ADVERTISEMENT

ಸಾಪೇಕ್ಷ ಸಿದ್ಧಾಂತಕ್ಕೆ ಮತ್ತೆ ಮತ್ತೆ ಅಗ್ನಿಪರೀಕ್ಷೆ

ನಾಗೇಶ ಹೆಗಡೆ
Published 16 ಜೂನ್ 2018, 10:07 IST
Last Updated 16 ಜೂನ್ 2018, 10:07 IST

 ಅಕ್ಟೋಬರ್ ಮೊದಲ ವಾರವೆಂದರೆ ದಸರಾ ಮೆರವಣಿಗೆಯ ಹಾಗೆ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದ ಸಂಗತಿಗಳು ಸಾಲುಗಟ್ಟಿ ಬರುತ್ತವೆ. ತಿಂಗಳಿನ ಆರಂಭದಲ್ಲೇ ವಿಜ್ಞಾನಿಗಳನ್ನು ಲೇವಡಿ ಮಾಡುವ `ನಗೆ-ನೊಬೆಲ್~ (ಇಗ್ನೊಬೆಲ್) ಪ್ರಶಸ್ತಿಗಳ ಘೋಷಣೆಯಾಗುತ್ತದೆ. ತದ ನಂತರ ಅಸಲೀ ನೊಬೆಲ್ ಪ್ರಶಸ್ತಿಗಳ ಘೋಷಣೆ ದಿನಕ್ಕೊಂದೊಂದರಂತೆ ಅಕ್ಟೋಬರ್ 10ರವರೆಗೂ ಬರುತ್ತಿರುತ್ತವೆ. ಅಕ್ಟೊಬರ್ 1ರಿಂದ ವಾರವಿಡೀ ವಿಶ್ವ ವನ್ಯಜೀವಿ ಸಪ್ತಾಹ. ಅದರ ಮಧ್ಯೆ ಅಕ್ಟೋಬರ್ 3ರಂದು `ವಿಶ್ವ ಆವಾಸ ದಿನ~ ಬರುತ್ತದೆ. ಆಮೇಲೆ ಅಕ್ಟೋಬರ್ 13ರಂದು `ಪ್ರಕೃತಿ ವಿಕೋಪ ದಿನ~... ಇತ್ಯಾದಿ.

 ಅವೆಲ್ಲವನ್ನೂ ಹಿಂದಕ್ಕೆ ತಳ್ಳಿ ಈ ಬಾರಿ ಪರಮಾಣುಗಳ ಸೂಕ್ಷ್ಮ ಲೋಕವನ್ನು ಪ್ರವೇಶಿಸೋಣ. ಕಳೆದ ತಿಂಗಳು ಅಲ್ಲೊಂದು ಭಾರಿ ತುಮುಲ ಎದ್ದಿತ್ತು. ನಾನಾ ದೇಶಗಳ ಚಿಕ್ಕ ದೊಡ್ಡ ಭೌತ ವಿಜ್ಞಾನಿಗಳೆಲ್ಲ ಆಕಾಶವೇ ಕಳಚಿ ಬಿದ್ದಂತೆ, ಐನ್‌ಸ್ಟೀನ್ ಸಿದ್ಧಾಂತಕ್ಕೇ ಧಕ್ಕೆ ಬಂದಂತೆ ಧಿಗ್ಗನೆದ್ದು ಕೂತಿದ್ದರು. ಅದೇನೆಂದು ಕೆಲವರಿಗಾದರೂ ನೆನಪಿರಬಹುದು: `ನ್ಯೂಟ್ರಿನೊ ಕಣಗಳು ಬೆಳಕಿನ ವೇಗವನ್ನೂ ಮೀರಿ ಚಲಿಸುತ್ತವೆ~ ಎಂದು ಸೆಪ್ಟೆಂಬರ್ 22ರಂದು ವಿಶ್ವವಿಖ್ಯಾತ ಸರ್ನ್ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಗೌರವಾನ್ವಿತ ವಿಜ್ಞಾನಿಗಳು ಹೇಳಿಕೆ ನೀಡಿದರು. ಹಾಗೆ ಹೇಳಿ ಇಡೀ ವಿಜ್ಞಾನ ಜಗತ್ತಿನಲ್ಲಿ ಒಂದು ಹೊಸ ಸಂಚಲನ ಮೂಡಿಸಿದರು. 

 ಐನ್‌ಸ್ಟೀನ್‌ನ ಸಾಪೇಕ್ಷ ವಾದದ ಪ್ರಕಾರ ಬೆಳಕಿನ ವೇಗವನ್ನು ಮೀರಿ ಯಾವುದೂ ಚಲಿಸಲಾರದು. ಚಲಿಸಿದ್ದೇ ಆದರೆ ನಮ್ಮ ತರ್ಕಗಳೆಲ್ಲ ತಲೆಕೆಳಗಾಗುತ್ತವೆ; ಸಮಯ ಹಿಮ್ಮಗ ಚಲಿಸುತ್ತದೆ; ಅಂದರೆ ಪಿಸ್ತೂಲನ್ನು ಎತ್ತಿ ಗುರಿ ಇಡುವ ಮೊದಲೇ ಗುಂಡೇಟಿನಿಂದ ಸಾವು ಸಂಭವಿಸುತ್ತದೆ; ಇಂದು ಕಳಿಸಿದ ಕುರಿಯರ್ ನಿನ್ನೆ ಹೋಗಿ ತಲುಪಿರುತ್ತದೆ. ಕಾರ್ಯ-ಕಾರಣ ಸಂಬಂಧಗಳು ಹಿಂದುಮುಂದಾಗುತ್ತವೆ. ಬ್ರಹ್ಮಾಂಡದ ಪರಿಕಲ್ಪನೆಯೇ ಬದಲಾಗುತ್ತದೆ. ಆಗ ದಾರ್ಶನಿಕರ ಊಹೆಯನ್ನೂ ಮೀರಿದ ಲೆಕ್ಕಾಚಾರಗಳು ಆರಂಭವಾಗುತ್ತವೆ. ಅಂಥದ್ದೊಂದು ಯುಗಪಲ್ಲಟ ಸತ್ಯ ನಿಜಕ್ಕೂ ಗೋಚರವಾಯಿತೆ? ಇದನ್ನು ಪತ್ತೆ ಹಚ್ಚಿದ ವಿಜ್ಞಾನಿಗಳೇ ಕೆಲಕಾಲ ದಿಙ್ಮೂಢರಾದರು; ಹೇಳಲು ಹಿಂಜರಿದರು. ಕೊನೆಗೂ ಅಳುಕುತ್ತ, `ನಮ್ಮ ಪ್ರಯೋಗದ ಮೂಲಕ ಇದು ಗೊತ್ತಾಗಿದೆ. ಇದನ್ನು ನಂಬಬೇಕೆಂದು ನಾವು ಹೇಳುತ್ತಿಲ್ಲ. ಆದರೆ ನೀವೂ ಪ್ರಯೋಗ ಮಾಡಿ ನೋಡಿ; ನಮ್ಮಿಂದ ತಪ್ಪಾಗಿದ್ದರೆ ತೋರಿಸಿ~ ಎಂದು ಹೇಳಿ ಕೂತರು. ಅಷ್ಟೇ ಸಾಕಾಯಿತು. ಫಿಸಿಕ್ಸಿನ ಮನೆಗೆ ಬೆಂಕಿ ಬಿದ್ದಂತೆ ಸೆಪ್ಟೆಂಬರ್ 22-23ರಂದು ವಿಜ್ಞಾನಿಗಳು, ವಿಜ್ಞಾನ ಆಸಕ್ತರು ಎಸ್ಸೆಮ್ಮೆಸ್, ಟ್ವಿಟರ್, ಬ್ಲಾಗ್, ಹ್ಯಾಮ್ ಮುಂತಾದ ಎಲ್ಲ ಸಂಪರ್ಕ ಮಾಧ್ಯಮಗಳ ಮೂಲಕ ನ್ಯೂಟ್ರಿನೊಗಳ ಹೊಸ ಮುಖವನ್ನು ಮಿಂಚಿಸಿದರು. ಎಲ್ಲ ಪ್ರತಿಷ್ಠಿತ ಮಾಧ್ಯಮಗಳು ಪ್ರತಿಷ್ಠಿತ ಭೌತವಿಜ್ಞಾನಿಗಳ ಸಂದರ್ಶನಕ್ಕೆ ಪರದಾಡಿದವು. ಪಬ್‌ಗಳಲ್ಲಿ, ರೆಸ್ಟುರಾಗಳಲ್ಲಿ, ಗಾಲ್ಫ್  ಮೈದಾನಗಳಲ್ಲಿ ಚರ್ಚೆಗಳು ನಡೆದವು.

 ಇದಕ್ಕೆಲ್ಲ ಕಾರಣವಾಗಿದ್ದು ಜಿನಿವಾ ಬಳಿ ಇರುವ ಸರ್ನ್ ಸುರಂಗದಲ್ಲಿ ನಡೆದ ಒಂದು ಪ್ರಯೋಗ. ಎರಡು ವರ್ಷಗಳ ಹಿಂದೆ `ಬಿಗ್‌ಬ್ಯಾಂಗ್~ ಪ್ರಯೋಗ ಮಾಡಲು ಹೋಗಿ ಮನೆಮಾತಾದ ಎಲ್‌ಎಚ್‌ಸಿ ಸುರಂಗ ಇದು. ಭೂಮಿಯ ಕೆಳಗೆ 27 ಕಿಲೋಮೀಟರ್ ಉದ್ದದ ಬಳೆಯಾಕಾರದ ಪ್ರಯೋಗಶಾಲೆಯಲ್ಲಿ ಹೂಡಲಾದ ಪಾರ್ಟಿಕಲ್ ಅಕ್ಸಲರೇಟರ್ ಎಂಬ ಬೃಹತ್ ಸಾಧನವನ್ನು ಬಳಸಿ ಈ ಬಾರಿ ವಿಜ್ಞಾನಿಗಳು ಕೆಲವು ನ್ಯೂಟ್ರಿನೊಗಳನ್ನು ಚಿಮ್ಮಿಸಿದರು. ನ್ಯೂಟ್ರಿನೊ ಎಂದರೆ ಪರಮಾಣುವಿನ ಒಳಗಿರುವ ಪ್ರೋಟಾನ್ ಎಂಬ ಶಕ್ತಿಕಣವನ್ನು ಒಡೆದಾಗ ಹೊಮ್ಮುವ ಅನೇಕ ಬಗೆಯ ಸಂತಾನ ಕಣಗಳಲ್ಲಿ ಒಂದು ಕಣಸಮೂಹ. ತೀರಾ ಅನಂತಾಲ್ಪ ತೂಕ ಇರುವ ಇವು ಕಿರಣ ರೂಪದಲ್ಲಿ ಒಮ್ಮೆ ಚಿಮ್ಮಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅವು ಗೋಡೆಯ ಮೂಲಕ, ಉಕ್ಕಿನ ಕಂಬದ ಮೂಲಕ ಹೊಕ್ಕು ಹೊರಬಿದ್ದು ಗ್ರಾನೈಟ್ ಬಂಡೆಗಳ ಮೂಲಕವೂ ಸಾಗಿ, ಇಡೀ ಭೂಮಿಯ ಮೂಲಕ ಸಲೀಸಾಗಿ ಸಾಗಿ ಹೋಗುತ್ತವೆ.

ನೂರಾರು ಕೋಟಿ ಕಿಲೋಮೀಟರ್ ದಪ್ಪದ ಉಕ್ಕಿನ ಗೋಡೆ ನಿಲ್ಲಿಸಿದರೂ ಅವು ತಡೆಯಿಲ್ಲದೆ ಚಲಿಸುತ್ತವೆ. ಬಾಹ್ಯ ವಿಶ್ವದ ನಕ್ಷತ್ರ ಲೋಕದಿಂದ ಸದಾ ಹೊಮ್ಮುವ ಇವು ನಮ್ಮಳಗೂ ದಿನವಿಡೀ ಹೊಕ್ಕು ಭೂ ತಳದ ಮೂಲಕ ಧಾವಿಸುತ್ತಿರುತ್ತವೆ.
 ಇಂಥ ವಿಶ್ವ ಕಿರಣಗಳನ್ನು ಸರ್ನ್ ಸುರಂಗದಲ್ಲಿ ಕೂತಿದ್ದ ವಿಜ್ಞಾನಿಗಳು ಕೃತಕವಾಗಿ ಸೃಷ್ಟಿಸಿ ಚಿಮ್ಮಿಸಿದರು. ಹಿಂದೆ 2008ರಲ್ಲಿ ಭೂಮಿಯ ಆದಿಕ್ಷಣಗಳ ಪ್ರತಿಸೃಷ್ಟಿ ಮಾಡಲೆಂದು ಅವರು ಪ್ರೋಟಾನ್ ಕಣಗಳನ್ನು ಸುರಂಗದ ಸುತ್ತ ಗಿರಕಿ ಹೊಡೆಸಿದ್ದರು.

ಈ ಬಾರಿ ಹಾಗೆ ಗಿರಕಿ ಹೊಡೆಸಲಿಲ್ಲ. ಗೋಡೆಯ ಕಡೆ ಯಂತ್ರದ ಮುಖ ತಿರುಗಿಸಿ ನ್ಯೂಟ್ರಿನೊಗಳನ್ನು ಸಿಡಿಸಿದರು. ಚಿಮ್ಮಿದ ಕಣಗಳು ಗೋಡೆಯ ಮೂಲಕ ಭೂಮಿಗೆ ಸಮಾನಾಂತರವಾಗಿ ನೆಲದಾಳದಲ್ಲೇ ಚಲಿಸುತ್ತ ಆಲ್ಫ್ ಪರ್ವತ ಶ್ರೇಣಿಯ ತಳವನ್ನು ದಾಟಿ 732 ಕಿ.ಮೀ ಆಚೆಗೆ ಇಟಲಿಯ ಅಪೆನೈನ್ ಪರ್ವತದ ತಳದಲ್ಲಿ ಸಾಗಿದವು.

ಮೊದಲೇ ನಿರ್ಧರಿಸಿದಂತೆ ಇಟಲಿಯ  ಗ್ರಾನ್‌ಸಾಸ್ಸೊ ಎಂಬಲ್ಲಿನ ಇನ್ನೊಂದು ಸುರಂಗದಲ್ಲಿ ವಿಜ್ಞಾನಿಗಳು ಇವುಗಳ ಆಗಮನಕ್ಕಾಗಿ ಕಾದು ಕೂತಿದ್ದರು. ಅವರು ಹೂಡಿಟ್ಟುಕೊಂಡಿದ್ದ ಪ್ಲೇಟನ್ನು ಛೇದಿಸಿ ಅನಂತದತ್ತ ಸಾಗಿ ಹೋದವು. ಕೆಲವು ಕಣಗಳು ಪ್ಲೇಟ್‌ಗೆ ಅಪ್ಪಳಿಸಿ ಛಾಪು ಮೂಡಿಸಿ ಮಾಯವಾದವು. ಈ ಕಣಗಳು ಸರ್ನ್ ಯಂತ್ರದಿಂದ ಹೊರಟ ಮುಹೂರ್ತ ಗೊತ್ತಿತ್ತು. ಸಾಗಿ ಬಂದ ದೂರವೂ ಗೊತ್ತಿತ್ತು.

ಅವುಗಳ ವೇಗವನ್ನು ಲೆಕ್ಕ ಮಾಡಿ ನೋಡಿದವರಿಗೆ ಅಚ್ಚರಿ ಕಾದಿತ್ತು. ಬೆಳಕಿನ ಕಿರಣವೊಂದು ಇಷ್ಟೇ ದೂರ ಸಾಗಿ ಬರಲು ಬೇಕಾದ ಸಮಯಕ್ಕಿಂತ 60.7 ನ್ಯಾನೊ ಸೆಕೆಂಡ್ ಮೊದಲೇ ಇವು ತಲುಪಿದ್ದವು (ನ್ಯಾನೊ ಸೆಕೆಂಡ್ ಅಂದರೆ ಒಂದು ಸೆಕೆಂಡ್‌ನ ಶತಕೋಟಿಯಲ್ಲೊಂದು ಭಾಗ). ಅಂದರೆ, ನ್ಯೂಟ್ರಿನೊಗಳು ಬೆಳಕಿಗಿಂತ ಶೇಕಡಾ 0.0025ರಷ್ಟು ಹೆಚ್ಚು ವೇಗದಲ್ಲಿ ಧಾವಿಸಿದ್ದವು.

ಅದೇನು ಮಹಾ! ಅನ್ನಬೇಡಿ. ಬೆಳಕಿಗಿಂತ ಇಮ್ಮಡಿ ಮುಮ್ಮಡಿ ವೇಗದಲ್ಲೇನೂ ಅವು ಧಾವಿಸಿಲ್ಲ ನಿಜ. ಬೆಳಕಿನ ವೇಗ ಪ್ರತಿ ಸೆಕೆಂಡಿಗೆ 2,99,000 ಕಿಮೀ ಇದ್ದರೆ ನ್ಯೂಟ್ರಿನೊ ಕಣಗಳ ಓಟ ತೀರ ನಗಣ್ಯವೆನ್ನಿಸುವಷ್ಟು ಹೆಚ್ಚಿನ ವೇಗದಲ್ಲಿತ್ತು. ಆದರೆ ಅಷ್ಟೇ ಸಾಕಾಯಿತು, ವಿಜ್ಞಾನ ಲೋಕಕ್ಕೆ ಕಿಚ್ಚು ಹಚ್ಚಲು.

ಐನ್‌ಸ್ಟೀನ್ ಲೆಕ್ಕಾಚಾರದಲ್ಲಿ ನಿಜಕ್ಕೂ ತಪ್ಪಿದ್ದೀತೆ? 1905ರಲ್ಲಿ ಐನ್‌ಸ್ಟೀನ್ ಮಂಡಿಸಿದ ವಿಶೇಷ ಸಾಪೇಕ್ಷ ಸಿದ್ಧಾಂತವನ್ನು ಜಗತ್ತು ಒಪ್ಪಿಕೊಂಡ ನಂತರ ಅದರಲ್ಲಿ ದೋಷವಿದೆಯೆಂದು ಸಾಧಿಸಲು ಸಾವಿರಾರು ಯತ್ನಗಳು ನಡೆದಿವೆ. 1930ರಲ್ಲಿ ಜರ್ಮನಿಯ ನಾತ್ಸಿ ಪಕ್ಷವೇ ಐನ್‌ಸ್ಟೀನ್ ಥಿಯರಿ ತಪ್ಪೆಂದು ತೋರಿಸಲು `ಸಾಪೇಕ್ಷ ಸಿದ್ಧಾಂತದ ವಿರುದ್ಧ 100 ತಜ್ಞರ ಹೇಳಿಕೆ~ ಎಂಬ ಪುಸ್ತಿಕೆಯನ್ನು ಹೊರ ತಂದಿತ್ತು. ಐನ್‌ಸ್ಟೀನ್ ನಕ್ಕಿದ್ದ. `ನೂರುಗಟ್ಟಲೆ ತಜ್ಞರು ಯಾಕೆ ಬೇಕು? ಒಂದೇ ಒಂದು ಪುರಾವೆ ಕೊಟ್ಟರೆ ಸಾಕು~ ಎಂದಿದ್ದ. ಯಾರೂ ಕೊಡಲಿಲ್ಲ.

  ಸಾಪೇಕ್ಷ ಸಿದ್ಧಾಂತದ ಪ್ರಕಾರ ಬೆಳಕಿನ ವೇಗವನ್ನು ಸರಿಗಟ್ಟಲೆಂದು ನಾವು ಬೆನ್ನಿಗೆ ರಾಕೆಟ್ ಕಟ್ಟಿಕೊಂಡು ಧಾವಿಸಿದರೆ ಸಮಯವೇ ನಿಧಾನವಾಗುತ್ತದೆ; ಚಿರಯೌವನ ನಮ್ಮದಾಗುತ್ತದೆ. ನಮ್ಮ ತೂಕ ಹೆಚ್ಚುತ್ತ ಹೋಗುತ್ತದೆ; ಮೂರು ಆಯಾಮಗಳ ದೇಹ ಕ್ರಮೇಣ ಎರಡು ಆಯಾಮಕ್ಕೆ ಬರುತ್ತ ನಾವು ನಮ್ಮದೇ ನೆರಳಂತಾಗುತ್ತ ಸಾಗುತ್ತೇವೆ. ಬೆಳಕಿನ ವೇಗವನ್ನೂ ಒಮ್ಮೆ ಮೀರಿದೆವೆಂದರೆ ಆಗ ಅನೂಹ್ಯ ಸಂಭವಿಸತೊಡಗುತ್ತದೆ. ಸಮಯ ಹಿಮ್ಮಗ ಚಲಿಸುತ್ತದೆ. ನಾವು ಶೂನ್ಯಕ್ಕಿಂತ ಹಗುರವಾಗುತ್ತೇವೆ. ಶೂನ್ಯಕ್ಕಿಂತ ತೆಳ್ಳಗಾಗುತ್ತೇವೆ. ಇವೆಲ್ಲ ಅಸಂಭವಗಳು ಇರುವುದರಿಂದ ಬೆಳಕಿನ ವೇಗವನ್ನು ಮೀರಲು ಯಾವುದರಿಂದಲೂ ಸಾಧ್ಯವಿಲ್ಲ ಎಂದಿದ್ದ ಐನ್‌ಸ್ಟೀನ್. 

  ಹಾಗಿದ್ದರೆ ಸರ್ನ್ ವಿಜ್ಞಾನಿಗಳ ಅಳತೆಯಲ್ಲೇ ದೋಷವಿದ್ದೀತೆ? ಮೂರು ವರ್ಷಗಳ ಸಿದ್ಧತೆಯೊಂದಿಗೆ ಈ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಹೂಡಿಟ್ಟ ಯಂತ್ರಗಳು ವಿಜ್ಞಾನ ಅದ್ಭುತ ಸಾಧನೆಯ ಪ್ರತೀಕ. ನೆಲದಾಳದ ಬಂಡೆಗಳ ಮೂಲಕ 732 ಕಿಲೋಮೀಟರ್ ದೂರದ ಅಳತೆ ಅದೆಷ್ಟು ಪಕ್ಕಾ ಇತ್ತೆಂದರೆ, ಹತ್ತಿಪ್ಪತ್ತು ಬಾರಿ ಮತ್ತೆ ಮತ್ತೆ ಅಳೆದಾಗಲೂ ಹೆಚ್ಚೆಂದರೆ ಕೇವಲ 20 ಸೆಂಟಿಮೀಟರ್‌ಗಳ ವ್ಯತ್ಯಾಸ ಕಂಡುಬಂದಿತ್ತು. ಸಮಯದ ಅಳತೆಯೂ ಅಷ್ಟೇ ಖಚಿತವಾಗಿತ್ತು. ಸೀಸಿಯಂ ಪರಮಾಣು ಗಡಿಯಾರ ಮತ್ತು ಜಿಪಿಎಸ್ ವಿಧಾನ ಅದೆಷ್ಟು ಪಕ್ಕಾ ಇತ್ತೆಂದರೆ ಇಟಲಿಯಲ್ಲಿ ಲಾ~ಕಿಲಾ ಭೂಕಂಪನದಿಂದಾಗಿ ಅಲ್ಲಿನ ಭೂಗತ ಪ್ರಯೋಗಶಾಲೆ ಏಳು ಸೆಂಟಿಮೀಟರ್ ದೂರ ಸರಿದಿದ್ದನ್ನೂ ಲೆಕ್ಕಕ್ಕೆ ಸೇರಿಸಲಾಗಿತ್ತು. ಹಗಲು ಮತ್ತು ರಾತ್ರಿಯ ಉಷ್ಣತೆಯ ವ್ಯತ್ಯಾಸದಿಂದ ಅಥವಾ ಸೂರ್ಯ ಚಂದ್ರರ ಆಕರ್ಷಣೆಯಿಂದ ಉಂಟಾಗುವ ನೆಲದ ಪ್ರಸರಣವನ್ನೂ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಹೀಗೆ ಇಷ್ಟೊಂದು ಖಚಿತವಾಗಿ ದೂರ ಮತ್ತು ವೇಳೆಯನ್ನು ಅಳತೆ ಮಾಡಲು ಸಾಧ್ಯವಾಗಿದ್ದೇ ಭೌತ ವಿಜ್ಞಾನದ ಪರಮೋಚ್ಚ ಸಾಧನೆ ಎನ್ನಬಹುದು. ಹಾಗಿದ್ದರೆ ಬೆಳಕನ್ನು ಹಿಮ್ಮೆಟ್ಟಿಸುವುದು ನಿಜಕ್ಕೂ ಸಾಧ್ಯವೇ?

  ಬೆಳಕಿನ ವೇಗವನ್ನು ಮೀರಿ ದ್ರವ್ಯಗಳು ಚಲಿಸುತ್ತವೆ ಎಂಬುದು ಸಾಬೀತಾದರೆ ಜಗತ್ತಿನ ಎಲ್ಲ ಭೌತ ವಿಜ್ಞಾನ ಪಠ್ಯಗಳನ್ನು ಹೊಸದಾಗಿ ಬರೆಯಬೇಕಾಗುತ್ತದೆ. ತಾರಾಲೋಕದ ದೂರ ವಿಸ್ತಾರಗಳನ್ನೆಲ್ಲ ಮತ್ತೆ ಲೆಕ್ಕಾಚಾರ ಮಾಡಬೇಕಾಗುತ್ತದೆ.

ವಿಶ್ವದ ವಯಸ್ಸು (ಈಗಿನ ಅಂದಾಜಿನ ಪ್ರಕಾರ13.7 ಶತಕೋಟಿ ವರ್ಷ) ಬದಲಾಗುತ್ತದೆ. ಬಿಗ್‌ಬ್ಯಾಂಗ್ ಥಿಯರಿ ಬದಲಾಗುತ್ತದೆ. ಕಪ್ಪುರಂಧ್ರಗಳ ಪರಿಕಲ್ಪನೆ ಬದಲಾಗುತ್ತದೆ. ವಿಶ್ವ ವಿಸ್ತರಿಸುತ್ತಿದೆ ಎಂಬ ಸಿದ್ಧಾಂತದ ಮರು ಪರಿಶೀಲನೆ ಮಾಡಬೇಕಾಗುತ್ತದೆ (ವಿಸ್ತರಣೆಯ ವೇಗ ಹೆಚ್ಚುತ್ತಿದೆ ಎಂದು ತೋರಿಸಿದ ಮೂವರಿಗೆ ಇದೀಗ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ). ಎಲ್ಲಕ್ಕಿಂತ ಮುಖ್ಯವಾಗಿ ಇ=ಎಮ್‌ಸಿ2 ಸೂತ್ರವೇ ಹಳ್ಳ ಹಿಡಿಯುತ್ತದೆ. `ಅಂಥ ಯಾವ ಬದಲಾವಣೆಯೂ ಆಗದಿರಲಿ~ ಎಂದು ಹಾರೈಸುವವರು ಒಂದ ಕಡೆ; ಅವೆಲ್ಲ ಬದಲಾದರೆ ಚೀಲ ಭರ‌್ತಿ ಹೊಸ ನೊಬೆಲ್ ಪ್ರಶಸ್ತಿಗಳು ಸಿಗುತ್ತವೆ ಎಂದು ಆಶಿಸುವವರು ಇನ್ನೊಂದು ಕಡೆ. ಈ ಎರಡು ಬಣಗಳ ನಡುವೆ ಭೌತವಿಜ್ಞಾನ ಆಗಲೇ ಹಂಚಿಹೋಗಿದೆ. `ಸತ್ಯ ಏನೆಂದು ನೋಡಿಯೇ ಬಿಡೋಣ~ವೆಂದು ಅಮೆರಿಕ ಮತ್ತು ಜಪಾನಿನ ವಿಜ್ಞಾನಿಗಳು ತೋಳೇರಿಸಿ ತಂತಮ್ಮ ಭೂಗತ ಪ್ರಯೋಗಾಲಯಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಐನ್‌ಸ್ಟೀನ್ ಲೆಕ್ಕಾಚಾರ ತಪ್ಪೆಂದು ಸಾಬೀತಾದರೆ ತಾನು ಟಿವಿ ಕ್ಯಾಮರಾ ಎದುರು ತನ್ನ ಚಡ್ಡಿಯನ್ನೇ ತಿನ್ನುವುದಾಗಿ ಇಂಗ್ಲೆಂಡಿ ಸರ‌್ರೆ ವಿವಿಯ ಭೌತವಿಜ್ಞಾನಿ ಜಿಮ್ ಅಲ್ ಖಲೀಲಿ ಹೇಳಿದ್ದಾರೆ.

  ಸತ್ಯ ಏನೇ ಇದ್ದರೂ, ಅವೆಲ್ಲ ಸಾಮಾನ್ಯರ ಕಲ್ಪನೆಗೆ ದಕ್ಕದ ಕ್ವಾಂಟಮ್ ವಿಶ್ವದ ನಾಲ್ಕನೆಯ, ಐದನೆಯ ಅಥವಾ ಹನ್ನೊಂದನೆಯ ಆಯಾಮಗಳಲ್ಲಿ ನಡೆಯುವ ವಿಸ್ಮಯಗಳೇ ಹೊರತೂ ನಮ್ಮ ನಿತ್ಯ ಬದುಕಿನಲ್ಲಿ ಸಮಯ ಹಿಮ್ಮಗ ಚಲಿಸಲಾರದು. ಕಾಲಯಂತ್ರಗಳ ನಿರ್ಮಾಣ ಮುಂದೆಂದಾದರೂ ಸಾಧ್ಯವಾದೀತಾದರೂ ವರ್ತಮಾನದ ಸಂಚಾರ ಸಾಗಾಟ ಸಮಸ್ಯೆಗೆ ಪರಿಹಾರ ಸಿಗಲಾರದು. ಮೆಟ್ರೊ ಬಂದರೇನಂತೆ?

(ನಿಮ್ಮ ಅನಿಸಿಕೆಗಳನ್ನು ತಿಳಿಸಿ:editpagefeedback@prajavani.co.in) )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT