ADVERTISEMENT

ಡಿಜಿಟಲ್ ದುಶ್ಚಟಕ್ಕೆ ಮದ್ದು ಎಲ್ಲಿದೆ, ಎಲ್ಲಿದೆ?

ನಾಗೇಶ ಹೆಗಡೆ
Published 3 ಅಕ್ಟೋಬರ್ 2018, 19:46 IST
Last Updated 3 ಅಕ್ಟೋಬರ್ 2018, 19:46 IST
   

ಇದೀಗ ಹೊಸಬಗೆಯ ತಂಪು ಕನ್ನಡಕ ಬಂದಿದೆ. ಇದನ್ನು ಧರಿಸಿದರೆ ರಸ್ತೆ ಬದಿಯ ಡಿಜಿಟಲ್ ಭಿತ್ತಿಫಲಕಗಳೆಲ್ಲ ಕಪ್ಪಾಗಿ ಕಾಣುತ್ತವೆ. ಮನೆಯಲ್ಲಿ ಟಿವಿ ಹಚ್ಚಿ ಕೂತಿದ್ದರೆ ಅದರಲ್ಲೂ ಬರೀ ಕರೀಪರದೆ ಕಾಣುತ್ತದೆ. ಕಂಪ್ಯೂಟರ್, ಲ್ಯಾಪ್‍ಟಾಪ್... ಹೀಗೆ ಎಲ್ಲೆಲ್ಲಿ ಎಲ್‍ಇಡಿ/ ಎಲ್‍ಸಿಡಿ ಪರದೆಗಳಿವೆಯೊ ಅಲ್ಲೆಲ್ಲ ಕಪ್ಪು ಚೌಕಟ್ಟು ಕಾಣುತ್ತವೆ. ಎರಡು ದಿನಗಳ ಈಚೆಗಷ್ಟೇ ಲೋಕಾರ್ಪಣೆಗೊಂಡ ಈ ಮ್ಯಾಜಿಕ್ ಕನ್ನಡಕದಲ್ಲಿ ಸದ್ಯಕ್ಕೆ ಸ್ಮಾರ್ಟ್‍ಫೋನ್, ಟ್ಯಾಬ್ಲೆಟ್ ಪರದೆಗಳು ಕಪ್ಪಾಗಿ ಕಾಣಲಾರವು.

ಬೆಂಗಳೂರಿನ ಎಲ್ಲ ಫ್ಲೆಕ್ಸ್ ಭಿತ್ತಿಫಲಕಗಳನ್ನು ಕೀಳಬೇಕೆಂಬ ಉಚ್ಚ ನ್ಯಾಯಾಲಯದ ಆದೇಶದ ಪರಿಣಾಮವನ್ನು ನಾವು ನೋಡಿದ್ದೇವೆ. ಛಡಿಗೆ ಬೆದರಿದ ಭೂತದಂತೆ ಬಿಬಿಎಂಪಿ ಅಧಿಕಾರಶಾಹಿ ಎದ್ದೋಬಿದ್ದೋ ಧಾವಿಸಿ ಎರಡೇ ದಿನಗಳಲ್ಲಿ ಅವನ್ನೆಲ್ಲ ಕಿತ್ತು ಹಾಕಿಸಿದ್ದನ್ನು ನಾವು ನೋಡಿದ್ದೇವೆ. ಫ್ಲೆಕ್ಸ್‌ಗಳಿಗೆ ಬೆನ್ನೆಲುಬಾಗಿದ್ದ ಕಬ್ಬಿಣದ ಚೌಕಟ್ಟುಗಳೆಲ್ಲ ಬೇತಾಳಗಳಂತೆ ನೇತಾಡುತ್ತಿರುವುದನ್ನು ಈಗಲೂ ನೋಡುತ್ತಿದ್ದೇವೆ. ನಗರದ ದೃಶ್ಯಮಾಲಿನ್ಯವನ್ನು ಅಷ್ಟರಮಟ್ಟಿಗೆ ಕಡಿಮೆ ಮಾಡುವ ಈ ಕ್ರಮಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಅದು ಬಾಹ್ಯ ಪರಿಸರ ಶುದ್ಧಿಯ ಕ್ರಮ ಸರಿ. ಆದರೆ ನಮ್ಮೊಳಗಿನ ಮನೋಪರಿಸರವನ್ನು ಗಬ್ಬೆಬ್ಬಿಸುವ ತಂತ್ರಜ್ಞಾನಕ್ಕೆ ಲಗಾಮು ಹಾಕುವುದು ಹೇಗೆ?

ಡಿಜಿಟಲ್ ತಂತ್ರಜ್ಞಾನದ ಅಂಟುಚಟವನ್ನು ನಾವೆಲ್ಲ ನೋಡುತ್ತಿದ್ದೇವೆ, ಅದರ ಹಾವಳಿಯಲ್ಲಿ ಸುಖಿಸುತ್ತಿದ್ದೇವೆ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಸಮಾಜ ಹೊಸ ಕಲರ್ ಟಿವಿ ಪರದೆಗೆ ಅಂಟಿಕೊಂಡಿತ್ತು. ಧಾರಾವಾಹಿ ಬರುತ್ತಿದ್ದಾಗ ಯಾರ ಮನೆಗೆ ಹೋದರೂ ಮುಜುಗರ ಅನುಭವಿಸಬೇಕಾಗಿತ್ತು. ಆ ಹುಚ್ಚು ತುಸು ಕಡಿಮೆ ಆಯಿತೆನ್ನುವಷ್ಟರಲ್ಲಿ ಪೇಜರ್ ಬಂತು, ಅದರ ಬೆನ್ನಹಿಂದೆಯೇ ಮೊಬೈಲ್ ಫೋನ್ ಬಂತು. ಆಮೇಲೆ ಗೇಮಿಂಗ್ ಕನ್‍ಸೋಲ್ ಬಂತು. ಈಗಂತೂ ಸ್ಮಾರ್ಟ್‍ಫೋನ್‍ಗಳ ವಿರಾಟ್ ವ್ಯಾಪ್ತಿಯನ್ನು ನೋಡುತ್ತಿದ್ದೇವೆ. ಅಕ್ಕಪಕ್ಕ, ನೆರೆಹೊರೆ ಎಂಬ ನಾಗರಿಕ ಪ್ರಜ್ಞೆಗಳನ್ನೆಲ್ಲ ಮರೆತಂತೆ, ಮರಳಲ್ಲಿ ತಲೆಹೂತ ಉಷ್ಟ್ರಪಕ್ಷಿಗಳಾಗುತ್ತಿದ್ದೇವೆ. ವಾಟ್ಸಾಪ್‍ನಲ್ಲಿ ತಾನು ಕಳಿಸಿದ ಸಂದೇಶದ ತಳದಲ್ಲಿ ಟು ಟಿಕ್ಸ್ ನೀಲಿಸಂಜ್ಞೆ ಬರುವವರೆಗೂ ಚಡಪಡಿಕೆ ಅನುಭವಿಸುವಂತಾಗಿದೆ. ಈ ಪ್ರವೃತ್ತಿಗೆ ಲಗಾಮು ಹಾಕುವುದು ಬೇಡವೆ?

ADVERTISEMENT

ಅಂಟುಚಟಗಳಲ್ಲಿ ವಿಡಿಯೊ ಗೇಮ್ ಎಲ್ಲಕ್ಕಿಂತ ಹೆಚ್ಚು ಗಂಭೀರವೆನಿಸಿದ್ದು ಅದನ್ನು ವಿಶ್ವ ಆರೋಗ್ಯ ಸಂಸ್ಥೆ ‘ಗೇಮಿಂಗ್ ಡಿಸಾರ್ಡರ್’ ಎಂದು ಹೆಸರಿಸಿ ಅಧಿಕೃತ ಕಾಯಿಲೆಗಳ ಪಟ್ಟಿಯಲ್ಲಿ ಇದೀಗ ಸೇರಿಸಿದೆ. ಐದು ವರ್ಷದ ಮಗುವೂ ಅಪ್ಪನ/ ಅಮ್ಮನ ಕೈಯಿಂದ ಮೊಬೈಲ್ ಫೋನ್ ಕಿತ್ತು ವಿಡಿಯೊ ಗೇಮ್ ಆಡುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಪಾಲಕರೂ ನಮ್ಮಲ್ಲಿದ್ದಾರೆ. ಮದ್ಯ, ಜೂಜಿನಂತೆ ಅದೂ ಒಂದು ಗೀಳಾಗಿ ಬೆಳೆದು ಕ್ರಮೇಣ ಅದರಲ್ಲೇ ಹಣ ಗಳಿಸಲು ಹೊರಟು ಸಂಕಷ್ಟದಲ್ಲಿ ಸಿಕ್ಕ ಯುವಕರ ಸಂಖ್ಯೆಯೂ ಹೆಚ್ಚುತ್ತಿದೆ. ಜಾಗತಿಕ ಮಟ್ಟದಲ್ಲಿ ಗೇಮಿಂಗ್ ಗೀಳು ಅದೆಷ್ಟು ಹೆಚ್ಚುತ್ತಿದೆ ಎಂದರೆ, ಸಿನಿಮಾ, ಟಿವಿ ಅಥವಾ ಸಂಗೀತ ಉದ್ಯಮಕ್ಕಿಂತ ಹೆಚ್ಚಿನ ವರಮಾನವನ್ನು ಗೇಮಿಂಗ್ ಉದ್ಯಮ ಬಾಚಿಕೊಳ್ಳುತ್ತಿದೆ. ಕಳೆದ ವರ್ಷ ಅದರ ಜಾಗತಿಕ ವರಮಾನ 109 ಶತಕೋಟಿ ಡಾಲರ್ ಇತ್ತು. ಅದಕ್ಕೆ ಹೋಲಿಸಿದರೆ ಸಿನಿಮಾ ರಂಗ ತೀರಾ ಹಿಂದಿದೆ. ಅಮೆರಿಕದ ಮೋಶನ್ ಪಿಕ್ಚರ್ಸ್ ಸಂಘದ ದಾಖಲೆಗಳ ಪ್ರಕಾರ ಅದೇ ವರ್ಷ ಹಾಲಿವುಡ್ ಬಾಕ್ಸ್ ಆಫೀಸಿನ ಜಾಗತಿಕ ವರಮಾನ 40 ಶತಕೋಟಿ ಡಾಲರ್ ಇತ್ತು. ಜಗತ್ತಿನ ಇತರೆಲ್ಲ ದೇಶಗಳಿಗಿಂತ ಭಾರತದಲ್ಲಿ ಗೇಮಿಂಗ್ ಉದ್ಯಮ ಅತಿ ವೇಗವಾಗಿ ಬೆಳೆಯುತ್ತಿದ್ದು, ವಿದೇಶೀ ಹೂಡಿಕೆದಾರರು ಮುಗಿಬೀಳುತ್ತಿದ್ದಾರೆ.

ವಿಡಿಯೊ ಗೇಮ್ ಈ ಕಾಯಿಲೆಯ ವ್ಯಕ್ತಲಕ್ಷಣ ಅಷ್ಟೆ. ಮಗ ಗೇಮಿಂಗ್‍ನಲ್ಲಿ ತೊಡಗಿದ್ದರೆ ಕಚೇರಿಗೆ ಹೋದ ಅಮ್ಮ ಯೂಟ್ಯೂಬ್‍ನಲ್ಲಿ, ಕಾಲೇಜಿನಿಂದ ಬಂದ ತಂಗಿ ವಾಟ್ಸಾಪ್‍ನಲ್ಲಿ, ಅರೆಕಾಲಿಕ ಉಪನ್ಯಾಸಕನಾದ ಅಪ್ಪ ಫೇಸ್‍ಬುಕ್‍ನಲ್ಲಿ ಮುಳುಗಿದ್ದರೆ ಅದೆಂಥ ಸಂತುಲಿತ ಸಂಸಾರ ಮನೆಯಲ್ಲಿ? ಈಗಂತೂ ಒಂದು ವರ್ಷದ ಮಗುವಿನ ಎದುರು ತಾಯಂದಿರು ಸ್ಮಾರ್ಟ್‍ಫೋನ್ ಇಟ್ಟು ತುಂಟ ಚಂದಮಾಮನ ಗ್ರಾಫಿಕ್ ತೋರಿಸುತ್ತಲೇ ಊಟ ಮಾಡಿಸುತ್ತಾರೆ. ಬ್ರಿಟನ್ನಿನ ಟೆಲಿಕಾಂ ಸಂಸ್ಥೆ ಕಳೆದ ವರ್ಷ ‘ಡಿಜಿಟಲ್ ಡಿಟಾಕ್ಸ್’ ಹೆಸರಿನ ಸಮೀಕ್ಷೆಯೊಂದನ್ನು ನಡೆಸಿತು. ಒಂದೂವರೆ ಕೋಟಿ ಜನರು ಪಾಲ್ಗೊಂಡು ಆ ಪ್ರಯೋಗದಲ್ಲಿ ನಿರ್ದಿಷ್ಟ ಕಾಲದವರೆಗೆ 4ಜಿ ಉಪವಾಸ ವ್ರತ ಕೈಗೊಂಡರು. ವ್ರತ ಮುಗಿಸಿ ಪ್ರಶ್ನೆಗೆ ಉತ್ತರಿಸುತ್ತ ಶೇ 33 ಜನರು ‘ಬಾಕಿ ಉಳಿದಿದ್ದ ಎಷ್ಟೊಂದು ಕೆಲಸಗಳು ಪೂರ್ಣಗೊಂಡವು’ ಎಂದು ಖುಷಿಪಟ್ಟರು. 27% ಮಂದಿ ‘ಅಬ್ಬ, ಬಿಡುಗಡೆ ಸಿಕ್ತು, ಮನಸ್ಸು ನಿರಾಳವಾಯ್ತು’ ಎಂದರು. 25% ಜನರು ತಮಗೆ ಜೀವನದಲ್ಲಿ ಹೊಸ ಉತ್ಸಾಹ ಬಂತೆಂದು ತಿಳಿಸಿದರು. ಶೇಕಡಾ 15ಕ್ಕಿಂತ ಕಡಿಮೆ ಮಂದಿ ‘ಬದುಕು ಖಾಲಿ ಅನ್ನಿಸ್ತು...’, ‘ಹಿಂದುಳಿದು ಬಿಟ್ಟೆ’, ‘ಮನದಲ್ಲಿ ಶೂನ್ಯ ತುಂಬಿಕೊಂಡಿತು...’ ಎಂದೆಲ್ಲ ತಿಳಿಸಿದವರೂ ಇದ್ದರು, ಅನ್ನಿ. ಆದರೆ ಒತ್ತಡದಿಂದ ಬಿಡುಗಡೆ ಪಡೆದೆವೆಂದೇ ಬಹುಪಾಲು ಜನರು ಹೇಳಿದರು. ಈಗಂತೂ ಬಿಡಿ, ‘ಡಿಜಿಟಲ್ ಡಿಟಾಕ್ಸ್’ ಎಂಬುದು ಯೋಗ, ಮಜ್ಜನ, ಪ್ರಾಣಾಯಾಮದ ಥರಾ ಚಿಕಿತ್ಸಾ ಪದ್ಧತಿಯಾಗಿ ಹೊಮ್ಮುತ್ತಿದೆ. ಅಷ್ಟಾದರೆ ಸಾಲದು, ‘ತಂಬಾಕಿನ ಮೇಲೆ ನಿಯಂತ್ರಣ ಹೇರಿದಷ್ಟೇ ವ್ಯಾಪಕ ಕ್ರಮವನ್ನು ಕೈಗೊಳ್ಳಬೇಕಾಗಿ ಬಂದಿದೆ’ ಎನ್ನುತ್ತಾರೆ, ಸೇಲ್ಸ್‌ಫೋರ್ಸ್ ಹೆಸರಿನ ಗ್ರಾಹಕ ಕಲ್ಯಾಣ ಕಂಪನಿಯ ಸಿಇಓ ಮಾರ್ಕ್ ಬೇನ್ಯಾಫ್.

ತಂತ್ರಜ್ಞಾನದ ಅತಿಕ್ರಮಣದ ವಿರುದ್ಧ ಅಲ್ಲಿ ಇಲ್ಲಿ ಸೀಮಿತ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಹಿಂದೆ 1811ರಲ್ಲಿ ಬ್ರಿಟನ್ನಿನಲ್ಲಿ ಜವಳಿ ಗಿರಣಿಗಳು ಆರಂಭವಾದಾಗ ಅಂಥ ಯಂತ್ರನಾಗರಿಕತೆಯನ್ನು ಬಗ್ಗು ಬಡಿಯಲೆಂದೇ ಜನರು ಒಂದಾದರು. ಸಾವಿರಗಟ್ಟಲೆ ನಿಟ್ಟಿಂಗ್ ಯಂತ್ರಗಳನ್ನು ನುಚ್ಚುನೂರು ಮಾಡಿದ ಇವರಿಗೆ ‘ಲಡ್ಡೈಟ್ಸ್’ ಎಂದೇ ಹೆಸರು ಬಂತು. ಯಂತ್ರ ಮುರಿದವರಿಗೆ ಮರಣ ದಂಡನೆ ವಿಧಿಸುವ ಉಗ್ರ ಕಾನೂನು ಬಂದ ನಂತರ ಅಂಥ ಚಳವಳಿಗಳೆಲ್ಲ ಸ್ಥಗಿತಗೊಂಡವು. ಗಾಂಧೀಜಿಯವರೂ ತಂತ್ರಜ್ಞಾನದ ಹಾವಳಿಯ ಬಗ್ಗೆ ‘ಹಿಂದ್ ಸ್ವರಾಜ್’ದಲ್ಲಿ ಎಚ್ಚರಿಕೆ ನೀಡಿದರಾದರೂ ಬುದ್ಧಿಯನ್ನೇ ಹೈಜಾಕ್ ಮಾಡುವ ಡಿಜಿಟಲ್ ಯುಗದ ಸುಳಿವುಗಳೂ ಆಗ ಸಿಕ್ಕಿರಲಿಲ್ಲ. 2000ದಲ್ಲಿ ‘ಷಿಕ್ಯಾಗೊ ಟ್ರೈಬ್ಯೂನ್’ ಪತ್ರಿಕೆಯ ಅಂಕಣಕಾರನೊಬ್ಬ ತಾನು ಇಂಟರ್ನೆಟ್, ಇ–ಮೇಲ್‍ಗಳ ಜಂಜಾಟ ತೊರೆದು ಕೈಯಲ್ಲೇ ಬರೆಯುತ್ತೇನೆಂದು ಸತ್ಯಾಗ್ರಹಕ್ಕೆ ಕೂತು, ಕೆಲವು ದಿನಗಳ ನಂತರ ಸೋತು ಮೂಲೆಗುಂಪಾದ. ಈಚಿನ ವರ್ಷಗಳಲ್ಲಿ ಕಲಾವಿದ ಐವಾನ್ ಕಾಶ್ ಎಂಬಾತ ನಡೆಸಿದ ಪ್ರಯತ್ನ ಇನ್ನೂ ವಿಶಿಷ್ಟವಾದುದು. ಟೈಪ್ ಮಾಡಿದ ಇ–ಮೇಲ್‍ಗಳನ್ನು ಈತ ಕೈಬರಹವನ್ನಾಗಿ ಪರಿವರ್ತಿಸಬಲ್ಲ ಸಂಘಟನೆಯನ್ನು ಆರಂಭಿಸಿದ. ಇಂಗ್ಲಿಷ್ ಪತ್ರವನ್ನು ಕೈಯಲ್ಲಿ ಬರೆಯಬಲ್ಲ ಎರಡು ಸಾವಿರ ಮಂದಿ ಉಚಿತ ಸೇವಕರ ಪಡೆಯನ್ನೇ ವಿವಿಧ ದೇಶಗಳಲ್ಲಿ ಈತ ಸೃಷ್ಟಿ ಮಾಡಿ ಹತ್ತು ವರ್ಷಗಳ ಸೇವೆಯನ್ನೂ ಕೊಟ್ಟ. ಈಚೆಗೆ ಸಾನ್‍ಫ್ರಾನ್ಸಿಸ್ಕೊ ನಗರದಲ್ಲಿ ನೆಟ್‍ವರ್ಕ್ ಇಲ್ಲದ ಭ್ರಾಮಕ ‘ಟೆಕ್ ಫ್ರೀ ಝೋನ್’ ಸೃಷ್ಟಿ ಮಾಡಿ ತಲ್ಲಣ ಎಬ್ಬಿಸಿದ. ಈ ಅಂಕಣದ ಆರಂಭದಲ್ಲಿ ಹೇಳಿದ ತಂಪು ಕನ್ನಡಕದ ಸೃಷ್ಟಿ ಈತನದೇ. ಹೆಚ್ಚಿನ ಮಾಹಿತಿ ಬೇಕಿದ್ದರೆ ಕಿಕ್‍ಸ್ಟಾರ್ಟರ್ ಡಾಟ್ ಕಾಮ್ ನೋಡಬಹುದು.

ಇದಕ್ಕೆ ವಿರುದ್ಧವಾಗಿ ಆದಷ್ಟು ಹೆಚ್ಚು ಹೆಚ್ಚು ಜನರಿಗೆ ಟೆಕ್ ಗೀಳನ್ನು ಇನ್ನಷ್ಟು ಗಾಢವಾಗಿ ಅಂಟಿಸಲು ಯತ್ನಗಳು ನಡೆಯುತ್ತಲೇ ಇವೆ. ’20 ಸಾವಿರ ಜನ ಲೈಕ್ ಮಾಡಿದ್ದಾರೆ- ನಿನಗೂ ಇಷ್ಟವಾಗಬಹುದು’, ‘ನಿಮ್ಮ ಗೆಳೆಯರ ಹೆಸರು ಕೊಟ್ಟರೆ ಉಚಿತ ಕೊಡುಗೆ’, ‘ನಿಮ್ಮ ಪರಿಚಿತರ ಜನ್ಮದಿನ ಬಂದಿದೆ, ಶುಭಕೋರಿರಿ’ ಎಂಬ ಸಂದೇಶಗಳು; ನಿಮ್ಮ ಇಷ್ಟಕ್ಕೆ ತಕ್ಕಂಥದ್ದೇ ಸಾಮಗ್ರಿಗಳ, ಪುಸ್ತಕಗಳ ಪಟ್ಟಿಯನ್ನು ಕಳಿಸುವ ಆನ್‍ಲೈನ್ ಮಳಿಗೆಗಳು; ಒಂದೆ, ಎರಡೆ? ಇದ್ದುದರಲ್ಲಿ ತುಸು ನೆಮ್ಮದಿಯ ಸಂಗತಿ ಏನೆಂದರೆ, ಇಂಥ ಗೀಳು ಜಾಸ್ತಿಯಾಗದ ಹಾಗೆ ಕಂಪನಿಗಳೇ ಅಲ್ಲಲ್ಲಿ ‘ಕ್ಷೇಮಾವಕಾಶ’ಗಳನ್ನೂ ಸೃಷ್ಟಿಸತೊಡಗಿವೆ. ತಮ್ಮ ತಾಣಗಳನ್ನು ತೀರ ಜಾಸ್ತಿ ಹೊತ್ತು ನೋಡುತ್ತಿದ್ದರೆ ಎಚ್ಚರಿಕೆ ಕೊಡುವ ಅಥವಾ ತಾನಾಗಿ ತಾಣವೇ ಸ್ಥಗಿತಗೊಳ್ಳುವ ವ್ಯವಸ್ಥೆಯನ್ನು ಫೇಸ್‍ಬುಕ್- ಇನ್‍ಸ್ಟಾಗ್ರಾಂ, ಗೂಗಲ್- ಯೂಟ್ಯೂಬ್‍ನಲ್ಲಿ ಸೇರ್ಪಡೆ ಮಾಡಲಾಗುತ್ತಿದೆ (ಆನ್‍ಲೈನ್ ಜೂಜಾಟದಲ್ಲಿ ಸಿಲುಕಿದವರಿಗೆ ಅಂಥ ಸಹಾಯ ಈಗಾಗಲೇ ಸಿಗುತ್ತಿದೆ). ಮಕ್ಕಳ ಬುದ್ಧಿ ಬೆಳವಣಿಗೆಗೆ ಸ್ಮಾರ್ಟ್‍ಫೋನ್ ಅಪಾಯಕಾರಿ ಎಂಬ ಭಾವನೆ ಗಟ್ಟಿಯಾಗುತ್ತ ಹೋದರೆ ಅದು ತಮ್ಮ ಭವಿಷ್ಯಕ್ಕೇ ಮಾರಕವಾದೀತು ಎಂಬುದು ಫೋನ್ ಕಂಪನಿಗಳಿಗೂ ಅನ್ನಿಸತೊಡಗಿದೆ. ಅದೆಂಥ ‘ಹಾವೂ ಸಾಯ, ಕೋಲೂ ಮುರಿಯ’ ಉಪಾಯ ಹುಡುಕುತ್ತವೊ ನೋಡಬೇಕು.

ಸರ್ಕಾರಗಳೇಕೆ ಇಂಥ ಡಿಜಿಟಲ್ ಚಟದ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ? ಕೇಳಬೇಡಿ. ಪ್ರಜೆಗಳು ತಮ್ಮದೇ ಪ್ರಪಂಚದಲ್ಲಿ ತಲೆ ಹುದುಗಿಸಿ ಕೂತಷ್ಟೂ ಪ್ರಭುತ್ವಕ್ಕೆ ಒಳ್ಳೆಯದೇ. ಸರ್ಕಾರದ ನಿರ್ಣಯಗಳನ್ನು ಪ್ರಶ್ನಿಸುವವರ ಸಂಖ್ಯೆ ಕಡಿಮೆಯಾದಷ್ಟೂ ಸರ್ಕಾರಕ್ಕೆ ಒಳ್ಳೆಯದು ತಾನೆ? ಅದಕ್ಕೇ ಈ ಗೀಳು ಇನ್ನಷ್ಟು ಗಾಢವಾಗಿ ಅಂಟಿಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಪ್ರಭುತ್ವ ಮಾಡುತ್ತಿರುತ್ತದೆ. ಇಡೀ ಬೆಂಗಳೂರಿಗೆ ವೈಫೈ ಹಾಕಿಸಲು ಈಗ ಸಿದ್ಧತೆ ನಡೆದಿಯಲ್ಲ? ನಗರವಾಸಿಗಳ ಅಂತರ್ಜಾಲದ ಚಿಂತೆಯನ್ನು ಕಮ್ಮಿ ಮಾಡಿಬಿಟ್ಟರೆ, ಗ್ರಾಮವಾಸಿಗಳ ಅಂತರ್ಜಲ ಚಿಂತೆಯನ್ನೂ ಮುಂದೆ ಹೀಗೇ ಕಮ್ಮಿ ಮಾಡಬಹುದು. ಹೇಗಿದ್ದರೂ ಡಿಜಿಟಲ್ ಜೀವಿಗಳು ಬೀದಿಗಂತೂ ಬರುವುದಿಲ್ಲ.

ಸಾಮಾಜಿಕ ಮಾಧ್ಯಮಗಳಿಂದ, ಡಿಜಿಟಲ್ ಸಾಧನಗಳಿಂದ ಬರುವ ಅಪಾಯಗಳ ಪಟ್ಟಿ ದಿನದಿನಕ್ಕೆ ಉದ್ದವಾಗುತ್ತಿದೆ. ಅಮೆರಿಕದ ಚುನಾವಣೆಯಲ್ಲಿ ರಷ್ಯದ ಹಸ್ತಕ್ಷೇಪ, ಬ್ರೆಕ್ಸಿಟ್ ಭಾನಗಡಿ, ನಾತ್ಸೀವಾದದ ಉಲ್ಬಣ, ಸೆಲ್ಫೀಸಾವು, ಲೈಂಗಿಕ ಅಪರಾಧ, ‘ಮಕ್ಕಳ ಚೋರ’ರ ಕಗ್ಗೊಲೆ, ದಾಂಪತ್ಯ ವಿರಸ... ಮುಂದೇನು? ಚಿಂತಕ ಯುವಾಲ್ ಹರಾರೆ ಮಂಡಿಸುವ ವಾದ ನೋಡಿ: ಆತನ ಪ್ರಕಾರ, ನಾವು ನಿಸರ್ಗದಿಂದ ದೂರವಾಗುತಿದ್ದೇವೆ, ಅಷ್ಟೇ ಅಲ್ಲ, ನಮ್ಮದೇ ದೇಹದಿಂದಲೂ ದೂರವಾಗುತ್ತಿದ್ದೇವೆ. ನೂರು ವರ್ಷಗಳ ಹಿಂದೆ ಮನುಷ್ಯನೊಬ್ಬ ನೀರಿಗೆಂದು ಕಾಡಿನ ಕೊಳದ ಬಳಿ ಹೋಗುತ್ತಿದ್ದರೆ ಅವನ ಕಣ್ಣು, ಕಿವಿ, ಮೂಗು, ತ್ವಚೆ ಹೀಗೆ ಎಲ್ಲ ಇಂದ್ರಿಯಗಳೂ ಅತ್ಯಂತ ಜಾಗೃತ ಸ್ಥಿತಿಯಲ್ಲಿರುತ್ತಿದ್ದವು. ಇಂದು ಹಾಗಲ್ಲ, ನಮ್ಮ ದೇಹವನ್ನೇ ಮರೆತು ನಾವು ಪರದೆಗೆ ಅಂಟಿಕೊಳ್ಳುತ್ತೇವೆ. ಸಂವೇದನಗಳೆಲ್ಲ ಮರಗಟ್ಟಿದಾಗ ದೇಹದ ಒಳಗಿನ ಜೀವರಸಾಯನ ಕ್ರಿಯೆಗಳೂ ಏರುಪೇರಾಗುತ್ತವೆ. ದೂರದ ಭವಿಷ್ಯದಲ್ಲಿ ಇಡೀ ಮನುಕುಲದ ಮೇಲೆ ಅದರ ಪರಿಣಾಮ ಏನಾಗುತ್ತದೊ?

ಬಿಡಿ. ಈಗ ಹೊಸದಾಗಿ ‘ಲೈಟ್ ಫೋನ್’ ಅಂತ ಬಂದಿದೆ. ಅದರ ಬಿಳಿ ಪರದೆಯ ಮೇಲೆ ಏನೇನೂ ಕಾಣಿಸುವುದಿಲ್ಲ. ಬರುವ ಕರೆಗಳನ್ನು ಸ್ವೀಕರಿಸುವ ಹೊರತಾಗಿ ಬೇರೇನನ್ನೂ ಅದು ಮಾಡಲಾರದು. ನಿಮ್ಮ ಮನೆಯಲ್ಲಿರುವ ಸ್ಮಾರ್ಟ್‍ಫೋನ್ ಜತೆ ಅದು ಸಂಪರ್ಕ ಪಡೆದುಕೊಂಡು ದೂರವಾಣಿ ಕರೆಯನ್ನು ಮಾತ್ರ ನಿಮಗೆ ರವಾನಿಸುತ್ತದೆ. ಮನೆಯವರೊಂದಿಗೆ ಭೋಜನಕ್ಕೊ ಅಥವಾ ಮಕ್ಕಳೊಂದಿಗೆ ಜೋಕಾಲಿಯಲ್ಲೊ ಕೂತಿರುವಾಗ ನಿಮಗೆ ತುರ್ತು ಕರೆ ಬಂದರೆ ಲೈಟ್ ಫೋನನ್ನು ಬಳಸಬಹುದು. ವಾಟ್ಸಾಪ್, ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಇ–ಮೇಲ್, ಕ್ಯಾಮರಾ, ಮಣ್ಣು-ಮಸಿ ಏನೇನೂ ಇಲ್ಲ.

ಅಂತೂ ಒಂದನ್ನು ಮರೆಮಾಚಲು ಇನ್ನೊಂದು ಬರುತ್ತದೆ. ನೆಗೆದುಬಿದ್ದ ಫ್ಲೆಕ್ಸ್‌ಗಳ ಜಾಗದಲ್ಲಿ ಇನ್ನು ಡಿಜಿಟಲ್ ಪರದೆಗಳೇ ಬರಬಹುದು. ಆಮೇಲೆ ನಮಗೆ ನಿಮಗೆ ಮ್ಯಾಜಿಕ್ ಕನ್ನಡಕ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.