ಎಂಬತ್ತರ ದಶಕದ ಆರಂಭದಲ್ಲಿ ಫ್ಯಾಕ್ಸ್ ಯಂತ್ರಗಳು ಬಂದಾಗ ಅದೊಂದು ದೊಡ್ಡ ಕ್ರಾಂತಿಯೆಂದೇ ಅನ್ನಿಸಿತ್ತು. ದೂರವಾಣಿಯ ತಂತಿಯ ಮೂಲಕ ಫೋಟೊಗಳು, ಲೇಖನಗಳು, ಮದುವೆಯ ಆಮಂತ್ರಣ ಪತ್ರಗಳು ಬರುವುದೆ? ಕಲ್ಪನೆಗೂ ನಿಲುಕದ ಸಂಗತಿ ಆದಾಗಿತ್ತು.
ಈಗ ಥ್ರೀಡೀ ಪ್ರಿಂಟರ್‌ಗಳು ಬಂದಿವೆ. ಅಂದರೆ ಚಪ್ಪಲ್‌ನಿಂದ ಹಿಡಿದು ಚಪಲಾಹಾರದವರೆಗೂ ದೂರ ನಿಯಂತ್ರಣದ ಮೂಲಕ ಮುದ್ರಣ ಯಂತ್ರದಲ್ಲೇ ಪ್ರಿಂಟ್ ಮಾಡಿ ಪಡೆಯಬಹುದಾಗಿದೆ. ಇದು ತೀರಾ ಅಸಂಭವ ಅನ್ನಿಸುತ್ತದೆಯೆ? ಒಂದು ಉದಾಹರಣೆ ನೋಡಿ.
ಮಗಳ ಮದುವೆಗೆ ವಿಶೇಷ ವಿನ್ಯಾಸದ ಚಿನ್ನದ ನೆಕ್ಲೇಸ್ ಬೇಕಾಗಿದೆ ಎಂದಿಟ್ಟುಕೊಳ್ಳಿ. ಮಗಳು ಅಂತರಜಾಲದಲ್ಲಿ ಹುಡುಕಿ ತನಗಿಷ್ಟ ಬಂದ ಡಿಸೈನ್ ಆಯ್ಕೆ ಮಾಡಿ ಚಿನ್ನಾಭರಣ ತಯಾರಕನಿಗೆ ಮಿಂಚಂಚೆ ಮೂಲಕ ಕಳಿಸುತ್ತಾಳೆ.
`ಹತ್ತು ಗ್ರಾಂ ಚಿನ್ನ ಸಾಕು~ ಎಂತಲೂ ಸಂದೇಶ ಕಳಿಸಿದ್ದಾಳೆ ಅನ್ನಿ. ಆತ, ಆ ಚಿತ್ರವನ್ನು ಸ್ಕ್ಯಾನ್ ಮಾಡುತ್ತಾನೆ. `ಪ್ರಿಂಟ್~ ಎಂದು ಗುಂಡಿ ಒತ್ತುತ್ತಾನೆ. ಪಕ್ಕದಲ್ಲಿರುವ ಮುದ್ರಣ ಯಂತ್ರ ಚಾಲೂ ಆಗಿ ಒಂದೆರಡು ಗಂಟೆಗಳಲ್ಲಿ ಹತ್ತು ಗ್ರಾಂ ತೂಕದ, ಅದೇ ವಿನ್ಯಾಸದ ಹಾರ ಮುದ್ರಣಗೊಂಡು ಕೈಗೆ ಬರುತ್ತದೆ.
ನಂಬಲು ಇದು ತುಸು ಕಷ್ಟದ್ದೆನಿಸಿದರೆ ಇನ್ನೂ ಸರಳ ಉದಾಹರಣೆ ಇಲ್ಲಿದೆ: `ಮುದ್ರಿತ ಪುಸ್ತಕ~ ಎಂಬ ಒಂದು ರಬ್ಬರ್ ಸ್ಟಾಂಪ್ ಮಾಡಿಸಬೇಕು. ಈ ಆರು ಅಕ್ಷರಗಳನ್ನು ಸ್ಕ್ಯಾನ್ ಮಾಡಿ, ಅದನ್ನು ಒಂದು ವಿಶೇಷ ಮುದ್ರಣ ಯಂತ್ರಕ್ಕೆ ಕೊಡುತ್ತೇವೆ. ಅದರಲ್ಲಿ ಇಂಕ್‌ಜೆಟ್ ಬದಲು ಪ್ಲಾಸ್ಟಿಕ್ ದ್ರವ ಜಿನುಗುತ್ತದೆ.
ಅದು `ಮುದ್ರಿತ ಪುಸ್ತಕ~ ಎಂಬ ಅಕ್ಷರಗಳ ಉಲ್ಟಾ ಬಿಂಬವನ್ನು ಮುದ್ರಿಸುತ್ತದೆ; ಅದರ ಮೇಲೆ ಮತ್ತೊಂದು ಪದರವನ್ನು ಹಾಗೆಯೇ ಮುದ್ರಿಸುತ್ತದೆ. ಹತ್ತಾರು ಬಾರಿ ಒಂದರ ಮೇಲೊಂದರಂತೆ ಮುದ್ರಿಸುತ್ತ ಹೋದರೆ ದಪ್ಪ ಗಾತ್ರದ ಉಲ್ಟಾ ಅಕ್ಷರಗಳು ಮೂಡುತ್ತವೆ. ಅದೇ ತಾನೆ ರಬ್ಬರ್ ಸ್ಟಾಂಪ್?
ಅದು ಥ್ರೀಡೀ ಮುದ್ರಣ. ಇದೇ ಮಾದರಿಯಲ್ಲಿ ನಿಮ್ಮ ಪಾದಕ್ಕೆ ಸರಿಹೊಂದುವ ಚಪ್ಪಲಿನ ಅಟ್ಟೆಯನ್ನೂ ಪ್ಲಾಸ್ಟಿಕ್ ಅಥವಾ ರಬ್ಬರಿನಲ್ಲಿ ಮುದ್ರಿಸಲು ಸಾಧ್ಯವಿದೆ. ಹೀಗೆ ಪದರ ಪದರವಾಗಿ ಮುದ್ರಿಸಬಲ್ಲ ಯಂತ್ರದಿಂದ ಗಣೇಶನ ಪ್ಲಾಸ್ಟಿಕ್ ಪ್ರತಿಮೆಯನ್ನೂ ಮುದ್ರಿಸಬಹುದು.
ಹೀರೇಕಾಯಿಯ ಅಡ್ಡಕೊಯ್ತದ ನೂರಾರು ಸ್ಕ್ಯಾನ್ ಬಿಂಬಗಳನ್ನು ಅದೇ ಮುದ್ರಣ ಯಂತ್ರದ ಕಂಪ್ಯೂಟರಿಗೆ ಕೊಟ್ಟರೆ ಅದು ಪ್ಲಾಸ್ಟಿಕ್ಕಿನ ಹೀರೇಕಾಯಿಯನ್ನೂ ಮುದ್ರಿಸಬಹುದು. ಅಂದಮೇಲೆ, ಮದುವೆ ಹುಡುಗಿಯ ಚಿನ್ನದ ಹಾರವನ್ನು ಮುದ್ರಿಸುವುದೇನು ಮಹಾ!
ಈಗ ಹೊಸ ಕ್ರಾಂತಿಯ ಮಾತಾಡೋಣ. ತಂತ್ರ ವಿದ್ಯಾರಂಗದಲ್ಲಿ ಭಾರೀ ಹಲ್‌ಚಲ್ ಮೂಡಿಸಿದ ಹೊಸ ಕ್ರಾಂತಿಕಾರಿ ತಂತ್ರಜ್ಞಾನ ಇದು. ಕಾರ್ಖಾನೆಗಳ ಉತ್ಪಾದನಾ ವಿಧಾನದ ಬುನಾದಿಯನ್ನೇ ಬದಲಿಸುವ ಎರಡು ಅಂಶಗಳು ಇದರಲ್ಲಿ ಅಡಗಿವೆ. ಮೊದಲನೆಯದು ಏನೆಂದರೆ, ಇದು `ಕಳೆಯುವ ವಿಧಾನ~ ಅಲ್ಲ, `ಕೂಡುವ ವಿಧಾನ~.
ಗಡಿಯಾರದ ಒಳಗಿನ ಯಾವುದೇ ಚಕ್ರವನ್ನು ತಯಾರಿಸಬೇಕೆಂದರೆ ಇಷ್ಟು ದಿನ ಏನು ಮಾಡುತ್ತಿದ್ದರು ಗೊತ್ತೆ? ಮೊದಲು ಒಂದು ದಪ್ಪ ತಗಡಿನ ಮೇಲೆ ಚಕ್ರವನ್ನು ಬರೆದು, ಅದೇ ಆಕೃತಿಯಲ್ಲಿ ನಾಜೂಕಾಗಿ ಕೊರೆದು, ಹೆಚ್ಚುವರಿ ಚೂರುಪಾರನ್ನು ಗುಜರಿಗೆ ಹಾಕುತ್ತಿದ್ದರು.
ಹಾಗೆ ತಯಾರಾದ ಚಕ್ರದ ಮೊದಲ ಅಚ್ಚನ್ನು (ಅದಕ್ಕೆ `ಡೈ~ ಎನ್ನುತ್ತಾರೆ) ಬಳಸಿ, ಅದರ ಪಡಿಯಚ್ಚಿನ ಮೇಲೆ ಸಾವಿರಾರು ಚಕ್ರಗಳ ಎರಕ ಹೊಯ್ಯುತ್ತಿದ್ದರು. ಜಾಸ್ತಿ ಸಂಖ್ಯೆಯಲ್ಲಿ ಎರಕ ಹೊಯ್ದಷ್ಟೂ ಚಕ್ರದ ಬೆಲೆ ಕಡಿಮೆಯಾಗುತ್ತ ಹೋಗುತ್ತಿತ್ತು. ಈಗ ಹಾಗಲ್ಲ; ಚಕ್ರವನ್ನೇ ಕಣಕಣವಾಗಿ ಕೂಡಿಸಿ ಪ್ರಿಂಟ್ ಮಾಡಬಹುದು.
ತ್ಯಾಜ್ಯ ಎಂಬುದು ಇಲ್ಲವೇ ಇಲ್ಲ. ಇನ್ನೊಂದು ಉತ್ತಮ ಅಂಶ ಏನೆಂದರೆ, ಎರಕ ಹೊಯ್ಯಬೇಕಾಗಿಲ್ಲ. ಹಾಗಾಗಿ ಮೊದಲ ಚಕ್ರದ ಬೆಲೆಯೂ ಅಷ್ಟೇ ಇರುತ್ತದೆ; ಐನೂರನೇ ಚಕ್ರದ ಬೆಲೆಯೂ ಅಷ್ಟೇ ಇರುತ್ತದೆ. ಆಧುನಿಕ ಅರ್ಥಶಾಸ್ತ್ರದ ಬುನಾದಿ ತತ್ತ್ವವೆನಿಸಿದ `ಇಕಾನಮಿ ಆಫ್ ಸ್ಕೇಲ್~ (ಉತ್ಪಾದಿಸುವ ವಸ್ತುವಿನ ಸಂಖ್ಯೆ ಹೆಚ್ಚಿದ್ದಷ್ಟೂ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ) ಎಂಬುದು ಇಲ್ಲಿ ಅಪ್ರಸ್ತುತವಾಗುತ್ತದೆ.
ಮೊದಲ ಮುದ್ರಣ ಯಂತ್ರ (1450), ಮೊದಲ ಉಗಿಯಂತ್ರ (1750), ಮೊದಲ ಟ್ರಾನ್ಸಿಸ್ಟರ್ (1950) ಸಿದ್ಧವಾದಾಗ ಯಾರಿಗೂ ಅದರ ಭವಿಷ್ಯದ ವಿರಾಟ್ ವ್ಯಾಪ್ತಿಯ ಕಲ್ಪನೆ ಇರಲಿಲ್ಲ. ಈಗಿನ ಹೊಸ ಥ್ರೀಡೀ ಮುದ್ರಣ ತಂತ್ರಜ್ಞಾನ ಕೂಡ ಜಾಗತಿಕ ಉದ್ಯಮ ರಂಗದಲ್ಲಿ ಊಹೆಗೆ ನಿಲುಕದ ಪ್ರಭಾವ ಬೀರುವ ಸಾಧ್ಯತೆ ಇದೆ.
ಉತ್ಪಾದನಾ ರಂಗದಲ್ಲಂತೂ ಸರಿಯೆ. ವಾಸ್ತುಶಿಲ್ಪ, ಅಪರಾಧ ತನಿಖೆ, ಪುರಾತತ್ವ ವಿಜ್ಞಾನ, ಶಿಲ್ಪಕಲೆಯಂಥ ಇನ್ನಿತರ ಅನೇಕ ಕ್ಷೇತ್ರಗಳಲ್ಲಿ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುವ ನಿರೀಕ್ಷೆ ಇದೆ. ಕಳೆದ ವರ್ಷ ಲಂಡನ್‌ನ ಸುವಿಖ್ಯಾತ `ಡಿಸೈನ್ ಹಬ್ಬ~ದಲ್ಲಿ ಕಲಾವಿದರೇ ಥ್ರೀಡೀ ಮುದ್ರಣ ತಂತ್ರಜ್ಞಾನವನ್ನು ಶಿಲ್ಪಕಲೆಗೆ ಮೊದಲ ಬಾರಿಗೆ ಅಳವಡಿಸಿಕೊಂಡರು.
ಅಪರಾಧ ಪತ್ತೆ ಮಾಡುವ ಕೆಲಸ ಕೂಡಾ ಇನ್ನು ಮುಂದೆ ತುಸು ಸಲೀಸಾಗಬಹುದು. ಕೊಲೆಯಾದ ವ್ಯಕ್ತಿಯ ಅಸಲೀ ಮೂಳೆಯೇ ಪತ್ತೆ ಕಾರ್ಯಕ್ಕೆ ಬೇಕೆಂದಿಲ್ಲ. ಶವದ ಮೂಳೆಯ ಥ್ರೀಡೀ ಸ್ಕ್ಯಾನಿಂಗ್ ಮಾಡಿ, ಮೂಲ ಮೂಳೆಯ ಪಡಿಯಚ್ಚನ್ನೇ ಮುದ್ರಿಸಿ ಪಡೆದು ಮುಂದಿನ ತನಿಖೆ ನಡೆಸಬಹುದು. ಮೂರು ಆಯಾಮಗಳ ಮುದ್ರಣ ತಂತ್ರ ದಿನದಿನಕ್ಕೂ ಹೊಸ ಹೊಸ ಸಾಧ್ಯತೆಗಳನ್ನು ಅನಾವರಣ ಮಾಡುತ್ತಿದೆ. ಪೈಲಟ್ ಇಲ್ಲದ ವಿಮಾನಗಳನ್ನು ಮುದ್ರಿಸುತ್ತಿದೆ. ಪಿಟೀಲನ್ನೂ ಮುದ್ರಿಸಿದೆ.
ಥ್ರೀಡೀ ಮುದ್ರಣ ತಂತ್ರಜ್ಞಾನದ ಇಷ್ಟುದ್ದದ ಪೀಠಿಕೆಯ ನಂತರ ಈಗ ಅಸಲೀ ಸಂಗತಿಗೆ ಬರೋಣ. ವಿಜ್ಞಾನ- ತಂತ್ರಜ್ಞಾನ ಮುಂಚೂಣಿ ಸಂಶೋಧನೆಗಳನ್ನು ವರದಿ ಮಾಡುವ ಲಂಡನ್ ಹೆಸರಾಂತ `ಇಕಾನಮಿಸ್ಟ್~ ಪತ್ರಿಕೆ ತನ್ನ ಈ ವಾರದ ಸಂಚಿಕೆಯಲ್ಲಿ ಒಂದು ಕ್ರಾಂತಿಕಾರಿ ವಿಷಯವನ್ನು ಬೆಳಕಿಗೆ ತಂದಿದೆ:
ಯುದ್ಧದಲ್ಲಿ ಇಲ್ಲವೆ ದುರಂತದಲ್ಲಿ ಕೈಕಾಲು ಕಳೆದುಕೊಂಡವರಿಗೆ ಅವರ ದೇಹಕ್ಕೆ ಸೂಕ್ತ ಹೊಂದುವಂಥ ಕೃತಕ ಅಂಗಗಳ ತಯಾರಿಕೆಗೂ ಸೈ ಎನ್ನಿಸಿಕೊಂಡ ಈ ಮುದ್ರಣ ತಂತ್ರದಿಂದ ಕಿವಿ, ಮೂಗು ಮುಂತಾದ ಮೃದ್ವಸ್ಥಿಯ ಅಂಗಗಳನ್ನೂ ಉತ್ಪಾದಿಸಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅವರವರ ದೇಹಗುಣಕ್ಕೆ ತಕ್ಕಂಥ ಮೂತ್ರಪಿಂಡಗಳನ್ನೂ ಮುದ್ರಿಸಬಹುದಾಗಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಮೆಲಿಟೊ ಎಂಬಲ್ಲಿನ `ಜೀನ್ ಡುಪ್ಲಿಕೇಶನ್~ ಕಂಪೆನಿಯೊಂದು ಆಯಾ ವ್ಯಕ್ತಿಯ ಜೀವಕೋಶಗಳ ಮೂಲ ಮಾದರಿಯನ್ನು ಆಧರಿಸಿ, ಪ್ರಯೋಗಶಾಲೆಗಳಲ್ಲಿ ಅಂಥದ್ದೇ ಕೋಶಗಳನ್ನು ಕೃತಕವಾಗಿ ಬೆಳೆಸುತ್ತಿದೆ. ಮುದ್ರಣ ಯಂತ್ರದ ಮೂಲಕ ಅಂಥ ಕೋಶಗಳನ್ನು ಲೇಸರ್ ಜೆಟ್‌ನಲ್ಲಿ ಪದರ ಪದರವಾಗಿ ಎರಕ ಹೊಯ್ದು (ಅಂದರೆ ಮುದ್ರಿಸಿ) ಕಿಡ್ನಿಯನ್ನು ತಯಾರಿಸುತ್ತಿದೆ.
ಸದ್ಯದಲ್ಲೇ ಈ ಕಂಪೆನಿ ಮನುಷ್ಯರ ಇಷ್ಟಕ್ಕೆ ತಕ್ಕಂತೆ ಜೀವಂತ ಪ್ರಾಣಿಯನ್ನೂ (ಉದಾ: ಪಾಮೇರಿಯನ್ ನಾಯಿಯನ್ನು) ಸೃಷ್ಟಿಸುವುದಾಗಿ ಕಂಪೆನಿಯ ಮುಖ್ಯಸ್ಥ ಪಾವೊಲೊ ಫ್ರಿಲ್ ಹೇಳಿದ್ದಾರೆ. ಮುಂದೊಂದು ದಿನ, ಅವರವರ ಇಚ್ಛೆಗೆ ತಕ್ಕಂತೆ ಅತ್ಯಂತ ಅನುರೂಪದ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಕೂಡ ಇಂಥ ಮುದ್ರಣ ಯಂತ್ರದಿಂದಲೇ ಅವತರಿಸುವಂತೆ ಮಾಡಬೇಕೆಂಬ ಕನಸು ತನ್ನದೆಂದು ಫ್ರಿಲ್ ಹೇಳಿದ್ದು ವರದಿಯಾಗಿದೆ. ಪ್ರಾಯಶಃ ಮುಂದಿನ ಏಪ್ರಿಲ್ 1ರ ವೇಳೆಗೆ ಆತನ ಕನಸಿಗೆ ಹೊಸದೊಂದು ಆಯಾಮ ಸೇರ್ಪಡೆಯಾಗಲಿದೆ.
ಅರ್ಥವಾಯಿತೆ? `ದಿ ಇಕಾನಮಿಸ್ಟ್~ ಪತ್ರಿಕೆಯ ಮುದ್ರಣ ಯಂತ್ರ ತುಸು ಅತಿರೇಕದ ಕೆಲಸ ಮಾಡಿದೆ. ಪತ್ರಿಕೆ ತನ್ನ ತೀರ ಗಂಭೀರ ಶೈಲಿಯಲ್ಲಿ ಓದುಗರನ್ನು ಏಪ್ರಿಲ್ ಫೂಲ್ ಮಾಡಿದೆ. ಕೊನೆಯ ವಾಕ್ಯಕ್ಕೆ ಬರುವವರೆಗೆ, ಅಥವಾ ಕಂಪೆನಿಯ ಮುಖ್ಯಸ್ಥನ ಟ್ಝಟ ಊ್ಟಜ್ಝಿ ಹೆಸರಿನಲ್ಲಿರುವ ಅಕ್ಷರಗಳ ಮರುಜೋಡಣೆ ಮಾಡಿದರೆ ಅಟ್ಟಜ್ಝಿ ಊಟಟ್ಝ ಆಗುತ್ತದೆಂಬ ಗ್ರಹಿಕೆ ಬರುವವರೆಗೆ ಇದೊಂದು ಹಸೀ ಸುಳ್ಳಿನ ಕಂತೆ ಎಂಬುದು ಅರಿವಿಗೇ ಬರಲಿಕ್ಕಿಲ್ಲ.
ಕೆಲವು ವರ್ಷಗಳ ಹಿಂದೆ ಇದೇ ಪತ್ರಿಕೆ ತನ್ನ ವಿಜ್ಞಾನ ಅಂಕಣದಲ್ಲಿ, ಇದೇ ಜೀನ್ ಡುಪ್ಲಿಕೇಟ್ ಕಂಪೆನಿಯ ಮೊದಲ ಸಾಹಸವನ್ನು ವರದಿ ಮಾಡಿತ್ತು. ಸಮುದ್ರದ ನೀರಲ್ಲಿ ಅನಂತಾಲ್ಪ ಪ್ರಮಾಣದಲ್ಲಿ ಚಿನ್ನದ ಅಂಶ ಇರುತ್ತದೆ ತಾನೆ? ಆ ಚಿನ್ನವನ್ನು ಹೀರಿಕೊಳ್ಳಬಲ್ಲ ಕುಲಾಂತರಿ ಮೀನನ್ನು ಸೃಷ್ಟಿಮಾಡಿ, ಅದು ತನ್ನ ಹೊರಮೈಗೆಲ್ಲ ಅಸಲೀ ಚಿನ್ನವನ್ನೇ ಲೇಪಿಸಿಕೊಳ್ಳುವಂತೆ ಮಾಡುವ ತಂತ್ರಕ್ಕೆ ಪೇಟೆಂಟ್ ಪಡೆದಿತ್ತು.
ಮತ್ತೊಮ್ಮೆ ಇದೇ ಕಂಪೆನಿ ನಮ್ಮ ಮನೆಯಲ್ಲಿರುವ ಹಲ್ಲಿಯ ತಳಿಯನ್ನೇ ವಿರೂಪಗೊಳಿಸಿ, ಅದು ಕ್ರಮೇಣ ಬೆಳೆಯುತ್ತ ಬೆಳೆಯುತ್ತ ಬೆಂಕಿಯುಗುಳುವ ಡ್ರ್ಯಾಗನ್ ಪ್ರಾಣಿ ರೂಪವನ್ನು ತಳೆಯುವಂಥ ಚುಚ್ಚುಮದ್ದನ್ನು ಶೋಧಿಸಿದ್ದಾಗಿ ವರದಿ ಮಾಡಿತ್ತು.
ಏಪ್ರಿಲ್ ಒಂದರಂದು ಪಾಶ್ಚಿಮಾತ್ಯ ಸಮೂಹ ಮಾಧ್ಯಮಗಳು ಒಂದಲ್ಲ ಒಂದು ವಿಧದಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡುತ್ತವೆ.
2005ರಲ್ಲಿ ಡೈ ಹೈಡ್ರೊಜನ್ ಮೊನಾಕ್ಸೈಡ್ (ಡಿಎಚ್‌ಎಮ್‌ಓ) ಎಂಬ `ವಿಷ~ವಸ್ತುವಿನ ಬಗ್ಗೆ ಅದೆಂಥ ಗಂಭೀರ ಆಪಾದನೆಗಳು ಬಂದುವೆಂದರೆ ಅದನ್ನು ತಕ್ಷಣ ನಿಷೇಧಿಸಬೇಕೆಂದು ಬೀದಿ ಮೆರವಣಿಗೆಗೂ ಜನರು ಸೇರಿದ್ದರು. ಡಿಎಚ್‌ಎಮ್‌ಓ ಎಂಬುದು ನೀರಿನ ಇನ್ನೊಂದು ಹೆಸರೆಂದು ಗೊತ್ತಾದ ಮೇಲೆ ಎಲ್ಲರೂ ಪೆಚ್ಚಾದರು.
ಮೂರು ವರ್ಷಗಳ ಹಿಂದೆ ಬಿಬಿಸಿಯ ಟಿವಿ ಚಾನೆಲ್‌ನಲ್ಲಿ ಅಂಟಾರ್ಕ್‌ಟಿಕಾದ ಕೆಲವು ಪೆಂಗ್ವಿನ್‌ಗಳು ಹಾರಲು ಕಲಿತಿವೆಯೆಂದು ತೋರಿಸುವ ಹುಬೇಹೂಬ್ ಸಾಕ್ಷ್ಯಚಿತ್ರ ಪ್ರಸಾರಗೊಂಡಿತು. ಪೆಂಗ್ವಿನ್‌ಗಳ ಒಂದ ತಂಡ ಅಮೆಝಾನ್ ಅರಣ್ಯದವರೆಗೂ ಹಾರಿ ಬಂದಿವೆ ಎಂದು ಬಿಂಬಿಸಲಾಯಿತು.
ನಮ್ಮ ನದಿಗಳಲ್ಲಿ ವಾಸಿಸುವ ಬೃಹತ್ ಗಾತ್ರ ಮಶೀರ್ ಮೀನುಗಳನ್ನು ಇಲ್ಲಿಂದ ಅಮೆರಿಕದ ಕೊಳಗಳಿಗೆ ಸಾಗಿಸಲಾಗಿದೆ ಎಂಬ ವರದಿ ಮೊನ್ನೆ ಏಪ್ರಿಲ್ 1ರಂದು ಕ್ಯಾಲಿಫೋರ್ನಿಯಾದ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿ ವಿಹಾರಿಗಳಿಗೆ ಏಕಕಾಲಕ್ಕೆ ಸಂತಸವನ್ನೂ ಭಯವನ್ನೂ ತಂದೊಡ್ಡಿತ್ತು.
ಭ್ರಮೆ ಮತ್ತು ವಾಸ್ತವದ ನಡುವಣ ಗೆರೆಯನ್ನೇ ಅಳಿಸಿ ಹಾಕಬಲ್ಲ ಥ್ರೀಡೀ ಅನಿಮೇಶನ್ ತಂತ್ರಗಳು ಬಂದ ಮೇಲೆ ಜನರನ್ನು ಮೂರ್ಖರನ್ನಾಗಿ ಮಾಡುವುದು ತೀರ ಸುಲಭವಾಗಿದೆ.
ಹಾಗಿದ್ದರೆ ಥ್ರೀಡಿ ಮುದ್ರಣ ಎಂಬುದು ಬರೀ ಮೋಸವೆ? ಖಂಡಿತ ಇಲ್ಲ. ಚಪ್ಪಲ್ಲು, ನೆಕ್ಲೇಸು, ಆಟಿಗೆ ವಸ್ತುಗಳನ್ನು ಮುದ್ರಿಸಬಲ್ಲ ಯಂತ್ರಗಳು ಈಗಾಗಲೇ ಬಂದಿವೆ. ಈಗಿನ ಉತ್ಪಾದನಾ ವಿಧಾನಗಳನ್ನು ಅಡಿಮೇಲು ಮಾಡಬಲ್ಲ ಕ್ರಾಂತಿಕಾರಿ ಸಾಧ್ಯತೆಗಳೂ ಅದರಲ್ಲಿವೆ. ಅಲ್ಲಿಯವರೆಗಿನದು ಸತ್ಯ.
ಆದರೆ ಅದು ಜೀವಂತ ಕಿಡ್ನಿಯನ್ನೂ ಮುದ್ರಿಸಬಲ್ಲದು, ನಾಯಿಮರಿಯನ್ನೂ ಸೃಷ್ಟಿಸಬಲ್ಲದು ಎಂದರೆ ಅದು ಮಂತ್ರದಿಂದ ಮಾವಿನಕಾಯಿ ಉದುರಿಸಿದ ಹಾಗೆ. ನಿಸರ್ಗ ಅಷ್ಟು ಸುಲಭಕ್ಕೆ ಮನುಷ್ಯನ ಮುಷ್ಟಿಗೆ ಸಿಗುವುದಿಲ್ಲ.
ಏಪ್ರಿಲ್ 1ರಂದು ಜನರನ್ನು ಬೇಸ್ತು ಬೀಳಿಸಲೆಂದು ನಮ್ಮ ಮಾಧ್ಯಮಗಳು ಕೃತಕ ಸುದ್ದಿಗಳನ್ನು ಪ್ರಕಟಿಸುವುದಿಲ್ಲ. ಅಸಲೀ ವರದಿಗಳೇ ಅದೆಷ್ಟೊ ಬಾರಿ ಆ ಕೆಲಸವನ್ನು ಮಾಡುತ್ತವೆ.
ಉದಾಹರಣೆಗೆ, `ಪ್ರಜಾವಾಣಿ~ಯ ಏಪ್ರಿಲ್ 1ರ ಮುಖಪುಟದ ಮುಖ್ಯ ಶಿರೋನಾಮೆ: `ಹೈ-ಕಗೆ ವಿಶೇಷ ಸ್ಥಾನ: ಶೀಘ್ರ ತೀರ್ಮಾನ - ಚಿದಂಬರಂ ಇಂಗಿತ~ ಎಂದಿತ್ತು. ಈ ಶೀಘ್ರ ತೀರ್ಮಾನಕ್ಕೆ ಮುಂದಿನ ಏಪ್ರಿಲ್ 1ರವರೆಗೂ ಕಾಯಬಹುದೇನೊ.
(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.