ADVERTISEMENT

ಮೋದಿ ‘ಮೋಡಿ’ ಎನ್ನುವ ಮುನ್ನ...

ಹೊನಕೆರೆ ನಂಜುಂಡೇಗೌಡ
Published 19 ಮೇ 2014, 5:26 IST
Last Updated 19 ಮೇ 2014, 5:26 IST
ಮೋದಿ ‘ಮೋಡಿ’ ಎನ್ನುವ ಮುನ್ನ...
ಮೋದಿ ‘ಮೋಡಿ’ ಎನ್ನುವ ಮುನ್ನ...   

ಮೇ 12ರ ಮಧ್ಯಾಹ್ನ 3 ಗಂಟೆ. ವಾರಾಣಸಿ­ಯಲ್ಲಿ ಮತದಾನ ಮುಗಿ­ಯಲು ಇನ್ನೂ ಎರಡು ಗಂಟೆ ಉಳಿದಿತ್ತು. ಕಾಶಿಯಿಂದ ದೆಹಲಿಗೆ ಹೊರಟಿದ್ದ ‘ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್‌’ ರೈಲಿನ ಬೋಗಿಯೊಂದ­ರಲ್ಲಿ ಬಿರುಸಿನ ಚರ್ಚೆ ನಡೆದಿತ್ತು.  ಅಲ್ಲೇ ಮಧ್ಯ ವಯಸ್ಸಿನ ಮುಸ್ಲಿಂ ದಂಪತಿ ಕುಳಿತಿದ್ದರು. ಪತ್ನಿ ಕಣ್ಣಲ್ಲಿ ನೀರು ಹನಿಯುತ್ತಿತ್ತು. ಪತಿ ಅವರನ್ನು ಸಂತೈಸುತ್ತಿದ್ದರು. ‘ಯಕೃತ್‌ ಕ್ಯಾನ್ಸರ್‌’ನಿಂದ ನರಳು­ತ್ತಿ­ರುವ ಅವರು ಎದೆಗುಂದಿದ್ದರು.

ಎದುರಿನ ಸೀಟಿನಲ್ಲೇ ಮತ್ತೊಬ್ಬ ಮಹಿಳೆ ಇದ್ದರು. ವಾರಾಣಸಿ ಶಾಲೆಯೊಂದರಲ್ಲಿ ಅವರು ಇಂಗ್ಲಿಷ್‌ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಧರ್ಮ ಮತ್ತು ರಾಜಕಾರಣ ಕುರಿತು ಶಿಕ್ಷಕಿ ಸಹ ಪ್ರಯಾ­ಣಿಕರ ಜತೆ ಇಂಗ್ಲಿಷ್‌ನಲ್ಲಿ ಮಾತನಾಡು­ತ್ತಿ­ದ್ದರು. ‘ನೋಡಿ ಅವರು ಎಷ್ಟು ಬೇಕಾದರೂ ಮದುವೆ ಆಗಬಹುದು. ಎಷ್ಟಾದರೂ ಮಕ್ಕಳನ್ನು ಮಾಡಿ­ಕೊಳ್ಳಬಹುದು’ ಎಂದು ಮುಸ್ಲಿಂ ದಂಪತಿ­ಯನ್ನು ತೋರಿಸಿ ಹೇಳುತ್ತಿದ್ದರು.

‘ಇವೆಲ್ಲವೂ ಕಾಂಗ್ರೆಸ್‌ ಮೊದಲಿಂದಲೂ ಮಾಡಿಕೊಂಡು ಬಂದಿ­­ರುವ ರಾಜಕಾರಣ’ ಎಂದೂ ಆಡಿಕೊಳ್ಳುತ್ತಿದ್ದರು.
‘ವೋಟಿಗಾಗಿ ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಇದು ಕೊನೆಗೊಳ್ಳಬೇಕು. ಎಲ್ಲ­ರಿಗೂ ಒಂದೇ ಕಾನೂನು ಇರಬೇಕು. ಒಬ್ಬರಿ­ಗೊಂದು ಮತ್ತೊಬ್ಬರಿಗೊಂದು ಕಾನೂನಾದರೆ ಹೇಗೆ?’ ಎಂದೆಲ್ಲ ಪ್ರಶ್ನಿಸುತ್ತಿದ್ದರು. ‘ನರೇಂದ್ರ ಮೋದಿ ಪ್ರಧಾನಿಯಾದರೆ ‘ಸಮಾನ ನಾಗರಿಕ ಸಂಹಿತೆ’ ಜಾರಿಯಾಗಬಹುದು. ಅದೇ ಉದ್ದೇಶ­ಕ್ಕಾಗಿ ನಾನು ಬೆಳಿಗ್ಗೆ 6 ಗಂಟೆಗೆ ­ಹೋಗಿ ಸರದಿ­ಯಲ್ಲಿ ನಿಂತು ಹಕ್ಕು ಚಲಾಯಿಸಿದೆ’ ಎಂದರು.

ಉಳಿದ ಪ್ರಯಾಣಿಕರು ಅವರ ಮಾತಿಗೆ ತಾಳ ಹಾಕು­ತ್ತಿ­ದ್ದರು. ಮುಸ್ಲಿಂ ದಂಪತಿ ಯಾರ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅವ­ರದೇ ಸಮಸ್ಯೆಯಲ್ಲಿ ಸಿಕ್ಕಿ ಹಣ್ಣಾಗಿದ್ದರು. ದೆಹಲಿಗೆ ಹೋಗಿ ಚಿಕಿತ್ಸೆ ಪಡೆಯುವುದಷ್ಟೇ ಅವರ ಮುಂದಿನ ದಾರಿಯಾಗಿತ್ತು. ಹೀಗಾಗಿ ಅವ­ರಿಗೆ ಹಿಂದೂ–ಮುಸ್ಲಿಂ ಅಥವಾ ಕಾಂಗ್ರೆಸ್‌– ಮೋದಿ  ಯಾವುದೂ ಮುಖ್ಯವಾಗಿರಲಿಲ್ಲ.

ಅಂದಿನ ಪ್ರಸಂಗವನ್ನು ನೆನಪು ಮಾಡಿ­ಕೊಳ್ಳಲು ಕಾರಣವಿದೆ. ಲೋಕಸಭೆ ಚುನಾವಣೆ­ಯಲ್ಲಿ ನರೇಂದ್ರ ಮೋದಿ ಅವರ ಅಭೂತ­ಪೂರ್ವ ಗೆಲುವನ್ನು ನಾನಾ ರೀತಿಯಲ್ಲಿ ವಿಶ್ಲೇಷಿ­ಸ­ಲಾಗುತ್ತಿದೆ. ‘ಇದು ಅಭಿವೃದ್ಧಿ ಪರ ಜನಮತ’ ಎಂದು ಬಹುತೇಕರು ಹೇಳುತ್ತಿದ್ದಾರೆ. ‘ಮೋದಿ ಅವರ ಬಲಿಷ್ಠ ನಾಯಕತ್ವಕ್ಕೆ ಸಿಕ್ಕ ಮನ್ನಣೆ’ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ.

ಬಿಜೆಪಿ ಯಶಸ್ಸಿಗೆ ಇವೆರಡೇ ಕಾರಣಗಳಲ್ಲ. ಇನ್ನೂ ಪ್ರಬಲವಾದ ಕಾರಣಗಳಿವೆ. ಇದೇ ಮೊದಲ ಸಲ ಹಿಂದುತ್ವದ ಹೆಸರಿನಲ್ಲಿ ಎಲ್ಲ ಹಿಂದೂ­­ಗಳನ್ನು ಒಗ್ಗೂಡಿಸಲಾಗಿದೆ. ಉತ್ತರ ಪ್ರದೇ­ಶದ ಇಂಗ್ಲಿಷ್‌ ಶಿಕ್ಷಕಿ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸತ್ಯ ಅರಿವಾಗು­ತ್ತದೆ. ಆ ರಾಜ್ಯದಲ್ಲಿ ಬಿಜೆಪಿ ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಹತ್ತು ಸ್ಥಾನ­ಗಳನ್ನು ಮಾತ್ರ ಪಡೆದಿದೆ. ಈ ಚುನಾವಣೆಯಲ್ಲಿ ಅದರ ಸಾಮರ್ಥ್ಯ ಏಳು ಪಟ್ಟು ಹೆಚ್ಚಾಗಿದೆ. ಹಿಂದೂ ಜಾತಿಗಳು ಅದರಲ್ಲೂ ದಲಿತರು, ಹಿಂದುಳಿದವರು ಕೈ ಹಿಡಿಯದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ಮೂರು ದಶಕದಿಂದ ದಲಿತರನ್ನು ನಂಬಿಕೊಂಡು ರಾಜಕಾ­ರಣ ಮಾಡುತ್ತಿರುವ ಬಹುಜನ ಸಮಾಜ ಪಕ್ಷ ನೆಲ ಕಚ್ಚಿದೆ. ಮಾಯಾವತಿ ಅವರ ದಲಿ­ತರು– ಬ್ರಾಹ್ಮಣರು ಮತ್ತು ಮುಸ್ಲಿಮರ ಸಮೀಕ­ರಣ ಪ್ರಯೋಗ ಸೋತಿದೆ. ಈ ಪ್ರಯೋಗ ಮಾಡಿ ಹದಿನೈದನೇ ಲೋಕಸಭೆಯಲ್ಲಿ ಬಿಎಸ್‌ಪಿ 20 ಸ್ಥಾನ ಪಡೆದಿತ್ತು.

ಅಷ್ಟೇ ಅಲ್ಲ, ಹೋದ ಸಲ 23 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದ ಸಮಾಜ­ವಾದಿ ಪಕ್ಷ ಐದು ಸ್ಥಾನಗಳಿಗೆ ಕುಸಿದಿದೆ. ಯಾದವರು ಮುಲಾಯಂ ಸಿಂಗ್ ಅವರನ್ನು ಕೈಬಿಟ್ಟಿ­ದ್ದಾರೆ. ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ ನಡೆಯದಿದ್ದರೂ, ಧರ್ಮ ರಾಜಕಾರಣ ಮೆರೆದಿದೆ.
ಗುಜರಾತ್‌ ಅಭಿವೃದ್ಧಿ ನೋಡಿ ಮೋದಿ ಅವರನ್ನು ಜನ ಬೆಂಬಲಿಸಿದ್ದರೆ, ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷ­ವನ್ನು  ಸೋಲಿಸಲು ಯಾವುದೇ ಕಾರಣಗಳಿಲ್ಲ.

ಒಂಬತ್ತು ವರ್ಷದಲ್ಲಿ ನಿತೀಶ್‌ ಕುಮಾರ್‌ ಬೇಕಾ­ದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಜನ ಅವರನ್ನು ‘ಅಭಿವೃದ್ಧಿ ಪುರುಷ’ ಎಂದೇ ಪರಿಗಣಿಸಿದ್ದಾರೆ. ಜೆಡಿಯು ಸರ್ಕಾರ ಬಂದ ಮೇಲೆ ವಿದ್ಯುತ್‌ ಪರಿಸ್ಥಿತಿ ಸುಧಾರಿಸಿದೆ. ಹದ­ಗೆಟ್ಟ ರಸ್ತೆಗಳಿಗೆ ಕಾಯಕಲ್ಪ ಮಾಡಲಾಗಿದೆ. ಅಪರಾಧ­ಗಳಿಗೆ ಅಂತ್ಯ ಹಾಡಿ ಜನ ನೆಮ್ಮದಿ­ಯಿಂದ ಬದುಕುವ ವಾತಾವರಣ ಸೃಷ್ಟಿಸ­ಲಾ­ಗಿದೆ. ಕಾನೂನು– ಸುವ್ಯವಸ್ಥೆ ಪಾಲನೆಗೆ ನಿತೀಶ್ ಆದ್ಯತೆ ನೀಡಿದ್ದಾರೆ.

ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ­ದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ­ದ್ದಾರೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೈಸಿ­ಕಲ್‌­ಗಳನ್ನು ವಿತರಿಸಿದ್ದಾರೆ. ಬಂಡವಾಳ ಹೂಡಿಕೆ ಗಮನ­ದಲ್ಲಿಟ್ಟುಕೊಂಡೇ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದು ಸಾಧ್ಯವಾ­ದರೆ ಬಂಡವಾಳ ಹರಿದು ಬರುತ್ತದೆ. ಒಂಬತ್ತು ವರ್ಷ­ಗ­ಳಲ್ಲಿ ರಾಜ್ಯದಲ್ಲಿ ಇಷ್ಟೊಂದು ಬದಲಾ­ವಣೆ ತಂದ ಮೇಲೂ ಜನ ಅವರ ಕೈ ಬಿಡುತ್ತಾ­ರೆಂ­ದರೆ ಏನರ್ಥ! ಇದರ ಹಿಂದಿನ ರಾಜ­ಕಾರಣವೇನು?

ಬಿಹಾರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಮೋಡಿ ಮಾಡಿದ ಮೋದಿ, ಒಡಿಶಾದಲ್ಲಿ ಏಕೆ ಸಫಲ­ವಾಗಲಿಲ್ಲ. ಎಐಎಡಿಎಂಕೆ, ಡಿಎಂಕೆ ಹೊರತು­ಪಡಿಸಿ ಉಳಿದೆಲ್ಲ ಪಕ್ಷಗಳ ಜತೆ ಹೊಂದಾ­ಣಿಕೆ ಮಾಡಿಕೊಂಡರೂ ತಮಿಳುನಾಡಿ­ನಲ್ಲಿ ಹಿನ್ನಡೆಯಾಗಲು ಕಾರಣವೇನು? ಪಶ್ಚಿಮ ಬಂಗಾಳದ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಎರಡು ಸ್ಥಾನ ಮಾತ್ರ  ಪಡೆಯಲು ಸಾಧ್ಯ­ವಾ­ಗಿದ್ದು ಹೇಗೆ?

ಸೀಮಾಂಧ್ರ ವಿಧಾನಸಭೆ ಚುನಾ­ವಣೆ­ಯಲ್ಲಿ ಟಿಡಿಪಿ ಜತೆ ಹೊಂದಾಣಿಕೆ ಮಾಡಿ­ಕೊಂಡು 13 ಕ್ಷೇತ್ರ ಪಡೆದರೂ, ಗೆಲುವು ಪಡೆ­ದಿದ್ದು ನಾಲ್ಕರಲ್ಲಿ ಮಾತ್ರ. ಈ ರಾಜ್ಯಗಳಲ್ಲಿ ಏಕೆ ಬಿಜೆಪಿ ಚಮತ್ಕಾರ ಮಾಡಲು ಆಗಲಿಲ್ಲ. ಕರ್ನಾಟಕ­ದಲ್ಲಿ ಕಳೆದ ಸಲಕ್ಕಿಂತ ಎರಡು ಸ್ಥಾನ ಏಕೆ ಕಡಿಮೆ ಆಯಿತು ಎನ್ನುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

ಸರಿಯಾಗಿ ಮೂವತ್ತು ವರ್ಷಗಳ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಎರಡೇ ಎರಡು ಸ್ಥಾನ ಪಡೆದಿತ್ತು. ಈಗ 284 ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಮಂದಿರ– ಮಸೀದಿ ವಿವಾದ ಭುಗಿಲೆದ್ದ ಸಮಯದಲ್ಲೂ ಅದಕ್ಕೆ ಇಷ್ಟೊಂದು ಸ್ಥಾನಗಳನ್ನು ಗೆಲ್ಲಲು ಆಗಿರಲಿಲ್ಲ. ಈ ಸಾಧನೆ ಹಿಂದೆ ಖಂಡಿತವಾಗಿಯೂ ಮೋದಿ ಅವರ ಪರಿಶ್ರಮವಿದೆ. ಆ ಬಗ್ಗೆ ಅನುಮಾನ ಬೇಡ. ಆದರೆ, ‘ಇದರಲ್ಲಿ ಮೋದಿ ಪಾತ್ರವೇನು? ಆರ್‌ಎಸ್‌ಎಸ್‌ ಕೊಡುಗೆ ಎಷ್ಟಿದೆ? ಎಂಬ ಬಗ್ಗೆ ವಿಶ್ಲೇಷಣೆ ಆಗಬೇಕಿದೆ’ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರೇ ಹೇಳಿದ್ದಾರೆ.

‘ಇದು ಕಾಂಗ್ರೆಸ್‌ ದುರಾಡಳಿತ, ಭ್ರಷ್ಟಾಚಾರ, ವಂಶಾಡಳಿತದ ವಿರುದ್ಧ ಜನರು ಕೊಟ್ಟಿರುವ ತೀರ್ಪು’ ಎಂದು ಅಡ್ವಾಣಿ ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್‌ ನಾಯಕರು ಒಂದು ವರ್ಷ ಮೊದಲು ಎಚ್ಚೆತ್ತುಕೊಂಡಿದ್ದರೂ ಹೀನಾಯ ಸೋಲಿನಿಂದ ಪಾರಾಗಬಹುದಿತ್ತು. ಸೋನಿಯಾ ಗಾಂಧಿ, ಅವರ ಮಗ ರಾಹುಲ್‌ ಗಾಂಧಿ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಿಲ್ಲ.

ಸಮರ್ಥ ನಾಯಕತ್ವವಿಲ್ಲದೆ ಕಾಂಗ್ರೆಸ್‌ ಅನಾಥವಾಯಿತು. ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಅವ­ರಂಥ ಪ್ರಬಲ ನಾಯಕರನ್ನು ಕಂಡಿದ್ದ ಈ ಪಕ್ಷ  ನೈತಿಕವಾಗಿ ಕುಸಿಯಿತು. ‘ರಾಜಕೀಯ ಸಮ­ರಕ್ಕೆ ಮೊದಲೇ ಅನೇಕರು ಶಸ್ತ್ರತ್ಯಾಗ’ ಮಾಡಿ­ದರು. ಯಾವುದೇ ರಾಜಕೀಯ ಪಕ್ಷಕ್ಕೂ ಇಂಥ ಹೀನಾಯ ಸ್ಥಿತಿ ಬರಬಾರದು. ಬಂದರೆ ಏನಾಗುತ್ತದೆ ಎನ್ನುವುದಕ್ಕೆ 2014ರ ಚುನಾವಣೆ ಸಾಕ್ಷಿಯಾಯಿತು.

ಮೋದಿ, ಕಾಂಗ್ರೆಸ್‌ ದೌರ್ಬಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡರು. ಸೋನಿಯಾ, ರಾಹುಲ್‌, ಪ್ರಿಯಾಂಕಾ ಗಾಂಧಿ ಅವರ ದೌರ್ಬಲ್ಯ­ಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ಮಂಡಿಸಿದರು. ಮೋದಿ ಅವರನ್ನು ಯಾವುದೇ ರೀತಿಯಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್‌ ನಾಯ­ಕರಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಯುವ­ರಾಜ, ಭಾವಿ ಪ್ರಧಾನಿಗೆ ಸಮಾನವಾಗಿ ನಿಲ್ಲ­ಲಿಲ್ಲ. ದೇಶದ ಬಹುತೇಕ ಜನರು ಕಂಡರಿಯದ ಗುಜರಾತ್‌ ಅಭಿವೃದ್ಧಿ ಕುರಿತು ಬೊಬ್ಬೆ ಹಾಕಿದರು. ದೇಶದ ಜನರನ್ನು ನಂಬಿಸಿದರು.

ಸೋನಿಯಾ ಹಾಗೂ ರಾಹುಲ್‌ ಈಗಾಗಲೇ ಸೋಲಿನ ನೈತಿಕ ಹೊಣೆ ಹೊತ್ತಿದ್ದಾರೆ. ಸೋಲು– ಗೆಲುವಿನ ಪರಾಮರ್ಶೆಗೆ ಸೋಮ­ವಾರ ಕಾಂಗ್ರೆಸ್‌ ಕಾರ್ಯಕಾರಿಣಿ ಸೇರುತ್ತಿದೆ. ಆ ಸಭೆಯಲ್ಲಿ ಸೋನಿಯಾ ರಾಜೀನಾಮೆ ಪ್ರಸ್ತಾವ­ವನ್ನು ಮುಂದಿಡಬಹುದು. ಅದು ಬೇರೆ ವಿಷಯ. ಈಗ ಕಾಂಗ್ರೆಸ್‌ ನಾಯಕರ ಮುಂದಿರು­ವುದು, ಹೇಗೆ ಪಕ್ಷವನ್ನು ಮತ್ತೆ ಕಟ್ಟುವುದು ಎಂಬ ಪ್ರಶ್ನೆ.

ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಪಡೆಯದೆ ಇರಬಹುದು. ಆದರೆ, ಮತದಾರರ ಬೆಂಬಲ­ವನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ಬಿಜೆಪಿ ಶೇಕಡ 31ರಷ್ಟು ಮತದಾರರ ಬೆಂಬಲ ಪಡೆ­ದಿದೆ. ಸೋನಿಯಾ ಬಳಗಕ್ಕೆ ಶೇ 19.3ರಷ್ಟು ಮತ­ಗಳು ಬಿದ್ದಿವೆ. ಇದೊಂದೇ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಮಾಧಾನದ ವಿಷಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.