬಿಜೆಪಿ, ಹಿಂದೂ ರಾಷ್ಟ್ರೀಯತೆಯ ಅಗ್ರ ಪ್ರತಿಪಾದಕ ಪಕ್ಷವಾಗಿಯೂ, ಬಲಿಷ್ಠ ರಾಜಕೀಯ ಶಕ್ತಿಯಾಗಿಯೂ ಬೇರೂರಿತು. ಮಸೀದಿ ನೆಲಸಮ ಮಾಡಿದ ಕರಸೇವಕರ ಸೇನೆಯ ಬಹುಪಾಲು ಕಾಲಾಳುಗಳು ಗುಜರಾತಿಗಳಾಗಿದ್ದರು.

1960ರಿಂದ 1990ರ ದಶಕಗಳ ನಡುವೆಯೇ ಕೈಗಾರಿಕೆ ಮತ್ತು ಕೃಷಿ ವಲಯದ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬಂದು ನಿಂತ ರಾಜ್ಯ ಗುಜರಾತ್.

ಎರಡು ದಶಕಗಳಲ್ಲಿ ಗುಜರಾತಿನ ಪ್ರತಿ ಚುನಾವಣೆಯ ಕಾರ್ಯಸೂಚಿಯನ್ನು ಬಿಜೆಪಿ ತಾನೇ ನಿರ್ಧರಿಸಿದೆ. ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್ಸನ್ನು ತಾನು ನಿಗದಿ ಮಾಡಿದ ಕಾರ್ಯಸೂಚಿಗೆ ಎಳೆ ತಂದು ಚುನಾವಣಾ ಕಣದಲ್ಲಿ ಹಣಿದಿದೆ. ಪರಿಸ್ಥಿತಿಯ ಮೇಲಿನ ಅದರ ಬಲಿಷ್ಠ ಹತೋಟಿ ಎಂದಿಗೂ ಸಡಿಲಾದದ್ದು ಇಲ್ಲ.

ಕಾಂಗ್ರೆಸ್ ಚೇತರಿಕೆಯಿಂದ ಈ ಸಲ ಪರಿಸ್ಥಿತಿ ಕೊಂಚ ತಾರುಮಾರಾದಂತೆ ತೋರುತ್ತಿದೆ. ಗುಜರಾತ್ ವಿಕಾಸ ಕುರಿತ ಕಾರ್ಯಸೂಚಿಯನ್ನು ಬಿಜೆಪಿಯ ಮೇಲೆ ಹೇರಲಾಗಿದೆ ಮತ್ತು ಬಿಜೆಪಿ ಅದನ್ನು ಒಪ್ಪಿಕೊಂಡಿದೆ! ಇದೆಲ್ಲ ಆರಂಭ ಆದದ್ದು ಸಾಮಾಜಿಕ ಅಂತರ್ಜಾಲ ಸೀಮೆಯಲ್ಲಿ. ಗುಜರಾತಿನಲ್ಲಿ ‘ವಿಕಾಸಕ್ಕೆ ಹುಚ್ಚು ಹಿಡಿದಿದೆ’ (ಗುಜರಾತಿ ಭಾಷೆಯಲ್ಲಿ-ವಿಕಾಸ್ ಗಾಂಡೋ ಥಾಯೋ ಛೇ) ಎಂಬ ಅಂತರ್ಜಾಲ ಆಂದೋಲನ ಜನಪ್ರಿಯವಾಯಿತು. ಬೆನ್ನಿನಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ‘ನವಸರ್ಜನ ಯಾತ್ರೆ’ಗೆ ಸೌರಾಷ್ಟ್ರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ರಾಜಕೀಯ ಡಿಚ್ಚಿ ಹೊಡೆಯುವ ಆಟ ಮೋದಿಯವರಿಗೆ ಪರಮಪ್ರಿಯ. ಟೀಕಿಸುವವರು, ನಿಂದಿಸುವವರು ತಮ್ಮತ್ತ ಎಸೆದ ಎಲ್ಲ ಕಲ್ಲುಗಳನ್ನು ಒಟ್ಟು ಸೇರಿಸಿ ಮೆಟ್ಟಿಲು ಕಟ್ಟಿ ಮೇಲೇರಿದೆ ಎಂದು ಅವರು ಈಗಾಗಲೆ ಹೇಳಿದ್ದಾರೆ.

ಹಿಂದುತ್ವವನ್ನು ಬಿಟ್ಟು ತಮ್ಮ ವಿರೋಧಿಗಳು ಎಸೆದಿರುವ ವಿಕಾಸದ ಸವಾಲನ್ನೇ ಚುನಾವಣೆಯ ಕಾರ್ಯಸೂಚಿ ಮಾಡಿಕೊಂಡಿದ್ದಾರೆ. ಈ ಬಾರಿ ಹಿಂದುತ್ವದ ಮೇಲೆ ಒತ್ತು ಇಲ್ಲ. ಯಾಕೆಂದರೆ ಹಿಂದುತ್ವದ ಬಾಬತ್ತಿನಲ್ಲಿ ಅವರು ಗುಜರಾತಿಗಳಿಗಾಗಲೀ, ತಮ್ಮನ್ನು ಆರಾಧಿಸುವ ದೇಶವಾಸಿಗಳಿಗಾಗಲೀ ಹೊಸದಾಗಿ ರುಜುವಾತುಪಡಿಸುವುದು ಏನೇನೂ ಉಳಿದಿಲ್ಲ. ಅವರು ಎದೆ ಸೀಳಿ ತೋರಿಸಿ ಆಗಿ ಹೋಗಿದೆ. ಹೀಗಾಗಿ ಈ ಸಲ ಬಿಜೆಪಿಯ ಕಾರ್ಯಸೂಚಿ ವಿಕಾಸ. ‘ನಾನು ಗುಜರಾತ್- ನಾನು ವಿಕಾಸ’ ಎಂಬುದು ಈ ಸಲದ ಬಿಜೆಪಿ ಗೌರವ ಯಾತ್ರೆಯ ಘೋಷವಾಕ್ಯ. 2002ರಲ್ಲಿ ಗೋಧ್ರಾ ದಂಗೆಗಳ ನಂತರ ಮೋದಿ ಇಂತಹುದೇ ಗುಜರಾತ್ ಗೌರವ ಯಾತ್ರೆ ಕೈಗೊಂಡಿದ್ದರು. ಹದಿನೈದು ದಿನಗಳ ಹಾಲಿ ಗೌರವ ಯಾತ್ರೆ ಗುಜರಾತಿನ 182 ವಿಧಾನಸಭಾ ಕ್ಷೇತ್ರಗಳ ಪೈಕಿ 149 ಕ್ಷೇತ್ರಗಳನ್ನು ಈಗಾಗಲೆ ಮುಟ್ಟಿದೆ.

ಮೋದಿಯಿಲ್ಲದ ಗುಜರಾತಿನಲ್ಲಿ ಈ ಬಾರಿ ಬಿಜೆಪಿಯದು ಏರುದಾರಿಯ ಪಯಣ. ಏರಲು ಏದುಬ್ಬಸಪಡಬೇಕಿರುವ ದಾರಿ. ದಿಣ್ಣೆಗಳನ್ನು ಆಳುವ ಪಕ್ಷದ ಪಾಲಿಗೆ ರೂಪಿಸಿದ ಕೀರ್ತಿ ಪ್ರತಿಪಕ್ಷಗಳದೇನೂ ಅಲ್ಲ. ಸೋತು ಸೊರಗಿ ಮೂಲೆಗೆ ಬಿದ್ದಿರುವ ಅವು ಇನ್ನೂ ಸರಿಯಾಗಿ ಮೈ ಕೊಡವಿ ನಿಂತಿಲ್ಲ. ದೇಶದ ಆರ್ಥಿಕ ಪ್ರಗತಿಯನ್ನು ಬಹಳ ಹಿಂದಕ್ಕೆ ಜಗ್ಗಿರುವ ನೋಟು ರದ್ದತಿ, ಅರೆ ಬೆಂದದ್ದೆಂದು ಬಣ್ಣಿಸಲಾಗುತ್ತಿರುವ ಜಿ.ಎಸ್.ಟಿ. ತೆರಿಗೆ ಸುಧಾರಣೆಯ ಜಾರಿ, ವ್ಯಾಪಾರ– ಉದ್ಯಮಗಳ ರಾಜ್ಯವಾದ ಗುಜರಾತಿನ ನಡು ಮುರಿದಿವೆ. ಜವಳಿ ಉದ್ಯಮ ₹ 1,500 ಕೋಟಿ ನಷ್ಟ ಎದುರಿಸಿದೆ. ಸಣ್ಣ ಕೈಗಾರಿಕೆಗಳು ಕದ ಮುಚ್ಚಿವೆ. ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದರು. ರೈತರು ಸಿಟ್ಟಿಗೆದ್ದಿದ್ದಾರೆ. ಸರ್ದಾರ್ ಸರೋವರ ಜಲಾಶಯದ ತೂಬಿನ ಬಾಗಿಲುಗಳನ್ನೇನೋ ಬಂದ್ ಮಾಡಿ ಆಯಿತು. ಆದರೆ ಹೊಲಗಳಿಗೆ ನೀರು ಹರಿಸುವ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ.

ಬಿಜೆಪಿಯ ಗೌರವ ಯಾತ್ರೆ ಅಲ್ಲಲ್ಲಿ ಪ್ರತಿಭಟನೆಗಳನ್ನು ಎದುರಿಸಿರುವುದು ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ವಿರಳ ವಿದ್ಯಮಾನ. ರಾಹುಲ್ ಗಾಂಧಿ ರ‍್ಯಾಲಿಗಳಿಗೆ ಜನ ಸೇರುತ್ತಿದ್ದಾರೆ. ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಬರದಂತೆ ತಡೆಯುವ ಬಿಜೆಪಿಯ ರಣತಂತ್ರ ಮಕಾಡೆಯಾಗಿ ಅಮಿತ್ ಷಾ ಅವರ ಅಹಂ ಪೆಟ್ಟು ತಿಂದಿದೆ. ಅವರ ಮಗ ಜೈ ಷಾ ಅವರ ಕಂಪೆನಿ ಅವ್ಯವಹಾರದ ಆರೋಪಗಳನ್ನು ಎದುರಿಸಿದೆ. ಶೇ 12ರಷ್ಟಿರುವ ಬಲಿಷ್ಠ ಪಟೇಲ್ (ಪಾಟೀದಾರ) ಸಮುದಾಯ ಮೀಸಲಾತಿ ಕೋರಿ ಸಿಡಿದೆದ್ದಿದೆ. ದೇಶದ್ರೋಹದ ಕೇಸು, ಗಡಿಪಾರಿನ ಶಿಕ್ಷೆ ಎದುರಿಸಿದ ಪಟೇಲ್ ಆಂದೋಲನದ ಯುವ ನಾಯಕ ಹಾರ್ದಿಕ್ ಪಟೇಲ್ ಹೆಡೆ ತುಳಿಸಿಕೊಂಡ ಹಾವಿನಂತೆ ಆಳುವ ಪಕ್ಷದ ವಿರುದ್ಧ ಭುಸುಗುಟ್ಟಿದ್ದಾರೆ.

ಹಾರ್ದಿಕ್ ಪಟೇಲ್ ಸೇರಿದಂತೆ ಮೂರು ಜಾತಿ ವರ್ಗಗಳಿಗೆ ಸೇರಿದ ಸಿಡಿಗುಂಡುಗಳಂತಹ ಮೂವರು ಯುವ ನಾಯಕರು ಸರ್ಕಾರದ ವಿರುದ್ಧ ಕೈ ಜೋಡಿಸುವ ಸಾಧ್ಯತೆ ಇದೆ. ಸತ್ತ ಹಸುವಿನ ಚರ್ಮ ಬಿಡಿಸುತ್ತಿದ್ದ ದಲಿತರನ್ನು ಬೆತ್ತಲು ಮಾಡಿ ಅಮಾನುಷವಾಗಿ ಥಳಿಸಿದ ಕುಖ್ಯಾತ ಊನಾ ಘಟನೆಯ ನಂತರ ಪ್ರಸಿದ್ಧಿಗೆ ಬಂದ ಪಾದರಸದಂತಹ ಚಟುವಟಿಕೆಯ ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತು ಗುಜರಾತ್ ಕ್ಷತ್ರಿಯ-ಠಾಕೂರ್ ಸೇನಾದ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಹೋರಾಟಗಳೂ ಗುಜರಾತ್ ಸರ್ಕಾರದ ಭೂಸ್ವಾಧೀನ ನೀತಿಯ ವಿರುದ್ಧ ಎದೆ ಸೆಟೆಸಿವೆ.

ರಾಷ್ಟ್ರೀಯ ಭದ್ರತೆ, ಮೂಲಸೌಕರ್ಯ ನಿರ್ಮಾಣ , ರಾಜ್ಯ ಕೈಗೊಳ್ಳುವ ಕೈಗಾರಿಕೆ ಕಾರಿಡಾರ್ ನಿರ್ಮಾಣ, ವಿದ್ಯುದೀಕರಣ ಯೋಜನೆಗಳು ಹಾಗೂ ಬಡವರಿಗೆ ವಸತಿ ನಿರ್ಮಾಣದ ಉದ್ದೇಶಕ್ಕೆಂದು ಜಮೀನು ಸ್ವಾಧೀನಪಡಿಸಿಕೊಳ್ಳಲು ಆಯಾ ಪ್ರದೇಶದ ಶೇ 80ರಷ್ಟು ರೈತರ ಅನುಮತಿಯ ಅಗತ್ಯ ಇಲ್ಲ, ಜಮೀನು ಸ್ವಾಧೀನದ ಸಾಮಾಜಿಕ ಸಾಧಕ ಬಾಧಕಗಳ ಅಧ್ಯಯನ ಬೇಕಿಲ್ಲ ಎನ್ನುತ್ತದೆ ಗುಜರಾತ್ ಸರ್ಕಾರದ ಭೂನೀತಿ.

1,500 ಕಿ.ಮೀ. ಉದ್ದದ ಮುಂಬಯಿ-ದೆಹಲಿ ಕೈಗಾರಿಕೆ ಕಾರಿಡಾರ್ ಮತ್ತು 900 ಚದರ ಕಿ.ಮೀ. ವಿಸ್ತೀರ್ಣದ ಧೊಲೇರ ವಿಶೇಷ ಬಂಡವಾಳ ಹೂಡಿಕೆ ಪ್ರದೇಶಕ್ಕೆಂದು ಗುಜರಾತ್ ಸರ್ಕಾರ ಸಾವಿರಾರು ಎಕರೆಗಳಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಜಮೀನುದಾರ ಸಮುದಾಯಗಳಾದ ಪಟೇಲರು, ಠಾಕೂರರು ಹಾಗೂ ಕ್ಷತ್ರಿಯರ ವಿರೋಧವನ್ನೂ ಗುಜರಾತ್ ಸರ್ಕಾರ ಎದುರಿಸಿದೆ. ಬಡವರಿಗೆ ಜಮೀನಿನ ಮರುಹಂಚಿಕೆಗೆ ಸಂಬಂಧಿಸಿದಂತೆ 1960ರಲ್ಲಿ ಜಾರಿಯಾಗಿದ್ದ ಕೃಷಿ ಭೂಮಿ ನಿಯಂತ್ರಣ ಕಾಯ್ದೆಗೆ 2015ರಲ್ಲಿ ತಂದಿರುವ ತಿದ್ದುಪಡಿ ದಲಿತರನ್ನು ಕೆರಳಿಸಿದೆ. 1960ರ ಕಾಯ್ದೆಯಡಿ ಸಾವಿರಾರು ಎಕರೆ ಜಮೀನು ಸರ್ಕಾರದ ಬಳಿ ಉಳಿದಿತ್ತು. ಭೂರಹಿತ ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗಗಳ ಬಡವರಿಗೆ ಹಂಚಿಕೆಗೆ ಬದಲಾಗಿ, ಈ ಜಮೀನನ್ನು ಕೈಗಾರಿಕೆ ಯೋಜನೆಗಳಿಗೆ ಹಂಚಿಕೆಗೆ ದಾರಿ ತೆರೆದಿರುವ ತಿದ್ದುಪಡಿಯಿದು. ಭಾರೀ ಕಂಪೆನಿಗಳು ಅಗ್ಗದ ದರಕ್ಕೆ ಜಮೀನು ಸ್ವಾಧೀನಪಡಿಸಿಕೊಂಡಿವೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳ ಜೀವನಮಟ್ಟದ ಅಂತರ ಹೆಚ್ಚಿದೆ. 2010ರ ಅಂಕಿ ಅಂಶಗಳ ಪ್ರಕಾರ ಗ್ರಾಮೀಣ ಗುಜರಾತಿನಲ್ಲಿ ಬಡತನದ ರೇಖೆಗಿಂತ ಕೆಳಗೆ ಜೀವಿಸಿರುವ ಜನರ ಪ್ರಮಾಣ ಶೇ 27. ಪಟ್ಟಣ ಪ್ರದೇಶದ ಬಡವರ ಪ್ರಮಾಣ ತಗ್ಗತೊಡಗಿದೆ.

ಪಟ್ಟಣ ಪ್ರದೇಶಗಳತ್ತ ಗುಳೆ ಹೋದ ಗ್ರಾಮೀಣ ಗುಜರಾತಿಗರಿಗೆ ತಾವು ನಿರೀಕ್ಷಿಸಿದ ಉತ್ತಮ ಸಂಬಳದ ಉದ್ಯೋಗಗಳು ದೊರೆಯುತ್ತಿಲ್ಲ. 60 ಲಕ್ಷ ಮಂದಿ ಗುಜರಾತಿ ಯುವಕರು ಕೈಗೆ ಕೆಲಸವಿಲ್ಲದೆ ಕುಳಿತಿದ್ದಾರೆ ಎಂಬುದು ಅಲ್ಪೇಶ್ ಠಾಕೂರ್ ಆರೋಪ.

ಗುಜರಾತ್ ಎಲ್ಲ ಗುಜರಾತಿಗರ ಪಾಲಿಗೆ ಅನುಕರಣೀಯ ಅಭಿವೃದ್ಧಿ ಮಾದರಿ ಆಗಿಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ತಮ್ಮ ರಾಜ್ಯವು ಅಭಿವೃದ್ಧಿಗೊಂದು ಮಾದರಿ ಎಂದು ಎದೆ ಉಬ್ಬಿಸಿ ಸಾರಿದ್ದರು. ಆದರೆ ಅವರು ಕೈಗೊಂಡ ಸಾರ್ವಜನಿಕ ನೀತಿ ನಿರ್ಧಾರಗಳು ಮತ್ತು ಅನುಸರಿಸಿದ ರಾಜಕಾರಣವು ಅಸಮಾನತೆಗಳನ್ನು ಇನ್ನಷ್ಟು ಮತ್ತಷ್ಟು ಹಿಗ್ಗಿಸಿದವೇ ವಿನಾ ಕುಗ್ಗಿಸಲಿಲ್ಲ. ಪ್ರಭುತ್ವವು ಕಾರ್ಪೊರೇಟ್ ವಲಯದೊಂದಿಗೆ ಶಾಮೀಲಾಗುವುದು ಗುಜರಾತಿನ ಹಳೆಯ ಪರಂಪರೆ. ಮೋದಿಯವರ ಹಯಾಮಿನಲ್ಲಿ ಈ ಪರಂಪರೆ ರಭಸಗತಿ ಗಳಿಸಿತು. ದೈಹಿಕ ಶ್ರಮ ಅಗ್ಗವಾಯಿತು, ಉದ್ಯಮಗಳಿಗೆ ಭೂ ಸ್ವಾಧೀನ ಸುಲಭ ದರಕ್ಕೆ ಸಲೀಸಾಗಿ ದಕ್ಕಿತು. ತೆರಿಗೆ ರಿಯಾಯಿತಿಗಳ ಮಳೆ ಸುರಿಯಿತು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಶಿಕ್ಷಣ ಮತ್ತು ಸ್ವಾಸ್ಥ್ಯ ವಲಯಗಳಿಗೆ ಗುಜರಾತ್ ಸರ್ಕಾರ ಮಾಡಿದ ವೆಚ್ಚ ಕಡಿಮೆ. ಮೋದಿಯವರ ಈ ತೆರನಾದ ಆರ್ಥಿಕ-ರಾಜಕಾರಣದ ಲಾಭ ಪಡೆದದ್ದು ಗುಜರಾತಿನ ಮಧ್ಯಮ ಮತ್ತು ನವಮಧ್ಯಮ ವರ್ಗಗಳು. ಮೋದಿಯವರ ಗೆಲುವಿನ ಬೀಗದ ಕೈಗಳು ಈ ವರ್ಗಗಳು. ಶೇ 30ರಷ್ಟಿರುವ ಮುಸಲ್ಮಾನರು, ದಲಿತರು, ಆದಿವಾಸಿಗಳು ಈ ಗುಜರಾತ್ ಮಾದರಿಯ ವಿಕಾಸದಿಂದ ಬಹುತೇಕ ಹೊರಗೆ ಉಳಿದರು. ವಿಕಾಸವಿಲ್ಲದ ಬೆಳವಣಿಗೆ ಮತ್ತು ಸಾಮಾಜಿಕ-ರಾಜಕೀಯ ಧ್ರುವೀಕರಣವೇ ಗುಜರಾತ್ ಮಾದರಿ ಎನ್ನುತ್ತಾರೆ ಪ್ರಸಿದ್ಧ ರಾಜಕೀಯ-ಸಾಮಾಜಿಕ ವಿಶ್ಲೇಷಕ ಕ್ರಿಸ್ಟೋಫೆ ಜಫರ್ಲಟ್.

ಗುಜರಾತ್ ಎಷ್ಟೇ ಮುಂದುವರೆದಿದೆ ಎನ್ನಲಾಗಿದ್ದರೂ ಅಲ್ಲಿನ ಆದಿವಾಸಿ ಜನಾಂಗಗಳು ಈಗಲೂ ದಾರಿದ್ರ್ಯದ ಕೂಪದಿಂದ ಹೊರಬಿದ್ದಿಲ್ಲ. ಹತ್ತು ಹಲವು ಸಾಮಾಜಿಕ- ಆರ್ಥಿಕ ಸಮಸ್ಯೆಗಳು ಈ ಜನರನ್ನು ಕಾಡಿರುವುದು ಹೌದು ಎಂದು ಖುದ್ದು ಅಂದಿನ ಮೋದಿ ನೇತೃತ್ವದ ರಾಜ್ಯ ಸರ್ಕಾರವೇ ಒಪ್ಪಿದ್ದಕ್ಕೆ ಅಧಿಕೃತ ದಾಖಲೆಗಳಿವೆ. ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆ ಈಗಲೂ ಆದಿವಾಸಿ ಸೀಮೆಯಲ್ಲಿ ಸರ್ವೇಸಾಮಾನ್ಯ ಸಂಗತಿ. ಈ ಸಮುದಾಯಗಳ ಆದಾಯ ಮಟ್ಟ ಕೆಳಹಂತದಲ್ಲೇ ಒದ್ದಾಡಿದೆ. ಪೌಷ್ಟಿಕಾಂಶ ಇಲ್ಲದ ಪಿಷ್ಟಪ್ರಧಾನ ಉಣಿಸು ಅವರ ರಟ್ಟೆಗಳಿಗೆ ಕಸುವು ತುಂಬಿಲ್ಲ.

ನವಸರ್ಜನ್ ಟ್ರಸ್ಟ್ 2013ರಲ್ಲಿ 1,589 ಹಳ್ಳಿಗಳ ಸಮೀಕ್ಷೆ ನಡೆಸಿತು. ವರದಿಯ ಪ್ರಕಾರ ಅರ್ಧಕ್ಕೂ ಹೆಚ್ಚು ಸಂಖ್ಯೆಯ ಹಳ್ಳಿಗಳಲ್ಲಿ ಬಾವಿ, ದೇವಾಲಯ, ಚಹಾ ಅಂಗಡಿ, ಪಂಚಾಯಿತಿ ಕಚೇರಿಗಳು, ಕ್ಷೌರದ ಮಳಿಗೆಗಳು, ಮಧ್ಯಾಹ್ನದ ಬಿಸಿಯೂಟ ದಲಿತರ ಪಾಲಿಗೆ ಎಟುಕದಷ್ಟು ದೂರ ಉಳಿದಿವೆ.

ಕಳೆದ 10 ವರ್ಷಗಳಲ್ಲಿ ದಲಿತರ ಏಳಿಗೆಗೆ ಸಾಕಷ್ಟು ಹಣ ನೀಡಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಸಿ.ಎ.ಜಿ. ತಪರಾಕಿ ಬಿದ್ದಿದೆ. ಶೇ 7.1ರಷ್ಟಿರುವ ದಲಿತರಿಗೆ 2007-08ರಲ್ಲಿ ಬಜೆಟ್‌ನ ಶೇ 1.41ರಷ್ಟು ಹಂಚಿಕೆ ಮಾಡಲಾಗಿತ್ತು. 2011-12ರಲ್ಲಿ ಈ ಪ್ರಮಾಣ ಶೇ 3.20ಕ್ಕೆ ಏರಿದೆ.

1970ರಲ್ಲಿ ಜೀನಾಭಾಯಿ ದರ್ಜಿ ಮತ್ತು ಮಾಧವಸಿನ್ಹ ಸೋಲಂಕಿಯ ಆಗಮನದ ತನಕ ಕಾಂಗ್ರೆಸ್ ಪಕ್ಷದಲ್ಲಿ ಸರ್ದಾರ್‌ ವಲ್ಲಭ ಭಾಯಿ ಪಟೇಲ್, ಕೆ.ಎಂ.ಮುನ್ಷಿ, ಮೊರಾರ್ಜಿ ದೇಸಾಯಿ, ಗುಲ್ಜಾರಿಲಾಲ್ ನಂದಾ ಅವರಂತಹ ಹಿರಿಯ ಕಾಂಗ್ರೆಸಿಗರು ಯಾರೂ ದಲಿತರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ದರ್ಜಿ ಮತ್ತು ಸೋಲಂಕಿ 1972ರಲ್ಲಿ ಅತ್ಯಂತ ಬಲಿಷ್ಠ ಜಾತಿ ಮೈತ್ರಿಯಾದ KHAMನ್ನು (ಕ್ಷತ್ರಿಯ, ಹರಿಜನ, ಆದಿವಾಸಿ ಹಾಗೂ ಮುಸ್ಲಿಂ) ಕಟ್ಟಿ ನಿಲ್ಲಿಸಿದರು. 1980ರ ವಿಧಾನಸಭಾ ಚುನಾವಣೆಯಲ್ಲಿ 141 ಮತ್ತು 1985ರಲ್ಲಿ ಕಾಂಗ್ರೆಸ್ ಪಕ್ಷ 149 ಸೀಟು ಗೆದ್ದು ವಿಕ್ರಮ ಸ್ಥಾಪಿಸಿತ್ತು

1995ರಿಂದ ಗುಜರಾತಿನಲ್ಲಿ ಬಿಜೆಪಿಗೆ ಸೋಲೇ ಇಲ್ಲ. ಆದರೆ ಗೆದ್ದ ಸೀಟುಗಳ ಸಂಖ್ಯೆ 127 ದಾಟಿಲ್ಲ. ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 182. ಗುಜರಾತ್ ದಂಗೆಯ ನಂತರದ 2002ರ ಕೋಮು ಧ್ರುವೀಕರಣ ಶಿಖರ ಮುಟ್ಟಿದ್ದ ದಿನಗಳಲ್ಲಿ ಮೋದಿಯವರು ಗೆದ್ದ ಸೀಟುಗಳು 127. 2012ರಲ್ಲಿ ಕೂಡ ಮೋದಿಯವರು ಗೆದ್ದ ಸೀಟುಗಳು 115 ಮಾತ್ರ. ಕಾಂಗ್ರೆಸ್ ಪಕ್ಷ ಎಷ್ಟೇ ಸೋತು ಕಂಗೆಟ್ಟಿದ್ದರೂ, ಅದರ ಮತಪ್ರಮಾಣ ಗಳಿಕೆ ಶೇ 38ಕ್ಕಿಂತ ಕೆಳಗೆ ಕುಸಿದಿಲ್ಲ. ಸೋಲು ಗೆಲುವನ್ನು ನಿರ್ಧರಿಸಿರುವ ಮತಗಳ ಪ್ರಮಾಣ ಶೇ 10ರ ಆಸುಪಾಸು. ಈ ಪ್ರಮಾಣ ತಗ್ಗಿದರೆ ಬಿಜೆಪಿಗೆ ಅಪಾಯ ನಿಶ್ಚಿತ.

ಪ್ರಧಾನಿ ಗದ್ದುಗೆ ಅಲಂಕರಿಸಿದ ಮೋದಿ ನೇರವಾಗಿ ರಾಜ್ಯ ಚುನಾವಣಾ ಕಣದಲ್ಲಿ ಇಲ್ಲ. ಆದರೂ ಕಾಂಗ್ರೆಸ್ಸಿನ ವಿಕ್ರಮ ಮುರಿದು 150 ಸೀಟು ಗೆದ್ದು ತರುತ್ತೇನೆಂಬ ವಿಶ್ವಾಸದಲ್ಲಿದ್ದಾರೆ ಅಮಿತ್ ಷಾ. ಏಕಾಏಕಿ ಈ ಸಂಖ್ಯೆ ಬಿಜೆಪಿಗೆ ದೂರದ ಗುರಿಯಂತೆ ಕಾಣತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.